ಗುರುವಾರ , ಜೂನ್ 24, 2021
27 °C

ಮನುಷ್ಯ, ರೋಬೊ;ಯಾರು ಮೇಲು?

ವಿಶ್ವನಾಥ ಶರ್ಮಾ Updated:

ಅಕ್ಷರ ಗಾತ್ರ : | |

ಕೆಲಸದ ಒತ್ತಡ ತಗ್ಗಿಸಲು ಅಥವಾ ಕಡಿಮೆ ಸಮಯದಲ್ಲಿ, ಅತ್ಯಂತ ವೇಗವಾಗಿ ಹಾಗೂ ಬಹಳ ಕ್ಲಿಷ್ಟಕರವಾದ ಕೆಲಸಗಳನ್ನೂ ಮಾಡಲೆಂದು ಯಂತ್ರಗಳನ್ನು ರೂಪಿಸಲಾಯಿತು. ಆದರೆ ಇಂದು ಯಂತ್ರಗಳು ನಮ್ಮ ಜೀವನದಲ್ಲಿಹಾಸು ಹೊಕ್ಕಾಗಿವೆ. ಕಸ ಗುಡಿಸುವಂತಹ ಸಣ್ಣ ಕೆಲಸದಿಂದ ಆರಂಭವಾಗಿ ಪತ್ತೆದಾರಿಯಂತಹ ಬಲು ಸೂಕ್ಷ್ಮ, ಅತ್ಯಂತ ಜವಾಬ್ದಾರಿ ಕಾರ್ಯಗಳಿಗೂ ಯಂತ್ರಗಳು ಬಳಕೆ ಅಗತ್ಯ ಮತ್ತು ಅನಿವಾರ್ಯ ಎನಿಸಿದೆ.ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮತ್ತು ರೋಬೊ ಕ್ಷೇತ್ರ ಅಚ್ಚರಿ ಹುಟ್ಟಿಸುವಂತಹ ರೀತಿಯಲ್ಲಿ ಹಲವು ಕ್ಷಿಪ್ರಗತಿಯ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಈ ಬೆಳವಣಿಗೆ ಗಮನಿಸಿದ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಭವಿಷ್ಯದಲ್ಲಿ ತಂತ್ರಜ್ಞಾನದ ಭೂಮಿಕೆ ಕುರಿತು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಯಂತ್ರಗಳು ತಮ್ಮ ವಿಶ್ಲೇಷಣಾ ಸಾಮರ್ಥ್ಯದಿಂದ ಮನುಷ್ಯನನ್ನೇ ಮೀರಿಸಲಿವೆ ಎಂಬ ತಜ್ಞರ ಹೇಳಿಕೆ  ಮಾನವ ಜಗತ್ತನ್ನು ಅಚ್ಚರಿಗೆ, ಅದೇ ವೇಳೆ ಆತಂಕಕ್ಕೀಡು ಮಾಡಿದೆ.ನಿರುದ್ಯೋಗ

ಹೀಗೆ ಕಂಪ್ಯೂಟರ್, ರೋಬೊಗಳೇ ಎಲ್ಲಾ ಕ್ಷೇತ್ರಗಳನ್ನೂ ಪ್ರವೇಶಿಸಿ ಕೆಲಸ ನಿರ್ವಹಿಸತೊಡಗಿದರೆ ಮುಂದಿನ ದಿನಗಳಲ್ಲಿ ವಿಶ್ವದ ನಿರುದ್ಯೋಗ ಸಮಸ್ಯೆ ಶೇ 50ರಿಂದ 75ರಷ್ಟು ಹೆಚ್ಚಲಿದೆ ಎಂಬುದು ತಜ್ಞರ ಅಂದಾಜು.ರೈಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ಮೊಶೆ ವಾರ್ದಿ ಹೇಳುವಂತೆ, ಸ್ವಯಂಚಾಲಿತ ಕಾರಿನ ಆವಿಷ್ಕಾರದಿಂದ 25 ವರ್ಷಗಳಲ್ಲಿ ಅಂದಾಜು 40 ಲಕ್ಷ ಚಾಲಕರು ನಿರುದ್ಯೋಗಿಗಳಾಗಲಿದ್ದಾರೆ.ಸ್ಮಾರ್ಟ್ ಕಂಪ್ಯೂಟರ್‌ಗಳಿಂದಾಗಿ ಅಮೆರಿಕದಲ್ಲಿ ವ್ಯವಹಾರ ಮತ್ತು ಆರ್ಥಿಕ ಕ್ಷೇತ್ರದಲ್ಲಿ 70 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.ಭವಿಷ್ಯದಲ್ಲಿ ರೋಬೊ  ಅಧಿಪತ್ಯ?

ಮನುಷ್ಯನಿಗೆ ಸಮನಾಗಿ ಯೋಚಿಸಬಲ್ಲ ‘ಎಕ್ಸಾಸ್ಕೇಲ್ ಕಂಪ್ಯೂಟರ್’ 2015ರ ಹೊತ್ತಿಗೆ  ವಾಸ್ತವಕ್ಕಿಳಿಯುವ ಎಲ್ಲಾ ಸಾಧ್ಯತೆಗಳಿವೆ ಎಂಬ ಸುದ್ದಿಯ ಬೆನ್ನಲ್ಲೇ ಇದೀಗ ಗೂಗಲ್ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕ ರೇ ಕುರ್ಜ್ವೆಲ್, ಮನುಷ್ಯ ಕುಲ ಬೆಚ್ಚಿ ಬೀಳುವಂತಹ ಹೇಳಿಕೆ ನೀಡಿದ್ದಾರೆ.‘ಮುಂಬರುವ 2029ರ ವೇಳೆಗೆ ಯಂತ್ರಗಳು ತನ್ನ ಸೃಷ್ಟಿಕರ್ತನಿಗಿಂತಲೂ ಹೆಚ್ಚಿನ ಬುದ್ಧಿಮತ್ತೆಯನ್ನು ಹೊಂದಿರಲಿವೆ. ಅಷ್ಟೇ ಅಲ್ಲ ರೋಬೊಗಳು ತಮ್ಮದೇ ಆದ ಅನುಭವದಿಂದ ಕಥೆ ಹೇಳಲಿವೆ, ನಗೆ ಚಟಾಕಿ ಹಾರಿಸಲಿವೆ, ಜತೆಗೆ ಪ್ರಣಯಚೇಷ್ಟೆಯನ್ನೂ ನಡೆಸಬಲ್ಲವು!

ಈ ಎಲ್ಲ ಸಂಗತಿಗಳೂ,  ಮನುಷ್ಯನೊಟ್ಟಿಗೆ ಯಂತ್ರಗಳ ಬುದ್ಧಿಮತ್ತೆ ಸಾಮರ್ಥ್ಯ ಪರೀಕ್ಷಿಸುವ ವಿಧಾನದಿಂದ (ಟ್ಯೂರಿಂಗ್ ಟೆಸ್ಟ್) ತಿಳಿದುಬಂದಿವೆ ಎಂಬುದು ಅವರು ನೀಡುವ ವಿವರಣೆ.ಕಂಪ್ಯೂಟರ್‌ಗೆ ಸೋತ ಕಾಸ್ಪರೋವ್!

1998ರ ಹೊತ್ತಿಗೆ ವಿಶ್ವ ಚೆಸ್ ಚಾಂಪಿಯನ್ ಅನ್ನು ಕಂಪ್ಯೂಟರ್ ಸೋಲಿಸಲಿದೆ ಎಂದು ರೇ ಕುರ್ಜ್ವೆಲ್ 1990ರಲ್ಲಿಯೇ ಭವಿಷ್ಯ ನುಡಿದಿದ್ದರು.ಅಚ್ಚರಿ ಎಂಬಂತೆ ಎರಡು ವರ್ಷ ಮುಂಚಿತವಾಗಿಯ ಅದು ನಿಜವಾಯಿತು. ‘ಐಬಿಎಂ’ ಕಂಪೆನಿ  ಅಭಿವೃದ್ಧಿಪಡಿಸಿದ ಚೆಸ್ ಆಡುವ ಕಂಪ್ಯೂಟರ್ ‘ಡೀಪ್ ಬ್ಲೂ’ ವಿಶ್ವವಿಖ್ಯಾತ ಚದುರಂಗ ಪಟು ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸುವ ಮೂಲಕ ಯಂತ್ರಗಳ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಸಾಬೀತಾಯಿತು.ಸ್ವಯಂ ಚಾಲಿತ ಕಾರು

ಟ್ಯೂರಿಂಗ್ ಟೆಸ್ಟ್  ಯಾವಾಗ ಯಶಸ್ವಿಯಾಗುತ್ತದೆ ಎಂದು ಕೃತಕ ಬುದ್ಧಿಮತ್ತೆ (ಐಎ) ತಜ್ಞರನ್ನು 1999ರಲ್ಲಿ ಕೇಳಿದಾಗ, ಕೆಲವರು ನೂರಾರು ವರ್ಷಗಳೇ ಬೇಕಾಗುತ್ತವೆ ಎಂದರೆ, ಇನ್ನು ಹಲವರು ‘ಇಂತಹುದು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟವಾಗಿ ಅಲ್ಲಗಳೆದಿದ್ದರು.

ಆದರೆ ‘ಸಿರಿ’  ಸಹಾಯದಿಂದ (Siri - ಐಫೋನಿನಲ್ಲಿರುವ ಧ್ವನಿ ಗುರುತಿಸುವ ತಂತ್ರಜ್ಞಾನ) ಕಂಪ್ಯೂಟರ್ ಜತೆ ಮಾತನಾಡಲು ಸಾಧ್ಯವಾಗಿದೆ.ಅಲ್ಲದೆ  ಗೂಗಲ್‌ನ ಸ್ವಯಂ ಚಾಲಿತ ಕಾರು ಅಭಿವೃದ್ಧಿಪಡಿಸುತ್ತಿದೆ. ಈ ಎಲ್ಲಾ ಸಂಗತಿಗಳು ಭವಿಷ್ಯದಲ್ಲಿ ಮನುಷ್ಯನಿಗೂ ಮೀರಿ ತಂತ್ರಜ್ಞಾನದ ಪ್ರಗತಿಯ ಸಾಧ್ಯತೆ ಬಗ್ಗೆ ಸೂಚಕಗಳಾಗಿವೆ ಎನ್ನುತ್ತಾರೆ ಅವರು.ಕೃತಕ ಬುದ್ಧಿಮತ್ತೆಯಲ್ಲಿ ಮನುಷ್ಯನನ್ನು ಮೀರಿಸಬಲ್ಲ ಯಂತ್ರಗಳನ್ನು ಅಭಿವೃದ್ಧಿಪಡಿಸಲು ಗೂಗಲ್ ಈಗಾಗಲೇ ಸಕಲ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಗೂಗಲ್ ಸಂಸ್ಥೆ ಇತ್ತೀಚೆಗೆ ಬೋಸ್ಟನ್ ಡೈನಾಮಿಕ್ಸ್ ಸೇರಿದಂತೆ ವಿಶ್ವದ ಪ್ರಮುಖ ರೋಬೊ ತಯಾರಿಕಾ ಕಂಪೆನಿಗಳನ್ನು ಖರೀದಿಸಿದೆ.ಇನ್ನೊಂದು ವಾದ

ಯಂತ್ರಗಳು ಮನುಷ್ಯನನ್ನು ಮೀರಿಸಿ ಮೇಲುಗೈ ಸಾಧಿಸಲಾರವು ಎನ್ನುವುದು ಬ್ರೌನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ಚಾಡ್ ಜಾಕಿನ್ಸ್ ಮತ್ತು ಪರಿಸರ ವಿಜ್ಞಾನದ ವಿದ್ಯಾರ್ಥಿ ಅಲೆಕ್ಸಾಂಡರ್ ಪೆಸ್ರಿ ಅವರ ವಾದ.ರೋಬೊಗಳು ಮನುಷ್ಯನ ನಿಯಂತ್ರಣದಲ್ಲಿಯೇ ಇವೆ. ಹೀಗಾಗಿ  ಮನುಷ್ಯನ ಹಸ್ತಕ್ಷೇಪವಿಲ್ಲದೆ ರೋಬೊಗಳು ತಮ್ಮಷ್ಟಕ್ಕೆ ತಾವೇ ಯಾವುದೇ ದುರುದ್ದೇಶಪೂರಿತ ಕ್ರಮ ಕೈಗೊಳ್ಳಲಾರವು. 2001ರ ಸೆಪ್ಟೆಂಬರ್ 11ರಂದು ವರ್ಲ್ಡ್ ‘ಟ್ರೇಡ್ ಸೆಂಟರ್ ’ ಅವಳಿ ಕಟ್ಟಡಗಳು ಮತ್ತು ರಕ್ಷಣಾ ಇಲಾಖೆಯ ‘ಪೆಂಟಗನ್’ ಮೇಲೆ ನಡೆದ  ಉಗ್ರರ ದಾಳಿಯೇ ಇದಕ್ಕೆ ನಿದರ್ಶನ ಎಂಬುದು ಅವರ ವಿವರಣೆ.ಮಾನವ–ರೋಬೊ ಸಹಯೋಗದಿಂದ ಉತ್ಪಾದನೆ ಹೆಚ್ಚಳ ಮತ್ತು ನಮ್ಮ ಜೀವನದ ಗುಣಮಟ್ಟ ಸುಧಾರಣೆಗೆ ರೋಬೊಗಳು ಸಹಾಯಕ ಆಗಲಿವೆ ಎನ್ನುವುದು ತಜ್ಞರಾದ ಫ್ರಾಂಕ್ ಲೆವಿ ಮತ್ತು ರಿಚರ್ಡ್ ಜೆ. ಮರ್ನೇನ್ ಅವರ ಅಭಿಮತ.ಕಂಪ್ಯೂಟರ್ ಮತ್ತು ರೋಬೊ ಮನುಷ್ಯನ ಕೆಲಸವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾರವು. ತಂತ್ರಜ್ಞಾನಗಳು  ಕಾರ್ಮಿಕರ ಸ್ವರೂಪದಲ್ಲಿ ಬದಲಾವಣೆ ತರುತ್ತವೆ. ಕಂಪ್ಯೂಟರ್ ಬಳಕೆ ಇದಕ್ಕೆ ಸೂಕ್ತ ನಿದರ್ಶನ.ಕಂಪ್ಯೂಟರೀಕರಣ ಮತ್ತು ಯಾಂತ್ರೀಕರಣದ ಹೆಚ್ಚಳದಿಂದ ಸಾಮೂಹಿಕ ನಿರುದ್ಯೋಗ ಸಮಸ್ಯೆಯೇನೂ ಸೃಷ್ಟಿಯಾಗುವುದಿಲ್ಲ. ಬದಲಾಗಿ ಪುನರಾವರ್ತನೆಯ ಪ್ರಕ್ರಿಯೆ ಬಯಸುವ, ಕಡಿಮೆ ಕೌಶಲದ ಉದ್ಯೋಗಗಳ ಸಂಖ್ಯೆಯಲ್ಲಿ ಇಳಿಕೆ ಕಾಣಬಹುದು ಅಷ್ಟೆ ಎನ್ನುತ್ತಾರೆ ತಜ್ಞರು.

ಯಂತ್ರಗಳು ಹೆಚ್ಚು ಬುದ್ಧಿಮತ್ತೆ ಪಡೆದು ಮನುಷ್ಯನನ್ನು ಆಳುತ್ತವೆಯೋ ಅಥವಾ ಈಗಿನಂತೆಯೇ ಅಡಿಯಾಳಾಗಿ ಪ್ರತ್ಯಕ್ಷ ಇಲ್ಲವೆ ಪರೋಕ್ಷ ನಿಯಂತ್ರಣಕ್ಕೆ ಒಳಪಟ್ಟು ಮಾನವರ ಜೀವನ ಮಟ್ಟ ಸುಧಾರಣೆಗೆ ಪೂರಕವಾಗಲಿವೆಯೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.