ಗುರುವಾರ , ಜನವರಿ 30, 2020
19 °C

ಮಿತ್ರ ಕೈ ಬಿಡಲಿಲ್ಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನನ್ನ 50 ವರ್ಷದ ಸಿನಿಮಾ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಚಿತ್ರ ಗೆದ್ದ ಉದಾಹರಣೆ ಇರಲಿಲ್ಲ. ಈಗ `ವಿಷ್ಣುವರ್ಧನ~ ಆ ಕಹಿ ಸರಪಣಿಯನ್ನು ತುಂಡರಿಸಿದೆ~ ಎನ್ನುತ್ತಾ ಮುಖದಲ್ಲಿ ಎದ್ದು ಕಾಣುತ್ತಿದ್ದ ಸಂಭ್ರಮದ ಗೆರೆಯ ನಡುವೆಯೇ ಭಾವುಕರಾದರು ನಿರ್ಮಾಪಕ ದ್ವಾರಕೀಶ್.ವಿಷ್ಣುವರ್ಧನ ನಿರೀಕ್ಷೆಗೂ ಮೀರಿ ಓಡುತ್ತಿದೆ ಎಂಬುದು ದ್ವಾರಕೀಶ್ ಸಂಭ್ರಮಕ್ಕೆ ಕಾರಣ. ಚಿತ್ರ ಯಶಸ್ವಿ ನಾಲ್ಕು ವಾರಗಳನ್ನು ಪೂರೈಸಿದ್ದಕ್ಕೆ ಹಮ್ಮಿಕೊಂಡಿದ್ದ ಸಂತೋಷಕೂಟವದು. ಹೊತ್ತು ಕಳೆದಂತೆ ಒಬ್ಬೊಬ್ಬರೇ ಅತಿಥಿಗಳು ನಿಧಾನವಾಗಿ ಸೇರಿಕೊಳ್ಳುತ್ತಿದ್ದರು.`18 ವರ್ಷದಿಂದ ಹುಡುಕುತ್ತಿದ್ದ ಗೆಲುವು ಸಿಕ್ಕಿದ್ದು `ಆಪ್ತಮಿತ್ರ~ ಚಿತ್ರದಲ್ಲಿ. ಅದರ ಬೆನ್ನಲ್ಲೇ `ವಿಷ್ಣುವರ್ಧನ~ ಗೆದ್ದಿದೆ. ಒಂದು ಗೆದ್ದರೆ ಅದರ ನಂತರದ ಚಿತ್ರದಲ್ಲಿ ಎದುರಾಗುತ್ತಿದ್ದದ್ದು ಸೋಲು. ಹೀಗೆ ನನ್ನ ವೃತ್ತಿ ಬದುಕು ಸಾಗಿತ್ತು. ಆದರೆ ಎರಡು ಗೆಲುವು ಹೀಗೆ ಎಂದೂ ಬಂದಿರಲಿಲ್ಲ~-  ದ್ವಾರಕೀಶ್ ಮಾತಿಗೆ ವಿರಾಮ ಕೊಡಲಿಲ್ಲ.ಸಿನಿಮಾ ಅದ್ಭುತವಾಗಿದೆ ಎಂಬ ಪ್ರತಿಕ್ರಿಯೆ ರಾಜ್ಯದ ಮೂಲೆಮೂಲೆಯಿಂದ ಬರುತ್ತಿದೆ. `ಆಪ್ತಮಿತ್ರ~ದ ದಾಖಲೆಗಳನ್ನೂ ಮುರಿದು ಮುಂದೆ ಸಾಗುತ್ತಿದೆ. ಆದರೆ ಗೆಲುವಿನ ಕೀರ್ತಿ ನನಗೆ ಬೇಡ. ಅದೆಲ್ಲಾ ನಟ ಸುದೀಪ್, ನಿರ್ದೇಶಕ ಪಿ.ಕುಮಾರ್, ಮಗ ಯೋಗೀಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಸಲ್ಲಲಿ ಎಂದರು.ಮಂಗಳೂರಲ್ಲಿ ಮೊದಲ ವಾರವೇ ಐದೂವರೆ ಲಕ್ಷ, ಶಿವಮೊಗ್ಗದಲ್ಲಿ ಗಳಿಕೆ 25 ಲಕ್ಷ... ಹೀಗೆ ದ್ವಾರಕೀಶ್ ಗಳಿಕೆಯ ಪಟ್ಟಿ ಬಿಚ್ಚಿಟ್ಟರು.ಸಿನಿಮಾ ಯಶಸ್ಸಿಗೆ ಎಲ್ಲರೂ ಕಾರಣಕರ್ತರು. ನಾನು ಯಶಸ್ವೀ ತಂಡದ ಸದಸ್ಯ ಮಾತ್ರ. ಬದುಕಿನ ವ್ಯಂಗ್ಯವೆಂದರೆ ಇದೇ. ಚಿತ್ರ ಗೆದ್ದಾಗ ನಾಯಕ ಪಟ್ಟ ಶ್ರಮವನ್ನು ಎಲ್ಲರೂ ಹೇಳುತ್ತಾರೆ. ಸೋತಾಗ ಯಾರೂ ತುಟಿ ಬಿಚ್ಚುವುದಿಲ್ಲ ಎಂದ ಸುದೀಪ್, `ಗೂಳಿ~ ಚಿತ್ರದ ತಮ್ಮ ಅನುಭವ ಹಂಚಿಕೊಂಡರು. ನಾಯಕ ತೊಟ್ಟಿಯಲ್ಲಿ ಬಚ್ಚಿಟ್ಟುಕೊಳ್ಳುವ ದೃಶ್ಯವದು.ಕಸವನ್ನು ತನ್ನ ಮೇಲೆ ತಾನೇ ಸುರಿದುಕೊಳ್ಳಬೇಕು. ಆದರೆ ಸೆಟ್ ಹುಡುಗರು ಆ ತೊಟ್ಟಿಯಲ್ಲಿ ನಿಜವಾದ ಕಸವನ್ನೇ ತುಂಬಿಟ್ಟಿದ್ದರು. ವಾಸನೆ ಬೀರುತ್ತಿದ್ದ ತೊಟ್ಟಿಯಲ್ಲಿ ಕೂರುವುದಕ್ಕೂ ಆಗುತ್ತಿರಲಿಲ್ಲ. ಆದರೂ ದೃಶ್ಯವನ್ನು ಮಾಡಿದೆ. ನಾನು ಪಟ್ಟ ಕಷ್ಟದ ಬಗ್ಗೆ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಮಾತನಾಡಲಿಲ್ಲ.ಏಕೆಂದರೆ ಸಿನಿಮಾ ಗೆಲ್ಲಲಿಲ್ಲ. ಸುದೀಪ್ ಮಾತು ಬಳಿಕ ನಿರ್ದೇಶಕ ಪಿ.ಕುಮಾರ್ ಹೊಗಳಿಕೆಗೆ ತಿರುಗಿತು.ಪರಭಾಷೆಯ ಖ್ಯಾತ ನಟರು ಚಿತ್ರನೋಡಿ ರೋಮಾಂಚಿತರಾಗಿದ್ದಾರೆ. ಹಿಂದಿ ನಟ ವಿವೇಕ್ ಒಬೆರಾಯ್ ಅವರಂತೂ ಸುದೀಪ್ ನಟನೆಗೆ ಮಾರುಹೋಗಿ ತಾವೇ ಆ ಪಾತ್ರವನ್ನು ಹಿಂದಿಯಲ್ಲಿ ಮಾಡುವುದಾಗಿ ಹೇಳಿದ್ದಾರೆ ಎಂದು ಪುಳಕಿತರಾದರು ದ್ವಾರಕೀಶ್ ಪುತ್ರ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ಯೋಗೀಶ್. ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ `ವಿಷ್ಣುವರ್ಧನ~ ರಿಮೇಕ್ ಆಗಲಿದ್ದಾನೆ ಎಂಬ ಮಾತನ್ನೂ ಸೇರಿಸಿದರು.ಇದುವರೆಗಿನ ಸಿನಿಮಾ ಗಳಿಕೆ ಎಂಟು ಕೋಟಿ ರೂಪಾಯಿ ಎಂಬುದು ಹಂಚಿಕೆದಾರ ಕುಮಾರ್ ನೀಡಿದ ಲೆಕ್ಕ. ಸಂಜೀವ್ ಸರೋವರ್ ಮಗನ ನಟನೆಯ ಚಿತ್ರ ಗೆದ್ದ ಸಂಭ್ರಮಕ್ಕೆ ಸಾಕ್ಷಿಯಾದರು. 

 

ಪ್ರತಿಕ್ರಿಯಿಸಿ (+)