ಶುಕ್ರವಾರ, ಮೇ 14, 2021
30 °C

ಮಹಿಳೆಯರ ಪಾಲಿನ ಹೊಂಬೆಳಕು

-ಮಹಾಂತೇಶ ರಾಜಗೋಳಿ . Updated:

ಅಕ್ಷರ ಗಾತ್ರ : | |

ವರ ವಯಸ್ಸು ಬರೋಬರಿ 83. ಆದರೆ ಇವರಲ್ಲಿರುವ ಚೈತನ್ಯ ಯುವಕರನ್ನೂ ನಾಚಿಸುವಂಥದ್ದು. ವಯಸ್ಸಿನ ಆಧಾರದ ಮೇಲೆ `ಅಜ್ಜ' ಆದರೂ ನೂರಾರು ಮಹಿಳೆಯರ ಪಾಲಿಗೆ ಇವರು ದಾರಿ ತೋರುವ ತಂದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶಸೇವೆಗೆ ಜೀವನ ಮುಡುಪಾಗಿಟ್ಟ ಈ `ಅಪ್ಪ' ಈಗ ಸ್ತ್ರೀಯರ ಬಾಳಲ್ಲಿ ಹೊಂಗಿರಣ ಮೂಡಿಸುತ್ತಿದ್ದಾರೆ.ಇವರ ಹೆಸರು ಹನಮಂತ ಗಿರಿಧರ ಸುಳೇಭಾವಿ. ಊರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೈಲೂರು ಗ್ರಾಮ. ಈ ಭಾಗದ ಜನರ ಬಾಯಲ್ಲಿ ಇವರು ಸುಳೇಭಾವಿ ಅಜ್ಜ. ಇವರ ಏಕೈಕ ಉದ್ದೇಶ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವುದು. ಇದಕ್ಕಾಗಿ ಅವರು ಕಂಡುಕೊಂಡದ್ದು ಉಚಿತ ಹೊಲಿಗೆ ತರಬೇತಿ. ಸ್ವಯಂ ಉದ್ಯೋಗ ಪ್ರಾರಂಭಿಸಲು ಪೂರ್ವ ನಿಯೋಜಿತ ತರಬೇತಿ ಅಗತ್ಯ.ಉದ್ಯೋಗ ಮಾಹಿತಿ ಮತ್ತು ತರಬೇತಿಯನ್ನು ಕೆಲವು ಸರಕಾರಿ ಸಂಸ್ಥೆಗಳು ನೀಡುತ್ತಿವೆಯಾದರೂ ಪ್ರಸ್ತುತ ವ್ಯವಸ್ಥೆಯಲ್ಲಿ ಅವುಗಳು ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿರುವುದು ಎಲ್ಲರಿಗೂ ತಿಳಿದದ್ದೇ. ಇವರ ಮಧ್ಯೆ ಬಡ ಮತ್ತು ಮಧ್ಯಮ ವರ್ಗದ ಯುವಕ-ಯುವತಿಯರ ಸ್ಥಿತಿ ಚಿಂತಾಜನಕ. ಇಂಥವರ ಪಾಲಿಗೆ ವರದಾನವೇ ಈ ಅಜ್ಜ.ಬೆಳಗಾವಿ ಜಿಲ್ಲೆಯ ಮೂಲೆಮೂಲೆಯ ಗ್ರಾಮ ಮಾತ್ರವಲ್ಲದೇ ಧಾರವಾಡ, ಉತ್ತರ ಕನ್ನಡ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಿಗೂ ತೆರಳಿ ಅಲ್ಲಿನ ನಿರುದ್ಯೋಗಿಗಳನ್ನು ಗುರುತಿಸಿ ಉಚಿತವಾಗಿ ಹೊಲಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಈ ಅಜ್ಜ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನಿಸಿದವರು. ಚಾಣಾಕ್ಷತೆಯಿಂದ ಬ್ರಿಟಿಷರ ಕಣ್ಣು ತಪ್ಪಿಸಿಕೊಂಡು ದೇಶದ ಸಲುವಾಗಿ ಹೋರಾಡಿದವರು. ಆದರೂ ಸರಕಾರದ ಪಿಂಚಣಿಗೆ ಆಸೆ ಪಟ್ಟಿಲ್ಲ. ಇದಕ್ಕೆ ಕಾರಣ ಕೇಳಿದರೆ, `ನಾ ನನ್ನ ದೇಶ ಕಾಪಾಡಾಕ ಮಾಡಿದ ಸೇವೆಗೆ ಪಗಾರ ಬೇಕೆನ್ರಿ?' ಎನ್ನುತ್ತಾರೆ.

 ಹನಮಂತ ಗಿರಿಧರ ಸುಳೇಭಾವಿಸುಮಾರು 35 ವರ್ಷಗಳಿಂದ ಉಚಿತ ಹೊಲಿಗೆ ತರಬೇತಿ ಕೆಲಸವನ್ನು ಕಾಯಕವೇ ಕೈಲಾಸ ಎಂಬಂತೆ ನಡೆಸಿಕೊಂಡು ಬಂದಿದ್ದಾರೆ. ಹಿರಿಯ ಸ್ವಾತಂತ್ರ್ಯ ಸೇನಾನಿಗಳಾದ ವಾಲಿ ಚನ್ನಪ್ಪ, ಹುದಲಿ ಬಸನಗೌಡರು, ಗೆಜಪತಿ ಶಿವನಗೌಡ್ರು, ಬುಡರಕಟ್ಟಿಯ ಫಕೀರಗೌಡರು ಇನ್ನೂ ಹಲವು ಸೇನಾನಿಗಳ ಜೊತೆ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಸುಳೇಭಾವಿ ಅಜ್ಜ ಸರಕಾರ ನೀಡುವ ಯಾವ ಸವಲತ್ತಿಗೂ ಕೈಚಾಚಿದವರಲ್ಲ.ಸಮಾಜಕ್ಕೆ ಸೇವೆ

ಮಹಾರಾಷ್ಟ್ರದ ಪುನೇರಿಯಾ ವರದಾ ಆಶ್ರಮದ ರಾಷ್ಟ್ರ ಸಂತ ವಿನೋಭಾ ಭಾವೆಯವರ ಆಶ್ರಮಕ್ಕೆ ಭೇಟಿ ನೀಡಿದ್ದರು ಈ ಅಜ್ಜ. ಭಾವೆಯವರ ಆದರ್ಶ ನಡೆ-ನುಡಿಗಳನ್ನು ತಮ್ಮ ತನುಮನದಲ್ಲಿ ಅಳವಡಿಸಿಕೊಂಡರು. ತಮ್ಮಿಂದ ಸಮಾಜಕ್ಕೆ ಕಿಂಚಿತ್ತಾದರೂ ಸೇವೆಯಾಗಬೇಕೆಂಬ ಛಲ ತೊಟ್ಟ ಫಲವೇ ಈ ಸೇವೆ.

ಕೇವಲ ಒಂದೂವರೆ ತಿಂಗಳ ಕಾಲಾವಧಿಯಲ್ಲಿ 30ಕ್ಕೂ ಹೆಚ್ಚು ನಮೂನೆಯ ಸಿದ್ಧ ಉಡುಪುಗಳ ಮಾಹಿತಿ ನೀಡುತ್ತಾರೆ ಇವರು. ಸಂಘ ಸಂಸ್ಥೆಗಳು ಮತ್ತು ಆಸಕ್ತರು ಕೇವಲ ಊಟ, ವಸತಿ ಒದಗಿಸಿದರೆ ಸಾಕು, ಕಲಿಕಾರ್ಥಿಗಳಿಂದ ಯಾವುದೇ ಫಲಾಪೇಕ್ಷೆ ಬಯಸುವುದಿಲ್ಲ ಇವರು.ಇವರಿಗೆ ಈಚೆಗೆ ಗೋಕಾಕ ತಾಲ್ಲೂಕಿನ ಮರಡಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಜಿಲ್ಲಾ ಮಟ್ಟದ ಶ್ರೀನಿಧಿ ಪುರಸ್ಕಾರ ನೀಡಿದ್ದಾರೆ. ಇದರ ಜೊತೆಗೆ ಹಲವಾರು ಪ್ರಶಸ್ತಿಗಳೂ ಇವರಿಗೆ ಲಭಿಸಿವೆ. ಇದೀಗ ಬೈಲಹೊಂಗಲದ ರಾಹುಲಗಾಂಧಿ ಗ್ರಾಮೀಣಾಭಿವೃಧ್ದಿ ಸಂಸ್ಥೆಯ ಅಡಿಯಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡುತ್ತಿದ್ದಾರೆ.ಎಲೆಮರೆಯ ಕಾಯಿಯಾಗಿರುವ ಸುಳೇಭಾವಿ ಅಜ್ಜನಂಥವರನ್ನು ಸರ್ಕಾರ ಕಣ್ಣೆತ್ತಿ ನೋಡದೇ ಇರುವುದು ವಿಷಾದನೀಯ. ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಮತ್ತು ಪುರಸ್ಕಾರ ನೀಡಿ ಇವರಿಗೆ ಗೌರವಿಸುವುದು ಸರ್ಕಾರದ ಕರ್ತವ್ಯವಾಗಿದೆ.

-ಮಹಾಂತೇಶ ರಾಜಗೋಳಿ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.