ಮಂಗಳವಾರ, ಮೇ 11, 2021
25 °C

ಮಾವಳ್ಳಿ ಮಂದಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾವಳ್ಳಿ ಮಂದಾರ!

`ಒಲವೇ ಮಂದಾರ~ ಎಂಬ ನವಿರು ಪ್ರೇಮಕಥೆಯ ಚಿತ್ರದ ನಟನೆಯಿಂದ ಪ್ರಶಂಸೆಗೆ ಪಾತ್ರವಾಗಿದ್ದ ನಟ ಶ್ರೀಕಾಂತ್ ಎರಡನೇ ಚಿತ್ರಕ್ಕಾಗಲೇ ಮಚ್ಚು ಲಾಂಗು ಹಿಡಿಯಲು ತಯಾರಿ ನಡೆಸಿದ್ದಾರೆ. `...ಮಂದಾರ~ದಲ್ಲಿನ ಅವರ ಅಭಿನಯ ನೋಡಿ ಮೆಚ್ಚಿಕೊಂಡು ಅವರ ಕೈಗೆ ಮಚ್ಚು ಕೊಡಲು ಒಲವು ತೋರಿರುವುದು `ಡೆಡ್ಲಿ ಸೋಮ~ದಂತಹ ಚಿತ್ರ ನಿರ್ಮಿಸಿದ ಶೋಭಾ ರಾಜಣ್ಣ. `ಮಾವಳ್ಳಿ ಮಿಲ್ಟ್ರಿ ಹೋಟೆಲ್~ ಎಂಬ ಅಡ್ಡದಲ್ಲಿ ಕುಳಿತು ಅಡ್ಡದಾರಿ ಹಿಡಿಯುವ ಹುಡುಗರ ಕುರಿತ ಚಿತ್ರವಿದು.ಮುಹೂರ್ತದ ಬಳಿಕ ಚಿತ್ರತಂಡ ಚಿತ್ರದ ಬಗ್ಗೆ ಮಾತುಗಳನ್ನು ಹಂಚಿಕೊಂಡಿತು. `ನಟ ಶ್ರೀಕಾಂತ್ ಅಭಿನಯ ಇಷ್ಟವಾಗಿತ್ತು. ಅವರಿಗಾಗಿಯೇ ಸ್ಕ್ರಿಪ್ಟ್ ಸಿದ್ಧಪಡಿಸುವಂತೆ ಹೇಳಿ ಚಿತ್ರ ಮಾಡಲು ಮುಂದಾಗಿದ್ದೇನೆ~ ಎಂದು ಶೋಭಾ ರಾಜಣ್ಣ ಮಾತು ಆರಂಭಿಸಿದರು.`ಉಡ~, `ಯುಗಯುಗಳೇ ಸಾಗಲಿ~ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಶಶಾಂಕ್‌ರಾಜ್ ಈ ಚಿತ್ರದಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಲೇಜು ಮೆಟ್ಟಿಲೇರದ ಐವರು ನಿರುದ್ಯೋಗಿ ಹುಡುಗರು ಸೇರಿ ಹರಟುವ ಅಡ್ಡವೇ ಮಾವಳ್ಳಿ ಎಂಬ ಹೆಸರಿನ ಹೋಟೆಲ್.ಅದೇ ಅಡ್ಡ ಅವರು ಅಡ್ಡದಾರಿ ಹಿಡಿಯಲು ಪ್ರೇರಣೆ ನೀಡುತ್ತದೆ. ಅಮೇಲೆ ಮಚ್ಚು ಲಾಂಗುಗಳ ಸದ್ದು. ಬಳಿಕ ಎಂಟ್ರಿ ಕೊಡುವ ಕಾಲೇಜು ವಿದ್ಯಾರ್ಥಿನಿ ಅವರ ಮನಃಪರಿವರ್ತನೆ ಮಾಡುತ್ತಾಳೆ ಎಂದು ಕಥೆಯ ಸಾರಾಂಶ ಹೇಳಿದರು.ಆದರೆ ಇಲ್ಲಿ ಮಚ್ಚು ಲಾಂಗುಗಳನ್ನು ವೈಭವೀಕರಿಸುವುದಿಲ್ಲ. ಪ್ರೀತಿ ಪ್ರೇಮ, ಹಾಸ್ಯ, ಸೆಂಟಿಮೆಂಟ್, ಹಾಡು ಹೀಗೆ ಪ್ರೇಕ್ಷಕ ಬಯಸುವುದೆಲ್ಲವೂ ಚಿತ್ರದಲ್ಲಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು.ನಟ ಶ್ರೀಕಾಂತ್‌ಗೆ ಚಿತ್ರದ ಬಗ್ಗೆ ಸಾಕಷ್ಟು ಕಾತರವಿದೆ. `ಒಲವೇ ಮಂದಾರದಲ್ಲಿನ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದು ಪಕ್ಕಾ ಮಾಸ್ ಚಿತ್ರ. ಸ್ನೇಹಿತರ ಮಧ್ಯೆ ತಾವಾಗಿಯೇ ಪ್ರವೇಶಿಸುವ ಖಳರೊಂದಿಗೆ ನಡೆಸುವ ಕಾದಾಟವಿದು. ಹೊಡೆದಾಟದ ದೃಶ್ಯ ಮತ್ತು ನೃತ್ಯಕ್ಕೆ ಸಾಕಷ್ಟು ತಾಲೀಮು ನಡೆಸಬೇಕಿದೆ. ಹೀಗಾಗಿ ಟಾಕಿ ಚಿತ್ರೀಕರಣ ಮುಗಿದ ಬಳಿಕ 15 ದಿನ ಸಮಯ ಕೇಳಿದ್ದೇನೆ~ ಎಂದರು.ಅದ್ವಿಕಾ ಎಂದು ಚಿತ್ರತಂಡದಿಂದ ಮರುನಾಮಕರಣಗೊಂಡಿರುವ ಸಂಜನಾ ಎಂಬಾಕೆ ಈ ಚಿತ್ರದ ನಾಯಕಿ. ಈಕೆ ಕಸ್ತೂರಿ ವಾಹಿನಿಯ `ಹಳ್ಳಿ ದುನಿಯಾ~ ಎಂಬ ರಿಯಾಲಿಟಿ ಷೋದಲ್ಲಿ ಭಾಗವಹಿಸಿದ್ದವಳು.ಚಿತ್ರದಲ್ಲಿ ಆರು ಹಾಡು, ನಾಲ್ಕೈದು ಹೊಡೆದಾಟದ ಸನ್ನಿವೇಶಗಳಿವೆ. ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ನಾಗೇಂದ್ರ ಪ್ರಸಾದ್, ಕವಿರಾಜ್, ಶಿವು ಜಮಖಂಡಿ, ರಾಮ್‌ನಾಯಕ್ ಹಾಡುಗಳನ್ನು ಬರೆಯಲಿದ್ದಾರೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.