ಭಾನುವಾರ, ಜುಲೈ 25, 2021
28 °C

ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು:ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮೂಡಿಗೆರೆ ತಾಲ್ಲೂಕಿನಲ್ಲಿ 4 ಮನೆಗಳು ಕುಸಿದಿವೆ. ಹಸುವೊಂದು ನೀರಿನಲ್ಲಿ ಕೊಚ್ಚಿಹೋಗಿದೆ. ಬಾಧಿತರಿಗೆ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್‌.ಎಸ್‌.ಚನ್ನಪ್ಪಗೌಡ ತಿಳಿಸಿದರು.ತಮ್ಮ ಕಚೇರಿಯಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮೂಡಿಗೆರೆ ಮತ್ತು ಬಾಳೆಹೊನ್ನೂರಿನಲ್ಲಿ ತುಸು ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಎಂದರು.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ನೀರಿನ ಸಮಸ್ಯೆ ತಲೆದೋರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ನೀಡಲು ಹಾಗೂ ತುರ್ತು ದುರಸ್ತಿ ಕೆಲಸಗಳಿದ್ದರೆ ಅವುಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.ಕುಡಿಯುವ ನೀರಿಗೆ ಹಣದ ಕೊರತೆ ಉಂಟಾಗಿಲ್ಲ. ಪ್ರತಿ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿ ರೂ. 15 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಲಾಗಿದೆ. ತುರ್ತು ಕೆಲಸಗಳಿದ್ದ ಸಂದರ್ಭದಲ್ಲಿ ವರದಿ ನೀಡಿದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.ಗುಹೆ ದುರಸ್ತಿ: ಇನಾಂ ದತ್ತಾತ್ರೇಯಪೀಠ ಗುಹೆಯ ಶಾಶ್ವತ ದುರಸ್ತಿಗೆ ಹಣಕಾಸು ಇಲಾಖೆ ರೂ. 43 ಲಕ್ಷ  ಬಿಡುಗಡೆ ಮಾಡಲು ಸೋಮವಾರ ಅನುಮೋದನೆ ನೀಡಿದೆ. ಕಂದಾಯ ಇಲಾಖೆಯಿಂದ ಅಧಿಸೂಚನೆ ಹೊರಬಿದ್ದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಕಾಮಗಾರಿ ಆರಂಭಗೊಂಡಾಗ ಗುತ್ತಿಗೆದಾರರಿಗೆ ಸ್ವಲ್ಪ ಹಣ ನೀಡಲಾಗಿತ್ತು. ಕೆಲಸ ಅರ್ಧಕ್ಕೆ ನಿಂತಿರುವುದರಿಂದ ಹೆಚ್ಚುವರಿ ಹಣವನ್ನು ವಾಪಸ್‌ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಒತ್ತುವರಿ: ಜಿಲ್ಲೆಯಲ್ಲಿ ನಡೆದಿರುವ ಒತ್ತುವರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಒತ್ತುವರಿ ವರದಿ ನನ್ನ ಕೈಸೇರಿದೆ. ಕೆಲವು ಒತ್ತುವರಿಯನ್ನು ಖುಲ್ಲಾಪಡಿಸಿದ್ದರೆ, ಮತ್ತೆ ಕೆಲವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಮುಂದಾದಾಗ ಜಮೀನು ಪತ್ರವನ್ನು ತೋರಿಸಿದ್ದಾರೆ.ಸರ್ವೆ ಆದ ಮೇಲೆ ನಿಖರ ಮಾಹಿತಿ ತಿಳಿಯಬೇಕಾಗಿದೆ. ಸರ್ವೆ ನಡೆಸಲು ಅಗತ್ಯ ಹಣ ಬಿಡುಗಡೆ ಮಾಡಲಾಗಿದೆ~ ಎಂದರು.ಕಲಾ ಮಂದಿರ: ಕಲಾ ಮಂದಿರ ದುರಸ್ತಿಯಲ್ಲಿ ಅವ್ಯವಹಾರ ಮತ್ತು ಕಳಪೆ ಕಾಮಗಾರಿ ನಡೆದಿಲ್ಲ. ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ನಾಮಫಲಕದಲ್ಲಿ ಬುಧವಾರ ಹಾಕಲಾಗುವುದು. ಸರ್ಕಾರ ನೇಮಕ ಮಾಡಿರುವ ತಾಂತ್ರಿಕ ತಜ್ಞರ ಸೂಚನೆಯಂತೆ ಕೆಲಸ ನಿರ್ವಹಿಸಲಾಗಿದೆ ಎಂದು ಹೇಳಿದರು.ಧ್ವನಿ ಮತ್ತು ಬೆಳಕು ತಜ್ಞರಾದ ಪರೇಶ್‌ಕುಮಾರ್‌ ಮಾರ್ಗದರ್ಶನ ಮಾಡಿದ್ದಾರೆ. ಹೊರದೇಶದಿಂದ ಸ್ಪೀಕರ್‌ ತಂದು ಅಳವಡಿಸಲಾಗಿದೆ. ಶ್ರೀಧರ ಮತ್ತು ಮಾಯಾರಾವ್‌ ಅವರನ್ನು ಕರೆಸಿ ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆಸಿ ಪೂರ್ಣಪ್ರಮಾಣದಲ್ಲಿ ಧ್ವನಿವರ್ಧಕ ಸೇರಿದಂತೆ ಕಾರ್ಯಕ್ರಮದ ವೇದಿಕೆ ಪರಿಶೀಲಿಸಲಾಗುವುದು ಎಂದು ಅವರು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.