ಭಾನುವಾರ, ಆಗಸ್ಟ್ 9, 2020
21 °C

`ಮೇಲ್ವರ್ಗ ತುಳಿಯುವ ಯೋಜನೆ ರೂಪಿಸುತ್ತಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮೇಲ್ವರ್ಗ ತುಳಿಯುವ ಯೋಜನೆ ರೂಪಿಸುತ್ತಿಲ್ಲ'

ಬೆಂಗಳೂರು: `ರಾಜ್ಯದಲ್ಲಿರುವ ಕಾಂಗ್ರೆಸ್ ಅಹಿಂದ ವರ್ಗಗಳ ಸರ್ಕಾರ, ಮೇಲ್ವರ್ಗದವರನ್ನು ತುಳಿಯುವ ಸಲುವಾಗಿಯೇ ಯೋಜನೆ ರೂಪಿಸುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ಶುದ್ಧ ಸುಳ್ಳು' ಎಂದು ಸಂಸದ ಎಚ್.ವಿಶ್ವನಾಥ ತಿಳಿಸಿದರು.ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾವು ನಗರದ ಪುರಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ  `ಪ್ರಸ್ತುತ ರಾಜಕಾರಣದಲ್ಲಿ ವಿಶ್ವಕರ್ಮ ಸಮುದಾಯದ  ಸ್ಥಿತಿಗತಿಗಳು' ಕುರಿತ  ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಹಿಂದುಳಿದವರು, ದಲಿತರು, ಶ್ರಮಿಕರಿಗೆ ಎಲ್ಲ ಕಾಲದಲ್ಲೂ ಪ್ರಾತಿನಿಧ್ಯ ದೊರೆಯಬೇಕಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಉದ್ದೇಶ. ಅದನ್ನೇ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸುತ್ತಿದೆ.  ಕಲೆಯ ಮೂಲಕ ನಾಡನ್ನು ಸುಂದರಗೊಳಿಸಿರುವುದಲ್ಲದೇ ಸಂಸ್ಕೃತಿಗೆ ತನ್ನದೇ ಕಾಣಿಕೆ ನೀಡಿರುವ ವಿಶ್ವಕರ್ಮ ಸಮುದಾಯಕ್ಕೆ ಅಗತ್ಯವಾಗಿ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು' ಎಂದು ಹೇಳಿದರು.ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, `ವಿಶ್ವಕರ್ಮ ಜನಾಂಗವು ನಂಬಿಕೊಂಡಿರುವ ಪಂಚ ಕುಶಲ ಕೆಲಸಗಳ ನೆನಪಿನಾರ್ಥ ಪಂಚಪೀಠಗಳನ್ನು ಸ್ಥಾಪನೆ ಮಾಡಬೇಕು. ಇದರಿಂದ ಸಂಘಟಿತರಾಗಲು ಸಾಧ್ಯ' ಎಂದು ಅಭಿಪ್ರಾಯಪಟ್ಟರು.`ಜಾಗತೀಕರಣದ ಭರಾಟೆಯಲ್ಲಿ ಕರ ಕುಶಲ ಕಲೆಗಳು ನಶಿಸುತ್ತಿದ್ದು, ಇದಕ್ಕೆ ಪ್ರೋತ್ಸಾಹ ನೀಡಲು ಸಾಲ ನೀಡುವಂತಹ ವ್ಯವಸ್ಥೆಯೂ ಆಗಬೇಕಿದೆ.  ಕರಕುಶಲ ಕಲೆಯನ್ನು ಮುಂದಿನ ಜನಾಂಗಕ್ಕೂ ಉಳಿಸುವ ದಿಸೆಯಲ್ಲಿ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು' ಎಂದು ಮನವಿ ಮಾಡಿದರು.ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, `ರಾಜಕೀಯವಾಗಿ  ಹಿಂದುಳಿದ ವಿಶ್ವಕರ್ಮ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ' ಎಂದು ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ. ಖಾದರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.