ಗುರುವಾರ , ಮೇ 19, 2022
21 °C

ಮುಂಗಾರು ದುರ್ಬಲ ಮೋಡ ಬಿತ್ತನೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರು ದುರ್ಬಲ ಮೋಡ ಬಿತ್ತನೆ ಚಿಂತನೆ

ಬೆಂಗಳೂರು: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಶೇಕಡಾ 62ರಷ್ಟು ಕಡಿಮೆ ಆಗಿರುವ ಕಾರಣ, ಮೋಡ ಬಿತ್ತನೆಗೆ ಸರ್ಕಾರ ಚಿಂತನೆ ನಡೆಸಿದೆ.  ಇನ್ನೆರಡು ವಾರಗಳಲ್ಲಿ ಮಳೆ ಬಾರದಿದ್ದರೆ, ಮೋಡ ಬಿತ್ತನೆಗೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.ರಾಜ್ಯದ ಬರ ಪರಿಸ್ಥಿತಿ ಕುರಿತು ಗೃಹ ಕಚೇರಿ `ಕೃಷ್ಣಾ~ದಲ್ಲಿ ಸಚಿವರು, ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಮೋಡ ಕವಿದ ವಾತಾವರಣ ಇದ್ದೂ ಮಳೆ ಬಾರದ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಮೋಡ ಬಿತ್ತನೆ ಮಾಡದಿದ್ದರೆ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಿಸಬಹುದು~ ಎಂದು ಆತಂಕ ವ್ಯಕ್ತಪಡಿಸಿದರು.ಸಲಹೆ ಆಧರಿಸಿ ಕ್ರಮ: ಮೋಡ ಬಿತ್ತನೆಯ ಸಾಧ್ಯಾಸಾಧ್ಯತೆ, ಅಗತ್ಯವಿರುವ ಹಣ, ರಾಜ್ಯದ ಯಾವ ಭಾಗದಲ್ಲಿ ಬಿತ್ತನೆ ಮಾಡಬಹುದು ಎಂಬಿತ್ಯಾದಿ ವಿಷಯಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ತಜ್ಞರ ಜೊತೆ ಸಮಾಲೋಚನೆ ನಡೆಸುವರು. ಅವರ ಸಲಹೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.ರಾಜ್ಯದ 124 ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ಮಳೆ ಕಡಿಮೆಯಾಗಿರುವ ಇತರೆ ಕೆಲವು ತಾಲ್ಲೂಕುಗಳಲ್ಲೂ ಅಧ್ಯಯನ ಕೈಗೊಳ್ಳಲಾಗುವುದು. ಅಗತ್ಯ ಕಂಡುಬಂದರೆ ಅವುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು. ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಅಗತ್ಯವಿರುವ ಹಣ ಬಿಡುಗಡೆ ಮಾಡಲಾಗುವುದು.ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣ ಇದೆ. ಜಾನುವಾರುಗಳಿಗೆ ಮುಂದಿನ 16 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವೂ ಇದೆ ಎಂದು ಮುಖ್ಯಮಂತ್ರಿ ವಿವರಿಸಿದರು.ನೀರಿನ ಮಟ್ಟ ಕುಸಿತ: ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಬೆಳಗಾವಿಯ ಹಿಡಕಲ್ ಜಲಾಶಯ ಬತ್ತಿಹೋಗುವ ಸ್ಥಿತಿಯಲ್ಲಿದೆ. ಕೃಷ್ಣರಾಜ ಸಾಗರ ಅಣೆಕಟ್ಟೆಯ ನೀರಿನ ಸಂಗ್ರಹ ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. ಈ ಹಂಗಾಮಿನಲ್ಲಿ 144 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದೇ 26ರವರೆಗೆ ನಿರೀಕ್ಷಿತ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದರು.ಬರ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಇದುವರೆಗೆ 1,976 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರಲ್ಲಿ 1,669 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸಲು ಇದುವರೆಗೆ 21 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಪಶು ಆಹಾರ ವಿತರಣೆಗೆ 5 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಅಂಕಿ ಅಂಶ ನೀಡಿದರು.ಕುಡಿಯುವ ನೀರಿನ ಸಮಸ್ಯೆ ಇರುವ ರಾಜ್ಯದ 686 ಗ್ರಾಮಗಳಿಗೆ 881 ಟ್ಯಾಂಕರ್‌ಗಳನ್ನು ಬಳಸಿ ನೀರು ಸರಬರಾಜು ಮಾಡಲಾಗುತ್ತಿದೆ. ಅಗತ್ಯ ಕಂಡುಬಂದರೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. 71 ಗೋಶಾಲೆಗಳನ್ನು ತೆರೆದು, 25 ಸಾವಿರ ಜಾನುವಾರುಗಳಿಗೆ ಆಸರೆ ಕಲ್ಪಿಸಲಾಗಿದೆ. 12 ಜಿಲ್ಲೆಗಳಲ್ಲಿ ಒಟ್ಟು 94 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಹೇಳಿದರು.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 8.30 ಲಕ್ಷ ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಬೇಡಿಕೆಗಿಂತ ಹೆಚ್ಚು ಅಂದರೆ 9.50 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ. 4.28 ಲಕ್ಷ ರೈತರಿಗೆ 1.17 ಲಕ್ಷ ಕ್ವಿಂಟಲ್ ಬಿತ್ತನೆ ಬೀಜವನ್ನು ಈಗಾಗಲೇ ವಿತರಿಸಲಾಗಿದೆ. 24.45 ಲಕ್ಷ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, 6.94 ಲಕ್ಷ ಟನ್ ದಾಸ್ತಾನು ಇದೆ. 3.47 ಲಕ್ಷ ಟನ್ ಗೊಬ್ಬರವನ್ನು ಈಗಾಗಲೇ ಸರಬರಾಜು ಮಾಡಲಾಗಿದೆ ಎಂದು ಹೇಳಿದರು.ಬರ ಪರಿಹಾರ ಕಾಮಗಾರಿಗಳಲ್ಲಿ ಕಾಂಗ್ರೆಸ್ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ ಮುಖ್ಯಮಂತ್ರಿಗಳು, `ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮತ್ತಿತರರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರಾದರೂ, ಕೇಂದ್ರದಿಂದ ರಾಜ್ಯಕ್ಕೆ ಅಗತ್ಯ ನೆರವು ಲಭಿಸಿಲ್ಲ~ ಎಂದು ದೂರಿದರು.ಪ್ರವಾಸಕ್ಕೆ ಸೂಚನೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಕ್ಷಣದಿಂದಲೇ ಪ್ರವಾಸ ಕೈಗೊಂಡು, ಬರ ಪರಿಸ್ಥಿತಿ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಬೇಕು ಎಂಬ ನಿರ್ದೇಶನ ನೀಡಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.