ಗುರುವಾರ , ಜನವರಿ 23, 2020
28 °C

ಮೂಲಧನ ಯೋಜನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿ ಹೊಸ ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಉದ್ದಿಮೆಗಳಿಗೆ ಮೂಲಧನ ಒದಗಿಸುವ ಯೋಜನೆ ಜಾರಿಗೊಳಿಸಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಹರಕೇಶ್ ಮಿತ್ತಲ್ ಹೇಳಿದರು.`ಇ-ಹೆಲ್ತ್ ಟಿಬಿಐ~ ಸಂಸ್ಥೆ ಮೂಲಕ ಮಂಜೂರಾಗಿರುವ ಮೂಲಧನ ಯೋಜನೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು, `ಸಂಶೋಧನೆ ಮತ್ತು ಅನುಷ್ಠಾನ ನಡುವಣ ಹಂತದಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗುವವರನ್ನು ಪ್ರೋತ್ಸಾಹಿಸುವುದು ಮುಖ್ಯ. ಅಂತಹ ಉದ್ದಿಮೆಗಳಿಂದಲೇ ಹೊಸ ಸಂಶೋಧನೆಗಳು ಸ್ಪಷ್ಟ ಸ್ವರೂಪ ಪಡೆಯಲು ಸಾಧ್ಯ. ಈ ಕಾರಣಕ್ಕಾಗಿ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ಮೂಲಧನ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದೆ~ ಎಂದರು.ದೇಶದಲ್ಲಿ ನಡೆಯುವ ಹತ್ತು ಸಂಶೋಧನೆಗಳ ಪೈಕಿ ಎರಡು ಮಾತ್ರ ಫಲಪ್ರದವಾಗುತ್ತವೆ. ಈ ಕಾರಣಕ್ಕಾಗಿ ಭಾರತ ಹೆಚ್ಚಿನ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ.ಇದನ್ನು ತಪ್ಪಿಸಬೇಕಾದರೆ ಸಂಶೋಧನೆಗಳು ಮತ್ತು ಅವುಗಳ ಪ್ರಯೋಗಕ್ಕೆ ವೇದಿಕೆ ಕಲ್ಪಿಸುವ ಉದ್ದಿಮೆಗಳ ಸ್ಥಾಪನೆಗೆ ಒತ್ತು ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.`ಸಂಶೋಧನೆಗಳಿಗೆ ಪೂರಕವಾದ ಹೊಸ ಉದ್ಯಮಗಳ ಸ್ಥಾಪನೆಗೆ ಮೂಲಧನ~ ಯೋಜನೆಯ ಅಡಿಯಲ್ಲಿ `ಇ-ಹೆಲ್ತ್ ಟಿಬಿಐ~ ಸಂಸ್ಥೆ ಸಲ್ಲಿಸಿದ್ದ ಪ್ರಸ್ತಾವದ ಪ್ರಕಾರ ಹಲವು ಉದ್ದಿಮೆದಾರರಿಗೆ ಈ ಸಂದರ್ಭದಲ್ಲಿ ಮೂಲಧನ ವಿತರಿಸಲಾಯಿತು.ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಜೋತಿರಾಮಲಿಂಗಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕಾ ಅಭಿವೃದ್ಧಿ ಆಯುಕ್ತ ಎಂ.ಮಹೇಶ್ವರ ರಾವ್, ಭಾರತ-ಅಮೆರಿಕ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜೀವ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)