ಬುಧವಾರ, ಏಪ್ರಿಲ್ 21, 2021
25 °C

ಮಾಜಿ ಸಚಿವ ಕಟ್ಟಾ ಆಸ್ತಿ ಜಪ್ತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಇಟಾಸ್ಕ ಸಂಸ್ಥೆಗೆ ಭೂಮಿ ಕೊಡಿಸಿದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಲೇವಾದೇವಿ ಕಾಯ್ದೆ 2002ರ ಅಡಿಯಲ್ಲಿ ಪ್ರಕರಣ ದಾಖಲಿಸಿದ ಮೇಲೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿನಾಕಾರಣ ತೊಂದರೆ ಅನುಭವಿಸಿದ್ದಾರೆ~ ಎಂದು ಅವರ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದಿದ್ದಾರೆ.ಕಟ್ಟಾ ಪರ ವಕೀಲ ಸಿ.ಎಚ್. ಜಾಧವ್ ಅವರು ಜಿಲ್ಲಾ ವಿಶೇಷ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶನಿವಾರ ಈ ಮಾಹಿತಿ ಸಲ್ಲಿಸಿದ್ದಾರೆ. `ಜಾರಿ ನಿರ್ದೇಶನಾಲಯವು ನಾಯ್ಡು ಅವರಲ್ಲದೆ, ಅವರ ಪುತ್ರ ಕಟ್ಟಾ ಜಗದೀಶ್, ಇಟಾಸ್ಕ ಸಾಫ್ಟ್‌ವೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ. ಶ್ರೀನಿವಾಸ್, ಬಿಬಿಎಂಪಿ ಸದಸ್ಯ ಗೋಪಿ ಅವರ ಆಸ್ತಿಯನ್ನು ಜಪ್ತಿ ಮಾಡಿದ್ದು, ನ್ಯಾಯಾಲಯದಲ್ಲಿ ಪ್ರಕರಣವನ್ನೂ ದಾಖಲಿಸಿದೆ~ ಎಂದು ವಿವರಿಸಿದ್ದಾರೆ.`ಎಲ್ಲ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಮುಂಜಾಗ್ರತಾ ಕ್ರಮವಾಗಿ ಎರಡು ತಿಂಗಳ ಹಿಂದೆಯೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ ಮೇಲೆ ನೋಟಿಸ್ ನೀಡಿತ್ತು. ಆರೋಪದ ವಿರುದ್ಧದ ಆಕ್ಷೇಪಗಳನ್ನು ಆಗಲೇ ಸಲ್ಲಿಸಲಾಗಿದೆ. ಒಂದೆಡೆ ಕಟ್ಟಾ ಸೇರಿದಂತೆ ನಾಲ್ವರಿಗೂ ಅವರ ಬ್ಯಾಂಕ್ ಖಾತೆ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಅವರ ಆಸ್ತಿಯನ್ನು ಪರಭಾರೆ ಮಾಡಲೂ ಆಗುತ್ತಿಲ್ಲ~ ಎಂದು ತಿಳಿಸಿದ್ದಾರೆ.`ಪ್ರಕರಣ ನಡೆದ ಅವಧಿಯಲ್ಲಿ ಸಂಪಾದಿಸಿದ ಆಸ್ತಿಯನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ. ಇದಕ್ಕೂ ಮೊದಲು ಖರೀದಿಸಿದ ಆಸ್ತಿಯನ್ನೂ ಜಪ್ತು ಮಾಡಲಾಗಿದೆ.

ಈ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು~ ಎಂದು ಹೇಳಿದ್ದಾರೆ.ಇಟಾಸ್ಕ ಸಂಸ್ಥೆಗೆ ಭೂಮಿಯನ್ನು ಕೊಡಿಸಲು ರೂ 87 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅವರ ಪುತ್ರ ಹಾಗೂ ಪಾಲಿಕೆ ಸದಸ್ಯ ಜಗದೀಶ್ ಎದುರಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.