ಭಾನುವಾರ, ಜೂನ್ 7, 2020
23 °C

ಮಾರುಕಟ್ಟೆಗಳ ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಗಳ ಅವ್ಯವಸ್ಥೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಚಿಂತಾಮಣಿ ಹೊರತುಪಡಿಸಿದರೆ, ವ್ಯಾಪಾರ-ವಹಿವಾಟಿಗೆ ಪರಿಗಣಿಸಲ್ಪಡುವ ಪ್ರಮುಖ ಕೇಂದ್ರವೆಂದರೆ ಚಿಕ್ಕಬಳ್ಳಾಪುರ. ಇಲ್ಲಿ ಮೂರು-ನಾಲ್ಕು ಕಡೆ ಮಾರುಕಟ್ಟೆಯ ವ್ಯವಸ್ಥೆಯಿದೆಯಾದರೂ ಎಲ್ಲಿಯೂ ಅತ್ಯುತ್ತಮ ಸೌಕರ್ಯಗಳು ಕಾಣಸಿಗುವುದಿಲ್ಲ. ಹಣ್ಣು ತರಕಾರಿಗಳ ವ್ಯಾಪಾರಸ್ಥರಿಗೆ ಪ್ರತ್ಯೇಕ ಮಳಿಗೆಗಳು ಮತ್ತು ಸೌಕರ್ಯಗಳಿಲ್ಲದಿದ್ದರೂ ಇರುವ ಅಲ್ಪಸ್ವಲ್ಪ ಸ್ಥಳದಲ್ಲೇ ವ್ಯಾಪಾರ ನಡೆಸುತ್ತಾರೆ. ಗಲೀಜು ವಾತಾವರಣವಿದ್ದರೂ ಅದನ್ನು ಸಹಿಸಿಕೊಂಡು ವ್ಯಾಪಾರ ಮಾಡುತ್ತಾರೆ.ಸಂತೆ ಬೀದಿ ರಸ್ತೆಯ ಮಾರುಕಟ್ಟೆಯು ನಗರದ ಪ್ರಮುಖ ವ್ಯಾಪಾರಿ ಕೇಂದ್ರ. ಅದರಿಂದ ಸ್ವಲ್ಪ ದೂರದಲ್ಲಿಯೇ ಇರುವ ಬಜಾರ್ ರಸ್ತೆಯಲ್ಲಿ ದಿನಸಿ ಮತ್ತು ಇತರ ಅಗತ್ಯ ವಸ್ತುಗಳ ಮಾರುಕಟ್ಟೆಯಿದೆ. ಅಲ್ಲಿಂದ ನೇರವಾಗಿ ಸಾಗಿದ್ದಲ್ಲಿ, ನಗರಸಭೆ ವೃತ್ತದಲ್ಲಿಯೂ ಮಾರುಕಟ್ಟೆ ಕಾಣಸಿಗುತ್ತದೆ. ಅದರೆ ಅಲ್ಲಿ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಮಾತ್ರವೇ ವ್ಯಾಪಾರ-ವಹಿವಾಟು ನಡೆಯುತ್ತದೆ. ಇವು ಮೂರು ಮಾರುಕಟ್ಟೆಗಳು ಒಂದೇ ಬದಿಯಲ್ಲಿದ್ದರೆ, ಮತ್ತೊಂದು ಮಾರುಕಟ್ಟೆ ಎಂ.ಜಿ.ರಸ್ತೆಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿದೆ. ಬುಧವಾರ ಮತ್ತು ಶನಿವಾರ ವಹಿವಾಟು ಜೋರಾಗಿ ನಡೆಯುತ್ತದೆ.ಸಂತೆ ಬೀದಿ ರಸ್ತೆಯ ಎರಡೂ ಬದಿಗಳಲ್ಲಿ ಸಣ್ಣಪುಟ್ಟ ಮಳಿಗೆಗಳಿದ್ದು, ಅವುಗಳ ಮುಂದೆಯೇ ಪಾದಚಾರಿ ಮಾರ್ಗವು ಇದೆ. ಆದರೆ ಸ್ಥಳಾವಕಾಶ ಇಲ್ಲದ ಕಾರಣ ಬಹುತೇಕ ವ್ಯಾಪಾರಸ್ಥರು ಪಾದಚಾರಿ ಮಾರ್ಗದಲ್ಲೇ ಕೂತುಕೊಂಡು ವ್ಯಾಪಾರ ಮಾಡುತ್ತಾರೆ. ಪಾದಚಾರಿ ಮಾರ್ಗವೂ ಸಾಲದಾದಾಗ ರಸ್ತೆಯಂಚಿನಲ್ಲಿ ಕೂತುಕೊಂಡು ನಿರಾತಂಕವಾಗಿ ಹಣ್ಣುತರಕಾರಿಗಳನ್ನು ಮಾರುತ್ತಾರೆ. ಈ ವ್ಯಾಪಾರಸ್ಥರ ಸಮೀಪದಲ್ಲೇ ತಿಪ್ಪೆಗುಂಡಿಯಿದ್ದು, ಅಲ್ಲಿ ಮೀನುಗಳ ಮಾರಾಟ ನಡೆಯುತ್ತದೆ. ಕೋಳಿಗಳ ಮಾರಾಟ ಕೇಂದ್ರವೂ ಅಲ್ಲಿದೆ.ಕಿರಿದಾದ ರಸ್ತೆಯಲ್ಲೇ ಅಷ್ಟಿಷ್ಟು ಸ್ಥಳಾವಕಾಶ ಮಾಡಿಕೊಂಡು ವಹಿವಾಟು ನಡೆಸುವ ವ್ಯಾಪಾರಸ್ಥರು ಪ್ರತಿ ಹತ್ತು ನಿಮಿಷ ಅಥವಾ ಅರ್ಧ ಗಂಟೆಗೊಮ್ಮೆ ಬರುವ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಪೊಲೀಸರು ದಿಢೀರ್ ತೆರವು ಕಾರ್ಯಾಚರಣೆ ನಡೆಸಿದರೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕು. ಸಣ್ಣಪಟ್ಟು ತಂಟೆ-ತಕರಾರು ತಲೆದೋರಿದರೂ ಎಲ್ಲವನ್ನೂ ನಿಭಾಯಿಸಿಕೊಂಡು ವ್ಯಾಪಾರದತ್ತ ಕೇಂದ್ರೀಕರಿಸಬೇಕು.ಸಂತೆ ಮಾರುಕಟ್ಟೆ ಬೀದಿಯು ಹಣ್ಣು, ತರಕಾರಿ, ಸೊಪ್ಪು ಮುಂತಾದವುಗಳ ಮಾರಾಟದ ಮಾರುಕಟ್ಟೆಯಾದರೆ, ಬಜಾರ್ ರಸ್ತೆಯು ದವಸಧಾನ್ಯ, ದೈನಂದಿನ ಬಳಕೆ ವಸ್ತುಗಳ ಮಾರಾಟ ಕೇಂದ್ರ. ಎರಡೂ ಮಾರುಕಟ್ಟೆಗಳಿಗೂ ಕಿರಿದಾದ ರಸ್ತೆಗಳಿದ್ದು, ಎದುರುಬದಿರಿನಿಂದ ಏಕಕಾಲಕ್ಕೆ ಬೃಹತ್ ವಾಹನಗಳು ಬಂದರೆ ಸಂಚಾರಕ್ಕೆ ಅಡಚಣೆಯಾಗುತ್ತದೆ. ಲಾರಿ ಮತ್ತು ಇತರ ಸರಕುಸಾಗಣೆ ವಾಹನಗಳು ಹಗಲುಹೊತ್ತಿನಲ್ಲೇ ಸರಕುಗಳನ್ನು ಮಳಿಗೆಗಳಿಗೆ ಇಳಿಸುವುದರಿಂದ ಪಾದಚಾರಿಗಳಿಗೆ ಮತ್ತು ವಾಹಸ ಸವಾರರಿಗೆ ತೊಂದರೆಯಾಗುತ್ತದೆ.ಮುಂಜಾವಿನ ಮಾರುಕಟ್ಟೆ ಎಂದೇ ಕರೆಯಲ್ಪಡುವ ನಗರಸಭೆ ವೃತ್ತದ ಮಾರುಕಟ್ಟೆ ವ್ಯಾಪಾರಸ್ಥರಿಗೆ ಸಮೀಪದಲ್ಲೇ ನೂತನ ಮಳಿಗೆಗಳನ್ನು ನಿರ್ಮಿಸಿಕೊಡಲಾಗಿದೆ. ನೂತನ ಮಳಿಗೆಗಳತ್ತ ಸ್ಥಳಾಂತರಗೊಳ್ಳುವ ಕುರಿತು ಪ್ರಶ್ನಿಸಿದರೆ, ವ್ಯಾಪಾರಸ್ಥರು ಬಗೆಬಗೆಯ ಉತ್ತರಗಳನ್ನು ನೀಡುತ್ತಾರೆ. `ನೂತನ ಮಳಿಗೆಗಳಲ್ಲಿ ನಮಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿಲ್ಲ. ನೂತನ ಮಳಿಗೆಗಳತ್ತ ಗ್ರಾಹಕರು ಬರುವುದಿಲ್ಲ. ಹೀಗೆ ಮುಕ್ತವಾಗಿ ವ್ಯಾಪಾರ-ವಹಿವಾಟು ಮಾಡಿದರೇನೆ ನಮಗೆ ಅನುಕೂಲವಾಗುತ್ತದೆ~ ಎಂದು ವ್ಯಾಪರಸ್ಥ ಮಹಮ್ಮದ್ `ಪ್ರಜಾವಾಣಿ~ಗೆ ತಿಳಿಸಿದರು.ಸಂತೆ ಮಾರುಕಟ್ಟೆ ಬೀದಿ ವ್ಯಾಪಾರಸ್ಥರಿಗೆಂದೇ ಮೂರು ಅಂತಸ್ತಿನ ನೂತನ ಕಟ್ಟಡವೊಂದನ್ನು ಸಮೀಪದಲ್ಲೇ ಕಟ್ಟಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕೆಂದೇ ಹಲವು ವರ್ಷಗಳಿಂದ ಇದ್ದ ಮಾಂಸದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇನ್ನೂ ಪೂರ್ಣಗೊಂಡಿಲ್ಲ.`ನೂತನ ಮಾರುಕಟ್ಟೆ ಕಟ್ಟಡದಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಯಾರಿಗೆ ಸಿಗುತ್ತೆ, ಯಾರಿಗೆ ಇಲ್ಲ ಎಂಬುದು ಗೊತ್ತಿಲ್ಲ. ನಮಗೆ ಒಟ್ಟಾರೆ ಶುಚಿಯಾದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಟ್ಟರೆ, ಅನುಕೂಲವಾಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಕಷ್ಟಗಳನ್ನು ಅರಿತುಕೊಂಡು ನಮಗೆ ಸೌಕರ್ಯ ಒದಗಿಸಬೇಕು~ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.