ಬುಧವಾರ, ಜುಲೈ 15, 2020
21 °C

ಮನರಂಜನೆಯ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನರಂಜನೆಯ ಮಹಾಪೂರ

ಮನರಂಜನೆ ಎಲ್ಲರಿಗೂ ಬೇಕು. ಅದು ಎಲ್ಲರಿಗೂ ಇಷ್ಟ. ಬೆಂಗಳೂರು ಮಹಾನಗರದ ಕಾಲೇಜು ವಿದ್ಯಾರ್ಥಿಗಳಿಗಂತೂ ಈಗ ಮನರಂಜನೆಯ ಸಮಯ. ಕಾಲೇಜಿನ ವಾರ್ಷಿಕ ಉತ್ಸವದ ಮನರಂಜನೆಯನ್ನು ಆಸ್ವಾದಿಸುವಲ್ಲಿ ಅವರೀಗ ಬ್ಯುಸಿ.ಆದರೆ ಈ ಬಾರಿಯ ಮನರಂಜನೆ ಕೇವಲ ಬೆಂಗಳೂರು ಮಹಾನಗರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಭಾರತದಾದ್ಯಂತದಿಂದ ಆಗಮಿಸಿದ ಕಾಲೇಜಿನ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನ ವಾರ್ಷಿಕ ಫೆಸ್ಟ್ ‘ಕೊಲೋಸಸ್’ನಲ್ಲಿ ಭಾಗವಹಿಸಿ ಮನರಂಜನೆ ಪಡೆದವು.ವಿದ್ಯಾರ್ಥಿ ಮುಖಂಡ ವರುಣ್ ಗುಪ್ತಾ ಕಾಲೇಜಿನ ಆಡಿಟೋರಿಯಂನಲ್ಲಿ ಅಧಿಕೃತವಾಗಿ ಉತ್ಸವವನ್ನು ಉದ್ಘಾಟಿಸುವುದರೊಂದಿಗೆ ಮೊದಲನೇ ದಿನದ ಕಾರ್ಯಕ್ರಮ ಆರಂಭಗೊಂಡಿತು. ಕ್ಯಾಂಪಸ್‌ನಲ್ಲೆಲ್ಲೂ ಕಂಗೊಳಿಸುತ್ತಿದ್ದ ವಿವಿಧ ರೀತಿಯ ಭಿತ್ತಿಚಿತ್ರಗಳು ಉತ್ಸವಕ್ಕೆ ಇನ್ನಷ್ಟು ಕಳೆ ನೀಡಿತ್ತು. ಸಾಲ್ಸಾ ತರಗತಿಗಳೊಂದಿಗೆ ಫೆಸ್ಟ್ ಆರಂಭವಾಯಿತಲ್ಲದೆ ದಿನದ ಅಂತ್ಯದವರೆಗೂ ನಡೆಯಿತು.ಉಳಿದಂತೆ ಹಲವು ಕಾರ್ಯಕ್ರಮಗಳು ನಡೆದರೂ ಡೇರ್ ಡೆವಿಲ್ ಕ್ಲಬ್ ‘ರೇಜಿಂಗ್ ಡೆಮನ್ಸ್’ನ ಬೈಕ್ ಮೇಲಿನ ಸಾಹಸ ಅತ್ಯಾಕರ್ಷಕವಾಗಿತ್ತು. ನಿಂತು ಬೈಕ್ ಓಡಿಸುವುದು, ಒಂದೇ ಚಕ್ರದಿಂದ ಬೈಕ್ ಓಡಿಸುವುದು ಹೀಗೆ ಹಲವು ಸಾಹಸಮಯ ಆಟಗಳನ್ನು ಪ್ರದರ್ಶಿಸಿದ ಕ್ಲಬ್‌ನ ಸದಸ್ಯರು ನೆರೆದಿರುವ ಜನ ಬೆಚ್ಚಿ ಬೀಳುವಂತೆ ಮಾಡಿದರು. ಕಾಲೇಜಿನ ಮುಖ್ಯ ಪ್ರವೇಶದ್ವಾರದ ಹೊರಗೆ ಈ ಸಾಹಸ ಕಾರ್ಯಕ್ರಮಗಳು ನಡೆಯುತ್ತಿರುವ ವೇಳೆ ವಿದ್ಯಾರ್ಥಿಗಳ ಕಿರುಚಾಟ ಮುಗಿಲು ಮುಟ್ಟುವಂತಿತ್ತು. ಇದೇ ವೇಳೆ ‘ಟ್ಯಾಗ್ ಇಟ್’ ಎಂಬ ಬ್ರಾಂಡಿಂಗ್ ಸ್ಪರ್ಧೆ, ‘ರೆಡಿ-ಝೂಮ್- ಕ್ಲಿಕ್’ ಎಂಬ ಛಾಯಾಚಿತ್ರ ಸ್ಪರ್ಧೆಗಳೂ ನಡೆದವು.  ಇವೆಲ್ಲವುಗಳ ಬಳಿಕ ಎಲ್ಲರ ಆಸಕ್ತಿಯ ಮ್ಯಾನೇಜ್‌ಮೆಂಟ್ ಸ್ಪರ್ಧೆಗಳು ನಡೆದವು. ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ‘ಕ್ಯಾಲಿಡಸ್’ ಸ್ಪರ್ಧೆಯಲ್ಲಿ ಮುಂಬೈನ ವೆಲ್ಲಿಂಗ್ಟನ್ ಕಾಲೇಜು ಬಹುಮಾನ ಗಳಿಸಿತು.ಇನ್ನು ಬೀದಿ ಬದಿಯ ಬಾಸ್ಕೆಟ್‌ಬಾಲ್ ಸ್ಪರ್ಧೆ ಹಾಗೂ ‘ಮ್ಯಾಡ್ ಆ್ಯಡ್ಸ್’ ಸ್ಪರ್ಧೆ ಇನ್ನಷ್ಟು ಮನರಂಜನೆಯನ್ನು ಒದಗಿಸಿತು. ಬಿಸಿನೆಸ್‌ಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧಾಳುಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷೆಗೊಳಪಡಿಸಿತು. ಸ್ಪರ್ಧೆಯಲ್ಲಿ ಕೇಳಲಾದ ಪ್ರಶ್ನೆಗಳು ಸಭಿಕರ ಆಸಕ್ತಿಯನ್ನು ಕೆರಳಿಸಿತು. 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ  ಕ್ರೈಸ್ಟ್ ವಿಶ್ವವಿದ್ಯಾಲಯ ಮೊದಲ ಬಹುಮಾನ ಗಳಿಸಿತು. ಬೆಂಗಳೂರಿನ ಎಕ್ಸ್‌ಎಂಐಇ ಎರಡನೇ ಬಹುಮಾನ ಗಳಿಸಿತು.ಉತ್ಸವದ ಅಂಗವಾಗಿ ನಡೆದ ನೃತ್ಯ ಕಾರ್ಯಕ್ರಮದಲ್ಲಂತೂ ಎಲ್ಲಾ ತಂಡಗಳು ಉತ್ಸಾಹದಿಂದಲೇ ಭಾಗವಹಿಸಿದ್ದವು. ‘ರಾಜ್‌ಮತಾಜ್’ ಹೆಸರಿನ ನೃತ್ಯ ಸ್ಪರ್ಧೆ ವಿದ್ಯಾರ್ಥಿಗಳ ಸೃಜನಶೀಲತೆಗೆ ಉತ್ತಮ ವೇದಿಕೆಯನ್ನು ಒದಗಿಸಿತ್ತು.ಸಾಲ್ಸಾ ಕಾರ್ಯಾಗಾರ, ಬೈಕ್‌ನಲ್ಲಿ ಸಾಹಸ ಕ್ರೀಡೆಗಳು, ಬೀದಿ ಬದಿಯ ಬಾಸ್ಕೆಟ್‌ಬಾಲ್ ಎರಡನೇ ದಿನವೂ ಮುಂದುವರಿಯಿತು. ಆದರೆ ರೇಡಿಯೋ ಜಾಕಿಗಾಗಿನ  ‘ರೇಡಿಯೋ ಗಾಗಾ’ ಸ್ಪರ್ಧೆ ಎರಡನೇ ದಿನದ ಪ್ರಧಾನ ಅಂಗವಾಗಿತ್ತು. ಜೊತೆಗೆ ‘ಸಿಂಬಯಾಸಿಸ್ ಬ್ಯುಸಿನೆಸ್ ಬಜಾರ್’ನಲ್ಲಿನ  ಅಂತಿಮ ಹಣಾಹಣಿ ಕೂಡ ಎಲ್ಲರ ಆಸಕ್ತಿಯನ್ನು ಸೆಳೆದಿತ್ತು. ಕೊನೆಯಲ್ಲಂತೂ ‘ಥರ್ಮಲ್’ ಮತ್ತು ‘ಕ್ವಾರ್ಟರ್’ ರಾಕ್ ಬ್ಯಾಂಡ್‌ನ ರಾಕಿಂಗ್ ಕಾರ್ಯಕ್ರಮದೊಂದಿಗೆ ಉತ್ಸವ ಕೊನೆಗೊಂಡಿತು.ಫೆಸ್ಟ್ ಎಂದ ಮೇಲೆ ಕೇಳಬೇಕೇ!. ಹಲವು ಕಾರ್ಯಕ್ರಮಗಳಿಂದ ಕ್ಯಾಂಪಸ್ ಚಟುವಟಿಕೆಯಿಂದ ತುಂಬಿತ್ತು. ಆಡಿಟೋರಿಯಂನಲ್ಲಂತೂ ವಿದ್ಯಾರ್ಥಿಗಳು ಒಂದೋ ರಸಪ್ರಶ್ನೆಯಲ್ಲಿ ವಿಜೇತರಾಗಲು ಅಥವಾ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಲುತಾ ಮುಂದು ನಾ ಮುಂದು ಎಂದು ಸ್ಪರ್ಧಿಸುತ್ತಿದ್ದರು.ಜಿಮ್ ಇರುವ ಪ್ರದೇಶವಂತೂ ಸಾಲ್ಸಾ ಪಟುಗಳಿಂದ ತುಂಬಿತ್ತು. ಆದರೆ ಉತ್ಸವದ ಎರಡೂ ದಿನಗಳ ಕಾಲ ಕಾರ್ಯಕ್ರಮಗಳ ನಡುವೆ ಗೊಂದಲ ಕಂಡುಬರದೇ ಇದ್ದದ್ದು ಇಲ್ಲಿನ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದಕ್ಕೆ ಉತ್ತಮ ಉದಾಹರಣೆಯಾಗಿತ್ತು.

     

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.