ಗುರುವಾರ , ಜೂನ್ 24, 2021
25 °C

ಮತ್ತೆ ಮತ್ತೆ ಮಹಾಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ರೋಚಕ ಕಥಾನಕದಲ್ಲಿರಬೇಕಾದ ಎಲ್ಲ ಅಂಶಗಳೂ ಮಹಾಭಾರತದಲ್ಲಿವೆ. ಇದೇ ಅಂಶವೇ ಸೆಳೆದದ್ದು. ಅದಕ್ಕೆ ಇಡೀ ಕಾವ್ಯವನ್ನು ಸರಳವಾಗಿ ಇಂಗ್ಲಿಷ್‌ಗೆ ಅವತರಿಸಲು ಆರಂಭಿಸಿದೆ. ಪರಿಣಾಮ 10,500 ಪುಟಗಳ 4.5 ದಶಲಕ್ಷ ಶಬ್ದಗಳ 18 ಸಂಪುಟಗಳ ಮಹಾಭಾರತ ಸಿದ್ಧವಾಯಿತು. ಇದೆಲ್ಲವೂ ಸಾಧ್ಯವಾದುದು ಒಂದು ಸಣ್ಣ ಸಿಟ್ಟಿನಿಂದ. ಮಡುಗಟ್ಟಿದ ಆಕ್ರೋಶದಿಂದ...ಹೀಗೆ ಅಶೋಕ್ ಬ್ಯಾಂಕರ್ ಆಹ್ವಾನಿತ ಶ್ರೋತೃವರ್ಗದ ಮುಂದೆ ತಮ್ಮ ಪುಸ್ತಕವನ್ನು ಓದುವ ಮುನ್ನ ಹೇಳುತ್ತಿದ್ದರು.`ಆಂಗ್ಲೊ ಇಂಡಿಯನ್ ಅಮ್ಮ, ಅಮ್ಮನನ್ನು ಆಂಗ್ಲೊ ಇಂಡಿಯನ್ ಎಂಬ ಕಾರಣಕ್ಕೇ ಪರಿತ್ಯಜಿಸಿದ ಸಿಂಧಿ ಕುಟುಂಬದ ಅಪ್ಪ. ಒಮ್ಮೆ ಪರಿತ್ಯಕ್ತೆಯಾಗಿದ್ದ ಅಮ್ಮನನ್ನು ಮತ್ತೆ ಮದುವೆಯಾಗಿದ್ದು ಇನ್ನೊಬ್ಬ ಹಿಂದು. ಆದರೆ ಅವರೂ ಜಾತಿಯ ಕಾರಣ ಹೇಳಿ ಹಿಂಜರಿದರು.ಅವರ ಕುಟುಂಬ ನಮ್ಮನ್ನು ಸ್ವೀಕರಿಸಲೇ ಇಲ್ಲ. ಅಮ್ಮ ಕುಸಿದುಹೋದಳು. ಮಾನಸಿಕವಾಗಿ, ದೈಹಿಕವಾಗಿ ಮುದುಡಿಹೋದ ಅಮ್ಮನಿಗೆ ತವರು ಮನೆಯ ಬಾಗಿಲೂ ಮುಚ್ಚಿಹೋಗಿತ್ತು. ಪ್ರೀತಿಯ ಕೈಹಿಡಿದು ನಡೆದ ಅಮ್ಮನಿಗೆ ಜಾತಿ ಬಾಂಧವ್ಯವನ್ನೇ ಕಸಿದಿತ್ತು. ಆಗ 13 ವರ್ಷದ ಹುಡುಗ ಅಮ್ಮನನ್ನು ನೋಡಿಕೊಳ್ಳುತ್ತ, ದುಡಿಯುತ್ತ, ಓದುತ್ತಿದ್ದ.ಆಗಲೇ ಹಿಂದು ಧರ್ಮದ ಬಗ್ಗೆ ಕುತೂಹಲ ಮೂಡಿದ್ದು. ವ್ಯಕ್ತಿಯನ್ನೇ ತಿರಸ್ಕರಿಸುವಷ್ಟು ಗಟ್ಟಿಯಾದುದು ಈ ಧರ್ಮದಲ್ಲೇನಿದೆ ಎಂಬ ಮುಗ್ಧ ಪ್ರಶ್ನೆಯನ್ನು ಹಿಂಬಾಲಿಸಿ ಹೋದಾಗಲೇ ರಾಮಾಯಣ ಹಾಗೂ ಮಹಾಭಾರತ ಓದಲು ಸಿಕ್ಕಿದ್ದು. ವೇದ, ವೇದಾಂತದ ಶ್ಲೋಕಗಳನ್ನೆಲ್ಲ ಓದಿದ್ದು. ಓದುತ್ತ ಹೋದಂತೆ ಮನಸೊಳಗಿದ್ದ ಆಕ್ರೋಶ ತಣ್ಣಗಾಗತೊಡಗಿತು.ಧರ್ಮದ ಬಗ್ಗೆ ಗೌರವವೂ, ಜಾತಿಯ ಬಗ್ಗೆ ಅನುಕಂಪವೂ ಮೂಡತೊಡಗಿತು. 8-9ನೆಯ ವಯಸ್ಸಿನಲ್ಲಿ ಆರಂಭವಾದ ಶೋಧ, ಇದರ ಬಗ್ಗೆ ಬರೆಯಬೇಕು. ಜನರಿಗೆ ತಿಳಿಸಬೇಕು ಎಂಬ ತಹತಹಿಕೆ ಹುಟ್ಟುಹಾಕಿತ್ತು.ವಾಲ್ಮೀಕಿ ರಾಮಾಯಣ ಬರೆದುದು ರಾಮಾಯಣದಲ್ಲಿರುವ ತತ್ವಾಧಾರಿತ ಸಿದ್ಧಾಂತಗಳು ಎಲ್ಲರಿಗೂ ತಿಳಿಯಲಿ ಎಂದು. ಇದು ಮರುಸೃಷ್ಟಿಯೂ ಅಲ್ಲ. ಇದರಲ್ಲಿ, ನನ್ನ ಸೃಜನಶೀಲ ಮನಸೂ ಇಲ್ಲ. ಇರುವುದು ಕೇವಲ ಕತೆಗಾರನ ಪಾತ್ರ~ ಅಂತ ಅಶೋಕ್ ಬ್ಯಾಂಕರ್ ಹೇಳುತ್ತಿದ್ದರು. ಐಟಿಸಿ ವಿಂಡ್ಸರ್‌ನ ಸಣ್ಣ ಕೋಣೆಯಲ್ಲಿ ಓದುಗರ ಗುಂಪು ಮಂತ್ರಮುಗ್ಧವಾದಂತೆ ಕೇಳುತ್ತಿತ್ತು.ಪುಸ್ತಕದ ಮೊದಲ ಸಂಚಿಕೆ ` ದ ಫಾರೆಸ್ಟ್ ಆಫ್ ಸ್ಟೋರೀಸ್~ ಪುಸ್ತಕದಿಂದ `ಸಮುದ್ರ ಮಂಥನ~ ಭಾಗವನ್ನು ಓದಿ ಹೇಳಿದರು.ಮಹಾಭಾರತ ಹಾಗೂ ರಾಮಾಯಣ ಎರಡೂ ಮಹಾಕಾವ್ಯಗಳು ಸಾರ್ವಕಾಲಿಕವಾದವು. ಇಲ್ಲಿ ಪ್ರೀತಿ, ಪ್ರೇಮ, ಪ್ರಣಯ, ರಾಗ-ದ್ವೇಷ, ರಾಜನೀತಿ, ಸಮರ, ಸಂಚು, ಪಣ, ಛಲ ಎಲ್ಲವೂ ಇದೆ. ಇವೆಲ್ಲವೂ ಇರುವ ಇನ್ನೊಂದು ರೋಚಕ ಕೃತಿ ಯಾವುದೂ ಇರಲಿಕ್ಕಿಲ್ಲ ಎನ್ನುವುದು ಅಶೋಕ್ ಸಮರ್ಥನೆ.ಬದುಕಿನುದ್ದಕ್ಕೂ ಕ್ರೈಸ್ತ ಮತದ ನೆರಳಿನಲ್ಲಿಯೇ ಇದ್ದರೂ ಆ ಮತ ಪ್ರಭಾವ ಬೀರಲಿಲ್ಲವೇ ಎಂಬ ಓದುಗರೊಬ್ಬರ ಪ್ರಶ್ನೆಗೆ, `ನನ್ನಮ್ಮ ಜಾತಿ ಹಾಗೂ ಧರ್ಮ~ಗಳ ಕಾಲಂನಲ್ಲಿ `ಭಾರತೀಯ~ ಎಂದು ಬರೆಸಿದರು. ಯಾವುದೇ ಧರ್ಮದ ನೆರಳಿನಲ್ಲಿ ನಾನು ಬೆಳೆಯಲೇ ಇಲ್ಲ. ಆದರೆ ಎಲ್ಲ ಧರ್ಮಗಳನ್ನೂ ಅರಿಯುವ ಪ್ರಯತ್ನ ಮಾಡಿದೆ. ಕೊನೆಗೂ ಕ್ಷಮೆ ಹಾಗೂ ಪ್ರೀತಿಯೇ ನಿಜವಾದ ಧರ್ಮ ಎಂಬ ಸತ್ಯವನ್ನು ಕಂಡುಕೊಂಡೆ ಎಂದರು.ಮಹಾಭಾರತದಲ್ಲಿ ಇಷ್ಟವಾಗುವ ಪಾತ್ರ ಯಾವುದು ಎಂಬ ಪ್ರಶ್ನೆಗೆ ಅಶೋಕ್ ಹೇಳಿದ್ದು- `ಏಕಲವ್ಯ~. ಮಹಾಭಾರತದ ಪ್ರತಿಯೊಂದು ಪಾತ್ರಗಳೂ ಒಂದಲ್ಲ ಒಂದುಸಂಚಿನೊಂದಿಗೆ ಅಥವಾ ಉದ್ದೇಶ ಈಡೇರಿಕೆಗೆಂದೇ ಸೃಷ್ಟಿಯಾದಂತಿವೆ. ಏಕಲವ್ಯನಷ್ಟು ಪ್ರಾಮಾಣಿಕ ಪಾತ್ರ ಇನ್ನೊಂದಿಲ್ಲ. ಆ ಪಾತ್ರ ತಮ್ಮ ಮೇಲೆ ಅಗಾಧ ಪರಿಣಾಮ ಬೀರಿತು ಎಂದು ಹೇಳಿದರು.ಕೌರವ ಹಾಗೂ ಪಾಂಡವರ ಸಮರಕ್ಕೆ ದ್ರೌಪದಿಯೇ ಕಾರಣ ಎಂಬ ಆಕ್ಷೇಪಣೆಯನ್ನು ಅಶೋಕ್ ಖಡಾಖಂಡಿತವಾಗಿ ಅಲ್ಲಗಳೆದರು. ಇದು ಪುರುಷ ಅಹಂಕಾರಕ್ಕೆ ಸಂಬಂಧಿಸಿದ್ದ ಸಮರ. ಸುಯೋಧನ ದುರ್ಯೋಧನನಾಗಲು ದ್ರೌಪದಿಯ ನಗು ಕಾರಣವಾಯಿತೆ? ದ್ರೌಪದಿ ಹೆಸರೇ ಪುರುಷ ಸೂಚಕವಾದುದು.

 

ದ್ರುಪದನ ಮಗಳು ದ್ರೌಪದಿ, ಪಂಚ ಪಾಂಡವರ ಸತಿ ಪಾಂಚಾಲಿ ಎಂಬ ಹೆಸರುಗಳೇ ಅವಳ ಅಸ್ಮಿತೆಯನ್ನು ಅಲ್ಲಗಳೆದವು. ಆದರೆ ಅವಳ ಹೆಸರು ಕೃಷ್ಣಾ... ತುಂಬಿದ ಸಭೆಯಲ್ಲಿ `ಧರ್ಮ ಎಂದರೇನು~ ಎಂದು ಪ್ರಶ್ನಿಸಿದ ದಿಟ್ಟೆ. ಆ ಕೃಷ್ಣಾ ಇಂದಿಗೂ ಪ್ರಸ್ತುತ ಎಂದು ಉತ್ತರಿಸಿದರು. ರಾಮಾಯಣ, ಮಹಾಭಾರತ ಇವೆರಡನ್ನೂ ಮುಂದಿನ ಪೀಳಿಗೆಗೆ ನೀಡುವುದು ಅತ್ಯಗತ್ಯವಾಗಿದೆ. ಅಲ್ಲೇನಿದೆಯೋ ಹಾಗೆಯೇ ಅದನ್ನು ಇಂಗ್ಲಿಷ್‌ಗೆ ತಂದಿದ್ದೇನೆ. ಈ `ತರುವ~ ಕ್ರಿಯೆಯಲ್ಲಿ ನನ್ನೊಳಗಿನ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರಕಿವೆ. ಈ ಕಾವ್ಯಗಳು ಎಲ್ಲಕ್ಕೂ ಉತ್ತರ ಹೇಳುತ್ತವೆ ಎಂದರ್ಥವಲ್ಲ.ಆದರೆ ನಮ್ಮಳಗಿನ ಪ್ರಶ್ನೆಗೆ ಉತ್ತರ ಪಡೆಯುವಂತೆ ಪ್ರೇರೇಪಿಸುತ್ತವೆ ಎನ್ನುತ್ತ ಓದುಗರು ಕೊಂಡ ಪ್ರತಿಗೆ ಸಹಿ ಹಾಕುವುದರಲ್ಲಿ ನಿರತರಾದರು ಅಶೋಕ್ ಕುಮಾರ್ ಬ್ಯಾಂಕರ್.

ಪುಸ್ತಕದ ಪ್ರತಿಗಳು `ಸಪ್ನಾ~ ಮಳಿಗೆಯಲ್ಲಿ ಲಭ್ಯ. ಬೆಲೆ 295 ರೂಪಾಯಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.