ಸೋಮವಾರ, ಜೂನ್ 14, 2021
22 °C

ಮಾತಿನ ವ್ಯವಹಾರ ದಕ್ಷತೆ

ಸತ್ಯೇಶ್ ಎನ್. ಬೆಳ್ಳೂರ್ Updated:

ಅಕ್ಷರ ಗಾತ್ರ : | |

ಕೆಟ್ಟವನು ನೀನೆನದೆ ಒಳ್ಳೆಯವನಾಗೆನುತ /

ಸಿಟ್ಟು ತೋರದೆ ನೀನು ಚಾಣಾಕ್ಷತನದಿ //

ಪೆಟ್ಟು ಕೊಡುವುದಕ್ಕಿಂತ ಒತ್ತಿ ತಿಳಿ ಹೇಳಿದರೆ /

ಮುಟ್ಟುವುದು ಅವನೆದೆಯ

 - ನವ್ಯಜೀವಿ 

ನಮ್ಮಲ್ಲೊಂದು ಗಾದೆ ಮಾತಿದೆ. `ಇದ್ದದ್ದನ್ ಇದ್ದ ಹಾಗೇ ಹೇಳಿದ್ರೆ, ಎದ್ದು ಬಂದು ಎದೇಗ್ ಒದ್ದ~ ಅಂತ. ಇರುವುದನ್ನು ಇದ್ದ ಹಾಗೆಯೇ ಹೇಳಿದರೆ ಅದೇಕೆ ಎಲ್ಲರಿಗೂ ಕೆಂಡದಂತಹ ಕೋಪ ಎಂಬುವುದು ಸುಲಭದಲ್ಲಿ ಬಿಡಿಸಲಾಗದ ಒಗಟು. ಇದರ ಅವಶ್ಯಕತೆಯೂ ಇಲ್ಲವೆಂಬುದೇ ಇದರ ವಿಪರ್ಯಾಸವೂ ಹೌದು!ಬಹಳ ವರ್ಷಗಳ ಹಿಂದೆ ಇನ್‌ಫೋಸಿಸ್‌ನ ನಾರಾಯಣಮೂರ್ತಿ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತು ನನಗೀಗ ನೆನಪಾಗುತ್ತಿದೆ. `ಅಮೆರಿಕದಲ್ಲಿ ಕಾರ್ಮಿಕರಿಗೆ ನೀವು ಮಾಡ್ತಾ ಇರೋದು ತಪ್ಪು ಅಂತ ಸ್ಪಷ್ಟವಾಗಿ ಹೇಳಬಹುದು. ಅದರಿಂದ ಅಷ್ಟಾಗಿ ಗೊಂದಲವುಂಟಾಗುವುದಿಲ್ಲ. ಆದರೆ, ಭಾರತದಲ್ಲಿ ಯಾವುದೇ ಕಂಪೆನಿಯಲ್ಲೂ ಯಾರಿಗೂ ಈ ರೀತಿ ಹೇಳುವ ಹಾಗಿಲ್ಲ.ಏಕೆಂದರೆ, ಅವರೆಲ್ಲರಿಗೂ ಬೃಹದಾಕಾರವಾದ ಅಹಂ ಇದೆ. ವ್ಯಾಪಕವಾದ ಪ್ರತಿಷ್ಠೆ ಇದೆ. ತಾವು ಮಾಡುತ್ತಿರುವುದು ತಪ್ಪು ಎಂದು ಮನಸ್ಸಿನಲ್ಲಿ ಒಪ್ಪಿಕೊಂಡರೂ ಇನ್ನೊಬ್ಬರು ಅದನ್ನು ತಮಗೆ ಹೇಳಿದಾಗ ತೀವ್ರವಾಗಿ ಪ್ರತಿಭಟಿಸುವ ಕೆಟ್ಟ ಚಟ ಇದೆ. ಹೀಗಾಗಿ ಇವರೊಡನೆ ಕೆಲಸ ಮಾಡಬೇಕಾಗಿ ಬಂದಾಗ ನಾವು ಅತ್ಯಂತ ಜಾಗರೂಕರಾಗಿರಬೇಕು. ನಮ್ಮ ಭಾಷೆಯ ಬಗ್ಗೆ ಅತೀವ ಎಚ್ಚರ ವಹಿಸಬೇಕು~.ಈ ಪರಿಯ ವರ್ತನೆ ನಮ್ಮಲ್ಲಿ ಕೇವಲ ಬೋರ್ಡ್‌ರೂಮಿನ ಸುತ್ತಮುತ್ತ ಮಾತ್ರವೇ ಎನ್ನಲಾಗುವುದಿಲ್ಲ. ಇದು ಎಲ್ಲೆಡೆಯಲ್ಲೂ ನಾವು ಪ್ರದರ್ಶಿಸುವ ನಮ್ಮದೇ ಆದ ಪೇಟೆಂಟು.ಹಸಿರು ದೀಪ ಕಂಡು ಸಿಗ್ನಲ್ ದಾಟುತ್ತಿದ್ದೀರಿ. ಆದರೆ, ವಿರುದ್ಧ ದಿಕ್ಕಿನಿಂದ ಕೆಂಪು ದೀಪ ಉಲ್ಲಂಘಿಸಿ ಇನ್ನೊಬ್ಬ ಧಾವಿಸಿ ಬರುತ್ತಾನೆ. ಆಗ ನಿಮ್ಮ ಕಾರನ್ನು ನಿಲ್ಲಿಸಿ ಅವನನ್ನು ದೊಡ್ಡದನಿಯಲ್ಲಿ ತರಾಟೆಗೆ ತೆಗೆದುಕೊಳ್ಳಲು ಹೋದರೆ,  ತಪ್ಪು ಅವನದೇ ಆಗಿದ್ದರೂ ಅವನೇ ನಿಮ್ಮನ್ನು ದಬಾಯಿಸಿ ಬಿಡುತ್ತಾನೆ.`ಏನು ಈ ರಸ್ತೆ ನಿಮ್ಮಪ್ಪನ ಮನೆ ಆಸ್ತೀನಾ?~ ಎನ್ನುವಷ್ಟರಮಟ್ಟಿಗೆ ಅವನ ಮಾತು ಬೆಳೆಯುತ್ತದೆ. ಆದರೆ, ಮೊದಲಲ್ಲೇ ಅವನನ್ನು ಜರಿಯುವ ಬದಲು, ಅವನನ್ನು ನೋಡಿ ಮುಗುಳ್ನಗುತ್ತ `ಯಾಕೆ ಸ್ವಾಮಿ ಇಷ್ಟೊಂದು ತರಾತುರಿ? ಹೆಚ್ಚುಕಡಿಮೆ ಆದರೆ ಇಬ್ಬರಿಗೂ ಅಪಘಾತ ಅಲ್ವೆ?~ ಎನ್ನುತ್ತ ತಪ್ಪು ನಿಮ್ಮಿಂದಲೇ ಜರುಗಿದೆಯೇನೋ ಎಂಬ ದನಿಯಲ್ಲಿ ಮೃದುವಾಗಿ ಕೇಳಿ. ಅವನದಕ್ಕೆ - `ವೆರಿ ಸಾರಿ ಕಣ್ರೀ. ಗೊತ್ತಾಗಲಿಲ್ಲ ಕ್ಷಮಿಸಿ ಬಿಡಿ~ ಎನ್ನುತ್ತ ನಕ್ಕು ಮುಂದೆ ಸರಿಯುತ್ತಾನೆ.ಸ್ವಂತ ತಪ್ಪನ್ನು ಒಪ್ಪಿಕೊಳ್ಳಲು ಇಂದು ಯಾರೂ ಸಿದ್ಧರಿಲ್ಲ. ಅದರಲ್ಲೂ ಎಲ್ಲರ ಮುಂದೆ ಯಾರಾದರೂ ಆ ತಪ್ಪನ್ನು ಹಿಡಿದೆತ್ತಿ ತೋರಿಸಿದರಂತೂ, ಜಗಳಕ್ಕೇ ನಿಲ್ಲುತ್ತೇವೆಯೇ ಹೊರತು, `ತಪ್ಪಾಯಿತು~ ಎನ್ನುವ ಜಾಯಮಾನವೇ ನಮ್ಮದಲ್ಲ.ಲಂಚ ಹಾಗೂ ಸಮಾಜದಲ್ಲಿ ಒಟ್ಟಾರೆಯಾಗಿ ಇಳಿಮುಖವಾಗುತ್ತಿರುವ ನೈತಿಕತೆಯ ಪ್ರಭಾವದಿಂದಾಗಿ ದಿಢೀರನೆ ಸಲೀಸಾಗಿ ಒದಗುತ್ತಿರುವ ಹೇರಳವಾದ ಧನದ ಮದವೋ ಅಥವಾ ನಾನೇ ಸರಿ ಎಂಬ ಒಣಜಂಬವೋ ಅಥವಾ ತಪ್ಪು ಒಪ್ಪಿಕೊಂಡು ಬಿಟ್ಟರೆ  ಎಲ್ಲರೂ ಸೇರಿ ನಮ್ಮನ್ನು ತುಳಿದುಬಿಟ್ಟಾರೆಂಬ ಭಯವೋ ಗೊತ್ತಿಲ್ಲ.ಒಟ್ಟಿನಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲವಾಗಿದೆ. ಬದಲಾಗಿ ತಾವೇ ಸರಿ ಎಂದು ವಾದಕ್ಕಿಳಿಯುತ್ತಾರೆ. ಜಗಳ ತೆಗೆಯುತ್ತಾರೆ. ಪ್ರಸ್ತುತ ನಮ್ಮ ರಾಜ್ಯದ ರಾಜಕೀಯ ಧುರೀಣರು ನಡೆಸುತ್ತಿರುವ ಹಗರಣಗಳು ಹಾಗೂ ಅವುಗಳಿಗೆ ಅವರು ನೀಡುತ್ತಿರುವ ಸಮಜಾಯಿಷಿಗಳೇ ಇದಕ್ಕೆ ಸಾಕ್ಷಿ. `ಯಥಾ ರಾಜಃ ತಥಾ ಪ್ರಜ~.

ಬೋರ್ಡ್ ರೂಮಿನ ಸುತ್ತಮುತ್ತ ಜನ ಈ ಪಾಟಿ ಕೆಟ್ಟಿಲ್ಲವಾದರೂ, ಎಲ್ಲೋ ತಪ್ಪನ್ನು ಸುಮ್ಮನೇ ಒಪ್ಪಿಬಿಡಬಾರದೆಂಬ ಭಾರತೀಯರ ಸಹಜ ಪ್ರವೃತ್ತಿಯು ಬಹುತೇಕ ಎಲ್ಲರನ್ನೂ ಕಾಡುವುದುಂಟು.

 

ಹೀಗಾಗಿ ಎಲ್ಲರೊಡನೆ ಬೆರೆತು, ಅವರವರ ಭಾವಾನುಸಾರ ಕೆಲಸ ಮಾಡಿಸುತ್ತ ಕಂಪೆನಿಯ ಅಂತಿಮ ಗುರಿಯೆಡೆಗೆ ಹೆಜ್ಜೆ ಹಾಕುವಾಗ ಆಡುವ ಮಾತಿನಲ್ಲಿ ನಾವು ಎಚ್ಚರ ವಹಿಸಬೇಕು. ಅದು ಇನ್ನೊಬ್ಬರನ್ನು ನೋಯಿಸದೆಯೇ ತನ್ನ ಕೆಲಸವನ್ನು ಸಾಧಿಸುವಂತಿರಬೇಕು.ಆಂಗ್ಲದಲ್ಲಿ ಡಿಪ್ಲೊಮಸಿ ಎಂಬ ಒಂದು ಪದವುಂಟು. ಅದಕ್ಕೆ ಕನ್ನಡದಲ್ಲಿ ರಾಜನೀತಿ ತಂತ್ರ, ವ್ಯವಹಾರ ಚಾತುರ್ಯ, ಲೌಕಿಕ ಚಾಣಾಕ್ಷತನ ಹಾಗೂ ಕಾರ್ಯದಕ್ಷತೆ ಎಂಬ ನಾಲ್ಕು ಅರ್ಥಗಳುಂಟು. ರಾಜನೀತಿ ತಂತ್ರದಲ್ಲಿ ಕುತಂತ್ರದ ವಾಸನೆ ಇದೆ. ವ್ಯವಹಾರ ಚಾತುರ್ಯದಲ್ಲಿ ಚತುರತೆಯ ಅಪ್ರಮಾಣಿಕತೆ ಇದೆ. ಲೌಕಿಕ ಚಾಣಾಕ್ಷತನದಲ್ಲಿ ಸರಳತೆ ಅಲೌಕಿಕವಾಗಿ ಬಿಡುವ ಸಂಭವವೇ ಹೆಚ್ಚು. ಆದರೆ, ಕಾರ್ಯದಕ್ಷತೆಯಲ್ಲಿ ದಕ್ಷತೆಯ ಸೊಗಡಿದೆ.ಆದ್ದರಿಂದ ನಾಲ್ಕು ಅರ್ಥಗಳು ಸರಿಯೆನ್ನಿಸಿದರೂ ನನಗೇನೋ ನಾಲ್ಕನೆಯದು ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತ ಎನ್ನಿಸುತ್ತದೆ. ಆದರೆ, ಬೋರ್ಡ್‌ರೂಮಿನ ಸುತ್ತಮುತ್ತಲಿನ ಬದುಕು ನಮ್ಮ ದಿನನಿತ್ಯದ ಬದುಕಿಗಿಂತ ಬಹಳವೇ ವಿಭಿನ್ನವಾದುದು. ಅಂತೆಯೇ ಅಲ್ಲಿ ನಮ್ಮ ಮಾತುಗಳಲ್ಲಿ ಇರಬೇಕಾದ ಡಿಪ್ಲೋಮಸಿಗೆ ನಾನು ನೀಡುವ ಕನ್ನಡದ ಪದ ಪ್ರಯೋಗ `ವ್ಯವಹಾರ ದಕ್ಷತೆ~ ನಾವಲ್ಲಿ ದಕ್ಷತೆಗೆ ಕುಂದು  ಉಂಟಾಗದಂತೆ ವ್ಯವಹಾರ  ನಡೆಸಿಕೊಂಡು ಹೋಗಬೇಕು! ಅದಕ್ಕಾಗಿ ನಮ್ಮಲ್ಲಿ ಸರ್ವದಾ ಅದಕ್ಕೆ ತಕ್ಕಂತಹ ಮಾತುಗಳೇ ಬಳಕೆಯಾಗಬೇಕು. ಅದೇ ಡಿಪ್ಲೊಮಸಿ!ಪ್ರಧಾನ ಮಂತ್ರಿಗಳಾಗಿದ್ದ ನರಸಿಂಹರಾವ್ ಅವರ ಬಗ್ಗೆ ಒಂದು ಮಾತಿತ್ತು. ಯಾವುದೇ ವಿವಾದದ ಬಗ್ಗೆಯೂ ಅವರು ಯಾವುದೇ ಸ್ಪಷ್ಟವಾದ ನಿಲುವನ್ನು ತಾಳುತ್ತಿರಲಿಲ್ಲವಂತೆ.

ಯಾವ ಮಾತನ್ನೇ ಆಡದೆ ಸುಮ್ಮನಿದ್ದು ಬಿಟ್ಟರೆ ಸಮಯ ಕಳೆದಂತೆ ಆ ಗೊಂದಲ ತನ್ನಷ್ಟಕ್ಕೆ ತಾನೇ ಮಾಯವಾಗಿ ಬಿಡುತ್ತದೆ ಎಂಬುದು ಅವರ ವ್ಯವಹಾರ ದಕ್ಷತೆಯ ಪ್ರತೀಕವಾಗಿತ್ತಂತೆ. ಇದು ಎಷ್ಟು ಸಮಂಜಸ ಎನ್ನುವುದಕ್ಕೆ ಈ ಮುಂದಿನ ಚಿಕ್ಕ ಕತೆಯೊಂದನ್ನು ಓದಿ.ಗಂಡ ಹೆಂಡತಿಯರು ಯಾವುದೋ ವಿಷಯವಾಗಿ ಬಹಳವೇ ಜಗಳವಾಡಿರುತ್ತಾರೆ. ಏನೊಂದೂ ಇತ್ಯರ್ಥಕ್ಕೆ ಬರದೆ ಊಟ ಮುಗಿಸಿ ಮಲಗುವ ಕೋಣೆಗೆ ಬಂದಿದ್ದಾರೆ. ಇಬ್ಬರಲ್ಲಿ ಯಾರೊಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡು ಜಗಳ ಮುಗಿಸಬೇಕೆಂಬ ಮನಸ್ಸು ಮಾಡುವುದಿಲ್ಲ. ಮಾತು ಬಿಟ್ಟವರಂತೆ ವರ್ತಿಸುತ್ತಾರೆ.ಬೆಳಿಗ್ಗೆ ನಾಲ್ಕು ಗಂಟೆಗೆಲ್ಲಾ ಎದ್ದು ವಿಮಾನ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯತೆ ಗಂಡನಿಗಿದೆ. ಹಾಗಾಗಿ ಆತ ಒಂದು ಸಣ್ಣ ಚೀಟಿಯಲ್ಲಿ `ಪ್ರಿಯೆ, ನನ್ನನ್ನು ಬೆಳಿಗ್ಗೆ ನಾಲ್ಕು ಗಂಟೆಗೆಲ್ಲಾ ಎಬ್ಬಿಸಿಬಿಡು. ದಯವಿಟ್ಟು ಮರೆಯಬೇಡ~ ಎಂದು ಬರೆದು ಆ ಚೀಟಿಯನ್ನು ಹೆಂಡತಿ ಮಲಗುವ ದಿಂಬಿಗೆ ಅಂಟಿಸಿ ಮಲಗಿ ಬಿಡುತ್ತಾನೆ.ಬೆಳಿಗ್ಗೆ ಎಂಟರ ಹೊತ್ತಿಗೆ ಕಣ್ಣು ಬಿಟ್ಟಾಗ ಪರಿಸ್ಥಿತಿಯ ಅರಿವಾಗಿ ಅವನಿಗೆ ಕೆಂಡದಂತಹ ಕೋಪ ಬರುತ್ತದೆ. ಎಂದಿನಂತೆ ಹೆಂಡತಿ ತನ್ನನ್ನು ಎಬ್ಬಿಸಲಿಲ್ಲವಲ್ಲಾ ಎಂಬ ಸಿಟ್ಟು  ನೆತ್ತಿಗೇರುತ್ತಿರುವಾಗಲೇ ತನ್ನ ದಿಂಬಿಗೆ ಒಂದು ಸಣ್ಣ ಚೀಟಿ ಅಂಟಿಸಿರುವುದು ಕಾಣುತ್ತದೆ. ಅದರಲ್ಲಿ ಅವನ ಹೆಂಡತಿ `ಪ್ರಿಯ, ಬೆಳಿಗ್ಗೆಯ ಸಮಯ ನಾಲ್ಕು ಗಂಟೆಯಾಗಿದೆ. ದಯವಿಟ್ಟು ಎದ್ದೇಳಿ~ ಎಂದು ಬರೆದಿರುತ್ತಾಳೆ!ಯೋಚಿಸಿ ನೋಡಿ. ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಮಾತನಾಡದಿರುವುದೇ ಸೂಕ್ತ ಕ್ರಮವಲ್ಲ. ಸರಿಯಾಗಿ ಮಾತನಾಡದಿರುವುದಂತೂ ಇನ್ನೂ ಅಶುಭ. ಆದ್ದರಿಂದ ಮಾತನಾಡಬೇಕು. ಚೆನ್ನಾಗಿ ಮಾತನಾಡಬೇಕು. ಯಾರ ವೈಯಕ್ತಿಕ ವಿಚಾರಗಳ ಬಗ್ಗೆಯೂ ದನಿ ಎತ್ತದೆ, ಯಾರ ಅಲ್ಪ ದೋಷಗಳನ್ನೆಲ್ಲ ಎತ್ತಿ ಹಿಡಿಯದೆ, ನಡೆಯುತ್ತಿರುವ ದಾರಿಯಿಂದ ತೀರಾ ಅತ್ತಿತ್ತ ಸಾಗದೆ, ಹಿಡಿದ ಕೆಲಸವನ್ನು ಮಾತ್ರ ಸಾಧಿಸಬೇಕೆಂಬ ಏಕೈಕ ಗುರಿಯಿಟ್ಟು ಪ್ರಾಮಾಣಿಕವಾಗಿ ಹಾಗೂ ಸರಳವಾಗಿ ಮಾತನಾಡಬೇಕು.

 

ಕೆಲವೊಮ್ಮೆ ಮಾತುಗಳಿಂದಲೇ ಇರುವ ಗೊಂದಲದಲ್ಲಿ ಇನ್ನೂ ಹೊಸ ಹೊಸ ಗೊಂದಲಗಳು ಸೃಷ್ಟಿಯಾಗಿ ಬಿಡುತ್ತವೆ. ಆಗ ಅವುಗಳಿಂದ ಯಾರಿಗೂ ನೋವಾಗದ ಹಾಗೆ ಹೊರ ಬಂದು ಮತ್ತೆ ಮಾತನ್ನು ಅಂತಿಮ ಗುರಿಯೆಡೆಗೆ ಮುಂದುವರಿಸುವುದಿದೆಯಲ್ಲ, ಇದು ಬಹಳ ಕಷ್ಟದ ಕೆಲಸ.ಈ ವಿದ್ಯೆ ಕರಗತವಾಗಿಬಿಟ್ಟರೆ ಬೋರ್ಡ್ ರೂಮಿನ ಸುತ್ತಮುತ್ತ ಆತ ಎಲ್ಲರೂ ಒಪ್ಪುವ ನಾಯಕನಾಗುವುದರಲ್ಲಿ ಸಂಶಯವಿಲ್ಲ. ಮಾತು ನಮ್ಮೆಲ್ಲರಿಗೂ ಇರುವ ಬ್ರಹ್ಮಾಸ್ತ್ರ. ಅದನ್ನು ಯಾರು ತಮ್ಮ ವ್ಯವಹಾರಗಳಲ್ಲಿ ದಕ್ಷತೆಯಿಂದ, ಮನುಷ್ಯ ಸಹಜವಾದ ಪ್ರಾಮಾಣಿಕತೆ ಹಾಗೂ ಸರಳತೆಯಿಂದ ಬಳಸುತ್ತಾರೋ, ಅವರಿಗೆಲ್ಲ ಜಯ ಕಟ್ಟಿಟ್ಟ ಬುತ್ತಿ.ಮಾತು ಅವನಿಗೆ ಈ ಪರಿಯಾಗಿ ಒಲಿದು ಬರಬೇಕಿದ್ದರೆ ಮೊದಲನೆಯದಾಗಿ ಅವನಲ್ಲಿ ಅಹಂಕಾರವಿರಬಾರದು. ಎಂದೆಂದಿಗೂ ತಾನೇ ಸರಿ ಎಂದು ದಿನವಿಡೀ ವಾದ ಮಾಡುವ ಅವಗುಣ ಇರಬಾರದು. ಸಹ ಕಾರ್ಮಿಕರ ಸಣ್ಣಪುಟ್ಟ ತಪ್ಪುಗಳನ್ನೆಲ್ಲ ಎಲ್ಲರೆದುರು ಉದಹರಿಸುತ್ತ ಹೀಯಾಳಿಸುವ ಬದಲಾಗಿ ಅವುಗಳನ್ನೆಲ್ಲ ಆಗಿಂದಾಗ್ಗೆ ಕ್ಷಮಿಸಿ ಮರೆತು ಬಿಡುವ ಉದಾರ ಭಾವವಿರಬೇಕು.ಯಾರನ್ನೂ ನೋಯಿಸದೆ ಹಿಡಿದ ಗುರಿಯತ್ತಲೇ ಹೆಜ್ಜೆ ಹಾಕುವ ಎದೆಗಾರಿಕೆ ಇರಬೇಕು. ಈ ಎಲ್ಲ ಗುಣಗಳಿದ್ದವನಲ್ಲಿ ಮಾತುಗಳು ಏನೊಂದೂ ಹಿಂಜರಿಕೆ ಇಲ್ಲದೆ ವ್ಯವಹಾರ ದಕ್ಷತೆಯನ್ನು ಪ್ರಾಮಾಣಿಕವಾಗಿ ಹಾಗೂ ಸರಳವಾಗಿ ಮೈತಾಳಿ ಬರುತ್ತವೆ. ಆತನ ಸಹಪಾಠಿಗಳಿಗೆಲ್ಲಾ ಆತನಾಗ ವಂದನೀಯನಾಗುವುದರಲ್ಲಿ ಎಳ್ಳಷ್ಟೂ ಸಂಶಯ ಬೇಡ!

ಇನ್ನು ಮುಂದೆ `ಇದ್ದದ್ದನ್ ಇದ್ದ ಹಾಗೆ ಹೇಳಿದೆ.

 

ಎದ್ದು ಬಂದು ಎದೇಗ್ ಒದ್ದ~ ಎನ್ನುವವರಿಗೆ, ಅವರ ನೇರ ನುಡಿಯನ್ನು ಹೊಗಳದೆ, ಅವರು ತಮ್ಮ ಮಾತಿನಲ್ಲಿ ಸೇರಿಸಬೇಕಾದ `ವ್ಯವಹಾರ ದಕ್ಷತೆ~ಯನ್ನು ಪರಿಚಯಿಸಿ. ಅವರನ್ನು ಯಾರೂ ಎದ್ದು ಬಂದು ಒದೆಯುವುದಿಲ್ಲ. ಇದು ಖಂಡಿತ!  

 ಲೇಖಕರನ್ನು 

satyesh.bellur@gmail.com ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.