ಮಂಗಳವಾರ, ಮಾರ್ಚ್ 9, 2021
18 °C

ಮಿರ್ಜಾ ಸಾಹಿಬಾ ಪಯಣದಲ್ಲಿ ಮೆಹ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿರ್ಜಾ ಸಾಹಿಬಾ ಪಯಣದಲ್ಲಿ ಮೆಹ್ರಾ

ಜಗತ್ತಿಗೆ ಆದರ್ಶವೆನಿಸಿದ ಕ್ರೀಡಾಪಟು ಮಿಲ್ಕಾ ಸಿಂಗ್‌ ಅವರ ಕಥೆಯನ್ನಾಧರಿಸಿ ನಿರ್ಮಿಸಿದ ‘ಭಾಗ್‌ ಮಿಲ್ಕಾ ಭಾಗ್‌’ ಸಿನಿಮಾ ಅತ್ಯಂತ ಜನಪ್ರಿಯಗೊಂಡಿತ್ತು. ಇಂಥ ವಿಭಿನ್ನ ಸಿನಿಮಾವನ್ನು ನೀಡಿದ ರಾಕೇಶ್‌ ಓಂಪ್ರಕಾಶ್ ಮೆಹ್ರಾ ಮತ್ತೊಂದು ಹೊಸ ಬಗೆಯ ಸಿನಿಮಾ ‘ಮಿರ್ಜಾ ಸಾಹಿಬಾ’ ಚಿತ್ರವನ್ನು ಜನರ ಮುಂದಿಡಲು ಸಿದ್ಧತೆ ನಡೆಸಿದ್ದಾರೆ. ದುರಂತ ಪ್ರೇಮಕಥೆಯನ್ನಾಧರಿಸಿದ ಈ ಸಿನಿಮಾ ಬೇರೆಲ್ಲಾ ಬಾಲಿವುಡ್‌ ಪ್ರೇಮಕಥೆಗಳಂತೆ ಕೇವಲ ಹುಡುಗ ಹುಡುಗಿಯ ಕಥೆಯಲ್ಲವಂತೆ.ತಮ್ಮ ಹೊಸ ಸಿನಿಮಾ ಬಗ್ಗೆ ಇಂಡೋ–ಏಷ್ಯನ್‌ ನ್ಯೂಸ್‌ ಸರ್ವಿಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತು ಹಂಚಿಕೊಂಡಿರುವ ಮೆಹ್ರಾ ಅವರು ಹರ್ಷವರ್ಧನ ಕಪೂರ್‌ ಹಾಗೂ ಸಯಾಮಿ ಖೇರ್‌ ಎಂಬ ಹೊಸಮುಖವನ್ನು ಪರಿಚಯಿಸುತ್ತಿದ್ದಾರೆ.ಪರಿಶುದ್ಧ ಪ್ರೇಮವನ್ನೇ ಆಧಾರವಾಗಿಸಿಕೊಂಡು ನೀವು ನಿರ್ಮಿಸುತ್ತಿರುವ ಮೊದಲ ಸಿನಿಮಾ ‘ಮಿರ್ಜಾ ಸಾಹಿಬಾ’. ಪ್ರೀತಿಗೆ ನೀವು ಕೊಡುವ ವ್ಯಾಖ್ಯಾನವೇನು?

ತರ್ಕಕ್ಕೆ ನಿಲುಕದ್ದು ಈ ಪ್ರೀತಿ. ಮನುಷ್ಯ ಯಾವಾಗಲೂ ಪ್ರೀತಿಗೆ ಕಾರಣ ಹುಡುಕಲು ಮುಂದಾಗುತ್ತಾನೆ. ಆದರೆ ಸೋಲುತ್ತಾನೆ. ಪ್ರೀತಿ ಲೆಕ್ಕಾಚಾರದ ವಿಷಯವಲ್ಲ. ಸಿನಿಮಾವನ್ನು ನಿರ್ದೇಶಿಸುತ್ತಿದ್ದಂತೆ ಪ್ರೀತಿಯ ನಿಜಾರ್ಥವನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದೇನೆ. ಇದು ನನ್ನ ಬದುಕಿನ ಅತ್ಯಂತ ಸುಂದರ ಸಂದರ್ಭವಾಗಲಿದೆ ಎನ್ನುವುದು ನನ್ನ ನಂಬಿಕೆ. ಈ ಸಿನಿಮಾ ಕೇವಲ ಹುಡುಗ ಹುಡುಗಿಯ ವಿಷಯವಲ್ಲ, ಬದಲಾಗಿ ಇದು ಸಂಗಾತಿಗಳ ವಿಷಯವಾಗಿದೆ. ಪ್ರೀತಿ ಏನು ಎಂದು ಹುಡುಕುವುದಕ್ಕಿಂತ ಅದನ್ನು ಅನುಭವಿಸಲು ಹೆಚ್ಚು ಇಷ್ಟಪಡುತ್ತೇನೆ.ಪರದೆಯ ಮೇಲೆ, ಬೇರೆ ಪ್ರೇಮಕಥೆಗಳಷ್ಟು ಪ್ರಾಧಾನ್ಯ ಮಿರ್ಜಾ ಸಾಹಿಬಾಗೆ ಯಾಕೆ ಸಿಗಲಿಲ್ಲ?

ಈ ಬಗ್ಗೆ ಗಮನ ವಹಿಸಿರುವುದು ತುಂಬಾ ಶ್ಲಾಘನೀಯ. ಯಾವತ್ತು ಈ ಚಿತ್ರ ಪಯಣ ಪ್ರಾರಂಭಿಸಿದೆನೊ ಅಂದಿನಿಂದ ಇಲ್ಲಿಯವರೆಗೂ ಈ ಕಥೆಯನ್ನು ಯಾರು, ಎಷ್ಟು ಬಾರಿ ಚಿತ್ರಿಸಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ದುರಂತ ಪ್ರೇಮಕಥೆಯನ್ನಾಧರಿಸಿದ ಈ ಸಿನಿಮಾ ಮಾಡಬೇಕೆಂದು ಮನಸ್ಸು ಬಯಸುತ್ತಿತ್ತು. ಈ ಸಿನಿಮಾ ತುಂಬಾ ವಿಭಿನ್ನವಾಗಿ ಮೂಡಿಬರಲಿದೆ. ಸಹಜವಾಗಿ ಎಲ್ಲಾ ಪ್ರೇಮಕಥೆಗಳು ಸಮಾಜದ ವಿರೋಧ ಎದುರಿಸುತ್ತವೆ.  ಆದರೆ ‘ಮೀರಾ ಸಾಹಿಬಾ’ನಲ್ಲಿ ಪ್ರೇಮಕ್ಕೆ ಸಂಬಂಧಿಸಿದ ದುಗುಡ, ಕಷ್ಟ ಕಾರ್ಪಣ್ಯಗಳನ್ನು ಪ್ರೇಮಿಗಳ ಮುಖಾಂತರವೇ ಹೇಳಲಾಗುತ್ತದೆ. ಹೀಗಾಗಿಯೇ ಈ ಕಥೆ ಹೆಚ್ಚು ಸಮಕಾಲೀನ ಕಥೆಯಾಗಿದೆ.ಇಂದಿನ ದಿನಮಾನದಲ್ಲಿ ಪ್ರೀತಿ ನಿಷಿದ್ಧವೇನೂ ಅಲ್ಲ. ತಂದೆ, ತಾಯಿ  ಹಾಗೂ ಸಮಾಜ ಹಲವು ಬಗೆಯ ಪ್ರೇಮ ಪ್ರಕರಣಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇಲ್ಲಿ ಹುಡುಗ ಹಾಗೂ ಹುಡುಗಿ ಕ್ರಿಯಾತ್ಮಕ ಸಮೀಕರಣ ಹೊಂದಿದ್ದಾರೆ. ಈ ಎರಡೂ ಪಾತ್ರಗಳು ಪ್ರೇಮಿಗಳ ಹಾಗೂ ಪ್ರೀತಿಪಾತ್ರರ ಸಂಬಂಧಗಳ ನಡುವೆ ಬದಲಾಗುತ್ತಲೇ ಇರುತ್ತವೆ. ಯಾವುದೇ ಷರತ್ತಿಗೆ ಒಳಪಡದೆ ತಮ್ಮನ್ನು ತಾವು ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವ ಪ್ರೀತಿಯ ಸಂಬಂಧವಿದು. ಇಂಥ ವಿಭಿನ್ನ ಪ್ರೀತಿ ನನ್ನ ಹೃದಯವನ್ನು ತಟ್ಟಿದೆ.ಈ ಪ್ರೇಮಕಥೆಯನ್ನು ಹೇಗೆ ಸಮಕಾಲೀನಗೊಳಿಸಿದ್ದೀರಿ?

ಆಧುನಿಕ ಜಗತ್ತಿಗೆ ಸರಿಹೊಂದುವಂತೆ ಕಥೆಯನ್ನು ತಯಾರಿಸಿಕೊಂಡಿದ್ದೇವೆ. ‘ಮಿರ್ಜಾ ಸಾಹಿಬಾ’ ಕಥಾನಕ ಶತಮಾನ ಕಳೆದರೂ ಪ್ರತಿಧ್ವನಿಸುವಂಥದ್ದು. ಹೀಗಾಗಿಯೇ ಕಥೆ ಎಂದಿಗೂ ಸಮಕಾಲೀನವೇ. ಸಮಯ ಸಂದರ್ಭದ ವಿಷಯಕ್ಕೆ ಬಂದಾಗ ಮೊದಲು ನಾನು ಚಿಂತಿಸಿದ್ದು ಚಿತ್ರೀಕರಣದ ಸ್ಥಳದ ಬಗ್ಗೆ. ಅದು ರಾಜಸ್ತಾನ ಎಂದು ನಿರ್ಧರಿಸಿಯಾಗಿದೆ.ಪ್ರೀತಿ, ಪ್ರೇಮ, ಪ್ರಣಯ ಪ್ರತಿಧ್ವನಿಸಲು ಮರುಭೂಮಿ ಪ್ರದೇಶ ಉತ್ತಮ ಎಂದು ಈ ಆಯ್ಕೆಯೇ?

ನಿಜ. ಆದರೆ ರಾಜಸ್ತಾನ ಎಂದಾಗ ಯಾಕೆ ಕೇವಲ ಮರುಭೂಮಿಯ ಬಗ್ಗೆ ಯೋಚಿಸಬೇಕು? ಅದಕ್ಕೂ ಹೊರತಾದ ರಾಜಸ್ತಾನವಿದೆ. ಆಧುನಿಕ ಪ್ರವಾಸಿ ಸ್ಥಳಗಳನ್ನು ನಾನು ಜನರಿಗೆ ತೋರಿಸಲು ಹೊರಟಿದ್ದೇನೆ. ರಾಜಸ್ತಾನದ ಹೃದಯ ಭಾಗವನ್ನು ಚಿತ್ರದ ಮೂಲಕ ತೋರಿಸಲಿದ್ದೇನೆ.ಮಿರ್ಜಾ, ಸಾಹಿಬಾ ಎರಡೂ ಪಾತ್ರಗಳಿಗೆ ಹೊಸಬರನ್ನು ಆಯ್ದುಕೊಂಡಿದ್ದೀರಂತೆ?

ಹೌದು. ಹರ್ಷವರ್ಧನ್‌ ಕಪೂರ್‌ ಹಾಗೂ ಸಯಾಮಿ ಖೇರ್‌ ಆ ಪಾತ್ರವನ್ನು ನಿಭಾಯಿಸಲಿದ್ದಾರೆ. ಅವರಿಬ್ಬರೂ ಬೆಳೆದಿದ್ದು ಓದಿದ್ದು ಎಲ್ಲಾ ಇಂಗ್ಲೆಂಡ್‌ನಲ್ಲಿ. ಇದೀಗ ಭಾರತದಲ್ಲೇ ವಾಸಿಸುತ್ತಿದ್ದಾರೆ. ಸಾಹಿಬಾ ಕಟ್ಟಳೆಗಳನ್ನು ಬೇಧಿಸುವುದು ಹಾಗೂ ಅದನ್ನು ಗಂಭೀರವಾಗಿ ಪರಿಗಣಿಸುವ ಮಿರ್ಜಾ ಪಾತ್ರಗಳನ್ನು ಈ ಹೊಸಬರ ಮುಖಾಂತರ ತೋರಿಸಲಿದ್ದೇನೆ. ಹೊಸಬರಿಂದ ಸಮರ್ಪಕ ಅಭಿನಯ ಹೊರತೆಗೆಯುವುದನ್ನು ಹೊಸ ಸವಾಲು ಎಂದು ಭಾವಿಸಿದ್ದೇನೆ. ಈ ಇಬ್ಬರೂ ಹೊಸಬರು ಪರಸ್ಪರ ಪೈಪೋಟಿ ನಡೆಸಬೇಕಿದೆ. ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಇಬ್ಬರೂ ಶೂನ್ಯದಿಂದ ತಮ್ಮ ಪಯಣ ಪ್ರಾರಂಭಿಸುತ್ತಿದ್ದಾರೆ. ನಾನು ಕೂಡ ಪ್ರತಿ ಸಿನಿಮಾವನ್ನು ಶೂನ್ಯದಿಂದ ಪ್ರಾರಂಭಿಸುತ್ತೇನೆ. ಇದನ್ನು ಅಮಿತಾಭ್‌ ಬಚ್ಚನ್‌ ಹಾಗೂ ಎ.ಆರ್‌. ರೆಹಮಾನ್‌ ಅವರಿಂದ ಕಲಿತಿದ್ದೇನೆ.ಈ ಸಿನಿಮಾ ಬಗ್ಗೆ ನಿಮ್ಮ ನಿರೀಕ್ಷೆ ಏನು?

ಸಿನಿಮಾ ತಯಾರಿಯ ಪ್ರಕ್ರಿಯೆಯನ್ನು ನಾನು ತುಂಬಾ ಖುಷಿಯಿಂದ ಅನುಭವಿಸುತ್ತಿದ್ದೇನೆ. ಗುಲ್ಜಾರ್‌ ಸಾಹೇಬ್‌ ಅವರ ಒಡನಾಟದಿಂದ ನಾನೂ ಕವಿಹೃದಯಿಯಾಗುತ್ತಿದ್ದೇನೆ ಎಂಬುದೇ ಖುಷಿ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.