ಗುರುವಾರ , ಜೂನ್ 24, 2021
28 °C

ಮಾರಿಕಾಂಬೆಯ ದರ್ಶನಕ್ಕೆ ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರಿಕಾಂಬೆಯ ದರ್ಶನಕ್ಕೆ ಭಕ್ತರ ದಂಡು

ಶಿವಮೊಗ್ಗ: ನಗರದಲ್ಲಿ ಮಂಗಳವಾರ ಕೋಟೆ ಮಾರಿಕಾಂಬ ಜಾತ್ರೆ ಅದ್ದೂರಿ ಚಾಲನೆ ಪಡೆಯಿತು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು ಪುನೀತರಾದರು.ಮುಂಜಾನೆಯಿಂದಲೇ ಮಾರಿಕಾಂಬ ದೇವಿ ದರ್ಶನಕ್ಕೆ ಭಕ್ತರು ಹೂವು, ಹಣ್ಣು, ಕಾಯಿ, ಬಳೆ, ಅಕ್ಕಿ, ಬಟ್ಟೆ, ದೇವಿಗೆ ತುಳಸಿ ಹಾರ, ನಿಂಬೆಹಣ್ಣಿನ ಹಾರಗಳನ್ನು ಹಿಡಿದುಕೊಂಡು ಸರದಿ ಸಾಲಲ್ಲಿ ನಿಂತು ದೇವಿ ದರ್ಶನ ಭಾಗ್ಯ ಪಡೆದರು. ಬೆಳಿಗ್ಗೆ ದೇವಿ ದರ್ಶನಕ್ಕೆ ನಿಂತ ಭಕ್ತರ ಸಾಲು ಬಿ.ಎಚ್. ರಸ್ತೆಯ ಕರ್ನಾಟಕ ಸಂಘದ ಸಮೀಪದವರೆಗೂ ಹಬ್ಬಿತ್ತು. ಭಕ್ತರು ದೇವಿಯ ಮಡಿಲಲ್ಲಿ ತಮ್ಮ ಮಕ್ಕಳನ್ನು ಹಾಕುವ ಮೂಲಕ ಮಕ್ಕಳಿಗೆ ಒಳ್ಳೆಯದನ್ನು ಕರುಣಿಸುವಂತೆ ಬೇಡಿಕೊಂಡರು. ಅಲ್ಲದೇ, ಅಪಾರ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಸೇರಿದಂತೆ ಜಾತ್ರಾ ಸಮಿತಿಯವರು ಭಾಗಿಯಾಗುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಿದ್ದರು. ದೇವರ ದರ್ಶನಕ್ಕೆ ಅನುವಾಗುವಂತೆ ಭಕ್ತ ಸಮೂಹ ಸರದಿ ಸಾಲಿನಲ್ಲಿ ಸಾಗಲು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು.ಮಾರಿಕಾಂಬ ದೇವಿಯನ್ನು ವಿವಿಧ ಅಲಂಕಾರಗಳಿಂದ ಸಿಂಗಾರಿಸಲಾಗಿತ್ತು. ಅಲ್ಲದೇ, ಬಂದ ಭಕ್ತರಿಗೆ ದಣಿವಾರಿಸಿಕೊಳ್ಳಲು ದೈವಜ್ಞ ಹೆಲ್ಪ್‌ಲೈನ್ ವತಿಯಿಂದ ಉಚಿತ ಮಜ್ಜಿಗೆ ವಿತರಣೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು.ಮಾರ್ಚ್ 14ರಿಂದ 17ವರೆಗೆ ದೇವಿಯ ದೇವಸ್ಥಾನದಲ್ಲಿ ಮುಂಜಾನೆ 5ರಿಂದ ಹರಕೆ, ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಲಿವೆ. ಪ್ರತಿ ದಿನ ರಾತ್ರಿ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಟೆ ಮಾರಿಕಾಂಬ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.