ಬುಧವಾರ, ಜುಲೈ 15, 2020
22 °C

ಮಾನವ ಹಕ್ಕು ಹೋರಾಟಗಾರ ಪ್ರೊ.ವಿ.ಎಸ್. ಶ್ರೀಧರ್ ಆತಂಕ ಹಿಂದೂ ಭಯೋತ್ಪಾದನೆಗೆ ಸರ್ಕಾರದ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನವ ಹಕ್ಕು ಹೋರಾಟಗಾರ ಪ್ರೊ.ವಿ.ಎಸ್. ಶ್ರೀಧರ್ ಆತಂಕ ಹಿಂದೂ ಭಯೋತ್ಪಾದನೆಗೆ ಸರ್ಕಾರದ ಬೆಂಬಲ

ಬೆಂಗಳೂರು: ‘ದೇಶದಲ್ಲಿ ಹಿಂದೂ ಭಯೋತ್ಪಾದನೆಗೆ ಸರ್ಕಾರ (ಪ್ರಭುತ್ವ) ಬೆಂಬಲ ನೀಡುತ್ತಿರುವುದು ಬಹಳ ಅಪಾಯಕಾರಿ’ ಎಂದು ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ವಿ.ಎಸ್. ಶ್ರೀಧರ್ ಆತಂಕ ವ್ಯಕ್ತಪಡಿಸಿದರು.

 

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ‘ಕೋಮುವಾದ, ಭಯೋತ್ಪಾದನೆ ಹಾಗೂ ಪ್ರಜಾಪ್ರಭುತ್ವ: ಆತಂಕಕಾರಿ ಹೊಸ ವಿದ್ಯಮಾನಗಳು’ ಕುರಿತು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‘ಹಿಂದೂ ಭಯೋತ್ಪಾದನೆ ಹಾಗೂ ಮುಸ್ಲಿಂ ಭಯೋತ್ಪಾದನೆ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಇಸ್ಲಾಂ ಭಯೋತ್ಪಾದನೆ ಸ್ವತಂತ್ರವಾಗಿದ್ದು, ತನ್ನದೇ ರಾಷ್ಟ್ರದ ಆಡಳಿತದ ವಿರುದ್ಧ ಬಂಡಾಯ ನಡೆಸಿದೆ. ಇದಲ್ಲದೇ, ತಮ್ಮದೇ ಧರ್ಮದ ಆಡಳಿತವಿರುವ ಬೇರೆ ರಾಷ್ಟ್ರಗಳಲ್ಲಿಯೂ ಅದು ವಿಧ್ವಂಸಕ ಕೃತ್ಯಗಳನ್ನು ನಡೆಸಿದೆ. ಆದರೆ, ಹಿಂದೂ ಭಯೋತ್ಪಾದನೆಯು ರಾಷ್ಟ್ರದ ಆಡಳಿತದ ವಿರುದ್ಧ ನಡೆದಿರುವಂತಹದ್ದ ಅಲ್ಲ. ಒಂದು ನಿರ್ದಿಷ್ಟ ಜನಾಂಗವನ್ನು ಗುರಿಯಾಗಿಸಿಕೊಂಡು ನಡೆದಿರುವಂತಹದ್ದು’ ಎಂದು  ಹೇಳಿದರು.

 

ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸರ್ಕಾರದ ವಿರುದ್ಧ ನಡೆಸಲಾಗುವ ಎಲ್ಲ ಹೋರಾಟಗಳನ್ನು ಭಯೋತ್ಪಾದನೆ ಕೃತ್ಯ ಎನ್ನಲಾಗದು. ಅವುಗಳ ಸೈದ್ಧಾಂತಿಕ ಹಿನ್ನೆಲೆಯನ್ನು ಗಮನಿಸಿ ತೀರ್ಮಾನಿಸಬೇಕಾಗುತ್ತದೆ.

ಸರ್ಕಾರದ ವಿರುದ್ಧದ ಅಸಮಾಧಾನಗಳು ಮೊದಲು ಮನವಿ, ಪ್ರತಿಭಟನೆ... ಹೀಗೆ ಸಣ್ಣ ರೂಪದಲ್ಲಿ ಆರಂಭವಾಗುತ್ತವೆ. ಇದು ಫಲಿಸದಿದ್ದಾಗ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಹೋರಾಟಕ್ಕೆ ಇಳಿಯುತ್ತಾರೆ. ನಕ್ಸಲ್,  ಎಲ್‌ಟಿಟಿಇ ಹೋರಾಟಗಳು ಇದಕ್ಕೆ ಉದಾಹರಣೆ. ಇವುಗಳನ್ನು ಭಯೋತ್ಪಾದನೆ ಎಂದು ಕರೆಯಲಾಗದು’ ಎಂದರು.

 

‘ಭಯೋತ್ಪಾದನೆ ಯಾವುದೇ ರೀತಿಯಲ್ಲಿರಲಿ ಅದನ್ನು ಖಂಡಿಸಲೇಬೇಕು. ಕಟು ಮೂಲಭೂತಿವಾದಿಗಳನ್ನು ವಿರೋಧಿಸಲೇಬೇಕು’ ಎಂದು ಅವರು ತಿಳಿಸಿದರು.ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಧರ್ಮ ಹಾಗೂ ಭಯೋತ್ಪಾದನೆಗೆ ಸಂಬಂಧವಿಲ್ಲ. ಯಾವುದೇ ಧರ್ಮದ ಗ್ರಂಥಗಳಾಗಲಿ ಭಯೋತ್ಪಾದನೆಯನ್ನು ಬೆಂಬಲಿಸಿಲ್ಲ. ಕೆಲವು ಜನರು ಉದ್ದೇಶಪೂರ್ವಕವಾಗಿಯೇ ಧರ್ಮದ ಜೊತೆ ಭಯೋತ್ಪಾದನೆಯನ್ನು ಬೆಸೆಯುತ್ತಿದ್ದಾರೆ’ ಎಂದು ಹೇಳಿದರು.

 

‘ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಯೇ ಜಾಗತಿಕ ಭಯೋತ್ಪಾದನೆ ಹುಟ್ಟಲು ಕಾರಣವಾಗಿದೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ತನ್ನ ವ್ಯಾಪಾರ ವೃದ್ಧಿಸಿಕೊಳ್ಳಲು ಅಲ್ಲಿರುವ ಸಮಾಜಘಾತಕ ಶಕ್ತಿಗಳಿಗೆ ಶಸ್ತ್ರಾಸ್ತ್ರ ಪೂರೈಸಿ ಅಲ್ಲಿ ತನ್ನ ಪ್ರಭುತ್ವ ಸಾಧಿಸುವ ಅಮೆರಿಕದ ದುರಾಸೆಯೇ ಇದಕ್ಕೆ ಮೂಲ ಕಾರಣವಾಗಿದೆ. ತನ್ನ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಅಮೆರಿಕ ಭಯೋತ್ಪಾದನೆಯನ್ನು ಸಾಧನವನ್ನಾಗಿ ಬಳಸಿಕೊಂಡಿತು’ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಫಕೀರ್ ಮೊಹಮ್ಮದ್ ಕಟ್ಪಾಡಿ ಮಾತನಾಡಿ, ‘ಪ್ರಜಾಪ್ರಭುತ್ವ ವಿರೋಧಿ ಎನ್ನುವಂತೆ ಇಸ್ಲಾಂ ಬಗ್ಗೆ ಅಪ್ರಪಚಾರ ನಡೆಸಲಾಗುತ್ತಿದೆ. ಇದನ್ನು ತಡೆಯಲು ಧಾರ್ಮಿಕ ಮುಖಂಡರು ಇಸ್ಲಾಂ ಧರ್ಮದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪ್ರಚಾರ ಮಾಡಬೇಕು. ಅವರು ಸುಮ್ಮನಿರುವುದರಿಂದಲೇ ಇಂತಹ ಸ್ಥಿತಿ ಎದುರಾಗಿದೆ’ ಎಂದು ಅವರು ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.