ಸೋಮವಾರ, ಜನವರಿ 27, 2020
22 °C

ಮತ್ತೆ ಬಂದರು ‘ಫ್ಯಾಮಿಲಿ ಡಾಕ್ಟರ್‌’

ಸಂದರ್ಶನ: ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಆರೋಗ್ಯದಲ್ಲಿ ಸಣ್ಣ ಸಮಸ್ಯೆಯಾದರೆ ಸಾಕು, ಮನೆಮಂದಿ ಹೋಗುತ್ತಿದ್ದುದು ತಮ್ಮ ಕುಟುಂಬ ವೈದ್ಯರ ಬಳಿಗೆ. ಚಿಕಿತ್ಸೆ ಮಾತ್ರವಲ್ಲದೆ ಆಪ್ತಸಲಹೆ ನೀಡುತ್ತಿದ್ದ ವೈದ್ಯರ ಮೇಲೆ ಅಪಾರ ನಂಬಿಕೆ. ವ್ಯಕ್ತಿಯೊಬ್ಬರ ಆರೋಗ್ಯದ ಪೂರ್ಣ ಪರಿಚಯ ವೈದ್ಯರ ಬಾಯಲ್ಲೇ ಇರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ‘ಕುಟುಂಬ ವೈದ್ಯ’ ಎಂಬ ಪರಿಕಲ್ಪನೆಯೇ ಮರೆಯಾಗಿದೆ.

ನೆಗಡಿ, ಕೆಮ್ಮಿನಂಥ ಸಣ್ಣ ಸಮಸ್ಯೆಗೂ ದೊಡ್ಡ ಆಸ್ಪತ್ರೆಗೆ ಎಡತಾಕುವ ಪರಿಸ್ಥಿತಿ. ಯಾವುದೋ ಸಮಸ್ಯೆ, ಸ್ಕ್ಯಾನ್‌, ದಪ್ಪ ದಪ್ಪ ಗುಳಿಗೆ, ಔಷಧ, ರಿಪೋರ್ಟು, ಕೊನೆಗೂ ರೋಗಿಗೆ ತನಗೆ ನಿಜಕ್ಕೂ ಯಾವ ಆರೋಗ್ಯ ಸಮಸ್ಯೆ ಇದೆ ಎಂಬುದು ನಿಖರವಾಗಿ ತಿಳಿಯುವುದೇ ಇಲ್ಲ. ಗೊಂದಲದ ಜೊತೆ ಮರಳುವ ಸ್ಥಿತಿ.

ಇದೆಲ್ಲಕ್ಕೂ ಕಾರಣ ಕುಟುಂಬ ವೈದ್ಯರ ಕೊರತೆ ಎನ್ನುತ್ತಾರೆ ‘ನೇಷನ್ ವೈಡ್‌’ ಕ್ಲಿನಿಕ್‌ನ ಡಾ. ಶಂತನು ಚಟ್ಟೋಪಾಧ್ಯಾಯ. ನಗರ ಬೆಳೆದಂತೆ ‘ಫ್ಯಾಮಿಲಿ ಡಾಕ್ಟರ್’ ಪರಿಕಲ್ಪನೆ ಮರೆಯಾಗಿದ್ದು, ಈ ಪದ್ಧತಿಯನ್ನು ಮತ್ತೆ ಪರಿಚಯಿಸಲೆಂದೇ 2010ರಲ್ಲಿ ‘ನೇಷನ್‌ ವೈಡ್‌ ಪ್ರೈಮರಿ ಹೆಲ್ತ್ ಕೇರ್’ ಎಂಬ ಕ್ಲಿನಿಕ್‌ ಸರಣಿಯನ್ನು ಆರಂಭಿಸಿದ್ದಾರೆ ಡಾ. ಸಂತನು ಚಟ್ಟೋಪಾಧ್ಯಾಯ ಮತ್ತು ಡಾ. ಶಂತನು ರೆಹಮಾನ್. ಅವರು ತಮ್ಮ ಈ ನೂತನ ಪರಿಕಲ್ಪನೆಯ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ಏನಿದು ‘ಫ್ಯಾಮಿಲಿ ಡಾಕ್ಟರ್‌’ ಪರಿಕಲ್ಪನೆ?

ಕೆಲವು ವರ್ಷಗಳ ಹಿಂದೆ ಏನೇ ಆರೋಗ್ಯ ತೊಂದರೆ ಬಂದರೂ ನಮ್ಮ ಕುಟುಂಬ ವೈದ್ಯರ ಬಳಿ ಹೋಗುತ್ತಿದ್ದೆವು. ಅವರಿಗೆ ನಮ್ಮ ಕುಟುಂಬದ ಪ್ರತಿ ಸದಸ್ಯರ ಆರೋಗ್ಯ ಸ್ಥಿತಿಯ ಬಗ್ಗೆಯೂ ತಿಳಿದಿರುತ್ತಿತ್ತು. ರೋಗಿ–ವೈದ್ಯರ ನಡುವೆ ಆಪ್ತ ಬಾಂಧವ್ಯವೂ ಇರುತ್ತಿತ್ತು. ಆದರೆ ಈಗ ಆ ಪದ್ಧತಿ ಮರೆಯಾಗಿದೆ. ಆಶ್ಚರ್ಯವೆಂಬಂತೆ ಅಮೆರಿಕದಲ್ಲಿ ಇದು ಕಡ್ಡಾಯ. ಪ್ರತಿ ಕುಟುಂಬಕ್ಕೂ ಅಲ್ಲಿ ವೈದ್ಯರಿರುತ್ತಾರೆ. ಆದ್ದರಿಂದ ಭಾರತದಲ್ಲೂ ಮತ್ತೆ ಈ ಪದ್ಧತಿ ಪರಿಚಯಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ.

ನೇಷನ್‌ ವೈಡ್‌ ಕ್ಲಿನಿಕ್‌ನ ಬಗ್ಗೆ ತಿಳಿಸಿ?

ಪ್ರತಿಯೊಬ್ಬರಿಗೂ ಪ್ರಾಥಮಿಕ ಆರೈಕೆ ತುಂಬಾ ಮುಖ್ಯ. ಎಲ್ಲದಕ್ಕೂ ದೊಡ್ಡ ಆಸ್ಪತ್ರೆಗೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸಬೇಕು. ರೋಗಿಗೆ ಸೂಕ್ತ ಸಲಹೆ, ಚಿಕಿತ್ಸೆ ಸಿಗಬೇಕು. ಇದೇ ಉದ್ದೇಶದಿಂದ ನೇಷನ್‌ ವೈಡ್‌ ಪ್ರೈಮರಿ ಹೆಲ್ತ್‌ ಕೇರ್‌ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದೇವೆ.

ಭಾರತದಲ್ಲಿ ಇದು ಎಷ್ಟು ಪ್ರಸ್ತುತ? ನಗರದಲ್ಲಿ ಪರಿಚಯಿಸಿದ್ದರ ಉದ್ದೇಶ?

ಭಾರತ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಹಿಂದಿದೆ. ಆದ್ದರಿಂದ ಪ್ರತಿಯೊಂದು ಕುಟುಂಬಕ್ಕೂ ಉತ್ತಮ ವೈದ್ಯರೊಬ್ಬರ ಅವಶ್ಯಕತೆ ತುಂಬಾ ಇದೆ ಎನ್ನುವುದು ನಮ್ಮ ಅಭಿಪ್ರಾಯ. ಬೆಂಗಳೂರಿನಲ್ಲಿ ವಲಸಿಗರು ಹೆಚ್ಚಿದ್ದಾರೆ. ಎಲ್ಲ ರೀತಿಯ ಕಾಯಿಲೆಗಳೂ ಹೆಚ್ಚಿವೆ. ಕೆಲವೊಮ್ಮೆ ಭಾಷೆಯ ಸಮಸ್ಯೆಯಿಂದಾಗಿ ಚಿಕ್ಕ ಆಸ್ಪತ್ರೆಗಳಿಗೆ ಹೋಗಲಾಗುವುದಿಲ್ಲ. ಅಂಥವರಿಗೆ ಈ ಕ್ಲಿನಿಕ್‌ಗಳು ಸಹಾಯವಾಗುತ್ತವೆ. ಬೆಂಗಳೂರಿನಲ್ಲಿ ವೈಟ್‌ಫೀಲ್ಡ್‌, ಮಹದೇವಪುರ, ಕಸ್ತೂರಿ ನಗರ, ಬೆಳ್ಳಂದೂರು, ಎಚ್‌ಎಸ್‌ಆರ್‌ ಲೇಔಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಒಟ್ಟು 18 ಕಡೆ ನಮ್ಮ ಕ್ಲಿನಿಕ್‌ಗಳಿವೆ.

ನಿಮ್ಮ ಕ್ಲಿನಿಕ್‌ನ ವಿಶೇಷತೆ ಏನು?

ಔಷಧೋಪಚಾರ ಮಾತ್ರವಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಸಲಹೆ, ಚಿಕಿತ್ಸೆ ನೀಡುತ್ತೇವೆ. ಚಿಕಿತ್ಸೆಯ ವಿವರವನ್ನೂ ನೀಡುವುದಲ್ಲದೆ, ರೋಗಿಯೊಬ್ಬರ ಆರೋಗ್ಯದ ಬಗ್ಗೆಯೂ ಅಪ್‌ಡೇಟ್‌ ಆಗುತ್ತಿರುತ್ತೇವೆ. ಚಂದಾದಾರರಾಗಿದ್ದರೆ ಅವರಿಗೆ 24/7 ವೈದ್ಯರ ಸೇವೆ ಲಭ್ಯವಿದ್ದು, ಆನ್‌ ಕಾಲ್‌ ಡಾಕ್ಟರ್‌ ಸೇವೆ ನೀಡಲಾಗುತ್ತದೆ. ಇದರಿಂದ ಎಷ್ಟೇ ದೂರವಿದ್ದರೂ ದೂರವಾಣಿ ಮುಖಾಂತರ ತಮ್ಮ ಔಷಧೋಪಚಾರವನ್ನು ಪಡೆಯುವ ಸೌಲಭ್ಯ. ಇನ್ನು ರೋಗಿಗಳಿಗೆ ಅಗತ್ಯವೆನಿಸಿದಲ್ಲಿ ತಜ್ಞರ ಬಳಿಯೂ ಚಿಕಿತ್ಸೆ ಪಡೆಯುವ ಸೌಕರ್ಯವಿದ್ದು, ಹುಡುಕಿಕೊಂಡು ಹೋಗುವ, ಅನವಶ್ಯಕವಾಗಿ ಹಣ ಖರ್ಚು ಮಾಡುವ ಗೋಜನ್ನು ತಡೆಗಟ್ಟಬಹುದು.

ದರಿಂದ ರೋಗಿಗಳಿಗೆ ಯಾವ ರೀತಿ ಉಪಯೋಗವಿದೆ?

ರೋಗಿಗಳ ಬಳಿ ತಮ್ಮ ಹಿಂದಿನ ದಾಖಲೆಗಳಿರುವುದರಿಂದ ಮತ್ತೆ ಮತ್ತೆ ಸ್ಕ್ಯಾನ್‌ ಮಾಡಿಸುವುದು, ಅನಗತ್ಯವಾಗಿ ಚಿಕಿತ್ಸೆ ಪಡೆಯುವ ತೊಂದರೆ ಇರುವುದಿಲ್ಲ. ತುರ್ತು ಸಮಯದಲ್ಲಿ ಇದು ತುಂಬಾ ನೆರವಿಗೆ ಬರುತ್ತದೆ. ಆರೋಗ್ಯ ಸಮಸ್ಯೆಗೆ ತುರ್ತು ಪರಿಹಾರವೂ ಇದರಿಂದ ದೊರೆಯುತ್ತದೆ. ಅಷ್ಟೇ ಅಲ್ಲದೆ ರೋಗಿಯ ಮೆಡಿಕಲ್‌ ರೆಕಾರ್ಡ್‌ ಅನ್ನು ಆನ್‌ಲೈನ್‌ನಲ್ಲಿ ದಾಖಲಿಸಿರುತ್ತೇವೆ. ಹಿಂದೆ ತೆಗೆದುಕೊಂಡಿದ್ದ ಚಿಕಿತ್ಸೆ, ಫಲಿತಾಂಶ ಎಲ್ಲಾ ವೈದ್ಯಕೀಯ ವಿವರ ಲಭ್ಯ. ಇದರಿಂದ ಅವರ ಸಮಯ, ಹಣ ಉಳಿತಾಯವಾಗುತ್ತದೆ.

ನಿಮ್ಮ ಕ್ಲಿನಿಕ್‌ನಲ್ಲಿ ಯಾವ್ಯಾವ ಸೇವೆಗಳು ಲಭ್ಯವಿವೆ?

ಫ್ಯಾಮಿಲಿ ಫಿಸಿಶಿಯನ್‌ ಕನ್ಸಲ್ಟೇಷನ್‌, ಮಹಿಳೆ ಮತ್ತು ಮಕ್ಕಳ ಆರೈಕೆ, ಹಿರಿಯ ನಾಗರಿಕರ ಸೇವೆ, ಕ್ರಾನಿಕ್ ಡಿಸೀಸ್ ಮ್ಯಾನೇಜ್ಮೆಂಟ್, 24x7 ಡಾಕ್ಟರ್ ಆನ್ ಕಾಲ್ ಸೇವೆ, ರೋಗಿಯ ಮನೆಗೂ ಭೇಟಿ ನೀಡುವ ಸೇವೆ, ಲ್ಯಾಬ್ ಟೆಸ್ಟ್, ಚುಚ್ಚುಮದ್ದು, ಕಾರ್ಪೊರೇಟ್ ಹೆಲ್ತ್ ಕೇರ್ ಸಲ್ಯೂಷನ್ಸ್, ಡಯಾಬಿಟಿಸ್ ಕೇರ್, ಡೆಂಟಲ್‌ ಕೇರ್‌ ಹೀಗೆ ಹಲವು ಸೇವೆಗಳು ಇವೆ.

ನಿಮ್ಮ ಕ್ಲಿನಿಕ್‌ನ ವೈದ್ಯರಿಗೆ ಯಾವ ರೀತಿ ತರಬೇತಿ ನೀಡುತ್ತೀರಿ?

ಅಂತರರಾಷ್ಟ್ರೀಯ ಕ್ಲಿನಿಕಲ್‌ ಪ್ರೋಟೊಕಾಲ್ಸ್‌, ಸೇಫ್ ಡಾಕ್ಟರ್‌ ಪ್ರಾಕ್ಟೀಸಸ್‌, ಎಫೆಕ್ಟಿವ್‌ ಪೇಶೆಂಟ್‌ ಕಮ್ಯುನಿಕೇಷನ್‌ ಇವಿಷ್ಟೇ ಅಲ್ಲದೆ ನೇಷನ್‌ವೈಡ್‌ ವೈದ್ಯರು ಪ್ರತಿ ತಿಂಗಳೂ ವೈದ್ಯಕೀಯ ಕ್ಷೇತ್ರದ ಕುರಿತು ಅಪ್‌ಡೇಟ್‌ ಮಾಡಿಕೊಳ್ಳುತ್ತೇವೆ. ಸದ್ಯಕ್ಕೆ 25 ಪೂರ್ಣಾವಧಿ ವೈದ್ಯರು ಮತ್ತು 25 ಸಲಹಾ ವೈದ್ಯರು ಇದ್ದಾರೆ.

ನಿಮ್ಮ ಮುಂದಿನ ಯೋಜನೆ?

ಮುಂದಿನ ಐದು ವರ್ಷಗಳಲ್ಲಿ 1000 ಕ್ಲಿನಿಕ್‌ಗಳನ್ನು ದೇಶದೆಲ್ಲೆಡೆ ಸ್ಥಾಪಿಸುವ ಉದ್ದೇಶವಿದೆ. ಭಾರತದಲ್ಲಿ ಆರೋಗ್ಯ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ.ಕ್ಲಿನಿಕ್‌ ಬಗೆಗಿನ ಮಾಹಿತಿಗೆ: 08041215149/50 ಅಥವಾ www.nationwidedocs.org 

ಪ್ರತಿಕ್ರಿಯಿಸಿ (+)