ಗುರುವಾರ , ಮೇ 6, 2021
33 °C

ಮುಂಜಾನೆ ಮಾತು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನಿನ್ನ ಗಂಡನಿಗೆ ಈ ಹಾರ್ಲಿಕ್ಸ್ ಕೊಡು~- ಮುಗುಳ್ನಗೆ ತುಂಬಿದ ದನಿಯಲ್ಲಿ ಮಾಳವಿಕಾ ಹಾಲು ತುಂಬಿದ ಲೋಟವನ್ನು ಮಂಜರಿ ಫಡ್ನಿಸ್ ಕೈಗೆ ಕೊಟ್ಟರು. ತಕ್ಷಣ ಕಟ್ ಹೇಳಿದ ನಿರ್ದೇಶಕ ನಾರಾಯಣ್ ಆ ಶಾಟ್‌ನಲ್ಲಾದ ತಪ್ಪನ್ನು ಸರಿಪಡಿಸಲು ಮುಂದಾದರು.ಮಂಜರಿಯ ಲಿಪ್‌ಸ್ಟಿಕ್ ಕಡಿಮೆ ಮಾಡಲು ಹೇಳಿ, ಹಾರ್ಲಿಕ್ಸ್ ಲೋಟ ಕೈಗೆ ತೆಗೆದುಕೊಳ್ಳುವಾಗ ಬಾಡಿದ ಮುಖ ಇರಬೇಕು ಎಂದು ಪಾಠ ಹೇಳಲಾರಂಭಿಸಿದರು. ಅವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುತ್ತಿದ್ದ ಮಂಜರಿ ನಡುನಡುವೆ ಸಂಭಾಷಣೆ ಪುಸ್ತಕದ ಮೇಲೆ ಕಣ್ಣಾಡಿಸುತ್ತಿದ್ದರು.ಇದು `ಮುಂಜಾನೆ~ ಚಿತ್ರಕ್ಕೆ ಮುಸ್ಸಂಜೆ ಸಮಯದಲ್ಲಿ ಚಿತ್ರೀಕರಣವಾಗುತ್ತಿದ್ದ ದೃಶ್ಯ.

ಅಡುಗೆ ಮನೆ ಸೆಟ್‌ನಲ್ಲಿ ಕಡುಕೇಸರಿ ಸೀರೆ ಉಟ್ಟಿದ್ದ ಮಂಜರಿ ಫಡ್ನಿಸ್, ಮುಖದ ತುಂಬಾ ಗಾಬರಿ ತುಂಬಿಕೊಂಡು ದೃಶ್ಯಕ್ಕೆ ತಾಲೀಮು ನಡೆಸುತ್ತಿದ್ದರು. ಗಣೇಶ್ ಕೂಲಾಗಿ ಕುಳಿತು ಪತ್ರಕರ್ತರಿಗೆ ಎದುರಾದರು.ಅಂದು ಬೆಳಿಗ್ಗೆ ಐದು ಗಂಟೆಗೆ ಮುಹೂರ್ತ ಮುಗಿಸಿದ್ದ ಚಿತ್ರತಂಡ ಸಂಜೆ ಪತ್ರಿಕಾಗೋಷ್ಠಿ ಕರೆದಿತ್ತು. ಲೋಕಾಭಿರಾಮ ಮಾತುಕತೆಯ ನಂತರ ನಿರ್ದೇಶಕ ನಾರಾಯಣ್ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಚಿತ್ರ ಮುಂಜಾನೆಯ ತಾಜಾತನ ಕಟ್ಟಿಕೊಡಲಿದೆ ಎಂದರು.`ಇದು ನನ್ನ ಮತ್ತು ಗಣೇಶ್ ಜೋಡಿಯ ಮೂರನೇ ಚಿತ್ರ. `ಚೆಲುವಿನ ಚಿತ್ತಾರ~ದ ನಂತರ ಅವರು ಸಿಕ್ಕಿರಲಿಲ್ಲ. `ಶೈಲೂ~ ಚಿತ್ರೀಕರಣ ಸಮಯದಲ್ಲಿ ಅವರಿಗೆ ಈ ಚಿತ್ರದ ಕತೆ ಹೇಳಿದೆ. ತಕ್ಷಣ ಒಪ್ಪಿಕೊಂಡ ಅವರು ಈಗಾಗಲೇ ಕಮಿಟ್ ಆಗಿದ್ದ ಐದು ಸಿನಿಮಾ ನಿರ್ಮಾಪಕರನ್ನು ಕೋರಿಕೊಂಡು ನನಗೆ ಡೇಟ್ ಕೊಟ್ಟಿದ್ದಾರೆ. ಅದನ್ನು ಗುರು ಭಕ್ತಿ ಎಂದು ಅವರು ಹೇಳಿರುವುದು ನನ್ನ ಮೇಲಿನ ಹೊಣೆ ಹೆಚ್ಚಿಸಿದೆ~ ಎನ್ನುತ್ತಾ ಕೃತಾರ್ಥಭಾವ ತೋರಿದರು.`ಚಿತ್ರೀಕರಣ ಮುಗಿಸಿದ್ದರೂ `ಶೈಲೂ~ ಗುಂಗಿನಿಂದ ಹೊರಗೆ ಬರಲಾಗುತ್ತಿಲ್ಲ. ಸಂಬಂಧಗಳ ಮೌಲ್ಯಗಳನ್ನು `ಮುಂಜಾನೆ~ಯಲ್ಲಿ ತೋರಿಸುವ ಪ್ರಯತ್ನ ಮಾಡಿರುವೆ. ಹೀಗಿದ್ರೆ ಹ್ಯಾಗಿರುತ್ತೆ ಎಂಬ ಕಲ್ಪನೆ ಇಟ್ಟುಕೊಂಡು ಮೂರು ವರ್ಷದ ಹಿಂದೆ ಕತೆ ಬರೆದಿದ್ದೆ. ಚಿತ್ರದಲ್ಲಿ ಸಂಭಾಷಣೆ ಕಡಿಮೆ ಇದ್ದು ಭಾವನೆಗೆ ಹೆಚ್ಚು ಒತ್ತು ಇದೆ. ಗಣೇಶ್ ಮ್ಯಾನರಿಸಂಗೆ ತಕ್ಕಂಥ ದೃಶ್ಯಗಳೂ ಇವೆ~ ಎಂದು ಸ್ಪಷ್ಟಪಡಿಸಿದರು.`ಗಣೇಶ್‌ಗೆ ಚಿತ್ರದಲ್ಲಿ ಪ್ರೇಮಿಯ ಪಾತ್ರ.  ಅವರು ಮದುವೆ ನಂತರ ಪ್ರೀತಿ ಮಾಡುವರೋ ಮದುವೆಗೆ ಮುನ್ನ ಪ್ರೀತಿಸುವರೋ ಎಂಬುದು ಮಾತ್ರ ಸಸ್ಪೆನ್ಸ್~ ಎಂದ ನಾರಾಯಣ್ ಮೈಸೂರು ಮತ್ತು ಮಲೆನಾಡಿನಲ್ಲಿ ಚಿತ್ರೀಕರಣ ನಡೆಸಲು ಸಿದ್ಧಗೊಂಡಿದ್ದಾರೆ.ಗಂಟಲು ಸರಿ ಮಾಡಿಕೊಂಡು ಮಾತು ಆರಂಭಿಸಿದ ಗಣೇಶ್‌ಗೆ ತಾವು ಇದುವರೆಗೆ ನಟಿಸಿದ 18 ಸಿನಿಮಾಗಳ ರೊಮ್ಯಾಂಟಿಕ್ ಪಾತ್ರಗಳಿಗಿಂತ ಇದು ವಿಭಿನ್ನ ಅನಿಸಿದೆಯಂತೆ.`ಒಂದು ಕುಟುಂಬ ಯಶಸ್ಸಾಗಬೇಕಾದರೆ ಅದರಲ್ಲಿ ಎಲ್ಲರ ತ್ಯಾಗ ಇರುತ್ತದೆ. ಅವರಲ್ಲಿ ಒಬ್ಬೊಬ್ಬರೂ ಒಂಟಿಯಾಗಿ ಕುಳಿತಾಗ ಬೇರೆಯವರ ತ್ಯಾಗಗಳ ಅರಿವಾಗುತ್ತದೆ. ಆದರೆ ಆ ತ್ಯಾಗದ ಹಿಂದೆ ಕುಟುಂಬದ ನೆಮ್ಮದಿ ಅಡಗಿರುತ್ತದೆ. ಅಂಥದೊಂದು ಕಥೆ `ಮುಂಜಾನೆ~ಯದು. ಇದು ಬೇರೆಯದೇ ಆ್ಯಂಗಲ್ ಲವ್ ಸ್ಟೋರಿ. ಒಬ್ಬರನ್ನೊಬ್ಬರು ನೋಡದೇ ನಡೆಯುವ ಪ್ರೇಮಕತೆ ಇದರಲ್ಲಿದೆ. ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕುವ ಪಾತ್ರ ನನ್ನದು. ನಟನಾಗಿ ಇದು ನನಗೆ ಬೇರೆಯದೇ ಅನುಭವ ನೀಡುತ್ತಿದೆ~ ಎಂದು ವಿವರಿಸಿದರು.`ಜಾನೇ ತು ಯಾ ಜಾನೇನ~ ನಂತರ ಮೂರು ತೆಲುಗು ಸಿನಿಮಾಗಳಲ್ಲಿ ನಟಿಸಿದ ಮಂಜರಿ ಫಡ್ನಿಸ್ `ಮುಂಜಾನೆ~ಯ ನಾಯಕಿ.ಮುಗುಳ್ನಗುತ್ತಾ ಮಾತು ಆರಂಭಿಸಿದ ಮಂಜರಿ `ಇಂಥ ಒಳ್ಳೆಯ ಬ್ಯಾನರ್‌ನಲ್ಲಿ ನಟಿಸುತ್ತಿರುವುದು ಸಂತಸ. ಸ್ಕ್ರಿಪ್ಟ್ ಬಗ್ಗೆ ಏನನ್ನೂ ಹೇಳಬಾರದು ಎಂದು ನಿರ್ದೇಶಕರು ತಾಕೀತು ಮಾಡಿದ್ದಾರೆ~ ಎನ್ನುತ್ತಾ ನಾರಾಯಣ್ ಹಾಕಿದ ಗೆರೆಯನ್ನು ದಾಟಲಾಗದೆಂಬಂತೆ ಮಾತು ಮುಗಿಸಿದರು.ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ರಾಜಗೋಪಾಲ ಜೋಶಿ ತಮ್ಮನ್ನು ನಾರಾಯಣ್ ಗುರುತಿಸಿದ್ದಕ್ಕೆ ಸಂತಸಪಟ್ಟರು. ಅವರು ಚಿತ್ರದಲ್ಲಿ ಗಣೇಶ್ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಂಡ ಗಣೇಶ್ ಅಮ್ಮನ ಪಾತ್ರಧಾರಿ ಮಾಳವಿಕಾ ಪತ್ರಿಕಾಗೋಷ್ಠಿಯಲ್ಲಿ ಇರಲಿಲ್ಲ. ಛಾಯಾಗ್ರಾಹಕ ಜಗದೀಶ್ ವಾಲಿ ಕೂಡ `ಶೈಲೂ~ ಹ್ಯಾಂಗೋವರ್‌ನಿಂದ ಹೊರಬರಲಾಗದ ಮನಸ್ಥಿತಿಯಲಿದ್ದಾರಂತೆ. ಅದರ ನಡುವೆಯೇ `ಮುಂಜಾನೆ~ಯನ್ನು ಕಲರ್‌ಫುಲ್ ಮಾಡುವ ಸವಾಲಿಗೆ ಅವರು ಎದೆಗೊಡುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.