ಗುರುವಾರ , ಫೆಬ್ರವರಿ 25, 2021
29 °C
ದೋನಿ, ರೋಹಿತ್‌ ಬಳಗಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ; ಪ್ರಬಲ ಪೈಪೋಟಿಯ ನಿರೀಕ್ಷೆ

ಮುಂಬೈಗೆ ಸೂಪರ್‌ ಕಿಂಗ್ಸ್‌ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈಗೆ ಸೂಪರ್‌ ಕಿಂಗ್ಸ್‌ ಸವಾಲು

ಮುಂಬೈ (ಪಿಟಿಐ): ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಎರಡು ಬಾರಿಯ ಪ್ರಶಸ್ತಿ ವಿಜೇತ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಐಪಿಎಲ್‌ ಟೂರ್ನಿಯ ‘ಎಲಿಮಿನೇಟರ್‌’ ಪಂದ್ಯದಲ್ಲಿ ಬುಧವಾರ ಪರಸ್ಪರ ಎದುರಾಗಲಿವೆ.ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಸೋಲು ಅನುಭವಿಸುವ ತಂಡದ ಪ್ರಶಸ್ತಿಯ ಕನಸು ನುಚ್ಚುನೂರಾಗಲಿದೆ. ಗೆಲ್ಲುವ ತಂಡ ‘ಕ್ವಾಲಿಫೈಯರ್‌2’ ಪಂದ್ಯದಲ್ಲಿ ಆಡಲು ಅರ್ಹತೆ ಗಿಟ್ಟಿಸಲಿದೆ. ರೋಹಿತ್‌ ಶರ್ಮ ನೇತೃತ್ವದ ಮುಂಬೈ ಕೊನೆಯ ಲೀಗ್‌ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ‘ಪ್ಲೇ ಆಫ್‌’ ಹಂತ ಪ್ರವೇಶಿಸಿತ್ತು. ಮಹೇಂದ್ರ ಸಿಂಗ್‌ ದೋನಿ ನೇತೃತ್ವದ ಸೂಪರ್ ಕಿಂಗ್ಸ್‌ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು.ಭಾನುವಾರ ನಡೆದ ಅಂತಿಮ ಲೀಗ್‌ ಪಂದ್ಯದಲ್ಲಿ ಮುಂಬೈ ತಂಡ ರಾಜಸ್ತಾನ ರಾಯಲ್ಸ್‌ ಎದುರು ಐದು ವಿಕೆಟ್‌ಗಳ ಜಯ ಸಾಧಿಸಿತ್ತು. 14.4 ಓವರ್‌ ಗಳಲ್ಲಿ 190 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೇ ರೀತಿಯ ಆಟವನ್ನು ಮುಂದುವರಿಸಿಕೊಂಡು ಹೋಗುವುದು ಮುಂಬೈ ತಂಡದ ಲೆಕ್ಕಾಚಾರ. ಆದರೆ ಪ್ರಮುಖ ಆಟಗಾರರನ್ನು ಒಳಗೊಂಡಿರುವ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ.ಆರಂಭಿಕ ಆಟಗಾರರ ಮೇಲೆ ಭರವಸೆ: ಈ ಪಂದ್ಯದಲ್ಲಿ ಎರಡೂ ತಂಡಗಳು ಆರಂಭಿಕ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಉತ್ತಮ ಆರಂಭ ದೊರೆತರೆ ಗೆಲುವು ಸಾಧ್ಯ ಎಂಬುದು ಉಭಯ ತಂಡಗಳಿಗೆ ತಿಳಿದಿದೆ.ಆಸ್ಟ್ರೇಲಿಯಾದ ಮೈಕ್‌ ಹಸ್ಸಿ ಮತ್ತು ವೆಸ್ಟ್‌ ಇಂಡೀಸ್‌ನ ಲೆಂಡ್ಲ್‌ ಸಿಮನ್ಸ್‌ ಅವರು ಕೆಲವು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್‌ಗೆ ಉತ್ತಮ ಆರಂಭ ನೀಡಿದ್ದಾರೆ. ಟೂರ್ನಿಯಲ್ಲಿ ಶತಕ ಗಳಿಸಿರುವ ಏಕೈಕ ಬ್ಯಾಟ್ಸ್‌ಮನ್ ಸಿಮನ್ಸ್‌ ಮಾತ್ರ. ಅವರು ಆರಂಭದಲ್ಲೇ ಸೂಪರ್‌ ಕಿಂಗ್ಸ್‌ ತಂಡದ ಬೌಲಿಂಗ್‌ನ ದಿಕ್ಕುತಪ್ಪಿಸಲು ಪ್ರಯತ್ನಿಸಲಿದ್ದಾರೆ.ರೋಹಿತ್‌ ಶರ್ಮ, ಅಂಬಟಿ ರಾಯುಡು ಮತ್ತು ಕೀರನ್‌ ಪೊಲಾರ್ಡ್‌ ವೇಗವಾಗಿ ರನ್‌ ಗಳಿಸುವ ತಾಕತ್ತು ಹೊಂದಿದ್ದಾರೆ. ಆದರೆ ಈ ಪಂದ್ಯದಲ್ಲಿ ಎಲ್ಲರ ಚಿತ್ತ ಹರಿದಿರುವುದು ನ್ಯೂಜಿಲೆಂಡ್‌ನ ಕೋರಿ ಆ್ಯಂಡರ್‌ಸನ್‌ ಮೇಲೆ. ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು ಅತಿಯಾದ ಒತ್ತಡದ ನಡುವೆ ಯೂ ಅದ್ಭುತ ಆಟ ತೋರಿ 44 ಎಸೆತಗಳಲ್ಲಿ 95 ರನ್‌ ಸಿಡಿಸಿದ್ದರು.ಸೂಪರ್‌ ಕಿಂಗ್ಸ್‌ ತಂಡದ ಆರಂಭಿಕ ಆಟಗಾರ ರಾದ ಡ್ವೇನ್‌ ಸ್ಮಿತ್‌ ಮತ್ತು ಬ್ರೆಂಡನ್‌ ಮೆಕ್ಲಮ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ವೆಸ್ಟ್‌ ಇಂಡೀಸ್‌ ನ ಸ್ಮಿತ್‌ ಇದುವರೆಗೆ 501 ರನ್‌ ಕಲೆಹಾಕಿದ್ದಾರೆ. ಮೆಕ್ಲಮ್‌ (380) ಕೂಡಾ ಪ್ರದ ರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ಬ್ಯಾಟ್ಸ್‌ಮನ್‌.ಇವರಿಂದ ಉತ್ತಮ ಆರಂಭ ದೊರೆತರೆ ಬಳಿಕ ಬರುವ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಫಾಫ್‌ ಡು ಪ್ಲೆಸಿಸ್‌, ಸುರೇಶ್‌ ರೈನಾ, ದೋನಿ ಮತ್ತು ಡೇವಿಡ್‌ ಹಸ್ಸಿ ಕೊನೆಯ ಓವರ್‌ಗಳಲ್ಲಿ ಮಿಂಚಿನ ಆಟ ತೋರಬಲ್ಲರು.ಬೌಲಿಂಗ್‌ನಲ್ಲಿ ಚೆನ್ನೈ ಬಲಿಷ್ಠ: ಬೌಲಿಂಗ್‌ ವಿಭಾಗವನ್ನು ನೋಡಿದಾಗ ಸೂಪರ್‌ ಕಿಂಗ್ಸ್‌ ತಂಡ ಅಲ್ಪ ಬಲಿಷ್ಠವಾಗಿ ಕಾಣುತ್ತದೆ. ಮೋಹಿತ್‌ ಶರ್ಮ, ಆರ್‌. ಅಶ್ವಿನ್‌ ಮತ್ತು ರವೀಂದ್ರ ಜಡೇಜ ಪ್ರಭಾವಿ ಪ್ರದರ್ಶನ ನೀಡಿದ್ದಾರೆ. ಮೋಹಿತ್‌ ಹಲವು ಪಂದ್ಯಗಳಲ್ಲಿ ತಂಡಕ್ಕೆ ಆರಂಭದಲ್ಲೇ ಯಶಸ್ಸು ತಂದಿತ್ತಿದ್ದಾರೆ.ಲಸಿತ್‌ ಮಾಲಿಂಗ ಅನುಪಸ್ಥಿತಿಯಲ್ಲಿ ಮುಂಬೈ ತಂಡದ ಬೌಲಿಂಗ್‌ ವಿಭಾಗ  ಬಲ ಕಳೆದುಕೊಂಡಿದೆ. ಮಾಲಿಂಗ ಅವರು ಇಂಗ್ಲೆಂಡ್‌ ಪ್ರವಾಸ ಕೈಗೊಂಡಿ ರುವ ಶ್ರೀಲಂಕಾ ತಂಡದಲ್ಲಿದ್ದಾರೆ. ಮಾಲಿಂಗ ಇಲ್ಲದೇ ಇರುವುದು ಸೂಪರ್‌ ಕಿಂಗ್ಸ್‌ ಬ್ಯಾಟ್ಸ್‌ ಮನ್‌ಗಳಲ್ಲಿ ಸಂತಸಕ್ಕೆ ಕಾರಣವಾಗಿರುವುದು ನಿಜ.ಜಹೀರ್‌ ಖಾನ್‌ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಪ್ರವೀಣ್‌ ಕುಮಾರ್‌ ಗಾಯಗೊಂಡಿ ದ್ದಾರೆ. ಅವರು ಬುಧವಾರ ಕಣಕ್ಕಿಳಿಯುವರೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದ್ದರಿಂದ ಹರಭಜನ್‌ ಸಿಂಗ್‌ ಮೇಲಿನ ಜವಾಬ್ದಾರಿ ಹೆಚ್ಚಿದೆ. ಕರ್ನಾಟಕದ ಯುವ ಬೌಲರ್‌ ಶ್ರೇಯಸ್‌ ಗೋಪಾಲ್‌, ಜಸ್‌ಪ್ರೀತ್‌ ಬುಮ್ರಾ ಮತ್ತು ಪ್ರಗ್ಯಾನ್‌ ಓಜಾ ಅವರು ಹರಭಜನ್‌ಗೆ ಬೆಂಬಲ ನೀಡಲಿದ್ದಾರೆ.ಲೀಗ್‌ ಹಂತದಲ್ಲಿ ಇವೆರಡು ತಂಡಗಳು ಪರಸ್ಪರ ಎದುರಾಗಿದ್ದಾಗ ಎರಡೂ ಬಾರಿ ಸೂಪರ್‌ ಕಿಂಗ್ಸ್‌ ತಂಡ ಗೆಲುವು ಸಾಧಿಸಿತ್ತು. ಆದ್ದರಿಂದ ಇಂದಿನ ಪಂದ್ಯ ಮುಂಬೈ ಇಂಡಿಯನ್ಸ್‌ಗೆ ಮುಯ್ಯಿ ತೀರಿಸುವ ಅವಕಾಶವನ್ನು ನೀಡಿದೆ.ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಮೂರು ವರ್ಷಗಳ ಬಿಡುವಿನ ಬಳಿಕ ಐಪಿಎಲ್‌ ಪಂದ್ಯ ನಡೆಯಲಿದೆ. 2010ರ ಐಪಿಎಲ್‌ ಋತುವಿನಲ್ಲಿ ಈ ಕ್ರೀಡಾಂಗಣ ಮುಂಬೈ ಇಂಡಿಯನ್ಸ್‌ನ ತವರು ಅಂಗಳ ಎನಿಸಿತ್ತು. ಮಾತ್ರವಲ್ಲ, ಎಲ್ಲ ಏಳು ಪಂದ್ಯಗಳು ಈ ಅಂಗಳದಲ್ಲಿ ನಡೆದಿದ್ದವು.ಆರಂಭ: ರಾತ್ರಿ 8.00ಕ್ಕೆ ನೇರ ಪ್ರಸಾರ: ಸೋನಿ ಸಿಕ್ಸ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.