ಬುಧವಾರ, ಮೇ 12, 2021
18 °C

ಮತ್ತೆ ಬಂದಿದ್ದಾರೆ ಫ್ಯಾಮಿಲಿ ಡಾಕ್ಟರ್

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ದೃಶ್ಯ 1- ಮೊದಲ ಬಾರಿ ಅಲ್ಲ, 10ನೇ ಬಾರಿ ಅದೇ ಆಸ್ಪತ್ರೆಗೆ ಹೋಗಿ ಅದೇ ವೈದ್ಯರ ಮುಂದೆ ಕುಳಿತರೂ ಅವರು ನಮ್ಮನ್ನು ಗುರುತಿಸುವುದೇ ಇಲ್ಲ. ನಮ್ಮ ಹೆಸರು, ಏನು ಕಾಯಿಲೆ, ಎಷ್ಟು ದಿನದಿಂದ, ಇದು ನಮ್ಮ ಕುಟುಂಬದಲ್ಲಿ ಯಾರಿಗಾದರೂ ಇತ್ತೆ... ಎಲ್ಲ ವಿವರಗಳನ್ನೂ ಮತ್ತೆ ಮೊದಲಿನಿಂದಲೇ ಹೇಳಬೇಕು...

ದೃಶ್ಯ 2-ಎರಡೆಂದರೆ ಕಡಿಮೆ, ನಾಲ್ಕಾದರೆ ಹೆಚ್ಚು ಎನ್ನುವಂತೆ ತೂಗಿ ತೂಗಿ  ಮಾತನಾಡುತ್ತಾರೆ. ನಮಗಿರುವ ಕಾಯಿಲೆಯ ಬಗ್ಗೆ ಹೆಚ್ಚು ವಿವರಗಳನ್ನು ಕೇಳಬೇಕೆಂದರೂ ಅವರು ಆದಷ್ಟು ಬೇಗ ನಮ್ಮನ್ನು ಸಾಗಹಾಕಲು ಯತ್ನಿಸುತ್ತಿರುತ್ತಾರೆ. ಏಕೆಂದರೆ ಹೊರಗಡೆ ಕುಳಿತ ಸಾಲು-ಸಾಲು ರೋಗಿಗಳನ್ನು ಅವರು ಕಡಿಮೆ ಅವಧಿಯಲ್ಲಿ ಪರೀಕ್ಷಿಸಿ ಕಳುಹಿಸಬೇಕಿರುತ್ತದೆ...

ದೃಶ್ಯ 3-ಸಣ್ಣ-ಪುಟ್ಟ ವಿಚಾರಣೆಗೂ ನೂರಾರು ರೂಪಾಯಿ ನೀಡಿ ಹೆಸರು ನೋಂದಾಯಿಸಿಯೇ ವೈದ್ಯರನ್ನು ಕಾಣಬೇಕು. ಹಿಂದಿನ ದಿನವಷ್ಟೇ ಹೋಗಿ ಚಿಕಿತ್ಸೆ ಪಡೆದು ಬಂದಿರುತ್ತೇವೆ.ಮತ್ತೇನಾದರೂ ಸಣ್ಣ-ಪುಟ್ಟ ವಿವರಣೆ ಬೇಕಿದ್ದರೆ ಅವರು ಫೋನ್‌ನಲ್ಲಿ ಸಿಗುವುದೇ ಇಲ್ಲ...

ಈ ದೂರುಗಳು ನಿಮ್ಮವೂ ಆಗಿರಬಹುದು. ಮಧುಮೇಹ, ಅಧಿಕ ರಕ್ತದ ಒತ್ತಡ, ಮೈಗ್ರೇನ್, ಬೆನ್ನು ನೋವು, ಕತ್ತು ನೋವು, ಅಲರ್ಜಿ, ಜ್ವರ... ಮುಂತಾದ ಸಾಮಾನ್ಯ ಸಮಸ್ಯೆಗಳಿಗೆ ವೈದ್ಯರನ್ನು ಕಾಣಬೇಕಾಗಿ ಬಂದಾಗ ನಿಮಗೂ ಈ ಅನುಭವವಾಗಿರಲೇಬೇಕು.ಹೌದು, ವೈದ್ಯಕೀಯ ಕ್ಷೇತ್ರವೂ ಈಗ ಬದಲಾಗಿದೆ. ಈಗ ಇದೊಂದು ಸೇವಾ ಕ್ಷೇತ್ರವಾಗಿ ಉಳಿದಿಲ್ಲ, ಒಂದು ಬ್ಯುಸಿನೆಸ್ ಆಗಿದೆ. ಅಂತೆಯೇ ಇಲ್ಲಿ `ರೋಗಿಗಳು~ ಎಂದರೆ ಅವರಿಗೆ `ಕ್ಲೈಂಟ್ಸ್~ ಹಾಗೂ `ಚಿಕಿತ್ಸೆ~ ಎನ್ನುವುದು ಒಂದು `ಟಾಸ್ಕ್~ಅಷ್ಟೇ.ಹಿಂದಿನ `ಫ್ಯಾಮಿಲಿ ಡಾಕ್ಟರ್~ ಎಂಬ ಪರಿಕಲ್ಪನೆ ಇಂದು ಬಹುತೇಕ ಮಾಯವಾಗಿದೆ. ಸಿನಿಮಾ, ಕ್ರೀಡೆ, ವಾಣಿಜ್ಯ ಕ್ಷೇತ್ರಗಳ ಖ್ಯಾತರನ್ನು ಹೊರತುಪಡಿಸಿದರೆ ಸಾಮಾನ್ಯ ಜನರಿಗೆ `ಫ್ಯಾಮಿಲಿ ಡಾಕ್ಟರ್~ ಲಭ್ಯವಾಗುವುದೇ ಇಲ್ಲ. ವೈದ್ಯ ಹಾಗೂ ರೋಗಿಯ ನಡುವೆ ಹಿತವಾದ ಬಾಂಧವ್ಯವೂ ಉಳಿದಿಲ್ಲ.  ಆದರೆ ಸಾಮಾನ್ಯ ಜನರಿಗೂ `ಫ್ಯಾಮಿಲಿ ಡಾಕ್ಟರ್~ ಅನ್ನು ಒದಗಿಸುವ ಮೂಲಕ ಈ ಎಲ್ಲ ದೂರುಗಳಿಗೆ ಸಮಾಧಾನಕರ ಪರಿಹಾರ ಕಂಡು ಹಿಡಿಯಲು ಮುಂದಾಗಿದೆ `ನೇಷನ್‌ವೈಡ್~ ಎಂಬ ಸಂಸ್ಥೆ.`ನೇಷನ್‌ವೈಡ್~ ಪ್ರೈಮರಿ ಹೆಲ್ತ್‌ಕೇರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಎಂಬುದು ಕೊಲ್ಕತ್ತಾ ಮೂಲದ ವೈದ್ಯರ ತಂಡ ಸ್ಥಾಪಿಸಿರುವ ಸಂಸ್ಥೆ. ಡಾ. ಚಟ್ಟೋಪಾಧ್ಯಾಯ ಹಾಗೂ ಡಾ. ರಹಮಾನ್ ಅವರು 2010ರಲ್ಲಿ ಈ ಸಂಸ್ಥೆಯನ್ನು ಸಾಮಾಜಿಕ ಪರಿಣಾಮದ ಉದ್ದೇಶದಿಂದ ಸ್ಥಾಪಿಸಿದರು. ಈಗ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಮುಂದೆ ದೇಶದ ವಿವಿಧ ಭಾಗಗಳಿಗೆ ಪಸರಿಸುವ ಉದ್ದೇಶ ಹೊಂದಿದೆ.ಆನ್‌ಲೈನ್ ರೆಕಾರ್ಡ್

ನೇಷನ್‌ವೈಡ್ ಸಂಸ್ಥೆಯೊಂದಿಗೆ ನೀವು ಖುದ್ದಾಗಿ ಅಥವಾ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದು. ನಿಮ್ಮನ್ನು ಒಂದು ಬಾರಿ ಸಂಪೂರ್ಣ ಪರೀಕ್ಷೆಗೆ ಒಳಪಡಿಸಿ, ಕುಟುಂಬ ಇತಿಹಾಸ, ನಿಮ್ಮ ಸಾಮಾನ್ಯ ಆರೋಗ್ಯ, ಮನೋಸ್ಥಿತಿ ಹಾಗೂ ಇತರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.ಈ ಎಲ್ಲಾ ವಿವರವನ್ನೂ ನೀವು ನಿಮ್ಮ `ಆನ್‌ಲೈನ್ ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್~ನಲ್ಲಿ ಪಡೆಯಬಹುದು. ಅಲ್ಲದೇ, ನಿಮಗೆ ಬೇಕೆಂದಾಗ ಅದನ್ನು ತೆಗೆದು ನೋಡಬಹುದು. ಅದರ ಒಂದು ಪ್ರತಿಯನ್ನು ಯಾವಾಗಲೂ ನಿಮ್ಮ ಜೊತೆಯಲ್ಲಿಟ್ಟುಕೊಳ್ಳಬಹುದು. ಇದರಿಂದ ಅಪಘಾತದಂತಹ ಸಂದರ್ಭದಲ್ಲಿ ನಿಮ್ಮ ಬಗ್ಗೆ ಎಲ್ಲಾ ಪ್ರಾಥಮಿಕ ಹಾಗೂ ಮಹತ್ವದ ವಿವರಗಳೂ ನಿಮ್ಮನ್ನು ಪರೀಕ್ಷಿಸುವ ವೈದ್ಯರಿಗೆ ಲಭ್ಯವಾಗಿ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.ಇಲ್ಲಿದ್ದಾರೆ ನಿಮ್ಮ `ಫ್ಯಾಮಿಲಿ ಡಾಕ್ಟರ್~

ಪ್ರಸ್ತುತ, ಆರೋಗ್ಯ ಸೇವೆಯ ವಾಣೀಜ್ಯಕರಣದಿಂದಾಗಿ `ಫ್ಯಾಮಿಲಿ ಡಾಕ್ಟರ್~ ಎಂಬ ನಂಬಿಕೆಗೆ ಪೆಟ್ಟುಬಿದ್ದಿದೆ. ಅದೇ ಹಳೆಯ ಪರಿಕಲ್ಪನೆಯನ್ನು ಹೊಸದಾಗಿ ಸ್ಥಾಪಿಸುವ ಮೂಲಕ ಜನರಿಗೆ ಗುಣಮಟ್ಟದ ವೈಯಕ್ತಿಕ ವೈದ್ಯಕೀಯ ಸೇವೆ ಒದಗಿಸುವುದು ಸಂಸ್ಥೆಯ ಉದ್ದೇಶ.

ನೀವು ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರು, ಯಾವುದೇ ಸಮಯದಲ್ಲಿ ಬಂದರೂ ಅದೇ ವೈದ್ಯರು ನಿಮ್ಮನ್ನು ಪರೀಕ್ಷಿಸುತ್ತಾರೆ.ಅವರಿಗೆ ಕುಟುಂಬದಲ್ಲಿನ ವಯಸ್ಕರು, ಮಕ್ಕಳು ಸೇರಿದಂತೆ ಪ್ರತಿ ವ್ಯಕ್ತಿಯ ವೈದ್ಯಕೀಯ ಚರಿತ್ರೆ, ಔಷಧದ ಸ್ವರೂಪದ ಪರಿಚಯ ಇರುತ್ತದೆ. ಒಂದು ವೇಳೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ನೀವು ಬಳಲುತ್ತಿದ್ದು, ಭಿನ್ನ ವೈದ್ಯರಿಂದ ಔಷಧಿಗಳನ್ನು ಪಡೆದಿದ್ದರೆ, ಚಿಕಿತ್ಸೆಯ ಸ್ವರೂಪವನ್ನು ಈ ಕುಟುಂಬ ವೈದ್ಯರು ಬದಲಿಸಬಲ್ಲವರಾಗಿತ್ತಾರೆ.`ಪ್ರತಿ ನಿತ್ಯ ಕಾಡಬಹುದಾದ ಸೋಂಕು ಮತ್ತು ಸಾಮಾನ್ಯ ಅನಾರೋಗ್ಯ ಸಮಸ್ಯೆಗಳನ್ನು ತಡೆಯುವ ಬಗ್ಗೆ ನಿಮಗೆ ಸಲಹೆ ಸೂಚನೆ ನೀಡುತ್ತಾರೆ. ಸಂಸ್ಥೆಯ ಜನರಲ್ ಪ್ರಾಕ್ಟಿಶನರ್‌ಗಳು ತಜ್ಞ ವೈದ್ಯರ ಜೊತೆಗೂ ಸಂಪರ್ಕದಲ್ಲಿದ್ದು, ಅಗತ್ಯವಿದ್ದಲ್ಲಿ ಪರಿಣತ ವೈದ್ಯರಿಂದಲೂ ತಪಾಸಣೆಯ ಸೇವೆ ದೊರೆಯುತ್ತದೆ.~ ಎನ್ನುವುದು ಸಂಸ್ಥೆಯ ಬ್ಯುಸಿನೆಸ್ ಡೆವೆಲಪ್‌ಮೆಂಟ್ ಮುಖ್ಯಸ್ಥ ಡಾ.ಸತೀಶ್ ಜೀವಣ್ಣವರ್ ವಿವರಣೆ.ಸಣ್ಣ-ಪುಟ್ಟ ಸಮಸ್ಯೆಗಳಿಗೆ ನೀವು ಫೋನ್ ಮೂಲಕವೂ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ, ನಿಮಗೆ ಯಾವುದೇ ರೀತಿಯ ತುರ್ತು ಸೇವೆಯ ಅಗತ್ಯವಿದ್ದಾಗ ನಿಮ್ಮ ಮನೆಯ ಹತ್ತಿರದಲ್ಲಿದ್ದ ಆಸ್ಪತ್ರೆಗಳು, ಅಲ್ಲಿ ಲಭ್ಯವಿರುವ ಚಿಕಿತ್ಸೆಗಳು ಇತ್ಯಾದಿ ಮಾಹಿತಿಯನ್ನೂ ಅವರೇ ಪೂರೈಸುತ್ತಾರೆ.ನಿಮ್ಮ ಮುಂದಿನ ಪರೀಕ್ಷಾ ದಿನ ಹತ್ತಿರ ಬರುತ್ತಿದ್ದಂತೆ  `ನೀವು ಈ ದಿನಾಂಕದಂದು ಮರು ಪರೀಕ್ಷೆಗೆ ಹಾಜರಾಗಬೇಕು~ ಎಂದು ಆಸ್ಪತ್ರೆಯಿಂದಲೇ ನಿಮಗೆ ನೆನಪಿನ ಕರೆ ಬರುತ್ತದೆ. ಒಂದು ಬಾರಿ 2500 ರೂಪಾಯಿ ನೀಡಿ ಹೆಸರು ನೋಂದಾಯಿಸುವುದರಿಂದ ನೀವು ಈ ಎಲ್ಲಾ ಸೇವೆಯನ್ನು ಪಡೆಯುತ್ತೀರಿ.ಭಾರತದಲ್ಲಿ, ಕೇವಲ ಎರಡು ದಶಕಗಳ ಹಿಂದೆ ಕೌಟುಂಬಿಕ ವೈದ್ಯರೇ ಈ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಆದರೆ, ಕಾಲಾನಂತರ ವ್ಯವಸ್ಥಿತವಾಗಿ ಕೌಟುಂಬಿಕ ಚಿಕಿತ್ಸಾ ವ್ಯವಸ್ಥೆಯೇ ಕುಗ್ಗಿತು. ಈಗ ಅಲ್ಪ ಪ್ರಮಾಣದಲ್ಲಿ ಕೆಮ್ಮು, ನೋವು ಕಾಣಿಸಿಕೊಂಡರೂ ಸಮೀಪದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯತ್ತ ಓಡುವ ಪರಿಸ್ಥಿತಿ ಇದೆ. ಸಾಮಾನ್ಯ ಕಾಯಿಲೆಗೆ ಯಾವ ಆಸ್ಪತ್ರೆಗೆ ಹೋಗಬೇಕು ಎಂಬುದೇ ತಿಳಿಯದೇ ಜನರು ಗೊಂದಲದ ಸ್ಥಿತಿ ಎದುರಿಸುವುದೂ ಇದೆ. ಸಣ್ಣ-ಪುಟ್ಟ ಸಮಸ್ಯೆಗಳಿಗೆ ಅನಗತ್ಯ ಸ್ಕ್ಯಾನಿಂಗ್, ಎಕ್ಸ್-ರೇ ಎಂದೆಲ್ಲ ಹೇಳಿ ಹಣ ದೋಚುವ ಜೊತೆಗೆ ರೋಗಿಗಳಲ್ಲಿ ಅನಗತ್ಯ ಭಯ ಹಾಗೂ ಆತಂಕವನ್ನು ಹುಟ್ಟು ಹಾಕಲಾಗುತ್ತದೆ. ಆದರೆ, ಬಹುತೇಕ ಅನಾರೋಗ್ಯ ಸಮಸ್ಯೆಗಳನ್ನು ಕೌಟುಂಬಿಕ ವೈದ್ಯರೇ ಪರಿಹರಿಸಬಲ್ಲರು. ಈ ವೈದ್ಯರು ನಿಮ್ಮ ಹಾಗೂ ನಿಮ್ಮ ಕುಟುಂಬದವರ ಸಂಪೂರ್ಣ ಆರೈಕೆ ಮತ್ತು ನಿಯಮಿತ ಪರೀಕ್ಷೆಗಳನ್ನು ಮಾಡುವ ಮೂಲಕ ಸಂಭಾವ್ಯ ಕಾಯಿಲೆಗಳನ್ನೂ ಗುರುತಿಸಿ ಮುಂಜಾಗ್ರತೆ ವಹಿಸಬಲ್ಲರು.ಸಾಮಾನ್ಯ ಅನಾರೋಗ್ಯ: ಕಡೆಗಣನೆ ಬೇಡ

ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಗುತ್ತಿವೆ. ಭಾರತೀಯ ವೈದ್ಯಕೀಯ ಕ್ಷೇತ್ರದಲ್ಲಿ `ಸೂಪರ್ ಸ್ಪೆಷಾಲಿಟಿ~ ಎಂಬ ಪರಿಕಲ್ಪನೆ ಹೆಚ್ಚು ಹೆಚ್ಚು ಪ್ರಚಲಿತವಾದಂತೆ ಅನೇಕ ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಚಿತ್ತವೂ `ಸೂಪರ್ ಸ್ಪೆಷಾಲಿಟಿ~ಯತ್ತ  ವಾಲುತ್ತಿದೆ.ಅಂತೆಯೇ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಎಲ್ಲರೂ ಗಮನ ಕೇಂದ್ರೀಕರಿಸುತ್ತಿದ್ದು, ಅಂತಹ  ಸಮಸ್ಯೆಗಳ ಬಗ್ಗೆ ಅತ್ಯುನ್ನತ ಸಂಶೋಧನೆ ಹಾಗೂ ಅಧ್ಯಯನಗಳು ನಡೆದಿವೆ. ಶ್ರೇಷ್ಠ ಮಟ್ಟದ ಚಿಕಿತ್ಸೆ ಕೂಡ ಲಭ್ಯವಿದೆ.ಆದರೆ `ಸಾಮಾನ್ಯ ಆರೋಗ್ಯವೂ ಅಷ್ಟೇ ಮಹತ್ವದ್ದಾಗಿದ್ದು, ಅವುಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು, ಪರಿಣಾಮಕಾರಿ ಚಿಕಿತ್ಸೆ ಒದಗಿಸುವುದು ಹಾಗೂ ಅದನ್ನು ಸುಲಭವಾಗಿ ದಕ್ಕುವಂತೆ ಮಾಡುವುದು ಈಗಿನ ತುರ್ತು ಅಗತ್ಯವಾಗಿದೆ ಎಂಬ ಕಾರಣಕ್ಕಾಗಿ `ಫ್ಯಾಮಿಲಿ ಡಾಕ್ಟರ್~ ಪರಿಕಲ್ಪನೆಗೆ ಮರುಜೀವ ನೀಡಲಾಗುತ್ತಿದೆ~ ಎನ್ನುತ್ತಾರೆ ಡಾ.ಸತೀಶ್.

(ನೇಷನ್‌ವೈಡ್ ಸಂಸ್ಥೆಯ ವೆಬ್‌ಸೈಟ್ ವಿಳಾಸ- www.nationwidedocs.org)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.