ಸೋಮವಾರ, ಜೂನ್ 21, 2021
30 °C

ಮನೆಯ ಅಂದಕ್ಕೆ ವಾಲ್‌ಪೇಪರ್

ನಾಗರಾಜ ರಾ. ಚಿನಗುಂಡಿ Updated:

ಅಕ್ಷರ ಗಾತ್ರ : | |

ಮನೆಯ ಅಂದಕ್ಕೆ ವಾಲ್‌ಪೇಪರ್

ಮನೆಯೊಂದರ ನಿರ್ಮಾಣಕ್ಕೆ ಬಳಸಿದ ಸಾಧನ, ಸಾಮಗ್ರಿ ಹಾಗೂ ಅದರ ವಿನ್ಯಾಸ ನೋಡಿದರೆ ಸಾಕು; ಇದು ಅತ್ಯಾಧುನಿಕ ಶೈಲಿಯದ್ದು, ಸಾಂಪ್ರದಾಯಿಕ ಶೈಲಿಯದ್ದು ಎಂದು ಗುರುತಿಸಬಹುದು. ಆಧುನಿಕ ಮನೆಗಳ ಒಳಾಂಗಣದಲ್ಲಿ ಕಾಣುವ ಟೈಲ್ಸ್, ಪೇಂಟ್ ಬದಲಾಗಿ ವೈವಿಧ್ಯಮಯ ಫ್ಯಾಬ್ರಿಕ್ ಪೇಪರ್ ಬಳಕೆ ಈಚೆಗೆ ಆಕರ್ಷಣೆ ಪಡೆದುಕೊಳ್ಳುತ್ತಿದೆ.ಒಳಾಂಗಣ ವಿನ್ಯಾಸವು  ಉದ್ಯಮವಾಗಿ ಬೆಳೆದಿರುವ ಈ ದಿನಗಳಲ್ಲಿ, ಮನೆಯೊಳಗಿನ ಗೋಡೆಗಳಿಗೆ ಬರೀ ಟೈಲ್ಸ್ ಅಂಟಿಸಿದರೆ ಏನು ಚೆಂದ; ಮೊಳೆ ಹೊಡೆದರೆ ಟೈಲ್ಸ್ ಉದುರುತ್ತವೆ. ಟೈಲ್ಸ್‌ಗಿಂತಲೂ ಅಗ್ಗದ ದರದಲ್ಲಿ, ಮನಸ್ಸಿಗೆ ಮುದನೀಡುವ ಹಾಗೆ ಫ್ಯಾಬ್ರಿಕ್ ಪೇಪರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.ವಿನೈಲ್‌ನಲ್ಲಿ ನೆಲ (ಫ್ಲೋರ್)ಹಾಸು ಹಾಕಿಕೊಡುವ ರೀತಿಯಲ್ಲೆ, ಕೋಣೆಯ ನಾಲ್ಕು ದಿಕ್ಕಿನ ಗೋಡೆಯ ವಿಸ್ತಾರಕ್ಕೆ ಹೊಂದಿಕೊಳ್ಳುವ ವೈವಿಧ್ಯಮಯ ವರ್ಣ ಮತ್ತು ಅಲಂಕಾರವುಳ್ಳ ವಾಲ್‌ಪೇಪರ್‌ಗಳನ್ನು ಅಂಟಿಸುವ ಕೆಲಸವನ್ನು ಒಳಂಗಾಣ ವಿನ್ಯಾಸಕರು ಮಾಡಿಕೊಡುತ್ತಾರೆ.ಒಳಾಂಗಣ ವಿನ್ಯಾಸದಲ್ಲಿ ಇದು ತಂತ್ರವೇನು ಅಲ್ಲ. ಆದರೆ, ಮನೆ ನಿರ್ಮಿಸಿಕೊಳ್ಳುವ ಬಹಳಷ್ಟು ಜನರಿಗೆ ಈ ಬಗ್ಗೆ ತಿಳಿದಿಲ್ಲ. ಮೆಟ್ರೊ ನಗರಗಳಿಗೆ ಮಾತ್ರ ಸೀಮಿತವಾಗಿದ್ದು ಅತ್ಯಾಧುನಿಕ ಮನೆಗಳು ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ತಲೆ ಎತ್ತುತ್ತಿರುವುದರಿಂದ ಗೋಡೆಗಳ ಮೇಲೆ ಫ್ಯಾಬ್ರಿಕ್ ಪೇಪರ್ ಬಳಕೆ ನಿಧಾನವಾಗಿ ವ್ಯಾಪಕವಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಕಾಣುವ ಸಾಂಪ್ರದಾಯಿಕ ಮನೆಗಳನ್ನು ಈಗ ನಿರ್ಮಿಸುವುದು ಕಷ್ಟ.  ಆಧುನಿಕ ಜೀವನಶೈಲಿಗೆ ಹೊಂದಿಕೊಂಡವರು ಸಾಂಪ್ರದಾಯಿಕ ಮನೆಗಳಲ್ಲಿರುವುದು ಕಷ್ಟ. ಹೀಗಾಗಿ ದಿನಕಳೆದಂತೆ ಹೊಸ ವಿನ್ಯಾಸದ ಪರಿಕಲ್ಪನೆ, ಹೊಸ ಪರಿಕರಗಳ ಬಳಸುವುದಕ್ಕೆ ಇಂಬುನೀಡುವ ಆಧುನಿಕ ಶೈಲಿ ಮನೆ ನಿರ್ಮಾಣವೆ ವ್ಯಾಪಕವಾಗುತ್ತಿದೆ. `ಫಾರ್ಮ್‌ಹೌಸ್~ ಹೆಸರಿನ ಆಧುನಿಕಶೈಲಿ ಮನೆ ನಿರ್ಮಿಸುವುದರ ಬಗ್ಗೆ ಪಟ್ಟಣದ ಸಂಪರ್ಕವುಳ್ಳ ರೈತರು ಒತ್ತು ನೀಡುತ್ತಿದ್ದಾರೆ.ಮನೆಗಳಲ್ಲಿನ ಕಿಟಗಿ, ಬಾಗಿಲುಗಳಿಗೆ ವಿವಿಧ ಬಣ್ಣದ ಪರದೆಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ದಿಷ್ಟ ಅಂಗಡಿಗಳು ಇರುವ ಹಾಗೆಯೇ, ವಾಲ್‌ಪೇಪರ್ ವಿನ್ಯಾಸಗಳನ್ನು ಆಯ್ಕೆಮಾಡಿಕೊಳ್ಳುವುದಕ್ಕೆ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಕೆಲವು ನಗರಗಳಲ್ಲಿ ಆಧುನಿಕ ಮನೆಯ ಒಳಾಂಗಣಕ್ಕೆ ಬೇಕಾಗುವ ವಿನ್ಯಾಸದ ಪರಿಕರ ಮತ್ತು ಸೇವೆ ಒದಗಿಸುವ ಅಂಗಡಿಗಳು ತೆರೆದುಕೊಂಡಿವೆ. ಪರದೆ ಮಾರಾಟ ಅಂಗಡಿಗಳಲ್ಲಿಯೂ ಈ ಬಗ್ಗೆ ವಿಚಾರಿಸಬಹುದು ಅಥವಾ `ಇಂಟರ್‌ನೆಟ್~ ಮೂಲಕವೂ ಒಳಾಂಗಣ ವಿನ್ಯಾಸಕರನ್ನು ಶೋಧಿಸಬಹುದಾಗಿದೆ.ಮನೆಗೆ ಬಂದ ಅತಿಥಿಗಳು, ಅವರ ಮಕ್ಕಳು ಗೋಡೆಗೆ ಅಂಟಿಕೊಂಡು ಕುಳಿತರೆ ಮನೆಯೊಡತಿ ಒಳಗೊಳಗೆ ಚಿಂತೆ ಮಾಡಬೇಕಿಲ್ಲ. ಫ್ಯಾಬ್ರಿಕ್ ವಾಲ್‌ಪೇಪರ್‌ಗೆ ಎಣ್ಣೆ ಕಲೆ ಅಥವಾ ಬೇರಾವುದೇ ದೂಳು ಅಂಟಿಕೊಂಡರೂ ನೆಲ ಸ್ವಚ್ಛಗೊಳಿದಂತೆ ಮತ್ತೆ ಥಳಥಳಿಸುವ ಹಾಗೆ ಮಾಡುವುದು ತುಂಬಾ ಸುಲಭ. ಇಡೀ ಮನೆಯೊಳಗಿನ ಗೋಡೆಗೆ ಒಂದೇ ತರಹದ ಬಣ್ಣ ಬಳಸುವುದನ್ನು ಕಾಣುತ್ತೇವೆ. ಇದು ಮನೆಯ ಸದಸ್ಯರೆಲ್ಲರಿಗೂ ಇಷ್ಟವಾಗದೆ ಹೋಗಬಹುದು.ಹೀಗಾಗಿ ಪ್ರತ್ಯೇಕ ಕೋಣೆಗಳಲ್ಲಿ ಅವರವರ ಅಭಿರುಚಿಗೆ ತಕ್ಕಂತಹ ಬಣ್ಣದ ಫ್ಯಾಬ್ರಿಕ್ ಪೋಸ್ಟರ್‌ಗಳನ್ನು ಅಂಟಿಸಿಕೊಂಡು ಆರಾಮವಾಗಿ ವಿರಮಿಸಬಹುದು. ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಳ್ಳುವ ಹೋಟೆಲ್ ಕೋಣೆಗಳು ಉಳಿದುಕೊಳ್ಳುವವರಿಗೆ ಬಹಳ ಹಿತ ನೀಡುತ್ತವೆ; ಇದಕ್ಕೆ ಕಾರಣವೇ, ತಂಪು ಸೂಸುವ ನವೀರ ವರ್ಣದ ಫ್ಯಾಬ್ರಿಕ್‌ಪೇಪರ್ ಗೋಡೆಗಳು.ಪರಿಸರ ಪ್ರೇಮಿಗಳು, ಪ್ರಾಣಿ ಪ್ರೇಮಿಗಳು, ಜಲಪಾತ ಇಷ್ಟಪಡುವವರು.. ತಮ್ಮ ಮನೆಗಳ ಗೋಡೆಗಳ ಮೇಲೆ ಪೇಂಟ್‌ನಂತೆಯೆ ಕಂಗೊಳಿಸುವ ವಾಲ್‌ಪೇಪರ್ ಹಾಕಿಸಿಕೊಂಡು ಇಷ್ಟಾರ್ಥ ಈಡೇರಿಸಿಕೊಂಡು ಸಂತೋಷ ಪಡಬಹುದು.

     

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.