ಭಾನುವಾರ, ಜೂಲೈ 12, 2020
28 °C

ಮುಂಬೈ ದಾಳಿ: ಹೆಡ್ಲಿ ಪಾತ್ರ- ಪೊಲೀಸರ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ (26/11) ತನ್ನ ಪಾತ್ರ ಇದೆ ಎಂದು ಅಮೆರಿಕದ ಷಿಕಾಗೊ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಡೇವಿಡ್ ಹೆಡ್ಲಿ ಹೇಳಿಕೆ ನೀಡಿದ ಮೇಲೆಯೂ ಮುಂಬೈ ಪೊಲೀಸರು ಹೆಡ್ಲಿಯ ಪಾತ್ರದ ಬಗ್ಗೆ ದಿವ್ಯ ಮೌನ ವಹಿಸಿರುವುದು ಅಚ್ಚರಿ ತಂದಿದೆ.ಬಾಂಬೆ ಹೈಕೋರ್ಟ್‌ನಲ್ಲಿ 26/11ರ ದಾಳಿಯ ಇಬ್ಬರು ಆರೋಪಿಗಳಾದ ಫಾಹಿಂ ಅನ್ಸಾರಿ ಮತ್ತು ಸಬಾಹುದ್ದೀನ್ ಅವರನ್ನು ಆರೋಪಮುಕ್ತಗೊಳಿಸುವ ವಿಚಾರದಲ್ಲಿ ಮುಂಬೈ ಪೊಲೀಸ್‌ನ ಅಪರಾಧ ವಿಭಾಗ ಇಲ್ಲಿಯ ತನಕ ಯಾವುದೇ ಉತ್ತರ ನೀಡದಿರುವುದೇ ಈ ಸಂಶಯ ಮೂಡಲು ಕಾರಣವಾಗಿದೆ. ಪೊಲೀಸರು ಈ ಮೂಲಕ ಮುಂಬೈ ದಾಳಿಯ ಹಿಂದೆ ಹೆಡ್ಲಿಯ ಕೈವಾಡ ಇಲ್ಲ ಎಂದೇ ಹೇಳುತ್ತಿರುವ ಭಾವನೆ ಕಂಡುಬಂದಿದೆ.26/11ಕ್ಕೆ ಸಂಬಂಧಿಸಿದಂತೆ ಹೆಡ್ಲಿಯನ್ನು ವಶಕ್ಕೆ ಪಡೆಯಲು ಗೃಹ ಸಚಿವಾಲಯ ಭಾರಿ ಪ್ರಯತ್ನ ನಡೆಸಿರುವಂತೆಯೇ ಪೊಲೀಸ್ ಇಲಾಖೆಯಿಂದ ಈ ರೀತಿಯ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬೈಯಲ್ಲಿ ದಾಳಿ ನಡೆಸಬೇಕಾದ ಸ್ಥಳಗಳ ಬಗ್ಗೆ ಹೆಡ್ಲಿ ಸಮೀಕ್ಷೆ ನಡೆಸಿದ್ದ ಮತ್ತು ವಿಡಿಯೊ ಚಿತ್ರೀಕರಣ ಕೂಡ ಮಾಡಿದ್ದ. ಅದೇ ಆಧಾರದಲ್ಲಿ ಅನ್ಸಾರಿ ದಾಳಿ ನಡೆಯಬೇಕಾದ ಸ್ಥಳಗಳ ರೇಖಾಚಿತ್ರ ರಚಿಸಿದ್ದ.‘ಅನ್ಸಾರಿ ಮತ್ತು ಸಬಾಹುದ್ದೀನ್ ಅವರೇ ನಕಾಶೆ ರಚಿಸಿದ್ದರು.  ಹತನಾದ ಉಗ್ರ ಅಬು ಇಸ್ಮಾಯಿಲ್‌ನ ಜೇಬಿನಲ್ಲಿ ಇಂತಹ ಒಂದು ನಕಾಶೆ ಲಭಿಸಿತ್ತು. ಅದರಲ್ಲಿದ್ದ ಕೈಬರಹ ಅನ್ಸಾರಿಯದೇ’ ಎಂದು ಸರ್ಕಾರಿ ವಕೀಲ ಉಜ್ವಲ್ ನಿಕ್ಕಂ ಪ್ರತಿಪಾದಿಸಿದ್ದರು. ಆದರೆ ಇದಕ್ಕಿಂತ ಉತ್ತಮ ಇಂಟರ್‌ನೆಟ್‌ನಲ್ಲಿ ಸಿಗುತ್ತದೆ ಎಂದು ಹೇಳಿ ವಿಶೇಷ ನ್ಯಾಯಾಧೀಶ ಎಂ. ಎಲ್. ತೆಹಲಿಯಾನಿ ಅವರು ಅವರಿಬ್ಬರನ್ನೂ ಆರೋಪಮುಕ್ತಗೊಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.