ಭಾನುವಾರ, ಫೆಬ್ರವರಿ 28, 2021
23 °C

ಮುದ್ದಣನ ನಂದಳಿಕೆಯ ನೋಡಬನ್ನಿ...

ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಮುದ್ದಣನ ನಂದಳಿಕೆಯ ನೋಡಬನ್ನಿ...

‘ಪದ್ಯಂ ವದ್ಯಂ ಗದ್ಯಂ ಹೃದ್ಯಂ’ ಎಂದ ಮುದ್ದಣ ಕವಿ ರಸಿಕತೆಯಿಂದಲೇ ಓದುಗರ ಮನಗೆದ್ದವನು. ಬಡತನದ ಬಿರುಬೇಗೆಯಲ್ಲಿ ಬೆಂದ ಮುದ್ದಣ ಸಾಹಿತ್ಯ ರಚನೆಯ ವಿಚಾರದಲ್ಲಿ ಶ್ರೀಮಂತ. ‘ರಾಮಾಶ್ವಮೇಧ’, ‘ರಾಮಪಟ್ಟಾಭಿಷೇಕ’, ‘ಅದ್ಭುತ ರಾಮಾಯಣ’ ಕೃತಿಗಳ ಜೊತೆಗೆ ರತ್ನಾವತಿ ಕಲ್ಯಾಣ ಮತ್ತು ಕುಮಾರ ವಿಜಯ ಯಕ್ಷಗಾನ ಪ್ರಸಂಗಗಳು ಆತ ಸಾಹಿತ್ಯಲೋಕಕ್ಕೆ ಕೊಟ್ಟ ಕೊಡುಗೆ.ಆತನ ಮೂಲ ಹೆಸರು ನಂದಳಿಕೆ ಲಕ್ಷ್ಮೀನಾರಣಪ್ಪ ಆದರೂ ಅಮ್ಮ ಕರೆಯುತ್ತಿದ್ದ ಮುದ್ದಿನ ಹೆಸರು ಮುದ್ದಣ. ಕೇವಲ 31 ವರ್ಷ ಬಾಳಿದ ಮುದ್ದಣನ ಸಾವಿಗೆ ಕ್ಷಯರೋಗ ಕಾರಣ. ಔಷಧಿಗಾಗಿ ಒಂದಿಷ್ಟು ಹಣ ಹೊಂದಿಸಲು ಪಾಡುಪಟ್ಟು, ಆಪ್ತರಿಗೆ ಬರೆದ ಪತ್ರಗಳೇ ಆತನ ವೈಯಕ್ತಿಕ ಬದುಕನ್ನು ತೆರೆದಿಡುತ್ತವೆ. ಉಡುಪಿ ಜಿಲ್ಲೆಯ ನಂದಳಿಕೆ ಎಂಬ ಕುಗ್ರಾಮದಲ್ಲಿ ಕೊನೆಗೂ 1901ರಲ್ಲಿ  ಮುದ್ದಣ ಕ್ಷಯಕ್ಕೆ ಬಲಿಯಾದ. ಆಸ್ಪತ್ರೆಯಿಲ್ಲದ, ಶಾಲೆಯಿಲ್ಲದ ನಂದಳಿಕೆ ಎಂಬ ಊರು ಮುದ್ದಣನ ಕಾಲಾನಂತರವೂ ಹಾಗೆಯೇ ಉಳಿದಿದೆಯೇ?ಈಗ ನಂದಳಿಕೆಗೆ ಬಂದು ನೋಡಿ–

ಭತ್ತದ ತೆನೆತುಂಬಿ ತಲೆದೂಗುವ ಗದ್ದೆಗಳು. ಗದ್ದೆ ಬದುವಿನ ಇಕ್ಕೆಲಗಳಲ್ಲಿ ಕೈಬೀಸಿದಂತೆ ನಿಂತಿರುವ ಸಾಲುಸಾಲು ತೆಂಗು. ಅಲ್ಲಲ್ಲಿ ತಲೆ ಎತ್ತಿರುವ ಕಂಗಿನ ತೋಟ... ಬಿಸಿಲುಕೋಲುಗಳ ನಡುವೆ ತೂರಿಕೊಂಡು ಶಾಲೆಗೆ ಓಡುವ ಮಕ್ಕಳು. ಠಣ್‌ ಅಂತ ಕೇಳಿಸುವ ಮಹಾಲಿಂಗೇಶ್ವರ ದೇವಸ್ಥಾನದ ಗಂಟೆ. ಊರಿಗೆ ಅಧ್ಯಕ್ಷನಂತೆ ನಿಂತಿರುವ ನಂದಳಿಕೆ ಚಾವಡಿ ಅರಮನೆ ಇತಿಹಾಸದ ವೈಭವವನ್ನು ಬಿಗುಮಾನದಿಂದ ಹೇಳುತ್ತಿದೆ. ನಂದಳಿಕೆ ಈಗ ಬದಲಾಗಿದೆ. ಅಲ್ಲಿ ಆಸ್ಪತ್ರೆ ನಿರ್ಮಾಣವಾಗಿದೆ. ಅಂಚೆ ಕಚೇರಿ ಇದೆ. ಒಳ್ಳೆಯ ರಸ್ತೆ ನಿರ್ಮಿಸಲಾಗಿದೆ. ನಂದಳಿಕೆ ಎಂಬ ಊರು ಮೂಲಸೌಕರ್ಯಗಳನ್ನು ಹೊಂದಿ ಸುಂದರವಾಗಿ ಅರಳಿದೆ. ಈ ಬದಲಾವಣೆಯ ಹಿಂದಿನ ವ್ಯಕ್ತಿ ಮತ್ತು ಶಕ್ತಿ ನಂದಳಿಕೆಯ ಬಾಲಚಂದ್ರರಾಯರು.ಬಾಲಚಂದ್ರರಾಯರು ಓರ್ವ ಸಾಹಿತ್ಯ ಪ್ರೇಮಿ. ತನ್ನದೇ ಊರಿನ ಮುದ್ದಣ ಕೆಲವೇ ವರ್ಷದ ಜೀವನದಲ್ಲಿ ಮಾಡಿದ ಸಾಹಿತ್ಯ ಸಾಧನೆ ಕಂಡು ಅವರು ವಿಸ್ಮಯಗೊಂಡಿದ್ದರು. ಮುದ್ದಣ ‘ತನ್ನೂರಿನ ಕವಿ’ ಎನ್ನುವುದು ಅವರ ಪಾಲಿಗೆ ಹೆಮ್ಮೆಯ ಸಂಗತಿ. ವಿಪರ್ಯಾಸ ನೋಡಿ: ಮುದ್ದಣನ ಸಾವಿನ ಮಾದರಿಯಲ್ಲೇ ಬಾಲಚಂದ್ರರಾಯರ ಅಣ್ಣ ಭಾಸ್ಕರ ರಾಯರು ವಿಷಮಶೀತ ಜ್ವರದಿಂದ ಸಣ್ಣ ವಯಸ್ಸಿಗೆ ತೀರಿಕೊಂಡರು. ಮಗನ ಸಾವಿನಿಂದ ನೊಂದ ಅಮ್ಮನೂ ತೀರಿಕೊಂಡರು. ಈ ಗಾಢ ನೋವೇ ಬಾಲಚಂದ್ರರಾಯರ ಕರ್ಮಸಿದ್ಧಾಂತಕ್ಕೆ  ಪ್ರೇರಣೆ.ನಂದಳಿಕೆಯಲ್ಲಿ ಅದಾಗಲೇ ಇದ್ದ ‘ಕವಿ ಮುದ್ದಣ ಸ್ಮಾರಕ ರೈತ ಸಂಘ’ದ ಮುಂದುವರಿಕೆಯ ರೂಪದಲ್ಲಿ ಬಾಲಚಂದ್ರರಾಯರು ‘ಮುದ್ದಣ ಸ್ಮಾರಕ ಮಿತ್ರಮಂಡಳಿ’ ರೂಪಿಸಿದರು. ‘ಮಿತ್ರಮಂಡಳಿ’ಯ ಮೂಲಕ ಶ್ರಮದಾನ ನಡೆಸಿ ಊರಿನ ರಸ್ತೆ ಅಭಿವೃದ್ಧಿಪಡಿಸಿದರು. ಇಂದು ಊರಿನಲ್ಲಿ ಡಾಂಬರು ರಸ್ತೆ ಇದೆ. ಬಸ್ಸು ಕೂಡ ಬಂದಿದೆ. ಅಷ್ಟಕ್ಕೇ ನಿಲ್ಲದ ರಾಯರು, ನಂದಳಿಕೆಯು ಮುದ್ದಣನ ಊರು ಎಂಬುದನ್ನು ನೆನಪಿಸಲು ‘ಮುದ್ದಣ ಸ್ಮಾರಕ ಭವನ’ವೊಂದನ್ನು ನಿರ್ಮಿಸಲು ಮುಂದಾದರು. ‘1987ರ ಹೊತ್ತಿಗೆ ಭವನ, ಗ್ರಂಥಾಲಯವನ್ನು ಶಿವರಾಮ ಕಾರಂತರು ಉದ್ಘಾಟಿಸುವ ಸಂತೋಷದ ಕ್ಷಣವನ್ನು ನೋಡಿದೆ’ ಎನ್ನುವಾಗ ಅವರ ಕಣ್ಣುಗಳು ಈಗಲೂ ಭಾವುಕತೆಯಿಂದ ಒದ್ದೆಯಾಗುತ್ತವೆ.ಕರ್ಣಾಟಕ ಬ್ಯಾಂಕ್‌ನಲ್ಲಿ ವೃತ್ತಿ ಬದುಕು ಸವೆಸಿದ ಬಾಲಚಂದ್ರರಾಯರು ನಿವೃತ್ತಿಯ ದಿನಕ್ಕಾಗಿ ಕಾಯುತ್ತಿದ್ದರು. ನಿವೃತ್ತಿಯ ಬಳಿಕ ಇದೀಗ ಸಾಮಾಜಿಕ ಕಾರ್ಯಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. 1995ರಲ್ಲಿ ‘ಮುದ್ದಣ ಪ್ರಕಾಶನ’ ಆರಂಭಿಸಿದ ಅವರು, ಆ ಪ್ರಕಾಶನದ ಮೂಲಕ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.‘ಸರ್ಕಾರ ತಾನಾಗಿಯೇ ಏನೂ ಮಾಡುವುದಿಲ್ಲ. ಅಧಿಕಾರಿಗಳ ಮೇಜಿನ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳಬೇಕು. ಆಗ ಅನುಮತಿಗಳು, ಮಂಜೂರಾತಿಗಳು ಸಿಗುತ್ತವೆ. ಜನಪ್ರತಿನಿಧಿಗಳಿಗೆ ಕವಿಸ್ಫೂರ್ತಿ ಇರಲಿಕ್ಕಿಲ್ಲ. ಆದರೆ ಊರು ಉದ್ಧಾರವಾಗಬೇಕು ಎಂಬ ಆಶಯವನ್ನು ಅವರಿಗೆ ಆಗಾಗ ನೆನಪಿಸುತ್ತಲೇ ಇರಬೇಕಾಗುತ್ತದೆ. ಇಂತಹ ಕೆಲಸಗಳಿಗೆ ಹಲವಾರು ದಿನಗಳನ್ನು ವ್ಯಯಿಸಿದ್ದೇನೆ. ಆ ಬಗ್ಗೆ ಬೇಜಾರಿಲ್ಲ.  ಎಷ್ಟೋ ಬಾರಿ ಸಂಬಳದ ಹಣವೆಲ್ಲಾ ಇಂತಹ ಸಾಮಾಜಿಕ ಕೆಲಸಗಳಿಗೆ ಖರ್ಚಾಗಿದೆ. ಮನೆಯಲ್ಲಿ ಬೈಸಿಕೊಂಡಿದ್ದೇನೆ. ಆದರೆ ಎದೆಯೊಳಗೆ ಇರುವ ಆಶಯದೀಪ ನಂದಿದ್ದೇ ಇಲ್ಲ... ಈಗ ನನ್ನೂರು ನಂದಳಿಕೆಯನ್ನು ನೋಡಿದರೆ ಖುಷಿಯಾಗುತ್ತದೆ. ಮುದ್ದಣ ಈ ಊರನ್ನೊಮ್ಮೆ ನೋಡಿದರೆ ಹೇಗೆ... ಅನ್ನಿಸುತ್ತದೆ’ ಎನ್ನುತ್ತಾರೆ ರಾಯರು.ಮುದ್ದಣ ಬರೆದಿರುವ ‘ರತ್ನಾವತಿ ಕಲ್ಯಾಣ’ ಮತ್ತು ‘ಕುಮಾರ ವಿಜಯ ಯಕ್ಷಗಾನ ಪ್ರಸಂಗ’ಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಾಡುಗಳ ದಾಖಲೀಕರಣವನ್ನು ಮಾಡಲಾಗಿದೆ. ‘ಕುಮಾರ ವಿಜಯ’ ಪ್ರಸಂಗದಲ್ಲಿ ತೆಂಕು ಶೈಲಿಯ ಬಲಿಪ ನಾರಾಯಣ ಭಾಗವತರು, ಬಲಿಪ ಪ್ರಸಾದ ಭಾಗವತರು, ಬಲಿಪ ಶಿವಶಂಕರ ಭಟ್, ಪುಂಡಿಕಾಯಿ ಗೋಪಾಲ ಕೃಷ್ಣ ಭಟ್ಟರು ಭಾಗವತಿಕೆಯಲ್ಲಿದ್ದರೆ– ಪದ್ಯಾಣ ಶಂಕರನಾರಾಯಣ ಭಟ್‌ ಚೆಂಡೆಯಲ್ಲಿ,  ಪದ್ಮನಾಭ ಉಪಾಧ್ಯಾಯ ಮದ್ದಳೆಯಲ್ಲಿ, ಕೊಂಕಣಾಜೆ ಚಂದ್ರಶೇಖರ ಭಟ್‌ ಚೆಂಡೆ ಮತ್ತು ಮದ್ದಳೆಯಲ್ಲಿ, ಕಾರ್ತಿಕ್‌ ಚಿತ್ರಾಪುರ ಚಕ್ರತಾಳದಲ್ಲಿ ಸಹಕರಿಸಿದ್ದಾರೆ.

‘ರತ್ನಾವತಿ ಕಲ್ಯಾಣ’ವನ್ನು ಬಡಗು ಶೈಲಿಯಲ್ಲಿ ದಾಖಲಿಸಲಾಗಿದ್ದು, ಹೆರಂಜಾಲು ಗೋಪಾಲ ಗಾಣಿಗ, ವಿದ್ವಾನ್‌ ಗಣಪತಿ ಭಟ್‌ ಭಾಗವತಿಕೆ ಇದೆ. ಒಟ್ಟು 19 ಗಂಟೆಗಳ ಈ  ಆಡಿಯೋ ಸಿಡಿಯಲ್ಲಿ ಎರಡೂ ಪ್ರಸಂಗಗಳ ನಿರೂಪಣೆಯನ್ನು ಕೆ. ಎಲ್‌. ಕುಂಡಂತಾಯ ಅವರು ಮಾಡಿದ್ದಾರೆ.  ಮುದ್ದಣ ಹುಟ್ಟಿದ ದಿನವಾದ ಜ. 24ರಂದು ಈ ಸೀಡಿ ನಂದಳಿಕೆಯಲ್ಲಿ ಬಿಡುಗಡೆಯಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.