ಮಂಗಳವಾರ, ಜನವರಿ 28, 2020
18 °C

ಮರಳಿ ಮಣ್ಣಿಗೆ

–ಅಮಿತ್‌ ಎಂ.ಎಸ್‌. Updated:

ಅಕ್ಷರ ಗಾತ್ರ : | |

ವರ್ಷಾಂತ್ಯಕ್ಕೆ ಕೆಲವೇ ದಿನಗಳು ಬಾಕಿ. ಕುಡ್ಲ ಮೂಲದ ಈ ಬೆಡಗಿ ಆ ಗಳಿಗೆಗಾಗಿಯೇ ಕಾದಿದ್ದಾರೆ. ಹೊಸ ವರ್ಷದ ಮೊದಲ ತಿಂಗಳೇ ತನ್ನ ಪಾಲಿನ ವಸಂತಕಾಲವಾಗಲಿದೆ ಎಂಬ ನಿರೀಕ್ಷೆ ಈಕೆಯದು. ಉತ್ತರ ಮತ್ತು ದಕ್ಷಿಣದ ಬಣ್ಣದ ಲೋಕಗಳೆರಡರತ್ತಲೂ ಏಕಕಾಲಕ್ಕೆ ಕಣ್ಣುಹಾಯಿಸುತ್ತಿರುವ ಈಕೆಯ ಕಣ್ಣಲ್ಲಿ ತುಳುಕುವ ಕಾತುರ.ಮುಂಬೈನಲ್ಲಿ ಹುಟ್ಟಿ ಬೆಳೆದರೂ ಮಂಗಳೂರು ನಂಟು ಹೊಂದಿರುವ ಈ ಚೆಲುವೆ ಎರಿಕಾ ಫರ್ನಾಂಡಿಸ್‌. ಬಾಲ್ಯದಲ್ಲಿಯೇ ಮೂಡಿದ ಬಣ್ಣದ ಜಗತ್ತಿನೆಡೆಗಿನ ಆಕರ್ಷಣೆ ಹದಿಹರೆಯಕ್ಕೆ ಕಾಲಿಟ್ಟಾಗ ‘ಅದೇ ನಿನ್ನ ಬದುಕು’ ಎಂಬ ಪ್ರಜ್ಞೆ ಮೂಡಿಸಿತು. ರ್‍್ಯಾಂಪ್‌ ಮೇಲೆ ಶುರುವಾದ ಬಣ್ಣ–ಬೆಳಕಿನ ನಂಟು ಕ್ಯಾಮೆರಾ ಮುಂದೆಯೂ ಕರೆತಂದಿತು. ಅದಕ್ಕೆ ಕಾರಣವಾಗಿದ್ದು ಸೌಂದರ್ಯ ಸ್ಪರ್ಧೆಯ ಹಲವು ಕಿರೀಟಗಳು.ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಒಂದರ ಹಿಂದೊಂದು ಅವಕಾಶಗಳು ಸಾಲುಗಟ್ಟಿ ನಿಂತವು. ಬಿಡುಗಡೆಯಾಗಿದ್ದು ಒಂದೇ ತಮಿಳು ಚಿತ್ರವಾದರೂ ಎರಿಕಾ ಈಗಾಗಲೇ ವಿವಿಧ ಭಾಷೆಗಳ ಚಿತ್ರ ನಿರ್ಮಾತೃಗಳನ್ನು ಸೆಳೆದಿದ್ದಾರೆ. ಜಯಂತ್‌ ಪರಾಂಜಿ ನಿರ್ದೇಶನದ ‘ನಿನ್ನಂದಲೇ’ಯಲ್ಲಿ ಪುನೀತ್‌ ರಾಜ್‌ಕುಮಾರ್‌ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಒಲಿದದ್ದೇ ತಡ, ಎರಿಕಾರಲ್ಲಿ ಚಿತ್ರಜಗತ್ತಿನ ತನ್ನ ಭವಿಷ್ಯದ ಬಗ್ಗೆ ಭರವಸೆಯ ಗರಿ ಮೂಡತೊಡಗಿದೆ.‘ಜನವರಿ ಬಳಿಕ ನನ್ನ ಸಿನಿಮಾ ಬದುಕು ಗಟ್ಟಿಯಾಗುತ್ತದೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಎರಿಕಾ. ‘ಐಂದು ಐಂದು ಐಂದು’ ತಮಿಳು ಚಿತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ಅವರಲ್ಲಿ ತಾನೊಬ್ಬ ಉತ್ತಮ ನಟಿಯಾಗಬಲ್ಲೆ ಎಂಬ ಭರವಸೆಯಿದೆ. ‘ನಿನ್ನಿಂದಲೇ’ ಜನವರಿಯಲ್ಲಿ ತೆರೆಕಾಣುವ ಸಾಧ್ಯತೆಯಿದೆ. ಜೊತೆಗೆ ಅವರ ಹಿಂದಿ ಸಿನಿಮಾ ‘ಬಬ್ಲೂ ಹ್ಯಾಪಿ ಹೈ’ ಕೂಡ ವರ್ಷಾರಂಭದಲ್ಲಿ ಬಿಡುಗಡೆಯಾಗುತ್ತಿದೆ. ಹೀಗೆ ಭಾರತೀಯ ಚಿತ್ರರಂಗದ ಎರಡು ಧ್ರುವಗಳಲ್ಲಿ ಏಕಕಾಲಕ್ಕೆ ಗುರ್ತಿಸಿಕೊಳ್ಳುವ ಅಪೂರ್ವ ಅವಕಾಶ ತಮ್ಮದಾಗಲಿದೆ ಎಂಬ ಖುಷಿ ಅವರದು.‘ನಿನ್ನಿಂದಲೇ’ ಚಿತ್ರದಲ್ಲಿನ ತಮ್ಮ ಪಾತ್ರದ ಗುಟ್ಟನ್ನು ಬಿಟ್ಟುಕೊಡಲು ಎರಿಕಾ ಸಿದ್ಧರಿಲ್ಲ. ಆದರೆ ಇದೊಂದು ವಿಶಿಷ್ಟ, ಹೊಸಬಗೆಯ, ನವಿರು ನಿರೂಪಣೆಯ ಸಿನಿಮಾ ಎನ್ನುತ್ತಾರೆ. ಹಾಗೆಯೇ ಚಿತ್ರೀಕರಣದುದ್ದಕ್ಕೂ ತಮಗೆ ಹಿತಕರ ಅನುಭವ ನೀಡಿದ ಚಿತ್ರತಂಡದ ಬಗ್ಗೆ ಸಹಕಾರವನ್ನೂ ಮೆಚ್ಚುತ್ತಾರೆ. ಪುನೀತ್‌ ಬಗ್ಗೆ ಎಷ್ಟು ಹೇಳಿದರೂ ಸಾಲದು ಎನ್ನುವ ಎರಿಕಾರಿಗೆ, ತಾವು ಇದುವರೆಗೆ ನಟಿಸಿರುವ ನಟರ ನಡುವೆ ಪುನೀತ್‌ ವಿಶೇಷ ವ್ಯಕ್ತಿ ಎನಿಸಿದ್ದಾರೆ. ಅವರ ಸರಳತೆ ಮತ್ತು ವೃತ್ತಿಬದ್ಧತೆಯನ್ನು ಎರಿಕಾ ಮೆಚ್ಚಿಕೊಳ್ಳುತ್ತಾರೆ.

‘ಬಾಂಬೆ ಟೈಮ್ಸ್‌ ಫ್ರೆಶ್‌ ಫೇಸ್‌’, ‘ಪ್ಯಾಂಟಲೂನ್ಸ್‌ ಫೆಮಿನಾ ಫ್ರೆಶ್ ಫೇಸ್’, ‘ಪ್ಯಾಂಟಲೂನ್ಸ್‌ ಫೆಮಿನಾ ಮಿಸ್‌ ಮಹಾರಾಷ್ಟ್ರ’, ‘ಪ್ಯಾಂಟಲೂನ್ಸ್‌ ಫೆಮಿನಾ ಮಿಸ್‌ ಇಂಡಿಯಾ’ ಇವು ಸೌಂದರ್ಯ ಪ್ರದರ್ಶನ ಸ್ಪರ್ಧೆಗಳಲ್ಲಿ ಎರಿಕಾ ಮುಡಿಗೇರಿರುವ ಗರಿಗಳು. ಒಳಾಂಗಣ ವಿನ್ಯಾಸಕಾರರಾಗಿರುವ ತಂದೆ ರಾಲ್ಫ್‌ ಫರ್ನಾಂಡಿಸ್‌ ಮೊದಲು ಮಾಡೆಲ್ ಆಗಿದ್ದವರು. ಹೀಗಾಗಿ ಕಲಾಪದವಿ ಕಲಿಕೆಯ ಜೊತೆಗೇ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿರಿಸುವ ಮಗಳ ಬಯಕೆಗೆ ಮನೆಯಲ್ಲಿ ಮುಕ್ತ ಪ್ರೋತ್ಸಾಹ ಸಿಕ್ಕಿತು.ಅಂದಹಾಗೆ, ಎರಿಕಾರಲ್ಲಿ ರೂಪದರ್ಶಿ ಆಗುವ ಬಯಕೆ ಚಿಗುರುವಂತೆ ಮಾಡಿದ್ದು ಕೇಶವಿನ್ಯಾಸ ಪಾರ್ಲರ್‌ನ ಮಾಲೀಕರೊಬ್ಬರು. ಕೇಶವಿನ್ಯಾಸಕ್ಕೆಂದು ಪಾರ್ಲರ್‌ಗೆ ತೆರಳಿದ್ದಾಗ ಅದರ ಮಾಲೀಕ ತಮಗಾಗಿ ರೂಪದರ್ಶಿ ಆಗಬೇಕೆಂಬ ಬೇಡಿಕೆ ಮುಂದಿಟ್ಟರು. ಆ ಗಳಿಗೆಯೇ ಮುಂದೆ ಅವರನ್ನು ಸಂಪೂರ್ಣವಾಗಿ ಬಣ್ಣದ ಲೋಕಕ್ಕೆ ಕರೆತರುವಂತೆ ಮಾಡಿತು.ಚಿಕ್ಕಂದಿನಲ್ಲಿದ್ದಾಗ ಮಾತ್ರ ಮಂಗಳೂರಿನ ಸಂಬಂಧಿಕರ ಮನೆಗೆ ಹೋಗುತ್ತಿದ್ದ ಎರಿಕಾರಿಗೆ ಅಲ್ಲಿನ ನಂಟು ಅಷ್ಟಾಗಿ ಇಲ್ಲ. ಮುಂಬೈನಲ್ಲಿಯೇ ಬದುಕು ಕಂಡುಕೊಂಡಿದ್ದರಿಂದ ಕನ್ನಡದ ಬಗ್ಗೆಯೂ ಹೆಚ್ಚು ತಿಳಿದಿರಲಿಲ್ಲ. ಈಗ ಸಿನಿಮಾ ನೆಪದಲ್ಲಿ ಮೂಲ ಮಣ್ಣಿನ ಬಾಂಧವ್ಯ ಬೆಸೆದಿದೆ. ಕನ್ನಡ ಸಿನಿಮಾ, ಭಾಷೆಯ ಬಗ್ಗೆ ಆಸಕ್ತಿಯೂ ಮೂಡುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಕಲಿಯುವ ಗುರಿಯೂ ಅವರಲ್ಲಿದೆ.ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ದ್ವಿಭಾಷಾ ಸಿನಿಮಾ ‘ವಿರತ್ತು’, ತಮಿಳಿನ ‘ವಿಳಿತ್ತಿರು’, ಬಾಲಿವುಡ್‌ನ ‘ಲವ್‌ ಈಸ್‌ ನಾಟ್‌ ಮೆಥಮೆಟಿಕ್ಸ್‌’ ಅವರ ಕೈಯಲ್ಲಿವೆ. ಕನ್ನಡದಲ್ಲಿಯೂ ಹೊಸ ಅವಕಾಶಗಳು ಅವರ ಮುಂದಿವೆಯಂತೆ. ಸಿನಿಮಾ ಮತ್ತು ಮಾಡೆಲಿಂಗ್‌ ನಡುವಿನ ಅಂತರವನ್ನು ಎರಿಕಾ ಸೂಕ್ಷ್ಮವಾಗಿ ಗುರ್ತಿಸುತ್ತಾರೆ.ಮಾಡೆಲಿಂಗ್‌ನಲ್ಲಿ ನಾವು ಕಾಣಿಸಿಕೊಳ್ಳುವ ಬಗೆ ಮಾತ್ರ ಮುಖ್ಯ. ಆದರೆ ಸಿನಿಮಾದಲ್ಲಿ ಸೌಂದರ್ಯ ಮಾತ್ರವಲ್ಲ, ಅಲ್ಲಿ ಗಟ್ಟಿಯಾಗಿ ನಿಲ್ಲುವ ಸ್ಥೈರ್ಯ, ಅಭಿನಯದ ತಾಕತ್ತು, ಬದ್ಧತೆ ಮತ್ತು ಕಾರ್ಯಕ್ಷಮತೆ ಎಲ್ಲವೂ ಬೇಕು ಎನ್ನುತ್ತಾರೆ ಅವರು. ಅವರ ಪ್ರಕಾರ ಮಾಡೆಲಿಂಗ್‌ನಲ್ಲಿ ಮಿಂಚಿದವರೆಲ್ಲರೂ ನಟಿಯಾಗಲು ಸಾಧ್ಯವಿಲ್ಲ. ಹೇಗೆ ಈ ಬಣ್ಣದ ಸಾಂಗತ್ಯ ಶುರುವಾಯಿತೋ, ಯಾವಾಗ ಅಂತ್ಯಗೊಳ್ಳುತ್ತದೋ ನನಗೆ ಗೊತ್ತಿಲ್ಲ. ಆದರೆ ಇಲ್ಲಿರುವ ಪ್ರತಿಕ್ಷಣವನ್ನೂ ಸಂಭ್ರಮಿಸುವ ಬಯಕೆ ನನ್ನದು ಎನ್ನುತ್ತಾರೆ ಎರಿಕಾ.

ಪ್ರತಿಕ್ರಿಯಿಸಿ (+)