ಸೋಮವಾರ, ಮೇ 17, 2021
23 °C

ಮನವೊಲಿಕೆ ಯತ್ನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಸಚಿವ ಬಿ.ಶ್ರೀರಾಮುಲು ಅವರು  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಇಕ್ಕಟ್ಟಿಗೆ ಸಿಲುಕಿರುವ ಬಿಜೆಪಿ, ಅವರ ಮನವೊಲಿಕೆ ಕಸರತ್ತು ಆರಂಭಿಸಿದೆ.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಭಾನುವಾರ ಹೈದರಾಬಾದ್ ಪ್ರವಾಸ ಮೊಟಕುಗೊಳಿಸಿ, ಶ್ರೀರಾಮುಲು ರಾಜೀನಾಮೆ ನಿರ್ಧಾರ ಮತ್ತು ಅದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಸಚಿವರಾದ ಸಿ.ಎಂ.ಉದಾಸಿ, ಎಸ್.ಸುರೇಶ್‌ಕುಮಾರ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಮತ್ತಿತರರ ಜೊತೆ ಚರ್ಚಿಸಿದರು.ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, `ಶ್ರೀರಾಮುಲು ಅವರ ರಾಜೀನಾಮೆ ನಿರ್ಧಾರದ ಬಗ್ಗೆ ಮಾಧ್ಯಮಗಳಿಂದಲೇ ನನಗೆ ವಿಷಯ ತಿಳಿದಿದೆ. ಅವರನ್ನು ಮನವೊಲಿಸುವ ಕೆಲಸ ಆರಂಭವಾಗಿದೆ. ಅದರಲ್ಲಿ ಪಕ್ಷ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ನನಗಿದೆ~ ಎಂದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಶನಿವಾರವೇ ಶ್ರೀರಾಮುಲು ಅವರನ್ನು ಸಂಪರ್ಕಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸದಂತೆ ಸೂಚಿಸಿದ್ದರು. ಈಗ ಮತ್ತೊಮ್ಮೆ ಮನವೊಲಿಕೆಗೆ ಪ್ರಯತ್ನಿಸಲು ನಿರ್ಧರಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, `ಶ್ರೀರಾಮುಲು ಅವರ ರಾಜೀನಾಮೆ ಅಂಗೀಕಾರವಾಗುವುದಿಲ್ಲ~ ಎಂದು ಹೇಳಿದ್ದಾರೆ.ಹೈಕಮಾಂಡ್‌ನಿಂದಲೂ ಯತ್ನ:  ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಭಾನುವಾರ ಬೆಳಿಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.