ಶುಕ್ರವಾರ, ಮೇ 14, 2021
35 °C

ಮುಂಗಾರು ಮುನಿಸು: ಬಾಡಿದ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರು ಮುನಿಸು: ಬಾಡಿದ ಹೆಸರು

ಯಾದಗಿರಿ: “ಮಳಿ ಬಂದಿದ್ರ ಇಷ್ಟ ಹೊತ್ತಿಗೆ ಹೆಸರ ಬಳ್ಳಿ ಮ್ಯಾಕ ಎಳತಿದ್ದುರಿ. ಏನೋ ಮಳಿ ಬಂದೀತು ಅಂತ ಹೆಸರ ಬಿತ್ತಿದ್ವಿ. ಈಗ ನೋಡಿದ್ರ ಮಳಿ ಲಕ್ಷಣ ಕಾಣವಾಲ್ದು. ಹೆಸರ ಬಾಡಿ ಹೊಂಟೈತಿ. ಏನ್ ಮಾಡೋದು ಅಂತ ತಿಳಿವಾಲ್ತ ನೋಡ್ರಿ”ತಾಲ್ಲೂಕಿನ ಚಾಮನಳ್ಳಿ ಗ್ರಾಮದ ರೈತರ ನೋವಿನ ಮಾತುಗಳಿವು. ನೀರಾವರಿ ಸೌಲಭ್ಯ ಇಲ್ಲದೇ ಇರುವ ಯಾದಗಿರಿ ತಾಲ್ಲೂಕಿನ ಬಹುತೇಕ ರೈತರು ಮಳೆಯಾಶ್ರಿತ ಕೃಷಿ ಅವಲಂಬಿಸಿದ್ದಾರೆ. ಆದರೆ ಈ ಬಾರಿಯೂ ಸಕಾಲಕ್ಕೆ ಮಳೆಯಾಗದೇ ಹಿನ್ನಡೆ ಅನುಭವಿಸಬೇಕಾಗಿದೆ.ಮುಂಗಾರು ಮುನಿಸಿಕೊಂಡ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡಿ ಹೋಗುತ್ತಿವೆ. ಜೂನ್ ತಿಂಗಳಲ್ಲಿ ವಾಡಿಕೆಯಂತೆ 117 ಮಿ.ಮೀ. ಮಳೆ ಆಗಬೇಕಿತ್ತು.ಆದರೆ ಕೇವಲ 28.3 ಮಿ.ಮೀ. ಮಳೆಯಾಗಿದೆ. ಅಲ್ಪ ಮಳೆ ಬಿದ್ದ ಹಿನ್ನೆಲೆಯಲ್ಲಿ ಮತ್ತೆ ಮಳೆ ಬರಬಹುದು ಎಂಬ ನಿರೀಕ್ಷೆಯಿಂದ ಬಹುತೇಕ ರೈತರು ಹೆಸರು ಬಿತ್ತನೆ ಮಾಡಿದ್ದಾರೆ.ಅದರಲ್ಲಿಯೂ ಹಂಗಾಮು ಮುಗಿದು ಹೋಗುವ ಭೀತಿಯಲ್ಲಿರುವ ರೈತರು, ತಂದಿಟ್ಟಿರುವ ಹೆಸರು ಬೀಜವನ್ನು ಬಿತ್ತನೆ ಮಾಡಿದ್ದಾರೆ. ಆದರೆ ವರುಣನ ಕೃಪೆ ಮಾತ್ರ ಇದುವರೆಗೆ ಸಿಗುತ್ತಿಲ್ಲ. ಇದರಿಂದಾಗಿ 2.68 ಲಕ್ಷ ಹೆಕ್ಟೇರ್ ಪೈಕಿ ಕೇವಲ 8,675 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ  ಬಿತ್ತನೆ ಸಾಧ್ಯವಾಗಿದೆ.“ಜೂನ್ ಮೊದಲ ವಾರದಾಗ ಮಳಿ ಬಂದಿದ್ರ ಭಾಳ ಚೊಲೋ ಆಕ್ಕಿತ್ರಿ. 45 ದಿನದಾಗ ಹೆಸರ ಕಟಾವಿಗೆ ಬರತಿತ್ತು. ಮಾರ್ಕೆಟ್‌ನ್ಯಾಗ ಒಳ್ಳೆ ರೇಟು ಸಿಗತಿತ್ತು. ಅಂತಾ ಆಸೆ ಇಟಗೊಂಡ ಬಿತ್ತನೆ ಮಾಡಿದ್ವಿ. ಆದರೆ ಮೃಗಶಿರ ಪ್ರವೇಶ ಮಾಡಿ ಒಂದು ವಾರ ಆದ್ರು, ಮಳಿ ಮಾತ್ರ ಬಂದಿಲ್ಲ.ಜಮೀನಿನ್ಯಾಗ ತೇವಾಂಶದ ಕಡಿಮಿ ಆಗೇತಿ. ಬೆಳಿ ಬಾಡಕತ್ತಾವು” ಎಂದು ರೈತ ಶರಣಪ್ಪ ತಮ್ಮ ಅಳಲು ತೋಡಿಕೊಳ್ಳುತ್ತಾರೆ.ಭೀಮಾ ಮತ್ತು ಕೃಷ್ಣಾ ನದಿಗಳ ಪಾತ್ರದಲ್ಲೂ ರೈತರು ಬತ್ತದ ನಾಟಿ ಮಾಡುತ್ತಿದ್ದಾರೆ. ಆದರೆ ಇನ್ನೂ ಎರಡು ನದಿಗಳ ಒಡಲು ಖಾಲಿ ಇದೆ. ಹೀಗಾಗಿ ಆ ರೈತರ ಮುಖದಲ್ಲೂ ಆತಂಕದ ಛಾಯೆ ಕಾಣುತ್ತಿವೆ.ಒಂದೆರಡು ದಿನಗಳಲ್ಲಿ ಮಳೆ ಬಾರದೇ ಇದ್ದಲ್ಲಿ ಜಿಲ್ಲೆಯ ಕೆಲ ಭಾಗದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.ಪ್ರಮುಖ ಬೆಳೆಗಳು ಬಿತ್ತನೆ ಆಗದ್ದರಿಂದ ಇನ್ನೂ ಬೆಳೆ ವಿಮೆ ಮಾಡಲು ಅವಕಾಶವಿಲ್ಲ. ಹೀಗಾಗಿ ಹೆಸರಿಗೆ ವಿಮಾ ಮಾಡಿಲ್ಲ. ಮಳೆ ಬಾರದೇ ಇದ್ದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾಳಾಗಲಿವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.