ಶುಕ್ರವಾರ, ಮೇ 7, 2021
20 °C

`ಮರಾಠಿ ಶಾಸಕರಿಗೆ ಕನ್ನಡ ನಾಡಿನ ಕುರಿತು ಬದ್ಧತೆ ಬೇಕು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಚುನಾವಣೆಯಲ್ಲಿ ಗೆದ್ದ ಮೇಲೆ ಶಾಸಕರ ಪ್ರತಿಜ್ಞಾವಿಧಿ ಸ್ವೀಕಾರ, ಒಂದೆಡೆರಡು ನಿಮಿಷಗಳ ವ್ಯವಹಾರ. ಆದರೆ, ಮುಂದಿನ ಐದು ವರ್ಷಗಳಲ್ಲಿ ನಾಡು ನುಡಿ ರಕ್ಷಣೆಯಲ್ಲಿ ಬದ್ಧತೆಯಿಂದ ನಡೆದುಕೊಳ್ಳುವುದೇ ಅಗ್ನಿಪರೀಕ್ಷೆ' ಎಂದು ಚಿಂತಕ ಪ್ರೊ.ರವೀಂದ್ರ ರೇಷ್ಮೆ ತಿಳಿಸಿದರು.ಕರ್ನಾಟಕ ಸಾಹಿತ್ಯ ಪರಿಷತ್ತು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಶಾಸಕರ ಪ್ರಮಾಣವಚನದ ಭಾಷೆ' ಕುರಿತು ಕಾಡುಹರಟೆ- ಕಾಲಕ್ಷೇಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಸಂವಿಧಾನ ಅಂಗೀಕರಿಸಿರುವ ಯಾವುದೇ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಮರಾಠಿ ಶಾಸಕರಿಗೆ ಹಕ್ಕಿರುವುದು ನಿಜ. ಆದರೆ ಕನ್ನಡ ನಾಡಿನ ಜನತೆಯ ಜತೆ ಸಾಮರಸ್ಯ ಗಟ್ಟಿಮಾಡಿಕೊಳ್ಳಲು ಕನ್ನಡದಲ್ಲೇ ವ್ಯವಹರಿಸುವ ಕನಿಷ್ಠ ತಿಳವಳಿಕೆ ಇರಬೇಕು' ಎಂದು ಹೇಳಿದರು.ಸಾಹಿತಿ ಡಾ.ಪಿ.ವಿ.ನಾರಾಯಣ, `ಪ್ರಮಾಣ ವಚನ ಅನ್ನುವುದು ಕೇವಲ ಶಾಸ್ತ್ರ. ರಾಜ್ಯದ ಬಿಜೆಪಿ ಸದಸ್ಯರು ಸಂಸತ್ತಿನಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರೂ, ಮುಂದಿನ ಚರ್ಚೆಗಳಲ್ಲಿ ಕನ್ನಡವನ್ನು ಯಾರು ಮೆರಸಲಿಲ್ಲ' ಎಂದು ವಿಷಾದಿಸಿದರು.ಲೇಖಕ ಡಾ.ಎಚ್.ಚಂದ್ರಶೇಖರ ಮಾತನಾಡಿ, `ದೇವರ ಹೆಸರಿನಲ್ಲಿ ಇಲ್ಲವೇ ವಿಧಿಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಸಂವಿಧಾನ ಹೇಳಿರುವುದನ್ನು ಸ್ಪಷ್ಟಗೊಳಿಸುವ ಮತ್ತು ನಿರ್ದಿಷ್ಟಗೊಳಿಸುವ ಅಗತ್ಯವಿದೆ'ಎಂದರು.ಲೇಖಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, `ಭಾಷೆಯನ್ನು ರಾಜಕೀಯಕ್ಕೆ ಬಳಸಿಕೊಂಡಾಗ ಮಾತ್ರ ದುರಾಭಿಮಾನದ ಸನ್ನಿವೇಶ ನಿರ್ಮಾಣವಾಗುತ್ತದೆ' ಎಂದರು.ಕವಿ ಪ್ರೊ.ಎಲ್.ಎನ್.ಮುಕುಂದರಾಜ್, `ಕೆಳಸ್ತರದ ಮನುಷ್ಯನು ಅಧಿಕಾರಕ್ಕೆ ಬರಬಹುದಾದ ಪ್ರಜಾಪ್ರಭುತ್ವದಲ್ಲಿ ಭಾಷೆ ಕೇವಲ ಸಂವಹನದ ಸಾಧನವಾಗಿ ಇರಬೇಕು' ಎಂದು ಹೇಳಿದರು.ಪ್ರಮಾಣ ವಚನದ ಭಾಷೆ ಕನ್ನಡ ಹಿತಾಸಕ್ತಿಯ ಪ್ರಶ್ನೆಯೂ ಆಗಿರುವುದರಿಂದ ಸಾರ್ವಜನಿಕ ಚರ್ಚೆ ಅಗತ್ಯ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಸಿ.ವೀರಣ್ಣ ಹೇಳಿದರು. ಕಾರ್ಯದರ್ಶಿ ಟಿ.ಗೋವಿಂದರಾಜು, ಪ್ರೊ. ಸಂಪಿಗೆ ತೋಂಟದಾರ್ಯ, ಗುಬ್ಬಿ ರೇವಣಾರಾಧ್ಯ ನರಸಿಂಹಮೂರ್ತಿ, ಡಾ. ಟಿ.ಜಿ.ಪ್ರಭಾಶಂಕರ ವಿಚಾರಗಳನ್ನು ಮಂಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.