ಮಂಗಳವಾರ, ಏಪ್ರಿಲ್ 20, 2021
30 °C

ಮಸಿ ಬಳಿಯಲು ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎನ್‌ಎಸ್): ಸಂಸತ್‌ನಲ್ಲಿ ಕಲ್ಲಿದ್ದಲು ಗದ್ದಲ ನಿಲ್ಲುವ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ. ಸತತ ಮೂರನೇ ದಿನವಾದ ಗುರುವಾರವೂ ಉಭಯ ಸದನಗಳಲ್ಲಿ ಕಲಾಪ ವ್ಯರ್ಥವಾಯಿತು. ಆಡಳಿತ ಪಕ್ಷವು ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದರೆ, ಪ್ರತಿಪಕ್ಷಗಳು ಪ್ರಧಾನಿ ರಾಜೀನಾಮೆಗೆ ಹಿಡಿದ ಪಟ್ಟು ಬಿಡಲಿಲ್ಲ. ಒಟ್ಟಾರೆ ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ನೇರ ಜಟಾಪಟಿಯ ಅಖಾಡವಾಗಿದೆ.ಬಿಕ್ಕಟ್ಟು ಶಮನಕ್ಕೆ ತೆರೆಮರೆಯಲ್ಲಿ ಜೋರಾಗಿಯೇ ಕಸರತ್ತು ನಡೆಯುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರು ಸೋಮವಾರ ಸರ್ವ ಪಕ್ಷ ಸಭೆ ಕರೆದಿದ್ದು, ಅಲ್ಲಿ ವಿವಾದವು ಇತ್ಯರ್ಥವಾಗಬಹುದೆಂದು ನಿರೀಕ್ಷಿಸಲಾಗಿದೆ.ಸೋನಿಯಾ ಗರಂ
`ಪ್ರಧಾನಿ ಪದತ್ಯಾಗಕ್ಕೆ ಬಿಜೆಪಿ ಹಿಡಿದ ಪಟ್ಟಿಗೆ ಮಣಿಯಕೂಡದೆಂದು ಪಕ್ಷದ ಸಂಸದರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಾಕೀತು ಮಾಡಿದ್ದಾರೆ~ ಎಂದು ಮೂಲಗಳು ತಿಳಿಸಿವೆ.

ಪಿಎಸಿ ಪರಿಶೀಲನೆ
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಸೇರಿದಂತೆ ಇತ್ತೀಚೆಗೆ ಸಂಸತ್‌ನಲ್ಲಿ ಸಿಎಜಿ ಮಂಡಿಸಿದ ನಾಲ್ಕು ವರದಿಗಳನ್ನು ಪರಿಶೀಲಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಪಿಎಸಿ) ಗುರುವಾರ ನಿರ್ಧರಿಸಿದೆ.

ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಸೇರುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತ ಪ್ರಧಾನಿ ಪದತ್ಯಾಗಕ್ಕೆ ಆಗ್ರಹಿಸಿದರು. ಗದ್ದಲ ಮುಂದುವರಿದ ಕಾರಣ ಅಧ್ಯಕ್ಷೆ ಮೀರಾ ಕುಮಾರ್  ಮಧ್ಯಾಹ್ನ 12 ಗಂಟೆ ಹಾಗೂ 2 ಗಂಟೆವರೆಗೆ ಎರಡು ಬಾರಿ ಕಲಾಪ ಮುಂದೂಡಬೇಕಾಯಿತು. ಮತ್ತೆ ಸಭೆ ಸೇರಿದಾಗಲೂ ಪರಿಸ್ಥಿತಿ ತಿಳಿಯಾಗಲಿಲ್ಲ. ಕೊನೆಗೆ ಶುಕ್ರವಾರಕ್ಕೆ ಮುಂದೂಡಲಾಯಿತು.ಸದನದಲ್ಲಿ ಬಿಜೆಪಿ ಸದಸ್ಯರು ಒಂದೆಡೆ ಘೋಷಣೆಗಳನ್ನು ಕೂಗುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್‌ನವರೂ ಅಬ್ಬರಿಸತೊಡಗಿದರು. ಪ್ರತಿಪಕ್ಷ ಆಡಳಿತದಲ್ಲಿರುವ ರಾಜ್ಯಗಳಿಂದ ಕಲ್ಲಿದ್ದಲು ನಿಕ್ಷೇಪ ಹರಾಜಿಗೆ ಆಕ್ಷೇಪ ಇತ್ತೆಂದು ದಿನಪತ್ರಿಕೆಯೊಂದರಲ್ಲಿ ಬಂದ ವರದಿಯ ಪ್ರತಿ ತೋರಿಸಿದರು.`ಪ್ರಧಾನಿಗೆ ಮಾತನಾಡಲು ಅವಕಾಶ ಕೊಡಿ~ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ವಿರೋಧ ಪಕ್ಷದವರ ಬಾಯಿ ಮುಚ್ಚಿಸಲು ಯತ್ನಿಸಿದರು. `ಇದರಲ್ಲಿ ಮುಚ್ಚಿಡುವುದೇನೂ ಇಲ್ಲ. ಸರ್ಕಾರ ಚರ್ಚೆಗೆ ಸಿದ್ಧ~ ಎಂದರು.`ನಾವು ಉಭಯ ಸದನಗಳಿಗೆ ಹಾಗೂ ದೇಶಕ್ಕೆ ಉತ್ತರ ನೀಡುತ್ತೇವೆ. ವಿರೋಧ ಪಕ್ಷದವರು ಕಲಾಪಕ್ಕೆ ಅನುವು ಮಾಡಿ ಕೊಡುವುದಾಗಿ ಭಾವಿಸುವೆ~ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು.ರಾಜ್ಯಸಭೆಯಲ್ಲಿಯೂ ಕೋಲಾಹಲ ಉಂಟಾಗಿತ್ತು. ಇಲ್ಲೂ ಬಿಜೆಪಿ ಸಂಸದರು ಘೋಷಣೆಗಳನ್ನು ಕೂಗುತ್ತ ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿದರು. ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು. ಮತ್ತೆ ಸಭೆ ಸೇರಿದಾಗಲೂ ಸದಸ್ಯರ ಅಬ್ಬರ ನಿಲ್ಲಲಿಲ್ಲ. ಹಾಗಾಗಿ ಶುಕ್ರವಾರಕ್ಕೆ ಕಲಾಪ ಮುಂದೂಡಬೇಕಾಯಿತು.

ಶಿಂಧೆ- ಸುಷ್ಮಾ ಭೇಟಿ:  ಸಂಸತ್‌ನಲ್ಲಿ ಕಲ್ಲಿದ್ದಲು ಕೋಲಾಹಲ ನಡೆಯುತ್ತಿರುವ ಬೆನ್ನಲ್ಲಿಯೇ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಗುರುವಾರ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದರು.

 

ಕಲ್ಲಿದ್ದಲು ಗದ್ದಲಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ ರಾಜ್ಯಸಭೆ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ಗುರುವಾರ ಕರೆದಿದ್ದ ಸಭೆಯಲ್ಲಿ ವಿರೋಧ ಪಕ್ಷದವರು ಪ್ರಧಾನಿ ತಲೆದಂಡಕ್ಕೆ ಹಿಡಿದ ಪಟ್ಟು ಬಿಡಲಿಲ್ಲ. ಸಭೆಯು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಟಾಪಟಿಗೆ ಸಾಕ್ಷಿಯಾಯಿತು.ಬಿಕ್ಕಟ್ಟು ತಿಳಿಗೊಳಿಸಲು ಲೋಕಸಭಾಧ್ಯಕ್ಷೆ ಮೋರಾ ಕುಮಾರ್ ಕರೆದ ಸಭೆಯನ್ನು ಎನ್‌ಡಿಎ ಸದಸ್ಯರು ಬಹಿಷ್ಕರಿಸಿದ್ದರು. ಎಸ್‌ಪಿ ಹಾಗೂ ಬಿಎಸ್‌ಪಿ ಕೂಡ ಸಭೆಯಿಂದ ದೂರ ಇದ್ದವು.ಅಡ್ವಾಣಿ ಅಧ್ಯಕ್ಷತೆಯಲ್ಲಿ ಸಭೆ

ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ಸಭೆ ಸೇರಿದ ಎನ್‌ಡಿಎ ಮುಖಂಡರು, ಕಲ್ಲಿದ್ದಲು ಹಗರಣದಲ್ಲಿ ಪ್ರಧಾನಿ ತಲೆದಂಡಕ್ಕೆ ಪಟ್ಟು ಮುಂದುವರಿಸುವ ನಿರ್ಧಾರ ತೆಗೆದುಕೊಂಡರು ಎನ್ನಲಾಗಿದೆ.ಚರ್ಚೆಗೆ ಬರುತ್ತಿಲ್ಲ:  `ವಿರೋಧ ಪಕ್ಷದವರು ಈಗ ಚರ್ಚೆ ಮಾಡುವ ಮನಸ್ಥಿತಿಯಲ್ಲಿ ಇಲ್ಲ. ಬಹುಶಃ ಸೋಮವಾರ ಅವರು ಮಾತುಕತೆಗೆ ಬರಬಹುದು~ ಎಂದು ಸಂಸದೀಯ ವ್ಯವಹಾರ ಸಚಿವ ಪವನ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.ಎಡಪಕ್ಷ ಟೀಕೆ

`ಕಲ್ಲಿದ್ದಲು ನಿಕ್ಷೇಪ ಹಂಚಿಕೆ ವಿಷಯವು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿ ಅಖಾಡವಾಗಿದೆ~ ಎಂದು ಎಡಪಕ್ಷಗಳು ಆರೋಪಿಸಿವೆ.ಚರ್ಚೆಗೆ `ದೀದಿ~ ಸಲಹೆ

 ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಸತ್‌ನಲ್ಲಿ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ. ಯಾವುದೇ ವಿಷಯವಿರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕಾಗುತ್ತದೆ ಎಂದು ಅವರು ತಿಳಿಸಿದರು.ಸಿಪಿಎಂ ಕಾರ್ಯತಂತ್ರ

`ಕಲ್ಲಿದ್ದಲು ನಿಕ್ಷೇಪ ಹಂಚಿಕೆ ವಿಷಯ ಕುರಿತಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್‌ನಲ್ಲಿ ಹೇಳಿಕೆ ನೀಡಿದ ಬಳಿಕ ಮುಂದಿನ ಕಾರ್ಯತಂತ್ರ ನಿರ್ಧರಿಸಲಾಗುತ್ತದೆ~ ಎಂದು ಸಿಪಿಎಂ ಹೇಳಿದೆ.ಪಟ್ನಾಯಕ್ ನಕಾರ

`ನಮ್ಮ ರಾಜ್ಯದಲ್ಲಿ ಹರಾಜಿನ ಮೂಲಕ ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಮುಂದಾಗಿದ್ದೆವು~ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.ಒಡಿಶಾ ಸೇರಿದಂತೆ ವಿರೋಧಪಕ್ಷ ಆಡಳಿತದಲ್ಲಿರುವ ರಾಜ್ಯಗಳು ಹರಾಜಿಗೆ ವಿರೋಧ ವ್ಯಕ್ತಪಡಿಸಿದ್ದವು ಎಂದು ಬುಧವಾರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಹೇಳಿದ್ದರು.ವೆಬ್‌ಸೈಟ್‌ನಲ್ಲಿ ಮಾಹಿತಿ: ಮಹಾಲೇಖಪಾಲ ವಿನೋದ್ ರೇ ಜನ್ಮದಿನಾಂಕ ಪ್ರಮಾಣಪತ್ರ, ನೇಮಕಾತಿ ಆದೇಶ ಪತ್ರವನ್ನು ಸಿಎಜಿ ಗುರುವಾರ ತನ್ನ ಅಧಿಕೃತ ವೆಬ್‌ಸೈಟ್‌ಗೆ ಹಾಕಿದೆ. ಕೇಂದ್ರದ ಸಿಬ್ಬಂದಿ ಇಲಾಖೆಯಲ್ಲಿ ವಿನೋದ್ ಅವರ ವೈಯಕ್ತಿಕ ವಿವರ ಇಲ್ಲ ಎಂದು  ವರದಿ ಯಾದ ಹಿನ್ನೆಲೆಯಲ್ಲಿ ಈ ಮಾಹಿತಿ ಹಾಕಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.