ಸೋಮವಾರ, ಮಾರ್ಚ್ 8, 2021
24 °C

ಮಳೆ: ಆರು ಜನರ ಸಾವು, 70 ಮನೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ: ಆರು ಜನರ ಸಾವು, 70 ಮನೆಗೆ ಹಾನಿ

ಬೆಂಗಳೂರು: ರಾಜ್ಯದ ಹಲವಡೆ ಮಂಗಳವಾರ ರಾತ್ರಿಯಿಂದೀಚೆಗೆ ಗಾಳಿ, ಸಿಡಿಲು- ಗುಡುಗು ಸಮೇತ ಮಳೆ ಸುರಿದಿದೆ. ಮಳೆ ಸಂಬಂಧಿ ಅನಾಹುತಗಳಲ್ಲಿ ಒಟ್ಟು 6 ಜನ ಸತ್ತಿದ್ದಾರೆ. ಸಿಡಿಲು ಬಡಿದು ಅನೇಕರು ಗಾಯಗೊಂಡಿದ್ದಾರೆ, ಹಲವು ಜಾನುವಾರುಗಳು ಸತ್ತಿವೆ. 70 ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕೊರಗಿವೆಹೈದರಾಬಾದ್ ಕರ್ನಾಟಕ ಪ್ರದೇಶದ ವಿವಿಧೆಡೆ ಮಳೆ, ಮಳೆ ಸಂಬಂಧಿತ ಅವಘಡಕ್ಕೆ ಬುಧವಾರ ಮೂವರು  ಬಲಿಯಾಗಿದ್ದಾರೆ.ಕೊಪ್ಪಳ ತಾಲ್ಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಸಿಡಿಲು ಬಡಿದು ರಾಮಣ್ಣ ಬಾರಕೇರ (19) ಮೃತರಾದರು.

ಕುಷ್ಟಗಿ ತಾಲ್ಲೂಕಿನ ವಣಗೇರಿ ಗ್ರಾಮದಲ್ಲಿ ಗಾಳಿಮಳೆ ಸಂದರ್ಭದಲ್ಲಿ ಛಾವಣಿ ಮೇಲಿನ ಕಲ್ಲು ಬಿದ್ದು ಪರಶುರಾಮ ಭಜಂತ್ರಿ (4) ಸ್ಥಳದಲ್ಲೇ ಸಾವಿಗೀಡಾದ. ಬಾಲಕಿಯೊಬ್ಬಳು ಗಾಯಗೊಂಡಳು.ತೋಪಲಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಎತ್ತು ಬಲಿಯಾಗಿದ್ದು ರ‌್ಯಾವಣಕಿ ಗ್ರಾಮದಲ್ಲಿ ಬಣವೆ ಭಸ್ಮವಾಗಿದೆ. ದೋಟಿಹಾಳ, ವಣಗೇರಿಗಳಲ್ಲಿ ಛಾವಣಿಗಳು ಹಾರಿಹೋಗಿವೆ.ಯಾದಗಿರಿ ಜಿಲ್ಲೆ ಹುಣಸಗಿ ಸಮೀಪದ ಕಚಕನೂರ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಮಾಳಪ್ಪ ನಾಗಪ್ಪ ಬುಡಕಲ್ (15) ಸಾವನ್ನಪ್ಪಿದ್ದಾನೆ.ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಭೀಮರಾಯ ಮಾನಯ್ಯ ಎನ್ನುವವರ ಗುಡಿಸಲು ಭಸ್ಮವಾಗಿದೆ. ವೆಂಕಟೇಶ, ರೂಪಾ, ವೆಂಕಟಮ್ಮ ಹಣಮಂತ ಎನ್ನುವವರಿಗೆ ಸಿಡಿಲಿನಿಂದ ಸಣ್ಣಪುಟ್ಟ ಗಾಯಗಳಾಗಿವೆ.ಆಕಳು, ಕುರಿ ಬಲಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶೆಳ್ಳಿಗೇರಿಯಲ್ಲಿ ಸಿಡಿಲು ಬಡಿದು ಎರಡು ಆಕಳು ಮೃತಪಟ್ಟಿವೆ.  ಉಪ್ಪಲದಿನ್ನಿ ತಾಂಡಾದಲ್ಲಿ ಒಂಬತ್ತು ಕುರಿಗಳು ಸಾವಿಗೀಡಾಗಿವೆ.70 ಮನೆಗೆ ಹಾನಿ: ರಾಯಚೂರು ತಾಲ್ಲೂಕಿನ ಅರಿಷಿಣಗಿ ಗ್ರಾಮದಲ್ಲಿ ಮಂಗಳವಾರ 70ಕ್ಕೂ ಹೆಚ್ಚು ಮನೆ, ಗುಡಿಸಲು ಬಿದ್ದಿವೆ. ಗಾಳಿ ಬೀಸಿದಾಗ ಅನೇಕ ಮನೆಗಳ ಮೇಲಿನ ಟಿನ್‌ಗಳು ಹಾರಿವೆ. ನರಸಪ್ಪ ಸೇರಿದಂತೆ ನಾಲ್ಕು ಜನರಿಗೆ ಗಾಯಗಳಾಗಿವೆ. ಹೀರಾಪೂರ ಗ್ರಾಮದಲ್ಲಿ ಗುಡಿಸಲು ಬಿದ್ದಿವೆ. ಜೋಪಡಿ ಬಿದ್ದು ಗರ್ಭಿಣಿಯೊಬ್ಬಳ ಕಾಲು ಮುರಿದಿದೆ.ದೇವದುರ್ಗ ತಾಲ್ಲೂಕಿನ ಅರಕೇರಾ ಹೋಬಳಿಯ ಬಂಡೆಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬನಾಯ್ಕ ತಾಂಡಾದ ವಿರೂಪಣ್ಣ ಚಂದ್ರಪ್ಪ ಎಂಬವರ ಮನೆಯ ಮುಂದಿನ ಮರಕ್ಕೆ ಸಿಡಿಲು ಬಡಿದು ಮರದ ಕೆಳಗಿದ್ದ  ಎರಡು ಎತ್ತು ಮೃತಪಟ್ಟಿವೆ. ಕೆ. ಇರಬಗೇರಾ ಗ್ರಾಮದಲ್ಲೂ ಮೂರು ಕುರಿಗಳು ಮೃತಪಟ್ಟಿವೆ.  ಸಿಡಿಲು ಬಡಿದು ಮೂರು ಎತ್ತುಗಳು ಸಾವನ್ನಪ್ಪಿದ ಘಟನೆ ಕವಿತಾಳ ಸಮೀಪದ ಯಕ್ಲಾಸ್ಪುರ ಗ್ರಾಮದಲ್ಲಿ ಸಂಭವಿಸಿದೆ.ಹುಬ್ಬಳ್ಳಿ ವರದಿ: ಉತ್ತರ ಕರ್ನಾಟಕದ ಧಾರವಾಡ, ಗದಗ, ಹಾವೇರಿ, ಬಳ್ಳಾರಿ ಜಿಲ್ಲೆಗಳು ಸೇರಿದಂತೆ ಹಲವೆಡೆ ಬುಧವಾರ ಮಧ್ಯಾಹ್ನ ಗುಡುಗು-ಸಿಡಿಲು ಸಮೇತ ಭಾರಿ ಮಳೆಯಾಗಿದೆ. ಸಿಡಿಲಿಗೆ ಇಬ್ಬರು ವ್ಯಕ್ತಿಗಳು, ಒಂದು ಕುರಿ ಬಲಿಯಾಗಿದೆ. ಮಳೆಗೂ ಮುನ್ನ ಭಾರಿ ಗಾಳಿಯೂ ಬೀಸಿದ್ದರಿಂದ ಹೊಸಪೇಟೆ ತಾಲ್ಲೂಕಿನ ಬಸವನದುರ್ಗದಲ್ಲಿ 30ಕ್ಕೂ ಅಧಿಕ ಮನೆಗಳ ಛಾವಣಿ ಕಿತ್ತು ಹೋಗಿದೆ. ಹೂವಿನಹಡಗಲಿಯಲ್ಲಿ ಮರಗಳು ಉರುಳಿಬಿದ್ದಿವೆ.ಹೊಲದಲ್ಲಿ ಕುರಿ ಕಾಯುತ್ತಿದ್ದ ನಾಗಪ್ಪ ಬಸಪ್ಪ ಶರೇವಾಡ (45) ಹಾಗೂ ಅವರ ಕುರಿಯೊಂದು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಗುಡೇನಕಟ್ಟಿ ರಸ್ತೆಯಲ್ಲಿ ನಡೆದಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಲ್ಲಹಳ್ಳಿ ತಾಂಡದಲ್ಲಿ ಸಿಡಿಲು ಬಡಿದು ಶೇಖರ ನಾಯ್ಕ (35) ಎಂಬ ರೈತ ಸಾವಿಗೀಡಾಗಿದ್ದು, ಶ್ವೇತಾ (5) ಎಂಬ ಬಾಲಕಿ ಗಾಯಗೊಂಡಿದ್ದಾಳೆ. ಶೇಖರ ತಮ್ಮ ಹೊಲದಲ್ಲಿ ಬೆಳೆಗೆ ನೀರು ಕಟ್ಟಲು ಶ್ವೇತಾಳೊಂದಿಗೆ ತೆರಳಿದ್ದರು. ಸಂಜೆ ಶುರುವಾದ ಮಳೆಯಿಂದ ತಪ್ಪಿಸಿಕೊಳಲು ಮರದ ಕೆಳಗೆ ನಿಂತಾಗ ಸಿಡಿಲು ಬಡಿದಿದೆ. ಮಧ್ಯಾಹ್ನ 2.30ರ ಸುಮಾರಿಗೆ ಹುಬ್ಬಳ್ಳಿಯಲ್ಲಿ ಗುಡುಗು ಮತ್ತು ಸಿಡಿಲಿನ ಅಬ್ಬರವೂ ಜೋರಾಗಿತ್ತು. ರಭಸದಿಂದ ಸುರಿದ ಮಳೆಯಲ್ಲಿ ಆಲಿಕಲ್ಲುಗಳೂ ಬಿದ್ದವು. ರಸ್ತೆಗಳ ಮೇಲೆಲ್ಲ ರಾಡಿ ನೀರು ಹರಿದಾಡಿತು. ಕೆಲವೆಡೆ ಸಂತೆಗೂ ಮಳೆಯಿಂದ ತೀವ್ರ ಅಡಚಣೆ ಉಂಟಾಯಿತು.ಹುಬ್ಬಳ್ಳಿ-ಧಾರವಾಡದಲ್ಲಿ ಗಾಳಿಗೆ ಮರದ ಟೊಂಗೆಗಳು ಮುರಿದು ಬಿದ್ದಿದ್ದರಿಂದ ತಂತಿಗಳು ತುಂಡಾಗಿ ಬಹುತೇಕ ಅವಳಿನಗರ ಗಂಟೆಗಳ ಕಾಲ ಕತ್ತಲಲ್ಲಿ ಮುಳುಗಿತ್ತು. ಗ್ರಾಹಕರ ಒತ್ತಡವನ್ನು ತಾಳಲಾರದೆ ಹೆಸ್ಕಾಂ ಅಧಿಕಾರಿಗಳು ಮೊಬೈಲ್‌ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡರೆ, ಸ್ಥಿರ ದೂರವಾಣಿಗಳೂ ದೂರುಗಳಿಗೆ ಕಿವಿಗೊಡಲಿಲ್ಲ.ಬಳ್ಳಾರಿ ಜಿಲ್ಲೆಯಾದ್ಯಂತ ಬುಧವಾರ ಭಾರಿ ಗಾಳಿ, ಗುಡುಗು-ಸಿಡಿಲಿದ್ದ ಮಳೆ ಸುರಿದಿದ್ದು, ಗಾಳಿಯ ರಭಸಕ್ಕೆ ಹಲವು ಮರಗಳು ಉರುಳಿಬಿದ್ದಿವೆ. ಇದರಿಂದ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಕೂಡ್ಲಿಗಿ, ಸಿರುಗುಪ್ಪ, ಹೊಸಪೇಟೆ, ಹೂವಿನ ಹಡಗಲಿ ಮತ್ತು ಸಂಡೂರು ತಾಲ್ಲೂಕುಗಳಲ್ಲಿ ಗಂಟೆಗೂ ಅಧಿಕ ಹೊತ್ತು ಆಲಿಕಲ್ಲು ಮಳೆಯಾಗಿದೆ.ಹೂವಿನ ಹಡಗಲಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಪಕ್ಕದ ಮರವೊಂದು ಉರುಳಿ ಬಿದ್ದಿದ್ದರಿಂದ ಬಾಲಕನೊಬ್ಬ ಗಾಯಗೊಂಡಿದ್ದಾನೆ. ಆಂಧ್ರದ ಗಡಿಭಾಗದ ಗ್ರಾಮಗಳಾದ ಹಚ್ಚೊಳ್ಳಿ, ರಾರಾವಿಯಲ್ಲೂ ಭಾರಿ ಮಳೆ ಬಿದ್ದಿದೆ.

ಹಾವೇರಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಳೆ ಸುರಿದಿದೆ. ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿ ವ್ಯವಸ್ಥೆ ಮಾಡದ ಗ್ರಾಮ ಪಂಚಾಯಿತಿ ವಿರುದ್ಧ ನಿವಾಸಿಗಳು ಮಳೆಯಲ್ಲೇ ಪ್ರತಿಭಟನೆ ನಡೆಸಿದರು.

 

ರಾಣೆಬೆನ್ನೂರು, ಹಿರೇಕೆರೂರ, ಹಾನಗಲ್, ಸವಣೂರು, ಶಿಗ್ಗಾಂವಿ ತಾಲ್ಲೂಕುಗಳಲ್ಲೂ ಮಳೆಯಾಗಿದ್ದು, ಗಾಳಿಗೆ ಕೆಲವೆಡೆ ತಂತಿಗಳು ತುಂಡರಿಸಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಸುತ್ತಲಿನ ಪ್ರದೇಶದಲ್ಲೂ ಭಾರಿ ಮಳೆ ಬಿದ್ದಿದೆ.ನಂಜನಗೂಡು ವರದಿ:  ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಟ್ಟಿರುವ ಘಟನೆ ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಗ್ರಾಮದ ಮಂಜು (35) ಮೃತ ವ್ಯಕ್ತಿ. ಈತ ರಾತ್ರಿ 9 ಗಂಟೆಯಲ್ಲಿ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರ ಹೋದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನಿಗೆ ಪತ್ನಿ ಮತ್ತು ಏಳು ವರ್ಷದ ಪುತ್ರಿ ಇದ್ದಾಳೆ. ಮೃತನ ಪತ್ನಿ ಶಿವಮ್ಮಳಿಗೆ ರೂ.1.5 ಲಕ್ಷ ಮೊತ್ತದ ಪರಿಹಾರ ಚೆಕ್ ಅನ್ನು  ತಹಶೀಲ್ದಾರ್ ಎ.ನವೀನ್‌ಜೋಸೆಫ್ ನೀಡಿದರು.ಹರಪನಹಳ್ಳಿ ವರದಿ: ತಾಲ್ಲೂಕಿನ ವಿವಿಧೆಡೆ ಬುಧವಾರ ಮಧ್ಯಾಹ್ನ ಸಿಡಿಲು ಬಡಿದು ನಾಲ್ಕು ಜಾನುವಾರುಗಳು ಸತ್ತಿವೆ.ಅರಸೀಕೆರೆ ಹೋಬಳಿ ಪುಣಬಘಟ್ಟದಲ್ಲಿ ಕಣದಲ್ಲಿ ಕಟ್ಟಿದ ರಾಸುಗಳ ಸಮೀಪ ಸಿಡಿಲು ಬಡಿದು ಎ.ಕೆ. ದುರುಗಪ್ಪ ಎಂಬುವವರಿಗೆ ಸೇರಿದ ಒಂದು ಎತ್ತು, ಒಂದು ಕರು ಮೃತಪಟ್ಟಿವೆ.  ಪುಣಬಘಟ್ಟ ಸಮೀಪದ ಚನ್ನಾಪುರದ ಸಾರಥಿ ವಿರೂಪಾಕ್ಷಪ್ಪ ಅವರ 2 ಕುರಿಗಳು ಸಿಡಿಲಿಗೆ  ಬಲಿಯಾಗಿವೆ.ಮಂಗಳೂರು ವರದಿ: ಸುಡು ಬಿಸಿಲು, ಸೆಖೆಯಿಂದ ತತ್ತರಿಸಿ ಹೋಗಿದ್ದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬುಧವಾರ ಸಂಜೆ ಬಿರುಸಿನ ಮಳೆ ಸುರಿದಿದ್ದು, ಜನರ ತುಸು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.ಮಂಗಳೂರು ನಗರದಲ್ಲಿ ಸಂಜೆ 5.45ರ ಸುಮಾರಿಗೆ ಆರಂಭವಾದ ಗುಡುಗು, ಗಾಳಿಯಿಂದ ಕೂಡಿದ ಮಳೆ ಮುಕ್ಕಾಲು ಗಂಟೆ ಬಿರುಸಿನಿಂದ ಸುರಿಯಿತು. ಸುರತ್ಕಲ್, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಸುಳ್ಯ ಕಡೆಗಳಲ್ಲೂ ಸಂಜೆ ಸಾಧಾರಣ ಮಳೆ ಸುರಿಯಿತು. ಬುಧವಾರ ನಸುಕಿನ 3 ಗಂಟೆ ಸುಮಾರಿಗೂ ವ್ಯಾಪಕವಾಗಿ ಮಳೆ ಸುರಿದಿತ್ತು.ನಗರದ ಶಕ್ತಿನಗರದಲ್ಲಿ ಪೆಂಡಾಲ್ ಕುಸಿದಿದ್ದರಿಂದ ಆರು ಮಂದಿ ಗಾಯಗೊಂಡದ್ದು ಬಿಟ್ಟರೆ ಮಳೆಯಿಂದ ಹಾನಿಯಾದ ವರದಿಯಾಗಿಲ್ಲ. ಆದರೆ ಸಂಚಾರ ದಟ್ಟಣೆಯಿಂದ ಹಲವೆಡೆ ಅಡಚಣೆ ಉಂಟಾಗಿದೆ.

ಬೆಳ್ತಂಗಡಿ, ಸುಬ್ರಹ್ಮಣ್ಯ ಭಾಗದಲ್ಲಿ ಮಳೆಯಾಗಿರುವುದರಿಂದ ನೇತ್ರಾವತಿ ನದಿಯಲ್ಲಿ ನೀರು ಹರಿಯುವ ಸಾಧ್ಯತೆ ಅಧಿಕವಾಗಿದ್ದು, ತುಂಬೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಸ್ವಲ್ಪ ಸ್ವಲ್ಪವೇ ಹೆಚ್ಚುವ ಲಕ್ಷಣ ಕಂಡುಬಂದಿದೆ.ಬುಧವಾರ ಸಂಜೆ ತುಂಬೆ ಅಣೆಕಟ್ಟೆಯ ನೀರಿನ ಮಟ್ಟ 9.10 ಅಡಿಯಷ್ಟಿತ್ತು. ನಾಲ್ಕು ದಿನಗಳ ಹಿಂದೆ ನೀರಿನ ಮಟ್ಟ 8.04 ಅಡಿಗೆ ಕುಸಿದಿತ್ತು. ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಬಿಕ್ಕಟ್ಟು ಉಂಟಾದ್ದರಿಂದ ಎಂಆರ್‌ಪಿಎಲ್ ಸಹಿತ ಇತರ ಉದ್ದಿಮೆಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.ಉಡುಪಿ ವರದಿ: ಬಿಸಿಲಿನ ಝಳದಿಂದ ಬಸವಳಿದಿದ್ದ ಉಡುಪಿ ಜಿಲ್ಲೆಯ ಜನರಿಗೆ ಬುಧವಾರ ಸಂಜೆ ಸುರಿದ ಮಳೆ ಸ್ವಲ್ಪ ಮಟ್ಟಿಗೆ ತಣ್ಣನೆಯ ಅನುಭವ ನೀಡಿತು. ಸಂಜೆ ಐದು ಗಂಟೆ ವೇಳೆ ದಟ್ಟ ಮೋಡ ಆವರಿಸಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಮೂಡಿತ್ತು. ಆದರೆ ಜೋರಾಗಿ ಗಾಳಿ ಬೀಸಿದ್ದರಿಂದ ಕೆಲವೇ ನಿಮಿಷಗಳಲ್ಲಿ ಮೋಡ ಚದುರಿತು. ಕೆಲ ಕಾಲ ಸಣ್ಣ ಪ್ರಮಾಣದಲ್ಲಿ ಮಳೆಯಾಯಿತು.ಕುಂದಾಪುರ, ಬೈಂದೂರು, ಬಸ್ರೂರು, ಹೆಮ್ಮಾಡಿ, ತಲ್ಲೂರು, ಕೋಟೇಶ್ವರ, ನಡು ಗುಡ್ಡೆಯಂಗಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆಯ ಬಳಿಕ ಸಿಡಿಲು, ಗುಡುಗಿನಿಂದ ಕೂಡಿದ ಭಾರಿ ವರ್ಷಧಾರೆ ಆಯಿತು. ಮಂಗಳವಾರ ರಾತ್ರಿಯೂ ಕುಂದಾಪುರ ಹಾಗೂ ಸುತ್ತಮುತ್ತಲ ಕೆಲವು ಗ್ರಾಮಗಳಲ್ಲಿ ಗಾಳಿಯೊಂದಿಗೆ ಕೆಲ ಹೊತ್ತು ಮಳೆ ಸುರಿದಿತ್ತು. ಸಾಸ್ತಾನ, ಸಾಲಿಗ್ರಾಮ ಮತ್ತು ಕೋಟದಲ್ಲಿ ಸಹ ಬುಧವಾರ ಬೆಳಿಗ್ಗೆ ಮಳೆ ಸುರಿದಿತ್ತು.ಕಾಸರಗೋಡು ವರದಿ: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಸಂಜೆ ಸುಮಾರು ಒಂದು ಗಂಟೆ ಮಳೆ ಸುರಿಯಿತು. ಬದಿಯಡ್ಕ, ಪೆರ್ಲ, ಮಂಜೇಶ್ವರ ಸಹಿತ ಜಿಲ್ಲೆಯ ಬಹುತೇಕ ಎಲ್ಲಾ ಕಡೆಗಳಲ್ಲೂ ಬಿರುಸಿನ ಮಳೆ ಸುರಿಯಿತು. ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ.ತುಮಕೂರು ವರದಿ: ಜಿಲ್ಲೆಯ ತುಮಕೂರು, ಗುಬ್ಬಿ, ಶಿರಾ, ಕುಣಿಗಲ್ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಬುಧವಾರ ಭಾರೀ ಗಾಳಿ ಬೀಸಿ ತುಂತುರು ಮಳೆಯಾಗಿದೆ. ಕೊರಟಗೆರೆ ತಾಲ್ಲೂಕಿನಲ್ಲಿ ಕೋಳಾಲದಲ್ಲಿ ಬಿರುಸಿನ ಮಳೆ ಸುರಿಯಿತು.ಮೂರು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲ ಧಗೆ ವಿಪರೀತ ಹೆಚ್ಚಿತ್ತು. ಬುಧವಾರ ಸಂಜೆ ವೇಳೆಗೆ ಮೂಡಿದ ದಟ್ಟ ಮೋಡಗಳು ಭಾರೀ ಮಳೆಯ ನಿರೀಕ್ಷೆ ಮೂಡಿಸಿದರೂ ಮಳೆ ಬೀಳಲಿಲ್ಲ. ಅಲ್ಲಲ್ಲಿ ತುಂತುರು ಮಳೆಯಾಗಿದೆ. ನಗರದ ಕುವೆಂಪು ನಗರದಲ್ಲಿ ಗಾಳಿಗೆ ಮರದ ಕೊಂಬೆ ಬಿದ್ದು ಕಾರು ಜಖಂಗೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.