ಬುಧವಾರ, ಜೂನ್ 23, 2021
29 °C

ಮಾಗಡಿಯ ಮೆಲುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಲಿ ಸೇರಿದ್ದವರಲ್ಲಿ ಕಾತರವಿತ್ತು. `ಮಾಗಡಿ~ ಬಿಡುಗಡೆಯ ಹೊಸ್ತಿಲಿನಲ್ಲಿತ್ತು. ಚಿತ್ರದ ನಿರ್ದೇಶಕ ಸುರೇಶ್ ಗೋಸ್ವಾಮಿ ದನಿ ಕಂಪಿಸುತ್ತಿತ್ತು. `ನಾಯಕ ನಾಯಕಿ ಇಬ್ಬರೂ ಅನಾಥರು. ನಾಯಕನಿಗೆ ಅಪ್ಪ ಅಮ್ಮ ಇಲ್ಲ.ನಾಯಕಿಗೆ ಅಪ್ಪ ಇದ್ದೂ ಇಲ್ಲದಂತೆ. ಮಾಗಡಿ ಎಂಬುದು ಊರಿನ ಹೆಸರಲ್ಲ. ಅದು ನಾಯಕನ ಹೆಸರು. ಕೇರಳದ ನಟಿ ರಕ್ಷಿತಾ ಚಿತ್ರದ ನಾಯಕಿಯಾದ ನಂತರ ಆಕೆಗೆ ಅನೇಕ ಅವಕಾಶಗಳು ಅರಸಿ ಬಂದವು~ ಎಂದು ಖುಷಿಗೊಂಡರು ಅವರು. ಅದು ಕಾಕತಾಳೀಯವೇ ಅಲ್ಲವೇ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.ಪದ್ಮಾ ವಾಸಂತಿ ಚಿತ್ರದಲ್ಲಿ ಘರ್‌ವಾಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದ ಮೊದಲು ಅವರು  ಪಾತ್ರಕ್ಕೆ ಒಪ್ಪಲಿಲ್ಲವಂತೆ. ನಿರ್ದೇಶಕರು ಹರಸಾಹಸ ಪಟ್ಟರು. ಮನೆಗೆ ತೆರಳಿ ದುಂಬಾಲು ಬಿದ್ದರು. ಪರಿಣಾಮ ನಾಯಕಿಯ ಸಾಕುತಾಯಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.ಪತ್ರಿಕೆಗಳಲ್ಲಿ ಬರುವ ಸುದ್ದಿ ಚಿತ್ರದ ಕತೆಗೆ ಪ್ರೇರಣೆ. ಕಾರ್ಪೊರೇಟ್ ಜಗತ್ತಿನ ಅಪರಾಧವನ್ನು, ಅಲ್ಲಿ ನಡೆಯುವ ಕೊಲೆ ಆತ್ಮಹತ್ಯೆಯನ್ನು ಕುರಿತ ಚಿತ್ರ ಇದು. ಹಳ್ಳಿಯಿಂದ ಬಂದ ಹುಡುಗನಿಗೂ ಕಾರ್ಪೊರೇಟ್ ಜಗತ್ತಿಗೂ ಏನು ಸಂಬಂಧ ಎಂದು ಕೇಳಿಕೊಳ್ಳುವಂತಿಲ್ಲ. ಅದನ್ನು ಚಿತ್ರಮಂದಿರದಲ್ಲಿಯೇ ವೀಕ್ಷಿಸಬೇಕಂತೆ.ಚಿತ್ರದ ಮೊದಲ ಪ್ರತಿ ನೋಡಿದ ನಂತರವೇ ನಿರ್ದೇಶಕರು ನನ್ನನ್ನು ಆಲಂಗಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನುತ್ತ ಮಾತಿಗಿಳಿದರು ನಾಯಕ   ನಟ ದೀಪಕ್.ಅಲ್ಲಿಯವರೆಗೆ ತಮ್ಮ ನಟನೆಯನ್ನು ತಿದ್ದುವುದೇ ನಿರ್ದೇಶಕರ ಕೆಲಸವಾಗಿತ್ತಂತೆ. ಕತೆಗೆ ನಾಯಕನ ಪಾತ್ರವನ್ನು ಹೊಂದಿಸಿರುವುದರಿಂದ ಅವರ ಶ್ರಮ ಹೆಚ್ಚಾಗಿಯೇ ಇತ್ತಂತೆ.`ಚಿತ್ರದಲ್ಲಿ ಅತಿಯಾದ ಸಂಭಾಷಣೆಯ ಹೊರೆಯಿಲ್ಲ. ಆಕ್ಷನ್ ಮತ್ತು ಮೆಲೋಡ್ರಾಮವನ್ನು ಹದವಾಗಿ ಬೆರೆಸಿದಂಥ ಸಿನಿಮಾ. ಕೂಲಿ ಮಾಡಿದರೂ ಸರಿ ರೌಡಿಸಂ ಬೇಡ ಎನ್ನುವುದು ನಾಯಕನ ನಿಲುವು~ ಎಂದರು ದೀಪಕ್.

 

ಅಲ್ಲದೆ ತಾವು ದೃಶ್ಯವೊಂದರ ಚಿತ್ರೀಕರಣದ ಸಂದರ್ಭದಲ್ಲಿ ನೀರುಪಾಲಾಗಿ ಬಿಡುತ್ತಿದ್ದ ಘಟನೆಯನ್ನು ನೆನೆದರು. ದೀಪಕ್ ಒಂದು ಹಾಡಿಗೆ ಪ್ರೇರಣೆ ಕೂಡ ಆಗಿದ್ದಾರೆ. ಅವರು ಹೇಳಿದ ಸಾಲೊಂದನ್ನೇ ಹಿಗ್ಗಿಸಿ ಹಾಡು ರಚಿಸಲಾಗಿದೆ.ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಚಿತ್ರಕ್ಕೆ ಹಾಡುಗಳನ್ನು ಮಾಡಿದ್ದು ಒಂದು ದೊಡ್ಡ ಸಾಹಸ ಎಂದು ಬಣ್ಣಿಸಿದರು. ಹಾಡುಗಳನ್ನು ಸಂಯೋಜಿಸುವಾಗ ಚಿತ್ರ ತಂಡದ ಪ್ರಮುಖರೆಲ್ಲಾ ಭಾಗವಹಿದ್ದರಂತೆ. ಒಂದು ಹಾಡನ್ನು ಸ್ವತಃ ಅವರೇ ಹಾಡಿದ್ದಾರೆ.ನಿರ್ಮಾಪಕ ಭಾ.ಮ.ಹರೀಶ್ ಚಿತ್ರಕ್ಕಾಗಿ ರಾಜ್ಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಕಾದಿರಿಸಿದ್ದಾರಂತೆ. ಚಿತ್ರೀಕರಣಕ್ಕೂ ಮುನ್ನ ಆರು ಏಳು ತಿಂಗಳು ನಿರ್ದೇಶಕರು ಪಟ್ಟ ಶ್ರಮವನ್ನು ಅವರು ಸ್ಮರಿಸಿದರು. ತಮ್ಮ `ಮೆಜೆಸ್ಟಿಕ್~ ಚಿತ್ರದ ನಂತರ ಇದು ಅವರಿಗೆ ಯಶಸ್ಸು ತಂದುಕೊಡಲಿದೆ ಎಂಬುದು ಅವರ ಭಾವನೆ.`ಬಾಲ್ಯದ ಗೆಳೆಯ ಎಂಬುದನ್ನೂ ಕಡೆಗಣಿಸಿ ನಿರ್ದೇಶಕರು ಒಬ್ಬ ಮೇಷ್ಟ್ರಂತೆ ವರ್ತಿಸಿದರು~ ಎಂದು ಹಾಸ್ಯಮಯವಾಗಿ ಕೆಣಕಿದರು ಚಿತ್ರದ ಮತ್ತೊಬ್ಬ ನಿರ್ಮಾಪಕ ದಿವಾಕರ್. ನಿರ್ದೇಶಕರು ಕೇಳಿದ್ದಕ್ಕೆಲ್ಲ ಅವರು ಇಲ್ಲ ಎಂದಿಲ್ಲ.

 

ಹಣಕ್ಕಿಂತ ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದು ಮುಖ್ಯ ಎನ್ನುವುದು ಅವರ ಧೋರಣೆ. ನೃತ್ಯ ನಿರ್ದೇಶಕ ರಘು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.