ಗುರುವಾರ , ಮೇ 19, 2022
20 °C

ಮೆಟ್ರೊ ರೋಮಾಂಚನ

ಮಾಲತಿ ಭಟ್ Updated:

ಅಕ್ಷರ ಗಾತ್ರ : | |

ಅದು ಸಂಭ್ರಮ. ಆದರೆ ಅಷ್ಟೇ ಅಲ್ಲ; ಅಕ್ಷರಶಃ ಮುಗಿಲು ಮುಟ್ಟಿದ ಸಂತಸದ ಹೊಳೆ. ಹಳ್ಳಿ ಜಾತ್ರೆ ಆಧುನಿಕ ಅವತಾರದಲ್ಲಿ ಧಿಡೀರ್ ಎಂದು ಎಂ.ಜಿ. ರಸ್ತೆಯಲ್ಲಿ ಪ್ರತ್ಯಕ್ಷವಾದರೆ ಹೇಗಿರುತ್ತದೋ ಹಾಗೆ.



ಅಲಸೂರಿನ ಕೊಳೆಗೇರಿಯ ಮಕ್ಕಳು, ಆಪಲ್‌ನ ಐಫೋನ್ ಹಿಡಿದು ಸಾಗುವ ಐಟಿ ಮಂದಿ, ಸಜ್ಜನ್‌ರಾವ್ ವೃತ್ತದ ಶೆಟ್ಟರು, ಶಿವಾಜಿನಗರದ ಖಾನ್ ಸಾಹೇಬರು, ಬಸವನಗುಡಿಯ 80ರ ಅಜ್ಜಿ, ರಂಗಶಂಕರದ ಅರುಂಧತಿ, ಮೌಂಟ್ ಕಾರ್ಮೆಲ್‌ನ ಅಲ್ಟ್ರಾ ಮಾಡರ್ನ್ ಹುಡುಗಿಯರು, ಯೂನಿಫಾರಂನಲ್ಲೇ ಬಂದ ಮಹಿಳಾ ಕಾನ್‌ಸ್ಟೇಬಲ್‌ಗಳು, ಪ್ರಯಾಣ ಹೇಗಿತ್ತು ಎಂದು ಮೈಕ್ ಹಿಡಿವ- ಟಿಪ್ಪಣಿ ಮಾಡಿಕೊಳ್ಳುವ ಮಾಧ್ಯಮ ಪ್ರತಿನಿಧಿಗಳು... ಎಲ್ಲರ ಕಣ್ಣಲ್ಲೂ ಒಂದೇ ಬೆರಗು.



ಪೋ... ಎಂದು ಶಬ್ದ ಮಾಡುತ್ತಾ ರೈಲು ಬಂದಾಗ ಹಳ್ಳಿ ಬಸ್‌ಗಳಲ್ಲಿ ಟವಲ್ ಹಾಕುವಷ್ಟೇ ವೇಗದಲ್ಲಿ ಜನ ನುಗ್ಗಿದ್ದರು. ಒಂದಿಂಚೂ ಜಾಗವಿಲ್ಲದ ಬೋಗಿಯೊಳಗೆ ಕೂಡ್ರಲು ಜಾಗ ಸಿಗುತ್ತಾ ಎಂದು ನೋಡುತ್ತಿದ್ದಾಗ ತೂಗಿದ ಅನುಭವ. ರೈಲು ಚಲಿಸಿದಾಗ ಹೋ... ಎಂಬ ಹುಯಿಲು.



`ಅದೇ ನೋಡಿ ಒಬೇರಾಯ್... ಓ ಅಲ್ಲಿ ವಿಜಯಾ ಬ್ಯಾಂಕ್, ನೋಡಿ... ನೋಡಿ ಅಲಸೂರು ಬಂದ್ಬಿಡ್ತು. ಅಲ್ಲಿ ಕಾಣುತ್ತಾ ಪಿಜ್ಜಾ ಹಟ್, ಅದರ ಹಿಂದೆನೇ ನಮ್ಮನೇ... ಅರೆ...ಇಷ್ಟ್ ಬೇಗ ಬಂದ್ಬಿಟ್ವಾ...!?~



ನಗರ ಸಂಚಾರದ ರೈಲು ವ್ಯವಸ್ಥೆಗಾಗಿ ಕಾಯುತ್ತಿದ್ದ ಬೆಂಗಳೂರಿಗರ ಮೂರು ದಶಕಗಳ ಕನಸು `ನಮ್ಮ ಮೆಟ್ರೊ~ ಮೂಲಕ ಗುರುವಾರ ಈಡೇರಿದಾಗ ಜನರ ಕಾಲು ನೆಲದ ಮೇಲೇ ಇರಲಿಲ್ಲ. ಬೆಳಗಿನ ಉದ್ಘಾಟನಾ ಸಮಾರಂಭದ ನಂತರ ಸಂಜೆ 4 ಗಂಟೆಗಷ್ಟೇ ಜನಸಾಮಾನ್ಯರಿಗೆ ಪ್ರಯಾಣದ ಅವಕಾಶ ಎಂದಿದ್ದರೂ 2 ಗಂಟೆಯಿಂದಲೇ ಎಂ.ಜಿ. ರಸ್ತೆ ನಿಲ್ದಾಣದ ಎದುರು ತಿರುಪತಿಯನ್ನುನೆನಪಿಸುವ ಕ್ಯೂ.



ಕ್ಯೂ ಹನುಮನ ಬಾಲದಷ್ಟೇ ಬೆಳೆದಿದ್ದರೂ ಒಂಚೂರು ಬೇಸರಿಸದೇ ನಿಂತ ಜನ. ದುಡ್ಡು ಕೊಟ್ಟು ಟೊಕನ್ ಪಡೆದ ನಂತರ ಹೆಜ್ಜೆ, ಹೆಜ್ಜೆಗೂ ಮಾರ್ಗದರ್ಶನ ಮಾಡುತ್ತಿದ್ದ `ಮೆಟ್ರೊ~ ಸಿಬ್ಬಂದಿ. ಫ್ಲಾಟ್‌ಫಾರ್ಮ್ ತಲುಪಲು ಮೆಟ್ಟಿಲು ಇದ್ದರೂ, ಅಳುಕುತ್ತ ಎಸ್ಕಲೇಟರ್ ಮೇಲೆ ಕಾಲಿಟ್ಟು ಹೆಮ್ಮೆಯಿಂದ ಮೇಲೆ ಹತ್ತಿ ಹೋದ ಅಜ್ಜ. `ನಮ್ಮ ಮೆಟ್ರೊ~ ನಿಜವಾಗಲೂ ನಮ್ಮದೇ ಎಂದು ಖಾತ್ರಿಪಡಿಸುವಂತೆ ಹಿಂದಿ, ಇಂಗ್ಲಿಷ್ ಜತೆ ಸ್ವಚ್ಛ ಕನ್ನಡದಲ್ಲೂ ಮೊಳಗುತ್ತಿದ್ದ ಮಾಹಿತಿ, ಉದ್ಘೋಷಣೆ. ಕನ್ನಡದಲ್ಲೇ ಮಾತನಾಡುತ್ತಿದ್ದ ಸಿಬ್ಬಂದಿ.



ರೈಲು ಚಲಿಸಿದಾಕ್ಷಣ 80ರ ಅಜ್ಜಿ, 60ರ ಅಂಕಲ್, 25ರ ಯುವಕ ಎಲ್ಲರೂ ಮಕ್ಕಳಾಗಿದ್ದರು. ನನಗೆ ರೈಲು, ಬಸ್ಸಿನಲ್ಲಿ `ಕಿಡಕಿ ಸೀಟೇ ಬೇಕು~ ಎಂದು ಜಗಳವಾಡಿದ್ದ ಬಾಲ್ಯಕ್ಕೆ ಮರಳಿದ್ದರು. `ನೀವು ಕುತ್ಕೋಬೇಕಾ ಬನ್ನಿ... ವ್ಯೆ ನೋಡಿ....~ ಸೀಟು ಸಿಗದವರಿಗೆ ಮುಂದಿನ ಸ್ಟೇಷನ್‌ನಲ್ಲಿ ಜಾಗ ಬಿಟ್ಟುಕೊಡುತ್ತಿದ್ದ ಧಾರಾಳಿಗಳೂ ಅಲ್ಲಿದ್ದರು. ಅಪರಿಚಿತ ಮುಖ ಕಂಡರೂ ಜಿಪುಣತನ ಮಾಡದೇ ತುಟಿ ಅರಳಿಸುತ್ತಿದ್ದರು.



ರೈಲಿನ ಒಳಗೆ `ಮೇರಾ ಭಾರತ್ ಮಹಾನ್~ ಎಂಬಂತಹ ಭಾವವಿದ್ದರೆ, ಪಾರದರ್ಶಕ ಕಿಟಕಿಯಿಂದ ಬೆಂಗಳೂರಿನ ಬಹುಮುಖಿ ಸಂಸ್ಕೃತಿಯ ದರ್ಶನ.



ಎಂ.ಜಿ. ರಸ್ತೆ ನಿಲ್ದಾಣ ಬಿಟ್ಟು, ಟ್ರಿನಿಟಿ ವೃತ್ತದ ನಿಲ್ದಾಣ ಸಮೀಪಿಸುತ್ತಿದ್ದಂತೆ ಒಬೇರಾಯ್ ಹೋಟೆಲ್‌ನ ಎಂದೂ ನೋಡದ ಟೆರೇಸ್ ಗಾರ್ಡನ್ ನೋಟ. ಅದರ ಪಕ್ಕವೇ ದೀಪಾಂಲಕೃತ ವಿಜಯಾ ಬ್ಯಾಂಕ್ ಕಚೇರಿ, ಪಂಚತಾರಾ ಹೋಟೆಲ್ ತಾಜ್ ವಿವಾಂತದ ಬೃಹತ್ ಕಟ್ಟಡ. ಅಲ್ಲಿಂದ ನೂರಡಿ ಮುಂದೆ, ಕೈಚಾಚಿದರೆ ಸಿಗುವ ಭ್ರಮೆ ಹುಟ್ಟಿಸುವ ಲಿಡೊ ಮಾಲ್, ಬಿಗ್ ಬಜಾರ್... ಮತ್ತೊಂದೇ ಕ್ಷಣ, ಹಂಚು ಹೊತ್ತ ಹಲಸೂರಿನ ಮನೆಗಳು...



ಜೋಪಡ ಪಟ್ಟಿ. ಸಿಎಂಎಚ್ ರಸ್ತೆಯ ಮೇಲೆ ಸಾಗುತ್ತ ಇಂದಿರಾನಗರ ನಿಲ್ದಾಣ ಸಮೀಪಿಸುತ್ತಿದ್ದಂತೆ ಕಣ್ಣಿಗೆ ಕುಕ್ಕುವ ಐಷಾರಾಮಿ ಬಂಗಲೆಗಳು. ಬೈಯಪ್ಪನಹಳ್ಳಿ ನಿಲ್ದಾಣ ಬಂದೇಬಿಟ್ಟಿತು ಅನ್ನುವಾಗ ಮತ್ತದೇ ಕೊಳೆಗೇರಿ. ಆ ಗುಡಿಸಿಲಿನಂತಹ ಮನೆಗಳ ದುರವಸ್ಥೆ ಅಣಕಿಸುವಂತೆ ಎಲ್ಲ ಮನೆಗಳ ಮೇಲೂ ಡಿಟಿಎಚ್ ಆಂಟೆನಾ.



ಎಂ.ಜಿ. ರಸ್ತೆಯಿಂದ ರೈಲು ಹತ್ತೇ ನಿಮಿಷದಲ್ಲಿ ಬೈಯಪ್ಪನಹಳ್ಳಿ ತಲುಪಿದಾಗ ಎವರೆಸ್ಟ್ ಹತ್ತಿದಷ್ಟು ಖುಷಿ. ಮರು ಪ್ರಯಾಣದಲ್ಲೂ ಮರುಕಳಿಸಿದ ಉಲ್ಲಾಸ. ಫ್ಲಾಟ್‌ಫಾರ್ಮ್‌ನಿಂದ ದೂರವಿರಿ ಎಂಬ ಸಿಬ್ಬಂದಿಯ ಮನವಿ ಕೇಳದಂತೆ ಬಗ್ಗಿ... ಬಗ್ಗಿ ಟ್ರೇನ್ ಬಂತಾ ಎಂದು ನೋಡುತ್ತಿದ್ದ ಜನಜಂಗುಳಿ. ಪ್ರಯಾಣ ಮುಗಿಸಿ ಬಂದ ಜನರೆಲ್ಲ `ನಮ್ಮ ಪ್ರವಾಸಕ್ಕೆ ಜಯವಾಯಿತು~ ಎಂದು ಕೂಗುವ ಮಕ್ಕಳಂತೆ ಕಾಣುತ್ತಿದ್ದರು. ಅಣ್ಣಾವ್ರ `ಪಿಚ್ಚರ್~ನ ಮೊದಲ ದಿನದ ಮೊದಲ ಶೋ ನೋಡಿದ ಅಭಿಮಾನಿಯ ಮುಖದ ಬೆಳಕೂ ಅವರಲ್ಲಿತ್ತು. ಆ ಹೊಳಪಿನ ಮುಂದೆ ಎಂ.ಜಿ. ರಸ್ತೆಯ ಝಗಮಗಿಸುವ ದೀಪದ ಸಾಲು ಮಂಕಾಗಿ ಕಾಣುತ್ತಿತ್ತು.



ಮರುಕಳಿಸಿದ ವೈಭವ

ಇತ್ತ ಮೆಟ್ರೊ ರೀಚ್-1ರ ಆರಂಭಿಕ ನಿಲ್ದಾಣವಿರುವ ಎಂ.ಜಿ. ರಸ್ತೆಗೆ ಗತ ವೈಭವ ಮರಳಿಬಂದಿತ್ತು. ವರ್ಷಾಂತ್ಯದ ಮೋಜು ಮಸ್ತಿಯನ್ನು ಹೋಲುವ ಡಿಸೆಂಬರ್ 31ರ ಸಂಜೆಯನ್ನು ನೆನಪಿಸುವ ಉಲ್ಲಾಸ ಅಲ್ಲಿತ್ತು.



ಮೆಟ್ರೊ ಕಾಮಗಾರಿಯಿಂದಾಗಿ ಎಡಭಾಗದ ವಾಯವಿಹಾರ ಕಳೆದುಕೊಂಡ ಎಂ.ಜಿ.ರಸ್ತೆ ಇತ್ತೀಚಿನ ವರ್ಷಗಳಲ್ಲಿ ತನ್ನ ಸಹಜ ಚೆಲುವು ಕಳೆದುಕೊಂಡು ಭಣಗುಡುತ್ತಿತ್ತು. ಆದರೆ ಮೆಟ್ರೊ ಸಂಚಾರ ಆರಂಭದ ದಿನ ಮಾತ್ರ ವಾತಾವರಣವೇ ಬದಲಾಗಿತ್ತು. `ನಮ್ಮ ಮೆಟ್ರೊ~ ಸ್ವಾಗತಿಸಲು `ಪ್ರಜಾವಾಣಿ~ ಕಚೇರಿಯೂ ಸೇರಿದಂತೆ ಎಂ.ಜಿ. ರಸ್ತೆಯ ವಾಣಿಜ್ಯ ಸಂಕೀರ್ಣ, ಪುಸ್ತಕ ಮಳಿಗೆಗಳೆಲ್ಲ ದೀಪಧಾರಣಿಯರಂತೆ ಕಂಗೊಳಿಸುತ್ತಿದ್ದವು. ವಾರದ ಮೊದಲೇ ದೀಪಾವಳಿ ಬಂದಷ್ಟು ಸಂತಸ. ಮದುವೆ ಮನೆಯ ಉತ್ಸಾಹ ಅಲ್ಲಿ ಮನೆ ಮಾಡಿತ್ತು.



ಅಚ್ಚರಿ ಎಂದರೆ ಗುರುವಾರ ತಡರಾತ್ರಿಯವರೆಗೂ ಮೆಟ್ರೊ ಏರಲು ಎಂಜಿ ರಸ್ತೆ ನಿಲ್ದಾಣದಲ್ಲಿ ಕಂಡು ಬಂದು ಜನಜಂಗುಳಿ ಶುಕ್ರವಾರ ಅದ್ಯಾಕೋ ಇರಲಿಲ್ಲ. ಇಂದು, ನಾಳೆ ಜನ ದಾಂಗುಡಿ ಇಡಬಹುದೇನೋ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.