ಶನಿವಾರ, ಜನವರಿ 18, 2020
19 °C
ರಾಜ್ಯ ವಾರ್ತಾ ಪತ್ರ: ಪಂಜಾಬ್‌

ಮಾದಕ ವಸ್ತು ಕಳ್ಳಸಾಗಣೆ ಸುಳಿಗೆ ಪಂಜಾಬ್‌

ಪ್ರಜಾವಾಣಿ ವಾರ್ತೆ/ ಗೌತಮ್‌ ಧೀರ್ Updated:

ಅಕ್ಷರ ಗಾತ್ರ : | |

ಚಂಡೀಗಡ: ಈ ವರ್ಷ ಆಫ್ಘಾನಿಸ್ತಾನ­ದಲ್ಲಿ ಕಳೆದ ಬಾರಿಗಿಂತ ಶೇ50ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಫೀಮು ಬೆಳೆಯಲಾಗಿದೆ ಎನ್ನುವುದು ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆ ವರದಿಯಿಂದ ಗೊತ್ತಾಗಿದೆ.ಇನ್ನು ಭಾರತದಲ್ಲಿ ಈ ಬಾರಿ ಇದರ ಪ್ರಮಾಣ ಶೇ 36ಕ್ಕೆ ಹೆಚ್ಚಿದೆ ಎನ್ನುವುದು  ಗಮನಿಸಬೇಕಾದ ಸಂಗತಿ. ದೇಶದ ರೈತರು ಹಿಂದೆಂದಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಅಫೀಮು ಬೆಳೆದಿದ್ದಾರೆ.ಪಂಜಾಬ್‌–ಪಾಕಿಸ್ತಾನ ಗಡಿಯಲ್ಲಿ  ಈ ವರ್ಷ ದಾಖಲೆ ಪ್ರಮಾಣದಲ್ಲಿ ಹೆರಾಯಿನ್‌ ವಶಕ್ಕೆ ಪಡೆದಿರುವುದೇ ಇದಕ್ಕೆ ಸಾಕ್ಷಿ.  ಕೆಲ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ  ₨200 ಕೋಟಿಗೂ ಹೆಚ್ಚಿನ ಮೌಲ್ಯದ  ಹೆರಾಯಿನ್‌ ವಶಕ್ಕೆ ಪಡೆಯಲಾಯಿತು. ಮಾದಕ ವಸ್ತು ವಿರುದ್ಧ ಸಮರ: ಪಂಜಾಬ್‌ ರಾಜ್ಯದಲ್ಲಿ ಮಾದಕ ವಸ್ತು­ಗಳ ವಿರುದ್ಧ ಸಮರ ಸಾರಲಾಗಿದೆ.  ಮಾದಕ ವಸ್ತು ಸರಬರಾಜು ಮಾಡು­ವವರ ಮೇಲೆ ಪಂಜಾಬ್‌ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಮಾದಕ ವಸ್ತು ವ್ಯಸನಕ್ಕೆ ಬಿದ್ದ ಸಾವಿರಾರು ಯುವಕರ ಬದುಕು ಇನ್ನಾದರೂ ಸುಧಾರಿ­ಸೀತು ಎನ್ನುವ ಭರವಸೆ ಮೂಡಿರುವುದು ಸುಳ್ಳಲ್ಲ.ಕಳೆದ 11 ತಿಂಗಳಿನಲ್ಲಿ, ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಮಾಡುವ ಸುಮಾರು 7,600ಕ್ಕೂ ಹೆಚ್ಚು ಮಂದಿ­ಯನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ.ಉಪಮುಖ್ಯಮಂತ್ರಿ ಸುಖವೀರ್‌ ಸಿಂಗ್‌ ಬಾದಲ್‌ ಆಣತಿಯ ಮೇರೆಗೆ ರಾಜ್ಯದಲ್ಲಿ ಮಾದಕ ವಸ್ತುಗಳ ಸರಬರಾಜು ಹಾಗೂ ಮಾರಾಟಕ್ಕೆ ಲಗಾಮು ಬಿದ್ದಿದೆ. ಈವರೆಗಿನ ಅವಧಿ­ಯಲ್ಲಿ, ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಂಪ್ರತಿ ಏನಿಲ್ಲವೆಂದರೂ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ಮಾದಕ ವಸ್ತು ಪೂರೈಕೆ ಜಾಲವನ್ನು ಭೇದಿಸ­ಲಾಗುತ್ತಿದೆ. ಈ ವ್ಯಸನಕ್ಕೆ ಬೀಳುವ ಗ್ರಾಮಾಂತರ ಪ್ರದೇಶದ ಯುವಕರನ್ನು ಕ್ರೀಡೆಯತ್ತ ಸೆಳೆಯ­ಲಾಗುತ್ತಿದೆ. ಇದೇ ವೇಳೆ ಎಲ್ಲ ಕಡೆ ಕ್ರೀಡಾಂಗಣ­ಗಳು  ತಲೆ ಎತ್ತುತ್ತಿವೆ. ಕಬಡ್ಡಿ­ಯಂಥ ಸಾಂಪ್ರ­ದಾಯಿಕ –ಅಪ್ಪಟ ಗ್ರಾಮೀಣ ಸೊಗಡಿನ ಆಟಗಳಿಗೆ ಇನ್ನಿಲ್ಲದ ಪ್ರೋತ್ಸಾಹ ಸಿಗುತ್ತಿದೆ.ದಾಖಲೆ ಪ್ರಮಾಣದಲ್ಲಿ ವಶ: ಕೇವಲ ಎರಡು ತಿಂಗಳಿನಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ, ₨1,100 ಕೋಟಿಗೂ ಹೆಚ್ಚಿನ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ದಂಧೆ ನಡೆಸುತ್ತಿದ್ದ ಹಲವರನ್ನು ಪೊಲೀ­ಸರು ಮಟ್ಟ ಹಾಕಿದ್ದಾರೆ. ಒಂದುಕಾಲದ ಕುಸ್ತಿಪಟು, ಅರ್ಜುನ, ಭಾರತ ಕೇಸರಿ ಹಾಗೂ ರುಸ್ತುಂ–ಇ–ಹಿಂದ್‌ ಪ್ರಶಸ್ತಿ­ಗಳನ್ನು ಮುಡಿಗೇರಿಸಿಕೊಂಡ ಜಗದೀಶ್‌ ಭೋಲಾ ಕೂಡ ಈ ಪೈಕಿ ಒಬ್ಬ.ಕೆನಡಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ವ್ಯಕ್ತಿಗಳ ಮೇಲೆ   ಕಣ್ಣಿಡಲಾಗಿದೆ.ಗಡಿಯಲ್ಲಿ ಕಟ್ಟೆಚ್ಚರ: ಮಾದಕ ವಸ್ತು ಕಳ್ಳ­ಸಾಗ­ಣೆಗೆ ಅಂಕುಶ ಹಾಕುವ ದಿಸೆ­ಯಲ್ಲಿ ಪಂಜಾಬ್‌–ಪಾಕಿಸ್ತಾನ ಗಡಿ­ಯಲ್ಲಿ ತೀವ್ರ ನಿಗಾ ಇಡಲಾಗಿದ್ದು, ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಈ ವರ್ಷ ಬಿಎಸ್‌ಎಫ್‌, 295 ಕೆ.ಜಿ ಹೆರಾಯಿನ್‌ ವಶಪಡಿಸಿಕೊಂಡಿದೆ. ಇದೇ   ವೇಳೆ ಪಂಜಾಬ್‌ ಪೊಲೀಸರು ರಾಜ್ಯದಲ್ಲಿ 384 ಕೆ.ಜಿ.ಹೆರಾಯಿನ್‌  ( ಸುಮಾರು ₨3,200 ಕೋಟಿ ಮೌಲ್ಯದ) ವಶಕ್ಕೆ ಪಡೆದುಕೊಂಡಿದ್ದಾರೆ.‘ಆಫ್ಘಾನಿಸ್ತಾನದಲ್ಲಿ ದಾಖಲೆ ಪ್ರಮಾ­ಣ­ದಲ್ಲಿ ಅಫೀಮು ಬೆಳೆದಿರು­ವುದರಿಂದ ಗಡಿಯ ಮೂಲಕ ಮಾದಕ ವಸ್ತುಗಳ ಸರಬರಾಜು ಹೆಚ್ಚಾಗಿದೆ ಎನ್ನುತ್ತಾರೆ’ ಬಿಎಸ್‌ಎಫ್‌ ಅಧಿಕಾರಿಗಳು.ಅಂದಹಾಗೆ, ‘ಅಂತರರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ವಲಯ’­ದಲ್ಲಿ ಪಂಜಾಬ್‌  ಕೂಡ ಬರುತ್ತದೆ.ಚಳಿ ಕಾಟ: ‘ಮಾದಕ ವಸ್ತು ಸರಬ­ರಾಜು ಹಾಗೂ ಮಾರಾಟ ಮಾಡು­ವವರ ವಿರುದ್ಧ ಬಲೆ ಬೀಸು­ವುದು ಚಳಿಗಾಲದಲ್ಲಿ ಬಲು ಕಷ್ಟದ ಕೆಲಸ. ಕೊರೆಯುವ ಚಳಿ ಹಾಗೂ ದಟ್ಟ ಮಂಜಿನಿಂದ ಕೂಡಿದ ವಾತಾವರಣದಲ್ಲಿ ಕೆಲಸ ಮಾಡುವುದು ಸುಲಭವಲ್ಲ’ ಎನ್ನುತ್ತಾರೆ ಬಿಎಸ್‌ಎಫ್‌ ಅಧಿಕಾರಿಯೊಬ್ಬರು.ಮಾದಕ ವಸ್ತು ನಿಯಂತ್ರಣ ದಳದ ಇತ್ತೀಚಿನ ವರದಿ ಪ್ರಕಾರ, ಪಂಜಾಬ್‌ನಲ್ಲಿ ವಶಕ್ಕೆ ಪಡೆದಿರುವ ಮಾದಕ ವಸ್ತುಗಳ ಪ್ರಮಾಣ        ಇಡೀ ದೇಶದಲ್ಲಿ ವಶಕ್ಕೆ ಪಡೆದಿರುವ ಮಾದಕ  ವಸ್ತುಗಳ ಒಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿನದು.  2013ರ ಮಾರ್ಚ್‌ಗೆ ಕೊನೆಗೊಂಡಂತೆ, ಕಳೆದ ಮೂರು ವರ್ಷಗಳಲ್ಲಿ  ರಾಜ್ಯದಲ್ಲಿ ಸುಮಾರು 814 ಕೆ.ಜಿ ಹೆರಾಯಿನ್‌ ವಶಕ್ಕೆ ಪಡೆಯಲಾಗಿದೆ. ಇದೇ ಅವಧಿಯಲ್ಲಿ ದೇಶದ ವಿವಿಧ ಕಡೆ ವಶಕ್ಕೆ ಪಡೆದುಕೊಂಡ ಹೆರಾಯಿನ್‌ ಒಟ್ಟು ಪ್ರಮಾಣ 700 ಕೆ.ಜಿಗಿಂತಲೂ ಕಮ್ಮಿ.

ಪ್ರತಿಕ್ರಿಯಿಸಿ (+)