ಶನಿವಾರ, ಏಪ್ರಿಲ್ 17, 2021
32 °C

ಮೂವರು ಸ್ಪಿನ್ನರ್‌ಗಳೊಂದಿಗೆ ಆಡಬೇಕು- ವಾಸೀಮ್ ಅಕ್ರಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮೂವರು ಸ್ಪೆಶಲಿಸ್ಟ್ ಸ್ಪಿನ್ನರ್‌ಗಳನ್ನು ಆಡಿಸಬೇಕು ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.

ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ತಂಡ ಸ್ಪಿನ್ ಬೌಲಿಂಗ್ ಮುಂದೆ ತಡಕಾಡುತ್ತದೆ ಎಂಬ ಕಾರಣಕ್ಕೆ ಅವರು ಈ ಸಲಹೆ ನೀಡಿದ್ದಾರೆ. ‘ಅಹಮದಾಬಾದ್‌ನ ಕ್ರೀಡಾಂಗಣದ ಪಿಚ್‌ನಲ್ಲಿ ಚೆಂಡು ಹೆಚ್ಚಿನ ತಿರುವು ಪಡೆಯುವುದಾದರೆ, ಮಹೇಂದ್ರ ಸಿಂಗ್ ದೋನಿ ಮೂವರು ಸ್ಪಿನರ್‌ಗಳನ್ನು ಆಡಿಸಬೇಕು. ಆಸೀಸ್ ಆಟಗಾರರು ಸ್ಪಿನ್ ಎದುರು ಉತ್ತಮವಾಗಿ ಆಡುವುದಿಲ್ಲ’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ. ಆದರೆ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡದಿದ್ದರೆ ಭಾರತ ಈ ಯೋಜನೆ ಕೈಬಿಡಬೇಕು ಎಂದಿದ್ದಾರೆ.

‘ಬ್ಯಾಟಿಂಗ್‌ಗೆ ನೆರವು ನೀಡುವ ಪಿಚ್‌ನಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಡಿಸಿದರೆ ಅದು ಭಾರತಕ್ಕೆ ತಿರುಗುಬಾಣವಾಗಿ ಪರಿಣಮಿಸಬಹುದು. ಏಕೆಂದರೆ ಫ್ಲಾಟ್ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಯಾವುದೇ ನೆರವು ಲಭಿಸದು’ ಎಂದರು.

ಭಾರತ ತಂಡ ಲೀಗ್ ಹಂತದ ಆರು ಪಂದ್ಯಗಳಲ್ಲಿ ನಾಲ್ಕರಲ್ಲೂ ಇಬ್ಬರು ಸ್ಪೆಶಲಿಸ್ಟ್ ಸ್ಪಿನ್ನರ್‌ಗಳೊಂದಿಗೆ ಆಡಿದೆ. ಮೂವರು ಸ್ಪಿನ್ನರ್‌ಗಳನ್ನು (ಹರಭಜನ್ ಸಿಂಗ್, ಆರ್. ಅಶ್ವಿನ್ ಮತ್ತು ಪಿಯೂಷ್ ಚಾವ್ಲ) ಒಟ್ಟಾಗಿ ಯಾವುದೇ ಪಂದ್ಯದಲ್ಲೂ ಕಣಕ್ಕಿಳಿಸಿಲ್ಲ.

ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಆಡಿತ್ತು. ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್ ಮತ್ತು ರಂಗನಾ ಹೆರಾತ್ ಕಣಕ್ಕಿಳಿದಿದ್ದರು. ಆದರೆ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಲೀಗ್ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಹಠಾತ್ ಕುಸಿತ ಕಂಡಿತ್ತು. ಈ ಆತಂಕವನ್ನು ಹೊತ್ತುಕೊಂಡೇ ಮಹಿ ಬಳಗ ಆಸೀಸ್ ವಿರುದ್ಧ ಆಡಲಿದೆ. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅಕ್ರಮ್ ನುಡಿದಿದ್ದಾರೆ. ‘ಹೌದು. ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಹಠಾತ್ ಕುಸಿತ ಕಂಡಿತ್ತು. ಇಂತಹ ಘಟನೆ ಕೆಲವೊಮ್ಮೆ ನಡೆಯುವುದು ಸಹಜ. ಇದು ಆತಂಕ ಪಡುವ ವಿಷಯವೇ ಅಲ್ಲ’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಒಂಬತ್ತು ವಿಕೆಟ್‌ಗಳು 29 ರನ್‌ಗಳ ಅಂತರದಲ್ಲಿ ಉರುಳಿತ್ತು. ವಿಂಡೀಸ್ ವಿರುದ್ಧ ಕೊನೆಯ ಏಳು ವಿಕೆಟ್‌ಗಳನ್ನು 51 ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.