ಶನಿವಾರ, ಏಪ್ರಿಲ್ 17, 2021
31 °C

ಮಹಿಳೆಯರಿಗೆ ಪ್ರೋತ್ಸಾಹ ಅಗತ್ಯ: ನಾರಾಯಣಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ : ಮಹಿಳೆಯರಿಗೆ ಶಿಕ್ಷಣ, ಉದ್ಯೋಗದಲ್ಲಿ ಅವಕಾಶ ಸಿಕ್ಕರೆ ದೇಶ ಅಭಿವೃದ್ಧಿ ಹೊಂದಲಿದೆ  ಎಂದು ವಿಜಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ನಾರಾಯಣಗೌಡ ಅಭಿಪ್ರಾಯಪಟ್ಟರು. ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಂಘ ಈಚೆಗೆ ಏರ್ಪಡಿಸಿದ್ದ ಪ್ರತಿಭಾನ್ವೇಷಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಭೆ ತೋರಬೇಕಾದರೆ ಪ್ರೋತ್ಸಾಹ ಅತ್ಯಗತ್ಯ. ಹೆಣ್ಣು ಮಕ್ಕಳು ವಿದ್ಯಾರ್ಥಿ ಜೀವನದಲ್ಲಿಯೇ ಈ ಬಗ್ಗೆ ಚಿಂತನೆ ಮಾಡಿ ಕ್ರಿಯಾಶೀಲರಾಗುವುದು ಒಳ್ಳೆಯದು.

ವಿದ್ಯಾರ್ಥಿನಿಯರು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂದಿನ ಭವಿಷ್ಯ ಉತ್ತಮ ಪಡಿಸಿಕೊಳ್ಳಬೇಕೆಂದು ಎಂದು  ಕರೆ ನೀಡಿದರು.ಕಾಲೇಜಿನ ಉಪನ್ಯಾಸಕಿ ಪ್ರೊ. ಎನ್.ಕೆ.ಪ್ರಭಾಮಣಿ ಮಾತನಾಡಿ, ಮಹಿಳೆಯರು ಪ್ರಾಮಾಣಿಕತೆ, ದಕ್ಷತೆ ಮತ್ತು ಕಾರ್ಯತತ್ಪರತೆಗೆ ಹೆಸರಾಗಿರುವುದರಿಂದಲೇ ಎಲ್ಲಾ ರಂಗದಲ್ಲೂ  ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಜಾನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಪಾಂಡವಪುರದ 95 ವರ್ಷದ ಹಿರಿಯ ಕಲಾವಿದೆ ತಿಮ್ಮಮ್ಮ ಅವರನ್ನು ಸನ್ಮಾನಿಸಲಾಯಿತು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರೊ. ಡಿ.ಕೆ. ದೇವೇಗೌಡ, ಪ್ರೊ. ಜೆ.ವೀರೇಗೌಡ ಅವರು ಬಹುಮಾನ ವಿತರಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ರಚಿಸಿದ್ದ ಪ್ರಬಂಧ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಉಪನ್ಯಾಸಕರಾದ ಪ್ರೊ. ಕೆ.ಶಾಂತಕುಮಾರ್, ಪ್ರೊ. ಎಂ. ನಾಗರಾಜ್, ಪ್ರೊ. ಸ್ವಾಮೀಗೌಡ ಮತ್ತು ವಿದ್ಯಾರ್ಥಿನಿಯರಾದ ಮಧುರ, ಶಿಲ್ಪ, ಯಮುನ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.