ಸೋಮವಾರ, ಮಾರ್ಚ್ 8, 2021
29 °C

ಮಾಜಿ ಶಾಸಕ ಸಂಜೀವನಾಥ ಐಕಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ಶಾಸಕ ಸಂಜೀವನಾಥ ಐಕಳ

ಮೂಲ್ಕಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಶಾಸಕ ಸಂಜೀವನಾಥ ಐಕಳ (97) ಮೂಲ್ಕಿ ಕಾರ್ನಾಡು ಮರ್ಕುಂಜದ ಸ್ವಗೃಹ ‘ಸಜನಿ’ಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬಳು ಪುತ್ರಿ ಇದ್ದಾರೆ.   1936ರಲ್ಲಿ ಸ್ವಾತಂತ್ರ್ಯ ಹೋರಾಟ­ಗಾರ ಕಾರ್ನಾಡು  ಸದಾಶಿವರಾಯ ಅವರೊಂದಿಗೆ ಸೇರಿಕೊಂಡು ಮಹಾತ್ಮ ಗಾಂಧೀಜಿ ಅವರನ್ನು ಕರೆ­ತರುವಲ್ಲಿ ಶ್ರಮಿಸಿದ್ದ ಐಕಳ ಅವರು ಮೂಲ್ಕಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ಗಾಂಧೀಜಿ ಮಾಡಿದ ಭಾಷಣದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು.ಸಂಜೀವನಾಥರು ಮೂಲ್ಕಿ ಸೀಮೆಯ ಐಕಳಬಾವ ಮನೆತನದಲ್ಲಿ 1921ರಲ್ಲಿ ಜನಿಸಿದರು.1940ರಲ್ಲಿ ಬಳ್ಳಾರಿಗೆ ತೆರಳಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಬಂಧನಕ್ಕೂ ಒಳಗಾಗಿದ್ದರು. ನಂತರ ಅವರು ಪಂಡಿತ ತಾರಾ­ನಾಥ ಅವರಲ್ಲಿ ಅಯುರ್ವೇದ ಅಧ್ಯಯನ ನಡೆಸಿ ವೃತ್ತಿ ಪ್ರಾರಂಭಿ­ಸಿ­ದ್ದರು.ಜಯಪ್ರಕಾಶ ನಾರಾಯಣ ಅವರ ಪ್ರಜಾ ಸೋಷಲಿಷ್ಟ್ ಪಕ್ಷವನ್ನು ಸೇರಿದ ಐಕಳ ಅವರು 1961ರಲ್ಲಿ ಪಕ್ಷವನ್ನು ಪ್ರತಿ­ನಿಧಿಸಿ ಮೂಲ್ಕಿ– ಮೂಡುಬಿದಿರೆ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದರು. ನಂತರ ಯಾವುದೇ ಪಕ್ಷಕ್ಕೆ ಸೇರದೆ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್‌ ಅವರ ನಿಕಟವರ್ತಿಯಾಗಿದ್ದರು.ಪುನರೂರು ಗ್ರಾಮದಲ್ಲಿ 1953­ರಲ್ಲಿ ಭಾರತಮಾತ ವಿದ್ಯಾ­ಮಂದಿರ­ ಸ್ಥಾಪಿಸಿ ಅಲ್ಲಿ ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ಕಾಯಕ­ವನ್ನು ತಮ್ಮ ಇಳಿ ವಯಸ್ಸಿ­ನವರೆಗೂ ನಡೆಸಿಕೊಂಡು ಬಂದಿದ್ದಾರೆ. ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಪ್ರಗತಿಪರ ಕೃಷಿಕರೂ ಆಗಿದ್ದರು.ಇಂದು ಅಂತ್ಯಕ್ರಿಯೆ: ಕಾರ್ನಾಡು ಮರ್ಕುಂಜದ ಮನೆ ‘ಸಜನಿ’ಯಿಂದ ಶುಕ್ರವಾರ ಬೆಳಿಗ್ಗೆ 9ಕ್ಕೆ ಅಂತಿಮ ಯಾತ್ರೆ ಹೊರಟು ಮೂಲ್ಕಿ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.  ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.