ಸೋಮವಾರ, ಜೂನ್ 21, 2021
23 °C

ಮೇವಿನ ಕೊರತೆ ನೀಗಿಸಲು ರೂ. 40 ಲಕ್ಷ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇವಿನ ಕೊರತೆ ನೀಗಿಸಲು ರೂ. 40 ಲಕ್ಷ ಪ್ರಸ್ತಾವ

ಶಿವಮೊಗ್ಗ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ರೈತರಿಗೆ ಉಚಿತವಾಗಿ ಮೇವು ಬೆಳೆ ಬೀಜ ವಿತರಿಸಲು ರೂ. 40 ಲಕ್ಷ  ಬಿಡುಗಡೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪಶುವೈದ್ಯ ಇಲಾಖೆ ಉಪ ನಿರ್ದೇಶಕ ಡಾ.ಬಸವರಾಜ ತಿಳಿಸಿದರು.ಜಿಲ್ಲಾ ಪಂಚಾಯ್ತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷರಾದ ಶುಭಾ ಕೃಷ್ಣಮೂರ್ತಿ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.ಜಿಲ್ಲೆಯಲ್ಲಿ ಶೇಖರಿಸಿಡಬಹುದಾದ ಮೇವಿನ ಬೆಳೆಗಳ ಬಿತ್ತನೆ ಕಡಿಮೆಯಾಗಿದ್ದು, ನಿರೀಕ್ಷಿತ ಪ್ರಮಾಣದ ಮೇವಿನ ಉತ್ಪಾದನೆಯಾಗುತ್ತಿಲ್ಲ. ಅಲ್ಲದೇ, ಯಂತ್ರಗಳ ಬಳಕೆಯಿಂದಾಗಿ ಮೇವು ಲಭ್ಯವಾಗುತ್ತಿಲ್ಲ. ಈ ಮೇವಿನ ಅಭಾವ ಸರಿದೂಗಿಸಲು ರೈತರ ಹಂತದಲ್ಲಿಯೇ ಮೇವು ಬೆಳೆ ಬೆಳೆಯಲು ಸರ್ಕಾರದಿಂದ ಮೇವಿನ ಬೀಜಗಳನ್ನು ಖರೀದಿಸಿ, ರೈತರಿಗೆ ಉಚಿತವಾಗಿ ವಿತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗಿರುವ ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿ ಬಿಡುಗಡೆಯಾಗಿರುವ ವಿಶೇಷ ಅನುದಾನವನ್ನು ಯಾವುದೇ ಕಾರಣಗಳಿಂದ ಬೇರೆಡೆಗೆ ವರ್ಗಾಯಿಸದೆ, ಈಗಾಗಲೇ ಆಯ್ಕೆಯಾಗಿರುವ ಗ್ರಾಮಗಳಿಗೆ ಅನುದಾನ ಬಳಸುವಂತೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ್‌ನಾಯಕ್ ಅಧಿಕಾರಿಗಳಿಗೆ ಸೂಚಿಸಿದರು.ಹಾಗೆಯೇ, ಗ್ರಾಮೀಣ ಕಿರುನೀರು ಸರಬರಾಜು ಯೋಜನೆಗೆ ಬಿಡುಗಡೆಯಾಗಿರುವ ಅನುದಾನ ಸರ್ಕಾರಕ್ಕೆ ವಾಪಸ್ಸು ಹೋಗದಂತೆ ಸದ್ಭಳಕೆ ಮಾಡಿಕೊಂಡು ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿ ಒಳಗಾಗಿ ಪೂರ್ಣಗೊಳಿಸಿ, ಶೇ. 100ರಷ್ಟು ಪ್ರಗತಿ ಸಾಧಿಸುವಂತೆ ಶುಭಾ ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.ಬೆಂಬಲ ಬೆಲೆಯಲ್ಲಿ ಜ್ಯೋತಿ ಮತ್ತು ಉಮಾ ಬತ್ತವನ್ನು ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಆಹಾರ ನಿಗಮದ ಅಧಿಕಾರಿ ರಾಮಚಂದ್ರ ಅವರಿಗೆ ಸೂಚಿಸಿದರಲ್ಲದೆ, ಈ ಕುರಿತು ಜಿಲ್ಲಾ ಪಂಚಾಯತ್‌ನಲ್ಲಿ ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.ಮಂಗನ ಕಾಯಿಲೆ ನಿಯಂತ್ರಣದಲ್ಲಿದೆ. ಈ ಕಾಯಿಲೆಯ ಕುರಿತು ಸಕಾಲದಲ್ಲಿ ತಪಾಸಣೆ ನಡೆಸಿ, ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಪ್ರಯೋಗಾಲಯ ಆರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಅಗತ್ಯವಿರುವ ರೂ. 10 ಲಕ್ಷಗಳನ್ನು ಜಿಲ್ಲಾ ಪಂಚಾಯ್ತಿ ಅನುದಾನದಿಂದ ಬಳಸಿಕೊಳ್ಳಲಾಗುವುದು ಎಂದ ಅವರು, ಮಂಗನ ಕಾಯಿಲೆ ಶಂಕಾಸ್ಪದ 16ಸಾವಿರ ರೋಗಿಗಳಿಗೆ ಲಸಿಕೆ ಹಾಕಿರುವುದಾಗಿ ಸಭೆಯಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚನ್ನಬಸಪ್ಪ ತಿಳಿಸಿದರು.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ  ಗೀತಾ ಮಲ್ಲಿಕಾರ್ಜುನ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಹನುಮನರಸಯ್ಯ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.