ಮಂಗಳವಾರ, ಮೇ 17, 2022
24 °C

ಮಾ.15 ರೊಳಗೆ ಪೂರ್ಣಗೊಳಿಸಲು ಸಿಎಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ಹೊರವಲಯ ಹಲಗಾ-ಬಸ್ತವಾಡ ಬಳಿ ನಿರ್ಮಾಣವಾಗುತ್ತಿರುವ ಸುವರ್ಣಸೌಧ ಕಾಮಗಾರಿಯನ್ನು ಸೋಮವಾರ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವೀಕ್ಷಿಸಿದರು.ಸುವರ್ಣಸೌಧದಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಹಾಲ್, ವಿಧಾನ ಪರಿಷತ್ ಸಭಾಂಗಣ ಸೇರಿದಂತೆ ವಿವಿಧ ವಿಭಾಗಗಳ ಕಾಮಗಾರಿ ಪರಿಶೀಲನೆ ಮಾಡಿದರು. ಆ ಕುರಿತು ಸ್ಥಳದಲ್ಲಿಯೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.`ಕಾಮಗಾರಿಯನ್ನು ತೀವ್ರಗತಿಯಲ್ಲಿ ಕೈಗೊಳ್ಳಬೇಕು. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು~ ಎಂದು ಸೂಚಿಸಿದರು. ನಂತರ ಅಧಿಕಾರಿಗಳೊಂದಿಗೆ ಸುವರ್ಣಸೌಧ ಕಾಮಗಾರಿ ಕುರಿತು ಸಭೆ ನಡೆಸಿ, ಸಮಗ್ರ ಮಾಹಿತಿ ಪಡೆದುಕೊಂಡರು.ಆರ್‌ಸಿಸಿ ಕೆಲಸ ಪೂರ್ಣಗೊಂಡಿದೆ. ನೆಲಮಹಡಿ, ಮೊದಲ ಮಹಡಿಯ ಫಿನಿಶಿಂಗ್ ಕೆಲಸ ಮುಗಿದಿದ್ದು, ಎರಡು ಹಾಗೂ ಮೂರನೆಯ ಮಹಡಿ ಕೆಲಸ ಪ್ರಗತಿಯಲ್ಲಿದೆ. ಪಶ್ಚಿಮ ಬದಿಯ ಗೋಪುರ ಹಾಗೂ ಚಿಕ್ಕ ಗೋಪುರಗಳ ಕಾಮಗಾರಿ ನಡೆದಿದೆ. ರಸ್ತೆ ಹಾಗೂ ಆವರಣದ ಗೋಡೆ ನಿರ್ಮಾಣ ಕಾರ್ಯವೂ ಸಾಗಿದೆ. ಶೇ.75 ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ಸೌಧಕ್ಕೆ ನೀರು ಪೂರೈಸುವ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಅಧಿಕಾರಿಗಳಿಗೆ ಸೂಚಿಸಿದರು. ಮಾರ್ಚ್ 15 ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.ಸಚಿವರಾದ ಉಮೇಶ ಕತ್ತಿ, ಲಕ್ಷ್ಮಣ ಸವದಿ, ಸಂಸದರಾದ ಸುರೇಶ ಅಂಗಡಿ, ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ಜಗದೀಶ ಮೆಟಗುಡ್ಡ, ಆನಂದ ಮಾಮನಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಣ್ಣ ಕಡಾಡಿ, ಬುಡಾ ಅಧ್ಯಕ್ಷ ಬಾಳಾಸಾಹೇಬ ಕಂಗ್ರಾಳಕರ, ಐಜಿಪಿ ಪಿ.ಎಸ್. ಸಂಧು, ಜಿಲ್ಲಾಧಿಕಾರಿ ಏಕ್‌ರೂಪ್ ಕೌರ್, ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ, ಜಿ.ಪಂ. ಸಿಇಓ ಅಜಯ್ ನಾಗಭೂಷಣ ಮತ್ತಿತರರು ಪಾಲ್ಗೊಂಡಿದ್ದರು.ಸಿಎಂ ಭೇಟಿ: ಮೇಯರ್ ಗೈರು

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮೊದಲ ಬಾರಿಗೆ ಸೋಮವಾರ ಬೆಳಗಾವಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪ್ರಥಮ ಪ್ರಜೆ, ಮೇಯರ್ ಮಂದಾ ಬಾಳೇಕುಂದ್ರಿ ಅವರು ಗೈರು ಹಾಜರಾಗಿದ್ದು, ಚರ್ಚೆಗೆ ಗ್ರಾಸವಾಯಿತು.ಮುಖ್ಯಮಂತ್ರಿಗಳು ಬೆಳಗಾವಿಗೆ ಭೇಟಿ ನೀಡಿದಾಗ ಪ್ರಥಮ ಪ್ರಜೆಯಾದ ಮೇಯರ್ ಹೂಗೂಚ್ಛ ನೀಡಿ ಸ್ವಾಗತಿಸುವುದು ಸಾಮಾನ್ಯ. ಆದರೆ ಮೇಯರ್ ಹಾಗೂ ಉಪಮೇಯರ್ ಅತ್ತ ಸುಳಿಯಲಿಲ್ಲ. ಉಳಿದ ಜನಪ್ರತಿನಿಧಿಗಳೇ ಹೂಗುಚ್ಛ ನೀಡಿ ಬರ ಮಾಡಿಕೊಂಡರು.ಇತ್ತೀಚೆಗೆ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ ಅಂಗೀಕರಿಸದೇ ಸಭೆಯನ್ನು ಅನಿರ್ದಿಷ್ಟಾವಧಿಗೆ ಮೇಯರ್ ಮುಂದೂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.