ಮಂಗಳವಾರ, ಮಾರ್ಚ್ 2, 2021
23 °C
ಭಾರತ ಹಾಕಿ ತಂಡದ ಕಳಪೆ ಪ್ರದರ್ಶನ; ಮೂರು ವರ್ಷ ಬಾಕಿ ಇರುವಂತೆಯೇ ಒಪ್ಪಂದ ರದ್ದು

ಮುಖ್ಯ ಕೋಚ್ ಮೈಕಲ್ ನಾಬ್ಸ್ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯ ಕೋಚ್ ಮೈಕಲ್ ನಾಬ್ಸ್ ವಜಾ

ನವದೆಹಲಿ (ಪಿಟಿಐ/ಐಎಎನ್‌ಎಸ್):  ಮಹತ್ವದ ನಿರ್ಧಾರವೊಂದರಲ್ಲಿ `ಹಾಕಿ ಇಂಡಿಯಾ' ಭಾರತ ಹಾಕಿ ತಂಡದ ಮುಖ್ಯ ಕೋಚ್ ಮೈಕಲ್ ನಾಬ್ಸ್ ಅವರನ್ನು ಮಂಗಳವಾರ ವಜಾಗೊಳಿಸಿದೆ. ನಾಬ್ಸ್ ಅವರ ಮಾರ್ಗದರ್ಶದಲ್ಲಿ ಭಾರತ ತಂಡ ಇತ್ತೀಚಿನ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದು ಇದಕ್ಕೆ ಮುಖ್ಯ ಕಾರಣ.ಭಾರತ ಕ್ರೀಡಾ ಪ್ರಾಧಿಕಾರದೊಂದಿಗೆ (ಎಸ್‌ಎಐ) ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿದೆ. ನಾಬ್ಸ್ ಅವರೊಂದಿಗೆ `ಹಾಕಿ ಇಂಡಿಯಾ' ಮಾಡಿಕೊಂಡಿದ್ದ ಐದು ವರ್ಷಗಳ ಒಪ್ಪಂದ 2016ರ ರಿಯೋ ಡಿ ಜನೈರೊ ಒಲಿಂಪಿಕ್ಸ್ ಬಳಿಕ ಅಂತ್ಯಗೊಳ್ಳಬೇಕಿತ್ತು. ಆದರೆ ಪರ್ಗತ್ ಸಿಂಗ್ ಹಾಗೂ ಜೋಕಿಮ್ ಕರ್ವಾಲೊ ಸೇರಿದಂತೆ ಪ್ರಮುಖ ಮಾಜಿ ಆಟಗಾರರಿಂದ ಹೆಚ್ಚಿನ ಒತ್ತಡ ಕಾರಣ `ಹಾಕಿ ಇಂಡಿಯಾ' ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.ಹಾಲೆಂಡ್‌ನಲ್ಲಿ ನಡೆದ ವಿಶ್ವ ಹಾಕಿ ಲೀಗ್‌ನಲ್ಲಿ ಭಾರತ ತೀರಾ ಕಳಪೆ ಪ್ರದರ್ಶನ ನೀಡಿದ್ದು ಮಾಜಿ ಆಟಗಾರರನ್ನು ಕೆರಳಿಸಿತ್ತು. ಈ ಸೋಲಿನಿಂದಾಗಿ 2014ರ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಸರ್ದಾರ್ ಸಿಂಗ್ ಸಾರಥ್ಯದ ತಂಡ ಕಳೆದುಕೊಂಡಿತ್ತು (ಮುಂಬರುವ ಏಷ್ಯಾ ಕಪ್‌ನಲ್ಲಿ ಗೆದ್ದರೆ ಮಾತ್ರ ಅರ್ಹತೆ ಪಡೆಯಲು ಕೊನೆಯ ಅವಕಾಶವಿದೆ).ನೂತನ ಕೋಚ್ ನೇಮಕವಾಗುವವರೆಗೆ ಹಾಲೆಂಡ್‌ನ ರೋಲೆಂಟ್ ಒಲ್ಟಮಸ್ ಅವರಿಗೆ ತಂಡದ ಜವಾಬ್ದಾರಿ ವಹಿಸಲಾಗಿದೆ. ನಾಬ್ಸ್ ಕೋಚ್ ಆಗಿದ್ದಾಗ ಒಲ್ಟಮಸ್ ಪ್ರದರ್ಶನ ವೃದ್ಧಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮಾರ್ಗದರ್ಶನದಲ್ಲೇ ಬೆಂಗಳೂರಿನಲ್ಲಿ ಜುಲೈ 16ರಿಂದ ಆಗಸ್ಟ್ 16ರವರೆಗೆ ಭಾರತ ತಂಡದ ಶಿಬಿರ ನಡೆಯಲಿದೆ. ಈ ಹಿಂದಿನ ವಿದೇಶದ ಕೋಚ್‌ಗಳಾದ ಸ್ಪೇನ್‌ನ ಜೋಸ್ ಬಸ್ರಾ, ಆಸ್ಟ್ರೇಲಿಯಾದ ರಿಕಿ ಚಾರ್ಲ್ಸ್‌ವರ್ಥ್ ಹಾಗೂ ಜರ್ಮನಿಯ ಗೆರಾರ್ಡ್ ರಾಚ್ ಅವರನ್ನು ಕೂಡ ವಜಾಗೊಳಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.`ತಂಡದ ಪ್ರದರ್ಶನದ ಬಗ್ಗೆ ಹಾಕಿ ಇಂಡಿಯಾ ಹಾಗೂ ಎಸ್‌ಎಐ ಅಧಿಕಾರಗಳು ಪರಿಶೀಲನೆ ನಡೆಸಿದರು. ತಂಡ ಸುಧಾರಣೆಯನ್ನೇ ಕಾಣುತ್ತಿಲ್ಲ ಎಂಬುದು ನಮ್ಮ ಅರಿವಿಗೆ ಬಂದಿದೆ. ತಂಡ ನಿಂತ ನೀರಿನಂತಾಗಿದೆ. ಅದು ಮುಂದಕ್ಕೆ ಹೋಗಲು ಹೊಸ ಯೋಜನೆಗಳ ಅಗತ್ಯವಿದೆ. ಈ ಕಾರಣ ನಾಬ್ಸ್ ಅವರನ್ನು ಜಬಾವ್ದಾರಿಯಿಂದ ಬಿಡುಗಡೆಗೊಳಿಸಲು ನಿರ್ಧರಿಸಿದೆವು. ಸದ್ಯ ಅವರು ಒಂದು ತಿಂಗಳ ನೋಟಿಸ್ ಅವಧಿಯಲ್ಲಿದ್ದಾರೆ' ಎಂದು `ಹಾಕಿ ಇಂಡಿಯಾ'ದ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ನುಡಿದರು.`ಸಭೆಯ ವೇಳೆ ಸ್ವತಃ ನಾಬ್ಸ್ ರಾಜೀನಾಮೆ ನೀಡಲು ಮುಂದೆ ಬಂದಿದ್ದರು. ಅವರ ಕೋಚಿಂಗ್ ಶೈಲಿಯಲ್ಲಿ ಕೆಲ ಸಮಸ್ಯೆಗಳಿದ್ದವು. ಒಲ್ಟಮಸ್ ಅದನ್ನು ಪತ್ತೆ ಹಚ್ಚಿದ್ದರು. ಅದನ್ನು ಸರಿಪಡಿಸಲು ನಾಬ್ಸ್ ಅವರಿಗೆ ಸಾಧ್ಯವಾಗಲಿಲ್ಲ. ಈ ಕಾರಣ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಪರಸ್ಪರ ಒಪ್ಪಿಗೆಯಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಸದ್ಯ ನಾಬ್ಸ್ ಆಸ್ಟ್ರೇಲಿಯಾದಲ್ಲಿದ್ದಾರೆ' ಎಂದು ಅವರು ಹೇಳಿದರು.

`ನೂತನ ಕೋಚ್ ನೇಮಕವಾಗುವವರೆಗೆ ಒಲ್ಟಮಸ್ ಅವರು ತಂಡದ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರದರ್ಶನ ವೃದ್ಧಿ ಮ್ಯಾನೇಜರ್ ಆಗಿಯೂ ಮುಂದುವರಿಯಲಿದ್ದಾರೆ. ಎಂ.ಕೆ.ಕೌಶಿಕ್ ದೇಶಿ ಕೋಚ್ ಆಗಿರುತ್ತಾರೆ. 2-3 ತಿಂಗಳಲ್ಲಿ ಮುಖ್ಯ ಕೋಚ್ ಆಯ್ಕೆ ಮಾಡುತ್ತೇವೆ' ಎಂದು ಬಾತ್ರಾ ವಿವರಿಸಿದರು.`ಒಂದು ತಿಂಗಳ ನೋಟಿಸ್ ಅವಧಿ ಮುಗಿದ ಮೇಲೆ ನಾಬ್ಸ್ ಅವರೊಂದಿಗಿನ ಒಪ್ಪಂದವನ್ನು ರದ್ದುಪಡಿಸಲಾಗಿದೆ. ಯಾವಾಗ ಬೇಕಾದರೂ ರದ್ದು ಮಾಡಬಹುದು ಎಂಬ ಅಂಶ ಒಪ್ಪಂದದ ಪತ್ರದಲ್ಲಿದೆ. ಒಂದು ತಿಂಗಳ ನೋಟಿಸ್ ನೀಡಿ ಈ ರೀತಿ ಮಾಡಬಹುದು. ಹಾಕಿ ಇಂಡಿಯಾದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಾಗಿದೆ. ನಾಬ್ಸ್ ಅವರು ಎಸ್‌ಎಐನಿಂದ ವೇತನ ಪಡೆಯುತ್ತಿದ್ದರು' ಎಂದು ಭಾರತ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಜಿಜಿ ಥಾಮ್ಸನ್ ನುಡಿದರು.`ಕೌಶಿಕ್ ಅವರನ್ನು  ಕೋಚ್ ಆಗಿ ನೇಮಿಸುವಂತೆ ಹಾಕಿ ಇಂಡಿಯಾ ಬರೆದಿರುವ ಶಿಫಾರಸು ಪತ್ರ ಈಗಷ್ಟೇ ನಮ್ಮ ಕೈಸೇರಿದೆ. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಒಂದು ವಾರ ಬೇಕು. ಇದಕ್ಕೆ ಕ್ರೀಡಾ ಸಚಿವಾಲಯದ ಅನುಮತಿ ಪಡೆಯಬೇಕು' ಎಂದೂ ಅವರು ಹೇಳಿದರು.

`ನಾನೇ ರಾಜೀನಾಮೆ ನೀಡಿದ್ದು'

ನವದೆಹಲಿ (ಪಿಟಿಐ): `ನನ್ನನ್ನು ಯಾರೂ ವಜಾಗೊಳಿಸಿಲ್ಲ; ಬದಲಾಗಿ ಖುದ್ದಾಗಿ ರಾಜೀನಾಮೆ ನೀಡಿದ್ದೇನೆ. ಅನಾರೋಗ್ಯದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇನೆ' ಎಂದು ಮೈಕಲ್ ನಾಬ್ಸ್ ತಿಳಿಸಿದರು. `ನಾನು ಭಾರತ ಹಾಕಿ ತಂಡವನ್ನು ತುಂಬಾ ಪ್ರೀತಿಸುತ್ತೇನೆ. ಹಾಗಾಗಿ ಅದಕ್ಕೆ ಧಕ್ಕೆ ತರಲು ನಾನು ಇಷ್ಟಪಡುವುದಿಲ್ಲ. ಅನಾರೋಗ್ಯಕ್ಕೆ ಒಳಗಾಗಿರುವ ನಾನು ಪೂರ್ಣ ಗಮನ ಹರಿಸಲು ಸಾಧ್ಯವಾಗುವುದಿಲ್ಲ' ಎಂದು ಸದ್ಯ ಆಸ್ಟ್ರೇಲಿಯಾದಲ್ಲಿರುವ ಅವರು ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ನಾಬ್ಸ್ ಒಬ್ಬರೇ ಕಾರಣರಲ್ಲ...

ನಾಬ್ಸ್ ಅವರನ್ನು ವಜಾಗೊಳಿಸಿರುವುದು ಸ್ವಾಗತಾರ್ಹ. ಆದರೆ ಭಾರತ ತಂಡದ ಕಳಪೆ ಪ್ರದರ್ಶನಕ್ಕೆ ಅವರೊಬ್ಬರೇ ಕಾರಣರಲ್ಲ. ಉತ್ತಮ ವ್ಯವಸ್ಥೆ ಇರಬೇಕು. ತಳಮಟ್ಟದಲ್ಲಿಯೇ ಇಲ್ಲಿ ಸಮಸ್ಯೆ ಇದೆ. ರಾಷ್ಟ್ರೀಯ ಟೂರ್ನಿಗಳಲ್ಲಿ ಕೆಲ ತಂಡಗಳು 20-0 ಗೋಲುಗಳಿಂದ ಗೆಲ್ಲುತ್ತವೆ. ಹಾಗಾಗಿ ಸೋತ ತಂಡದ ಬಗ್ಗೆಯೂ ನಾವು ಚಿಂತಿಸಬೇಕು.

-ಪರ್ಗತ್ ಸಿಂಗ್ (ಭಾರತ ತಂಡದ ಮಾಜಿ ನಾಯಕ)ಕೌಶಿಕ್ ಅವರನ್ನು ಮುಖ್ಯ ಕೋಚ್ ಮಾಡಿ. ಈಗಾಗಲೇ ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ತಂಡ 1998ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿತ್ತು.

-ಜಾಫರ್ ಇಕ್ಬಾಲ್ (ಭಾರತ ತಂಡದ ಮಾಜಿ ನಾಯಕ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.