ಗುರುವಾರ , ಆಗಸ್ಟ್ 5, 2021
21 °C

ಮನೆಯಲ್ಲೇ ಬೀಜ ಬ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ ತಾಲ್ಲೂಕಿನ ನಿಜಿಯಪ್ಪನದೊಡ್ಡಿಯ ಯುವ ರೈತ ಸುರೇಂದ್ರ ತಮ್ಮ ಐದು ಎಕರೆ ಜಮೀನಿನಲ್ಲಿ ನಾಟಿ ಭತ್ತ, ಮಾವು,ತೆಂಗು, ತೊಗರಿ, ರಾಗಿ, ಹರಳು, ಸಾಸಿವೆ ಇತ್ಯಾದಿ ಕಿರು ಧಾನ್ಯಗಳನ್ನು ಬೆಳೆದಿದ್ದಾರೆ. ಎಂಟು ಹಸುಗಳು, ಎರಡು ಎಮ್ಮೆಗಳು, ಹತ್ತು ಮೊಲಗಳು ಹಾಗೂ ಜೇನು ಸಾಕಿದ್ದಾರೆ. ಅದೇ ಸುರೇಂದ್ರ ಅವರ ವಿಶೇಷ.ಒಮ್ಮೆ ಹಾಲಿನ ಡೇರಿ ಅಧಿಕಾರಿಗಳು ಅಧಿಕ ಇಳುವರಿ ಕೊಡುವ ಹೈಬ್ರಿಡ್ ಬಿಳಿ ಮೆಕ್ಕೆಜೋಳದ ಬಿತ್ತನೆ ಬೀಜ ಗಳನ್ನು ಸುರೇಂದ್ರ ಅವರಿಗೆ ಕೊಟ್ಟಿದ್ದರು. ಅವನ್ನು ಅವರು ಒಂದು ಎಕರೆಯಲ್ಲಿ ಬಿತ್ತಿದ್ದರು. ಆದರೆ ಬೆಳೆಗೆ ರೋಗ ಬಂದು ಸಂಪೂರ್ಣ ನಷ್ಟವಾಯಿತು.ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಅವರು ಸರಿಯಾದ ಉತ್ತರ ಕೊಡಲಿಲ್ಲ.  ಬೇಸರ ಪಟ್ಟುಕೊಂಡ ಸುರೇಂದ್ರ ಹೈಬ್ರಿಡ್ ತಳಿಯ ಸಹವಾಸ ಬೇಡ ಎಂದು ತೀರ್ಮಾನಿಸಿದ್ದರು. ಅದೇ ಸಮಯದಲ್ಲಿ ಕೊಟ್ಟಗಾರಹಳ್ಳಿಯ ಸಾವಯವ ರೈತ ಸದಾಶಿವ ನಾಟಿ ತಳಿಯ ಆಹಾರ ಧಾನ್ಯಗಳ ಬಿತ್ತನೆ ಬೀಜಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಮಾಹಿತಿ ನೀಡಿದರು. ಸಾವಯವ ಬೇಸಾಯ ಪದ್ಧತಿ ಅನುಸರಿಸುವುದರಿಂದ ಗುಣಮಟ್ಟದ ಆಹಾರ ಧಾನ್ಯಗಳನ್ನು ಬೆಳೆಯಲು ಸಾಧ್ಯ ಎಂದು ತಿಳಿಸಿಕೊಟ್ಟರು.ಕಿರುಗಾವಲಿನ ರೈತ ಮಹಮದ್ ಘನಿ, ಟಿ.ನರಸೀಪುರದ ಶ್ರೀನಿವಾಸ್, ತಮಿಳುನಾಡಿನ ಮೈಲಾಡುತೊರೈ, ಹಾಗೂ ಸಹಜ ಸಮೃದ್ಧ ಸಂಸ್ಥೆಗಳಿಂದ ನಾಟಿ ಭತ್ತದ ಮೂವತ್ತರಡು ತಳಿಗಳನ್ನು ಹಾಗೂ ಸ್ಥಳೀಯ ರೈತರಿಂದ  ನಾಟಿ ರಾಗಿ ತಳಿಗಳನ್ನು ತಂದು ಕಳೆದೆರಡು ವರ್ಷಗಳಿಂದ ತಳಿ ಸಂವರ್ಧನೆಯ ಮಾಡುತ್ತಿದ್ದಾರೆ. ಗಂಧಸಾಲೆ, ಸೇಲಂ ಸಣ್ಣ, ಘಂಗಡಲೆ, ಜೀರಿಗೆ ಸಣ್ಣ, ಪರಿಮಳ ಸಣ್ಣ, ಎತ್ತರ ಬೆಳೆಯುವ ರಾಜಭೋಗ. ಆನಂದಿ, ಕೆಂಪು ಮುಂಡುಗ, ಔಷಧೀಯ ಗುಣಗಳಿರುವ ಕರಿ ಗಜಿವಿಲಿ. ಕಾಳು ಜೀರಾ, ಕಾಲ ಕೊಲ್ಲಿ, ಒಣ ಭೂಮಿಯಲ್ಲಿ ಬೆಳೆಯುವ ಕೆಂಪು ದೊಡ್ಡ, ದೊಡ್ಡ ಭೈರನೆಲ್ಲು, ಕರಿ ಕಳವೆ, ಬಿಳಿ ನೆಲ್ಲು. ವಿಶಿಷ್ಟ ರುಚಿಯ ಗೌರಿ ಸಣ್ಣ, ಗಂನದ್ದು, ಚಿರಮುನಿ, ಮೀಸೆ ಭತ್ತ, ಕೊಟ್ಟಾಯಂ ಮತ್ತು ಹೆಚ್ಚು ಇಳುವರಿ ಕೊಡುವ ದೊಡ್ಡ ಭತ್ತ, ರಸ ಕದಂ. ಮೈಸೂರು ಮಲ್ಲಿಗೆ. ಬರ್ಮ ಬ್ಲಾಕ್, ಪೂರಿಕಾ, ಎನ್.ಎಂ.ಎಸ್ 2, ಎಚ್.ಎಂ,ಟಿ, ರತ್ನಚೂಡಿ, ಸಣ್ಣ ಮಸೂರಿ, ಆರು ತಿಂಗಳ ಕಾಲಾವಧಿಯ ಕಾಟಿಯಾನ ಇತ್ಯಾದಿ 32 ನಾಟಿ ಭತ ತಳಿಗಳನ್ನು ತಲಾ ಮೂರು ಗುಂಟೆಯಲ್ಲಿ ಬೆಳೆದಿದ್ದಾರೆ.            ಅರ್ಧ ಎಕರೆಯಲ್ಲಿ ಐನ್‌ರಾಗಿ, ಜೇನು ಮುಂಡಗ, ಸಣ್ಣ ರಾಗಿ, ದೊಡ್ಡ ರಾಗಿ, ಬೊಂಡಾ ರಾಗಿ, ಕರಿಕಡ್ಡಿ, ಕೋಳಿ ಮೊಟ್ಟೆ, ಹಸಿರು ಬುಂಡಗ, ಕುಳ್ಳ ರಾಗಿ, ಕಪ್ಪು ತೆನೆ, ಗುಟ್ಟಕೆಂಡಲ, ವಿಡಲು,ಕೋಣನ ಕೊಂಬಿನರಾಗಿ, ಜೇನು ಮುತ್ತಿಗೆ, ಹಾಲು ರಾಗಿ, ಪಿಚ್ಚ ಕಡ್ಡಿ, ಜಗಳೂರು, ಕರಿಮುಂಡಗ, ಬಿಳಿ ತೆನೆ, ನಾಗಮತಿ ಇತ್ಯಾದಿ 21 ರಾಗಿ ತಳಿಗಳು, ಪೋಷಕಾಂಶಗಳ ಆಗರವಾಗಿರುವ ಕಿರು ಧಾನ್ಯಗಳಾದ ಹೆಜ್ಜಾಮೆ, ಊದಲು, ಚಂದ್ರ ನವಣೆ, ದೊಡ್ಡತಲೆ ನವಣೆ, ಬಿಳಿ ನವಣೆ, ಹಾಲು ನವಣೆ ತಳಿಗಳನ್ನು ಬೆಳೆದಿದ್ದಾರೆ.ಭತ್ತ, ರಾಗಿ ಹಾಗೂ ಕಿರುಧಾನ್ಯಗಳ ಬೆಳೆ ನೋಡಲು ಹಲವಾರು ರೈತರು ಸುರೇಂದ್ರ ಅವರ ಹೊಲಕ್ಕೆ ಬರುತ್ತಾರೆ. ಆಸಕ್ತ ರೈತರಿಗಾಗಿ ತಮ್ಮ ಮನೆಯಲ್ಲಿಯೇ ಬೀಜ ಬ್ಯಾಂಕ್ ಸ್ಥಾಪಿಸಿದ್ದಾರೆ. ಪ್ರಮುಖ ಆಹಾರ ಧಾನ್ಯಗಳ ಬೆಳೆಗಳು, ಕಿರು ಧಾನ್ಯಗಳು, ಸೊಪ್ಪು, ತರಕಾರಿ ಬೀಜಗಳನ್ನು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದಾರೆ.ಒಂದು ಕೆ.ಜಿ. ಬಿತ್ತನೆ ಬೀಜ ಪಡೆದುಕೊಂಡವರು ಬೆಳೆದನಂತರ ಎರಡು ಕೆ.ಜಿ. ಬೀಜವನ್ನು ಹಿಂದಿರುಗಿಸಬೇಕು ಎಂಬ ಕರಾರಿನೊಂದಿಗೆ ರೈತರಿಗೆ ನೀಡುತ್ತಾರೆ. ರಾಸಾಯನಿಕ ಗೊಬ್ಬರ ಬಳಸುವ ರೈತರಿಗೆ ಬಿತ್ತನೆ ಬೀಜಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡುತ್ತಾರೆ. ನಾಟಿ ತಳಿಯ ಭತ್ತ, ರಾಗಿ ಬೆಳೆಯುವುದರಿಂದ ರಾಸಾಯನಿಕ ಗೊಬ್ಬರ,ಕೀಟನಾಶಕಗಳ ಖರೀದಿಗೆ ವೆಚ್ಚ ಮಾಡುವ ಹಣ ಉಳಿಯುತ್ತದೆ. ಆಹಾರ ಸುರಕ್ಷೆ ದೃಷ್ಟಿಯಿಂದ ದೇಶಿ ಆಹಾರ ಧಾನ್ಯ ತಳಿಗಳನ್ನು ರಕ್ಷಿಸುವುದು ಅಮೂಲ್ಯ ಎನ್ನುತ್ತಾರೆ ಸುರೇಂದ್ರ.  ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಪಡೆದಿರುವ ಸುರೇಂದ್ರ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುತ್ತಾರೆ.

ಸುರೇಂದ್ರ ಅವರ ಮೊಬೈಲ್ ನಂಬರ್:  90352 49142. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.