ಬುಧವಾರ, ಜೂಲೈ 8, 2020
23 °C

ಮಿ. ಕ್ರಿಕೆಟ್‌ಗೆ ಗೆಲ್ಲುವ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿ. ಕ್ರಿಕೆಟ್‌ಗೆ ಗೆಲ್ಲುವ ವಿಶ್ವಾಸ

ಅಹಮದಾಬಾದ್: ಭಾರತ ತಂಡಕ್ಕೆ ಯುವರಾಜ್ ಸಿಂಗ್ ಇರುವಂತೆ ಆಸ್ಟ್ರೇಲಿಯ ತಂಡಕ್ಕೆ ಮೈಕೆಲ್ ಹಸ್ಸಿ ಇದ್ದಾರೆ. ಅವರು ಗಾಯಗೊಂಡಿದ್ದರಿಂದ ಮೊದಲು ತಂಡದ ಜೊತೆ ಈ ವಿಶ್ವ ಕಪ್ ಬಂದಿರಲಿಲ್ಲ. ವೇಗದ ಬೌಲರ್ ಬೊಲಿಂಜರ್ ಗಾಯಗೊಂಡು ವಾಪಸ್ಸಾಗಿದ್ದರಿಂದ ಹಸ್ಸಿಗೆ ಭಾರತಕ್ಕೆ ಬರುವ ಅವಕಾಶ ದೊರಕಿತು. ಅವರನ್ನು ‘ಮಿಸ್ಟರ್ ಕ್ರಿಕೆಟ್’ ಎಂದೇ ಕರೆಯಲಾಗುತ್ತದೆ.

ಅವರು ಟೆಸ್ಟ್ ಹಾಗೂ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳೆರಡರಲ್ಲೂ 50 ಕ್ಕೂ ಹೆಚ್ಚು ರನ್ನುಗಳ ಸರಾಸರಿ ಹೊಂದಿದ್ದಾರೆ. ಅಂಥ ಸಾಧನೆ ತೋರಿರುವ ಏಕೈಕ ಆಟಗಾರನಾದ ಅವರು ತಮ್ಮ ಮೊದಲ ಏಳು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿಕೆಟ್ ಒಪ್ಪಿಸಿದ್ದು ಏಳನೇ ಪಂದ್ಯದಲ್ಲೇ. ಸರ್ದಾರ ಪಟೇಲ್ ಕ್ರೀಡಾಂಗಣದಲ್ಲಿ ಮಂಗಳವಾರ ಅಭ್ಯಾಸ ನಡೆಸಿದ ನಂತರ ಪತ್ರಕರ್ತರೊಡನೆ ಮಾತನಾಡಿದ ಅವರು, ಆಸ್ಟ್ರೇಲಿಯ ಸಂದರ್ಭಕ್ಕೆ ತಕ್ಕಂತೆ ಪುಟಿದೇಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

“ಕ್ವಾರ್ಟರ್‌ಫೈನಲ್ ತಲುಪುವ ನಮ್ಮ ಮೊದಲ ಗುರಿಯಂತೂ ಈಡೇರಿದೆ. ಭಾರತ ವಿರುದ್ಧ ಪಂದ್ಯ, ಅದೂ ಭಾರತದಲ್ಲಿ ಆಡುವುದೆಂದರೆ ರೋಮಾಂಚಕವಾಗಿರುವುದರಲ್ಲಿ ಅನುಮಾನವೇ ಇಲ್ಲ. ಅತ್ಯುತ್ತಮ ಆಟ ಪ್ರದರ್ಶಿಸಲು ಇದಕ್ಕಿಂತ ದೊಡ್ಡ ಸಂದರ್ಭ ಮತ್ತೊಂದಿಲ್ಲ. ನಾಯಕ ರಿಕಿ ಪಾಂಟಿಂಗ್ ಬಗ್ಗೆ ನಮಗೆಲ್ಲ ವಿಶ್ವಾಸ ಇದೆ. ಅವರಂಥ ಉತ್ತಮ ನಾಯಕ ಮತ್ತೊಬ್ಬನಿಲ್ಲ. ಎಲ್ಲ ಆಟಗಾರರೂ ಇಲ್ಲಿಯ ವಾತಾವರಣಕ್ಕೆ ತಕ್ಕಂತೆ ತಮ್ಮ ಆಟ ಆಡಬೇಕು. ಭಾರತ ವಿರುದ್ಧ ಗೆಲ್ಲಬೇಕೆಂದರೆ ಪ್ರತಿಯೊಬ್ಬ ಆಟಗಾರನೂ ತನ್ನ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಬೇಕು.

“ನಾವು ಫೀಲ್ಡರನನ್ನು ಗಮನಿಸಿ ರನ್ನುಗಳನ್ನು ಕದಿಯಬೇಕು. ಒಂದು ರನ್‌ಅನ್ನು ಎರಡಾಗಿ ಪರಿವರ್ತಿಸುವಾಗ ಫೀಲ್ಡರ್‌ನ ಸಾಮರ್ಥ್ಯವನ್ನು ಅಳೆಯಬೇಕು. ನಾನಂತೂ ಅಪಾಯ ಎದುರಿಸಲು ಸಿದ್ಧನಿದ್ದೇನೆ. ಇಲ್ಲಿಯ ಸುಡುಬಿಸಿಲಿನ ವಾತಾವರಣಕ್ಕೆ ನಾವು ಹೊಂದಿಕೊಂಡಿದ್ದೇವೆ. ಸಣ್ಣಪುಟ್ಟ ತೊಂದರೆಗಳಿಂದ ಚೇತರಿಸಿಕೊಳ್ಳುವ ಚೈತನ್ಯ ನಮ್ಮಲ್ಲಿದೆ.

“ಜಹೀರ್ ಖಾನ್ ಬಹಳ ಅನುಭವಿ ಬೌಲರ್. ಅಶ್ವಿನ್ ಕೂಡ ಉತ್ತಮ ಬೌಲರ್. ಅವರು ವೆಸ್ಟ್‌ಇಂಡೀಸ್ ವಿರುದ್ಧ ಮೊದಲಿನಿಂದಲೇ ಬೌಲ್ ಮಾಡಿದ್ದನ್ನು ನೋಡಿದ್ದೇವೆ. ಆದರೆ ಯಾವುದೇ ಬೌಲರ್ ಬಗ್ಗೆ ನಾವು ಮೊದಲೇ ತಲೆಕೆಡಿಸಿಕೊಂಡು ಆಡಲು ಇಳಿಯುವುದಿಲ್ಲ. ನಮ್ಮ ಆಟವನ್ನು ಬದಲಿಸಲೂ ಹೋಗುವುದಿಲ್ಲ. ಆಸ್ಟ್ರೇಲಿಯ ತಂಡ ಮೊದಲಿನಂತಿಲ್ಲ ಎಂಬ ಟೀಕೆಯ ಬಗ್ಗೆಯೂ ಯೋಚಿುವುದಿಲ್ಲ. ಭಾರತದಲ್ಲಿ ನಾವು ಹಲವು ಪಂದ್ಯಗಳನ್ನು ಗೆದ್ದಿದ್ದೇವೆ. ಅದೇ ವಿಶ್ವಾಸದಲ್ಲೇ ನಾವಿದ್ದೇವೆ” ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.