ಶನಿವಾರ, ಫೆಬ್ರವರಿ 27, 2021
28 °C

ಮಸೀದಿಯಲ್ಲಿ ಸಂಕ್ರಾಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸೀದಿಯಲ್ಲಿ ಸಂಕ್ರಾಂತಿ ಆಚರಣೆ

ಮೈಸೂರು: ನಗರದ ದೇವರಾಜ ಮೊಹಲ್ಲಾದ ರಹಮಾನಿಯಾ ಅರಬ್ಬಿ ಮಸೀದಿಯ ಆವರಣದಲ್ಲಿ ಶುಕ್ರವಾರ ಸಂಕ್ರಾಂತಿಯ ಸಂಭ್ರಮ ಮನೆ ಮಾಡಿತ್ತು. ಹೊಸ ಬಟ್ಟೆ ಧರಿಸಿದ ಮಕ್ಕಳು ಎಳ್ಳು–ಬೆಲ್ಲವನ್ನು ಹಂಚಿ ಹಿಂದೂ–ಮುಸ್ಲಿಂ ಸಮುದಾಯದ ನಡುವೆ ಬಾಂಧವ್ಯ ಬೆಸೆದ ಕ್ಷಣಕ್ಕೆ ಪಾಲಿಕೆಯ ಸದಸ್ಯರು ಸಾಕ್ಷಿಯಾದರು.ಮಧ್ಯಾಹ್ನದ ಪ್ರಾರ್ಥನೆಗೆ ಮಸೀದಿಯ ಆವರಣದಲ್ಲಿ ಮುಸ್ಲಿಮರು ನೆರೆದಿದ್ದರು. ಪ್ರಾರ್ಥನೆ ಮುಗಿಸಿ ಹೊರಬಂದವರಿಗೆ ಮಕ್ಕಳು ಕಬ್ಬು, ಎಳ್ಳು, ಬೆಲ್ಲವನ್ನು ನೀಡಿದರು. ಬಳಿಕ ಸಂಕ್ರಾಂತಿಯ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಎರಡೂ ಧರ್ಮದವರು ಒಂದೆಡೆ ಸೇರಿ ಹಬ್ಬ ಆಚರಿಸಿದ್ದು ಸಂಕ್ರಾಂತಿಯ ಸಡಗರ ಹೆಚ್ಚಿಸಿತ್ತು.ಪಾಲಿಕೆ ಸದಸ್ಯ ಪಿ. ಪ್ರಶಾಂತ್‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನವೇ ಹಿಂದೂ ಮತ್ತು ಮುಸ್ಲಿಮರು ಸಹೋದರರಂತೆ ಇದ್ದರು. ಕೆಲ ರಾಜಕೀಯ ಉದ್ದೇಶಗಳಿಗಾಗಿ ಈ ಬಾಂಧವ್ಯವನ್ನು ಒಡೆಯುವ ಹುನ್ನಾರಗಳು ನಿರಂತರವಾಗಿ ನಡೆಯುತ್ತಿವೆ. ಎರಡೂ ಸಮುದಾಯಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಸೌಹಾರ್ದ ಮನೋಭಾವ ಬೆಳೆಸುವ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕಾಂಗ್ರೆಸ್‌ ಜಿಲ್ಲಾ ನಗರ ಘಟಕದ ಅಧ್ಯಕ್ಷ ರವಿಶಂಕರ್‌ ಮಾತನಾಡಿ, ರೈತರ ಸುಗ್ಗಿಯ ಸಂಭ್ರಮವೇ ಸಂಕ್ರಾಂತಿ. ಬೆಳೆದ ಬೆಳೆಯನ್ನು ಹಂಚಿ ತಿನ್ನುವ ಪದ್ಧತಿ ಹಿಂದಿನಿಂದಲೂ ಇದೆ. ಈ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಡಿ. ನಾಗಭೂಷಣ್‌, ಹಾಜಿ ಫಕೀರ್‌ ಮಹಮ್ಮದ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.