ಸೋಮವಾರ, ಮೇ 23, 2022
21 °C

ಮಹಿಳೆಯರ ಅವಕಾಶ ಕಸಿಯಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಮಹಿಳೆಯರಿಗೆ ದೊರೆಯುವ ಅಧಿಕಾರದ ಅವಕಾಶಗಳನ್ನು ಕಸಿದುಕೊಂಡು ಅವರನ್ನು ಅವಕಾಶ ವಂಚಿತರನ್ನಾಗಿ ಮಾಡಬಾರದು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಓಲೇಕಾರ ಹೇಳಿದರು.ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಾರ್ತಾ ಇಲಾಖೆ ಹಾಗೂ ಜಲಸಂವರ್ಧನ ಸಂಘದ ಜಿಲ್ಲಾ ಯೋಜನಾ ಘಟಕಗಳ ಆಶ್ರಯದಲ್ಲಿ ‘ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಬಲೀಕರಣ’ ಎಂಬ ವಿಷಯದ ಕುರಿತು ಮಂಗಳವಾರ ನಡೆದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಸ್ತ್ರೀಪುರುಷ ನಡುವಿನ ರಾಜಕೀಯ ಅಸಮಾನತೆಯನ್ನು ಅಳಿಸಿ ಹಾಕಿದೆ. ಆದರೆ, ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಸಿಗುವ ಅವಕಾಶಗಳನ್ನು ಕಿತ್ತುಕೊಳ್ಳುವ ಪ್ರವೃತ್ತಿ ಮುಂದುವರೆದಿರುವುದು ಖೇದದ ಸಂಗತಿ ಎಂದರು.ಮಹಿಳಾ ಪ್ರತಿನಿಧಿಗಳ ಸ್ಥಾನದಲ್ಲಿ ಅವರ ಗಂಡಂದಿರೇ ಅಧಿಕಾರ ನಡೆಸುವ ಪ್ರವೃತ್ತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಓಲೇಕಾರ ಅವರು, ಈ ಪ್ರವೃತ್ತಿ ತಡೆಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಪಂ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.ನಬಾರ್ಡ್‌ನ ಹಾವೇರಿ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ಕೆ.ಎಂ. ನಾಯಕ, ರಾಜ್ಯದಲ್ಲಿ ಪ್ರಥಮ ಬಾರಿಗೆ ನಬಾರ್ಡ ಬ್ಯಾಂಕ್ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಮುಂದಾಗಿದ್ದು, ಸರ್ಕಾರದ ನೆರವಿನಿಂದಾಗಿ ರಾಜ್ಯದಲ್ಲಿ 6 ಲಕ್ಷ ಸ್ವಸಹಾಯ ಸಂಘಗಳು ಬೆಳೆಯುವಂತಾಗಿ ಎಂದು ಹೇಳಿದರು.ಕೃಷಿ ಹಾಗೂ ಗ್ರಾಮೀಣ ಯುವಜನ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಪರಿಮಳಾ ಜೈನ್ ಉಪನ್ಯಾಸ ನೀಡಿ, ಗ್ರಾಮೀಣ  ಪ್ರದೇಶದಲ್ಲಿ ಮಹಿಳಾ ಸಬಲೀಕರಣ ಎನ್ನುವುದು ಈವರೆಗೂ ಮರೀಚಿಕೆಯಾಗಿ ಉಳಿದಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಶೇ. 45ರಷ್ಟು ಆಗಿಲ್ಲ. ಮಹಿಳೆಯ ಅರಿವಿಗೆ ಬಾರದೇ ಮಹಿಳೆಯಿಂದಲೇ ಲಿಂಗ ತಾರತಮ್ಯವಾಗುತ್ತಿದೆ. ಮಹಿಳಾ ಶೋಷಣೆಗೆ ಮಹಿಳಾ ಸಂಘಟನೆಗಳು ಅಂಥ ಪ್ರಸಂಗಗಳ ವಿರುದ್ಧ ಧ್ವನಿ ಎತ್ತುವುದು ವಿರಳವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ, ಪ್ರಸ್ತುತಮಹಿಳೆ ಎಲ್ಲ ರಂಗಗಳನ್ನೂ ಪ್ರವೇಶಿಸುತ್ತಿದೆ. ಇದರಿಂದ ಮೊದಲಿನಂತೆ ಲಿಂಗತಾರತಮ್ಯ ಸಾಧ್ಯವಿಲ್ಲವಾದರೂ ಮಹಿಳೆಯರು ಆತ್ಮವಿಶ್ವಾಸದಿಂದ ಪುರುಷ ಸಮಾಜವನ್ನು ಹಿಂದಿಕ್ಕಿ ಮುನ್ನಡೆವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಜಲ ಸಂವರ್ಧನ ಯೋಜನೆಯ ರಾಜ್ಯ ಲಿಂಗತ್ವ ಸಲಹಾ ಸಮಿತಿಯ ಸದಸ್ಯೆ ಪ್ರೇಮಾ ಕುಕ್ಕನಗೌಡರ, ಕೆರೆ ಬಳಕೆದಾರರ ಸಂಘದ ಅಧ್ಯಕ್ಷೆ ಸುಜಾತಾ ಕೊಲ್ಲಾವರ ಮಾತನಾಡಿದರು. ಜಿಲ್ಲಾ ಯೋಜನಾ ಘಟಕದ ಸಮನ್ವಯಾಧಿಕಾರಿ ರಾಜಶ್ರೀ ಅಗಸರ ಪ್ರಾಸ್ತಾವಿಕವಾಗಿ ಮಾತನಾಡಿದರು.ವಾರ್ತಾಧಿಕಾರಿ ಮಾಯಾಚಾರಿ ಸ್ವಾಗತಿಸಿದರು. ಕೃಷ್ಣಾಜಿ ಪವಾರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.