ಗುರುವಾರ , ಜನವರಿ 30, 2020
19 °C
ನಿರಂತರ ಪ್ರತಿಭಟನೆ: ಉಳ್ಳಾಗಡ್ಡಿ ವ್ಯಾಪಾರಿಗಳ ಬೇಸರ

ಮೂರು ದಿನ ವಹಿವಾಟು ನಿಲ್ಲಿಸಲು ವರ್ತಕರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪದೇ ಪದೇ ಬೆಳೆಗಾರರು ಮುಷ್ಕರದಿಂದ ಬೇಸತ್ತಿರುವ ಅಮರಗೋಳ ಎಪಿಎಂಸಿ ಪ್ರಾಂಗಣದ ಉಳ್ಳಾಗಡ್ಡಿ ವರ್ತಕರು ಇದೇ 12ರಿಂದ 14ರವರೆಗೆ ಮೂರು ದಿನ ವಹಿವಾಟು ನಿಲ್ಲಿಸಲು ನಿರ್ಧರಿಸಿದ್ದಾರೆ. ವಹಿವಾಟು ನಿಲ್ಲಿಸುವ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅಮರಗೋಳ ಉಳ್ಳಾಗಡ್ಡಿ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ, ಬೆಳೆಗಾರರ ಮುಷ್ಕರದಿಂದ ನಮಗೆ ಭದ್ರತೆ ಇಲ್ಲವಾಗಿದೆ.

ಪ್ರತಿಭಟನೆಯ ನೆಪದಲ್ಲಿ ಮಂಗಳವಾರ ಕೆಲವರು ವರ್ತಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಉಳ್ಳಾಗಡ್ಡಿ ಲೋಡ್ ಕೊಂಡೊಯ್ಯಲು ಬಂದಿದ್ದ ಲಾರಿಯ ಚಾಲಕನ ಮೇಲೆ ಹಲ್ಲೆ ನಡೆಸಿ ರಸ್ತೆಗೆ ಉಳ್ಳಾಗಡ್ಡಿ ಸುರಿದಿದ್ದಾರೆ ಎಂದರು. ಬೆಳೆಗಾರರಿಗೆ ನಿಜವಾಗಲೂ ನಷ್ಟವಾಗಿದ್ದರೆ ಅವರಿಗೆ ಸ್ಪಂದಿಸುತ್ತೇವೆ. ಆದರೆ ವಿನಾಃಕಾರಣ ದೂಷಣೆ ಸಹಿಸಲಾಗುವುದಿಲ್ಲ. ಸಂಘದ ವತಿಯಿಂದ ಮಂಗಳವಾರ ಸಂಜೆ ಸಭೆ ನಡೆಸಿ ವಹಿವಾಟು ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಲೀಂ ತಿಳಿಸಿದರು.ಈಗ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ರಾಜ್ಯದಿಂದ ದೊಡ್ಡ ಪ್ರಮಾಣದಲ್ಲಿ ಉಳ್ಳಾಗಡ್ಡಿ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಸ್ಥಳೀಯ ಮಾಲು ಬೇಡಿಕೆ ಕಳೆದುಕೊಂಡಿದೆ. ಈಗಾಗಲೇ ಸ್ಥಳೀಯವಾಗಿ ಬೆಳೆದಿರುವ ಶೇ 80ರಷ್ಟು ಉಳ್ಳಾಗಡ್ಡಿ ಖಾಲಿಯಾಗಿದೆ. ಶೇ 20ರಷ್ಟು ಮಾತ್ರ ಇದೆ. ಕೊನೆಯ ಹಂತದ ಫಸಲು ಆಗಿರುವುದರಿಂದ ಗುಣಮಟ್ಟ ಹಾಗೂ ಆಕಾರವೂ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಹುಬ್ಬಳ್ಳಿಯಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ಕಡೆಯೂ ಉಳ್ಳಾಗಡ್ಡಿ ಬೆಲೆ ಇಳಿದಿದೆ ಎಂದರು.ಹಿತಾಸಕ್ತಿಗಳ ಕೈವಾಡ?: ಉಳ್ಳಾಗಡ್ಡಿ ಬೆಲೆ ಕುಸಿತದ ನೆಪದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಸ್ಥಳೀಯ ಹಿತಾಸಕ್ತಿಗಳ ಕೈವಾಡ ಕಾಣುತ್ತಿದೆ ಎನ್ನುವ ಸಲೀಂ ಬ್ಯಾಹಟ್ಟಿ, ಕಳೆದ 3ರಂದು ಮಧ್ಯಾಹ್ನ 12.30ಕ್ಕೆ ಬೆಳೆಗಾರರು ಪ್ರತಿಭಟನೆ ಆರಂಭಿಸಿದ್ದರು. ಅದೇ ದಿನ ಬೆಳಗಾವಿಯ ವಿಧಾನಮಂಡಲದ ಅಧಿವೇಶನ­ದಲ್ಲಿ ಬೆಳಿಗ್ಗೆ 10.30ಕ್ಕೇ ಹುಬ್ಬಳ್ಳಿಯಲ್ಲಿ ಉಳ್ಳಾಗಡ್ಡಿ ಬೆಳೆಗಾರರು ಪ್ರತಿಭಟನೆಗೆ ಇಳಿದಿದ್ದಾರೆ ಎಂಬ ಸಂಗತಿ ಪ್ರಸ್ತಾಪವಾಗಿದೆ. ಪ್ರತಿಭಟನೆ ಆರಂಭಕ್ಕೆ ಮುನ್ನವೇ ವಿಷಯ ಪ್ರಸ್ತಾಪಿಸಲು ಹೇಗೆ ಸಾಧ್ಯ ಎಂದು ಬ್ಯಾಹಟ್ಟಿ ಪ್ರಶ್ನಿಸುತ್ತಾರೆ. ಇನ್ನು ಮಂಗಳವಾರ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಕೆಲವರು ಹೆಚ್ಚು ದಾಂದಲೆ ಮಾಡಿದರು ಎನ್ನುತ್ತಾರೆ.ಪ್ರತಿಭಟನೆಗೆ ಇಳಿದೇ ಉಳ್ಳಾಗಡ್ಡಿಯ ಬೆಲೆ ಹೆಚ್ಚಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿರುವುದು ನಮಗೂ ಬೇಸರ ತಂದಿದೆ. ಮೊದಲಿನಿಂದಲೂ ಹುಬ್ಬಳ್ಳಿ ಮಾರುಕಟ್ಟೆ ವರ್ತಕರು ಮತ್ತು ಬೆಳೆಗಾರರ ನಡುವಿನ ಸೌಹಾರ್ದ ಸಂಬಂಧಕ್ಕೆ ಹೆಸರಾಗಿದೆ. ಮುಂದೆಯೂ ಅದನ್ನು ಕಾಪಾಡಿಕೊಂಡು ಹೋಗಲು ಸಮಿತಿಯ ವತಿಯಿಂದ ಶ್ರಮಿಸಲಾಗುವುದು ಎನ್ನುತ್ತಾರೆ ಅಮರಗೋಳ ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ.

ಪ್ರತಿಕ್ರಿಯಿಸಿ (+)