ಸೋಮವಾರ, ಸೆಪ್ಟೆಂಬರ್ 21, 2020
22 °C

ಮಳೆ ಕೊರತೆ: ಗೊರಬೆಗಿಲ್ಲ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಕೊರತೆ: ಗೊರಬೆಗಿಲ್ಲ ಬೇಡಿಕೆ

ನಾಪೋಕ್ಲು: ಮಳೆಗಾಲದಲ್ಲಿ ರೈತರಿಂದ ಬೇಡಿಕೆ ಗಿಟ್ಟಿಸುತ್ತಿದ್ದ ಗೊರಬೆಗಳನ್ನು ಈ ಬಾರಿ ಕೇಳುವವರೇ ಇಲ್ಲ. ಮಳೆರಾಯನ ಕಣ್ಣಾಮುಚ್ಚಾಲೆಯಿಂದ ಗೊರಬೆಗಳೂ ಬೇಡಿಕೆ ಕಳೆದುಕೊಂಡಿವೆ!ಗದ್ದೆ ಕೆಲಸದ ಸಮಯದಲ್ಲಿ ರೈತರಿಗೆ ಮಳೆಯಿಂದ ರಕ್ಷಣೆಯ ಜೊತೆಗೆ ಚಳಿ ತಡೆದು ಮೈಯನ್ನು ಬೆಚ್ಚಗಿರಿಸುವ ಗೊರಬೆಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ.ನಾಪೋಕ್ಲುವಿನಲ್ಲಿ ಸಂತೆಯ ದಿನ ಗೊರಬೆಗಳು ಹೇರಳವಾಗಿ ಮಾರಾಟಕ್ಕೆ ಬರುತ್ತಿದ್ದವು. ಕುಶಲಕರ್ಮಿಗಳು ಗ್ರಾಮಾಂತರ ಪ್ರದೇಶ ಗಳಲ್ಲಿ ಗೊರಬೆಗಳನ್ನು ಹೆಣೆದು ಮಾರಾಟಕ್ಕೆ ತರುತ್ತಿದ್ದರು.ಇಲ್ಲಿಯ ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ನಾಟಿ ಕಾರ್ಯದ ಅವಧಿಯಲ್ಲಿ ಗೊರಬೆಗಳು ಹೆಚ್ಚಾಗಿ ಮಾರಾಟವಾಗುವ ನಿರೀಕ್ಷೆ ಕುಶಲ ಕರ್ಮಿಗಳದ್ದು, ಆದರೆ ಈ ವರ್ಷ ಮಳೆ ಕೊರತೆಯಿಂದಾಗಿ ಕುಶಲಕರ್ಮಿಗಳು ಗಿರಾಕಿಗಳ ನಿರೀಕ್ಷೆಯಲ್ಲಿ ದಿನವಿಡೀ ಕುಳಿತರೂ ಗೊರಬೆಗಳನ್ನು ಕೇಳುವವರೇ ಇಲ್ಲದಂತಾಗಿದೆ.ಬೆತ್ತದಿಂದ ಹೆಣೆಯುವ ಗೊರಬೆಗಳ ಒಳಮೈಯನ್ನು ಕಾಡಿನಲ್ಲಿ ಸಿಗುವ ದೊಡ್ಡ ಗಾತ್ರದ ಪನೋಲಿಯ ಗಿಡದ ಎಲೆಗಳಿಂದ ಮುಚ್ಚಲಾಗುತ್ತದೆ. ಬಿದಿರಿನ ಅಥವಾ ಬೆತ್ತದ ಕಡ್ಡಿಗಳ ಒಳಗೆ ಭದ್ರವಾಗಿರುವ ಎಲೆಗಳನ್ನು ಸೀಳಿ ಮಳೆ ನೀರು ಹೋಗಲು ಅಸಾಧ್ಯ ವಾದುದರಿಂದ ಗ್ರಾಮೀಣ ಜನತೆ ಹೊರಹೋಗಬೇಕಾದರೆ ಗೊರಬೆ ಧರಿಸಿಕೊಂಡು ಹೋಗುತ್ತಿದ್ದುದು ಹಿಂದಿನ ಕಾಲದ ವಾಡಿಕೆಯಾಗಿತ್ತು.ಮೊದಲು ರೈತರ ಪ್ರತಿ ಮನೆಯಲ್ಲೂ ಕಂಡುಬರುತ್ತಿದ್ದ ಗೊರಬೆಗಳೀಗ ಕಡಿಮೆಯಾಗುತ್ತಿದೆ. ಇದರ ತಯಾರಕರೂ ಅಪರೂಪವಾಗುತ್ತಿರುವುದರಿಂದ ಗ್ರಾಮದ ಮಾರುಕಟ್ಟೆಗೆ ಬರುವ ಗೊರಬೆಗಳು ಕಡಿಮೆಯಾಗುತ್ತಿವೆ.ಒಂದು ಗೊರಬೆಯ ಬೆಲೆ ಮುನ್ನೂರು ರೂಪಾಯಿಗಳಷ್ಟಿದೆ. ಇದೀಗ ಎಲೆಗಳ ಬದಲು ಗೊರಬೆಗಳಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸ ಲಾಗುತ್ತಿದೆ.  ಕೊಡಗಿನಲ್ಲಿ ಮಳೆ ಏರುಪೇರಾಗಿರುವುದರಿಂದ ನಿರಂತರ ಗಾಳಿ, ಮಳೆ ಚಳಿ ಇಲ್ಲದಿರುವುದು ರೈತರು ಗದ್ದೆ ಕೆಲಸವನ್ನು ಗೊರಬೆ ಇಲ್ಲದೆ ಪೂರೈಸುವಂತಾಗಿದೆ. ಬದಲು ಕಡಿಮೆ ಖರ್ಚಿನ ಪ್ಲಾಸ್ಟಿಕ್‌ನ್ನು ರಕ್ಷಣಾಸಾಧನವಾಗಿ ಬಳಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.