ಶನಿವಾರ, ಮೇ 8, 2021
26 °C

ಮಲಪನಗುಡಿಯ ನಿರ್ಲಕ್ಷಿತ ದೇವಾಲಯ

ಅನಂತ ಜೋಶಿ Updated:

ಅಕ್ಷರ ಗಾತ್ರ : | |

ಐತಿಹಾಸಿಕ ಹಂಪಿಯ ಪರಿಸರ ವ್ಯಾಪ್ತಿಯಲ್ಲಿ ಅನೇಕ ಸಂರಕ್ಷಿತ ಸ್ಮಾರಕಗಳು ನಿರ್ವಹಣೆಯ ಕೊರೆತೆಯಿಂದ ವಿನಾಶದ ಅಂಚಿಗೆ ತಲುಪುತ್ತಿವೆ. ಇಂತಹ ಸ್ಮಾರಕಗಳ ಸಾಲಿಗೆ ಸೇರಿಕೊಳ್ಳುವ ತವಕದಲ್ಲಿದೆ  ಮಲಪನಗುಡಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ.ಹೌದು!  ವಿಜಯನಗರ ಕಾಲದಲ್ಲಿಯೇ ನಿಮಾರ್ಣವಾಗಿ ಇಂದಿಗೂ ನಿತ್ಯ ಪೂಜೆ ಹಾಗೂ ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಮಲಪನಗುಡಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯ, ಸ್ಥಳೀಯರ ಅಂಧಶ್ರದ್ಧೆ ಕಾರಣದಿಂದ ದೇವಾಲಯದ ಅಂದ ಹಾಳಾಗುವುದರ ಜೊತೆ ದೇವಾಲಯದ ಪ್ರಾಂಗಣ, ಆವರಣದ ಸುತ್ತಲ ಗೋಡೆ ಮತ್ತು ಗೋಡೆಗೆ ಅಂಟಿಕೊಂಡ ಸಾಲು ಮಂಟಪಗಳು ಅವಸಾನದಂಚಿಗೆ ಬಂದು ತಲುಪಿವೆ.ಭವ್ಯಗೋಪುರ, ಐತಿಹಾಸಿಕ ನೀರಿನ ಬಾವಿ, ಮಲ್ಲಿಕಾರ್ಜುನಸ್ವಾಮಿ, ಆಂಜನೇಯ, ಶೇಷಶಯನ ಸೇರಿದಂತೆ ಅನೇಕ ದೇವರುಗಳ ವಿಶಾಲ ಪ್ರಾಂಗಣವಾಗಿರುವ ಐತಿಹಾಸಿಕ ದೇವಾಲಯ ಕಸ ಕಡ್ಡಿಗಳ ಸಂಗ್ರಹಾಲಯವಾಗಿದ್ದು, ಯಾವುದೇ ಕ್ಷಣದಲ್ಲಿ ಬಿದ್ದು ಪ್ರಾಣಹಾನಿಯಾಗುವ ಎಲ್ಲ ಲಕ್ಷಣಗಳು ಗೋಚರವಾಗುವಂತೆ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಪುರಾತತ್ವ ಸಂಗ್ರಹಣಾ ನಿರ್ದೇಶನಾಲಯ ಅಧಿಕಾರಿಗಳು `ಇದು ಸಂರಕ್ಷಿತ ಸ್ಮಾರಕ ಹಾಳು ಮಾಡಿದರೆ, ನಷ್ಟಕ್ಕೆ ಗುರಿಪಡಿಸಿದರೆ ಎರಡು ಸಾವಿರ ದಂಡ ಅಥವಾ  ಮೂರು ತಿಂಗಳ ಸಜೆ ಎಂದು ನಾಮಫಲಕವನ್ನು ಹಾಕಿ~ ತನ್ನ ಹೊಣೆಗಾರಿಕೆಯನ್ನು ಪ್ರದರ್ಶಿಸಿದ್ದು ಬಿಟ್ಟರೆ ಸ್ಥಳೀಯರ ಮಾಹಿತಿಯಂತೆ ಪ್ರಾಂಗಣದ ಗೋಡೆಗಳ ಮೇಲೆ ಗಿಡಗಳು ಬೆಳೆಯದಂತೆ ತಡೆಯುವ, ಯಾವುದೇ ಸಂದರ್ಭದಲ್ಲಿ ಪ್ರಾಚೀನ ಸ್ಮಾರಕಕ್ಕೆ ಹಾನಿಯಾಗದಂತೆ ಕ್ರಮ ಕೈಗೊಳ್ಳುವ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ. ಮತ್ತೊಂದಡೆ ಸ್ಥಳೀಯರು ನಿತ್ಯ ಪೂಜೆ ಪುನಸ್ಕಾರಗಳ ನೆಪದಲ್ಲಿ ಪ್ರಾಂಗಣದ ಒಳಗೊಡೆಗಳಿಗೆ ಬೇಕಾಬಿಟ್ಟಿ ಬಣ್ಣ ಹಚ್ಚುವ ಮೂಲಕ ವಿಜಯನಗರ ಕಾಲದಲ್ಲಿಯೇ ರಚನೆಯಾದ ಕಲಾಕೃತಿಗಳನ್ನು ಹಾಗೂ ಚಿತ್ತಾಕರ್ಷಕ ಕೆತ್ತನೆಗಳು ಕಾಣದಂತೆ ಮಾಡುತ್ತಿದ್ದಾರೆ.ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಲ್.ಸಿದ್ಧನಗೌಡ ಮಾತನಾಡಿ ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಿ ದೇವಾಲಯವನ್ನು ಸಂರಕ್ಷಿಸುವ ಜೊತೆ ನೀತಿ ನಿಯಮಗಳನ್ನು ಹಾಕುವ ಮೂಲಕ ಭಕ್ತರಿಗೆ ಶ್ರದ್ಧಾಕೇಂದ್ರವಾಗಿ ಮುಂದುವರೆಯಲು ಅವಕಾಶ ನೀಡಬೇಕು ಅನೇಕ ಬಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಸಂರಕ್ಷಣೆಯ ಬಗ್ಗೆ ಗಮನ ನೀಡುತ್ತಿಲ್ಲ ಎಂದರು.ಒಟ್ಟಾರೆ ಸಂರಕ್ಷಿತ ಸ್ಮಾರಕವಾಗಿರುವ ಹಾಗೂ ವಿನಾಶದ ಅಂಚಿನಲ್ಲಿರುವ ದೇವಾಲಯ ಹಾನಿಯಾಗುವ ಮೊದಲೇ ರಕ್ಷಣೆಗೆ ಇಲಾಖೆ ಮುಂದಾಗಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.