ಶುಕ್ರವಾರ, ಮೇ 14, 2021
30 °C

ಮರವಂತೆ: ಕಡಲ್ಕೊರೆತ ತೀವ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರವಂತೆ (ಬೈಂದೂರು): ಕಳೆದ ಮೂರು ದಿನಗಳಿಂದ ಸಮುದ್ರದಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ಅಲೆಗಳ ಹೊಡೆತದಿಂದಾಗಿ ಮರವಂತೆ ತೀರದಲ್ಲಿ ಕಡಲ್ಕೊರೆತ ಶುಕ್ರವಾರ ಅಪಾಯಕಾರಿ ಸ್ಥಿತಿ ತಲಪಿದೆ. ಮೀನುಗಾರರ ದಟ್ಟ ವಸತಿ ಇರುವ ಪ್ರದೇಶದಲ್ಲೇ ಸುಮಾರು 200 ಮೀ ಪ್ರದೇಶ ಅಪಾಯದ ಅಂಚಿನಲ್ಲಿದೆ.

ಇಲ್ಲಿನ ನಬಾರ್ಡ್ ಫಿಶರೀಸ್ ರಸ್ತೆಯ ಕೆಲಭಾಗ ಸಮುದ್ರ ಪಾಲಾಗಿದೆ. ಒಂದು ಮೋರಿ ಕುಸಿದಿದ್ದು, ಅದಕ್ಕೆ ಅಳವಡಿಸಿದ್ದ ಪೈಪ್ ನೀರುಪಾಲಾಗಿದೆ. ತೀರದಲ್ಲಿದ ಎರಡು ಮೀನುಗಾರರ ವಿಶ್ರಾಂತಿ ಕುಟೀರ ಮತ್ತು ಎರಡು ತೆಂಗಿನ ಗಿಡಗಳು ಸಮುದ್ರ ಸೇರಿವೆ.ಸಮುದ್ರದ ಆರ್ಭಟ ಇನ್ನೂ ಒಂದೆರಡು ದಿನ ಮುಂದುವರಿಯುವ ಸಾಧ್ಯತೆ  ಇದೆ. ಕೊರೆತ ತಡೆಗಟ್ಟದಿದ್ದಲ್ಲಿ ರಸ್ತೆ ಸಂಪರ್ಕ ಕಡಿದು ಹೋಗುವ ಅಪಾಯ ಇದೆ ಎಂದು  ಎಂದು ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಸಕ ಕೆ.ಲಕ್ಷ್ಮೀನಾರಾಯಣ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಶುಕ್ರವಾರ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತ ಶಾಸಕರು, ಜಿಲ್ಲಾಧಿಕಾರಿ ಎಂ.ಟಿ.ರೇಜು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.ತುರ್ತು ಕಾಮಗಾರಿಗಾಗಿ ಜಿಲ್ಲಾಧಿಕಾರಿ, ಪ್ರಕೃತಿ ವಿಕೋಪ ನಿಧಿಯಿಂದ 20 ಲಕ್ಷ ರೂಪಾಯಿ ಬಿಡುಗಡೆಗೊಳಿಸಿದ್ದಾರೆ. ಬಂದರು ಮತ್ತು ಮೀನುಗಾರಿಕಾ ಇಲಾಖೆ ಎಂಜಿನಿಯರ್ ಅವರಿಗೆ ಕೂಡಲೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ತಾರಾನಾಥ ಎಸ್. ರಾಥೋಡ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್. ಎಂ. ಖಾರ್ವಿ, ಕಿರಿಯ ಎಂಜಿನಿಯರ್ ರವೀಶ್‌ಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಅಂದಾಜಿಸ್ದ್ದಿದು, ಶನಿವಾರದಿಂದಲೇ ರಕ್ಷಣಾ ಕ್ರಮ ಕೈಗೊಳ್ಳಲು ನಿರ್ಧರಿಸಿದರು.  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರು, ಮೀನುಗಾರ ಮುಖಂಡರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.