ಮಠದ ಮೇಲೆ ಐಟಿ ದಾಳಿ ಖಂಡಿಸಿ ರಸ್ತೆ ತಡೆ

ಭಾನುವಾರ, ಜೂಲೈ 21, 2019
21 °C

ಮಠದ ಮೇಲೆ ಐಟಿ ದಾಳಿ ಖಂಡಿಸಿ ರಸ್ತೆ ತಡೆ

Published:
Updated:

ಮೈಸೂರು: ಬೆಂಗಳೂರಿನ ಶ್ರೀಆದಿಚುಂಚನಗಿರಿ ಶಾಖಾ ಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಖಂಡಿಸಿ ಒಕ್ಕಲಿಗ ಸಂಘಟನೆಗಳು ನಗರದ ಹುಣಸೂರು ರಸ್ತೆಯ ಪಡುವಾರಹಳ್ಳಿ ವೃತ್ತದಲ್ಲಿ ಗುರುವಾರ ಸಂಜೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದವು.ದೇಶದ ಇತಿಹಾಸದಲ್ಲೇ ಅನ್ನ, ಆರೋಗ್ಯ ಹಾಗೂ ಶಿಕ್ಷಣ ದಾಸೋಹ ನಡೆಸುವ ಮೂಲಕ ಗ್ರಾಮೀಣ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತಾ ಸಮಾಜ ಸೇವೆಯಲ್ಲಿ ನಿರತರಾಗಿರುವ ಆದಿಚುಂಚನಗಿರಿ ಮಠದ ಮೇಲೆ ದಾಳಿ ನಡೆದಿರುವುದು ರಾಜಕೀಯ ಪ್ರೇರಿತ.ರಾಜ್ಯ ಸರ್ಕಾರ ಒಕ್ಕಲಿಗ ಸಮುದಾಯವನ್ನು ಕೆಣಕುತ್ತಿದೆ. ಯಾವ ಮಠಗಳ ಮೇಲೂ ದಾಳಿ ಮಾಡದೆ ಆದಿಚುಂಚನಗಿರಿ ಮಠದ ಮೇಲೆ ಮಾಡಿರುವ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಧಾರ್ಮಿಕ ಕೇಂದ್ರದ ಮೇಲೆ ದಾಳಿ ನಡೆಸಿ ಒಕ್ಕಲಿಗ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಸಾಧು-ಸಂತರು ವಾಸಿಸುತ್ತಿರುವ ಸ್ಥಳಕ್ಕೆ ಏಕಾಏಕಿ ನುಗ್ಗಿ ದಾಳಿ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಕಾರರು ಕಿಡಿಕಾರಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮಠದ ಮೇಲೆ ದಾಳಿ ನಡೆದಿದೆ. ಇದು ರಾಜಕೀಯ ಪಿತೂರಿಯಾಗಿದ್ದು ಇದರ ಹಿಂದೆ ಯಾರ ಕೈವಾಡವಿದೆ ಎಂದು ಸ್ಪಷ್ಟೀಕರಣ ಕೊಡಬೇಕು. ಸರ್ಕಾರ ಬಹಿರಂಗ ಕ್ಷಮೆಯಾಚಿಸ ಬೇಕು. ಮಠದ ಮೇಲಿನ ದಾಳಿ ಒಕ್ಕಲಿಗ ಸಮಾಜದ ಮೇಲೆ ಮಾಡಿದ ದಾಳಿಯಾಗಿದೆ. ಇದನ್ನು ಯಾವ ಸಮುದಾಯ ವದರು ಸಹಿಸಬಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಭಾವಚಿತ್ರ ತೆರವಿಗೆ ವಿರೋಧ: ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಭಾವಚಿತ್ರವನ್ನು ತೆರವುಗೊಳಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ಕಾಂಗ್ರೆಸ್ ಒಕ್ಕಲಿಗ ವಿರೋಧಿ ನೀತಿ ಅನುಸರಿಸುತ್ತಿದೆ. ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆದರೆ, ಅವರ ಭಾವಚಿತ್ರವನ್ನು ತೆರವುಗೊಳಿಸಿ ದೇವೇಗೌಡರಿಗೆ ಹಾಗೂ ಸಮುದಾಯಕ್ಕೆ ಅವಮಾನವೆಸಗಿದ್ದಾರೆ ಎಂದು ಕಿಡಿಕಾರಿದರು.ರಾಮೇಗೌಡ ವರ್ಗಾವಣೆಗೆ ವಿರೋಧ: ಜಿಲ್ಲಾಧಿಕಾರಿಯಾಗಿದ್ದ ಡಾ.ರಾಮೇಗೌಡ ಅವರನ್ನು ಸರ್ಕಾರ ವರ್ಗಾವಣೆ ಮಾಡಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ರಾಮೇಗೌಡ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡುವ ಮೂಲಕ ಸರ್ಕಾರ ದ್ವೇಷ ಸಾಧಿಸುತ್ತಿದೆ ಎಂದು ಆರೋಪಿಸಿದರು.ಜಿಲ್ಲಾ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಬಸವೇಗೌಡ, ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಮಾನವ ಕಲ್ಯಾಣ ಸಂಘಟನೆ ಜಿಲ್ಲಾಧ್ಯಕ್ಷ ಹಿನಕಲ್ ನಾಗೇಂದ್ರ, ಕೆ.ಆರ್. ನಗರ ಚುಂಚನಕಟ್ಟೆ ಮಠದ ಶಿವಾನಂದ ಸ್ವಾಮೀಜಿ, ವೈ.ಡಿ. ರಾಜಣ್ಣ, ಹೇಮಂತ್‌ಕುಮಾರಗೌಡ, ಎನ್. ಪ್ರಸನ್ನ, ಎಂ.ಎನ್. ವಿಜಯ ವೆಂಕಟೇಶ್, ಪ್ರದೀಪ್‌ಕುಮಾರ್, ಪ್ರಶಾಂತ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ರಾಜ್‌ಕುಮಾರ್, ಒಕ್ಕಲಿಗ ಹಿತರಕ್ಷಣಾ ವೇದಿಕೆ ಶಿವಕುಮಾರ್, ವಿಕ್ರಾಂತ್ ಒಕ್ಕಲಿಗರ ಸಂಘ, ಬಿಇಎಂಎಲ್ ಒಕ್ಕಲಿಗರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸಂಚಾರ ಅಸ್ತವ್ಯಸ್ಥ: ಪಡುವಾರಹಳ್ಳಿ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಹುಣಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥವಾಯಿತು. ಇದರಿಂದ ಸವಾರರು ಪರದಾಡಿದರು. ರಸ್ತೆಯ ಎರಡೂ ದಿಕ್ಕಿನಲ್ಲಿ ವಾಹನಗಳು ಕಿ.ಮೀ.ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಸಂಚಾರ ಸುಗಮಗೊಳಿಸಲು ಸಂಚಾರ ಪೊಲೀಸರು ಹೆಣಗಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry