ಶುಕ್ರವಾರ, ಜೂಲೈ 10, 2020
21 °C

ಮೊದಲ ಮಳೆಗೆ ತೊಯ್ದ ಮನಸು...

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಮೊದಲ ಮಳೆಗೆ ತೊಯ್ದ ಮನಸು...

ಆಗಿನ್ನು ಸಂಜೆ 5ರ ಸಮಯ. ಸುತ್ತಲಿನ ವಾತಾವರಣದಲ್ಲಿ ಮನಸ್ಸಿಗೆ ಚೇತೋಹಾರಿಯನ್ನಾಗಿಸುವ ಅಪ್ಯಾಯಮಾನವಿತ್ತು. ನಾನು ಮತ್ತು ನನ್ನ ಗೆಳೆಯ ಸಂಜೆಯ ಸುತ್ತಾಟ ಮುಗಿಸಿ ಮನೆಯ ಕಡೆಗೆ ಹೊರಡುವ ವೇಳೆಗೆ ತುಂತುರು ಮಳೆ.ಗೆಳೆಯ ಗೊಣಗುತ್ತಾ; ಮಳೆ ನಿಂತು ಹೋದ ಮೇಲೆ ಮನೆಗೆ ಹಿಂತಿರುಗುವ ಎಂಬ ಸಲಹೆ ನೀಡಿದ. ಆತನ ಕೋರಿಕೆಗೆ ಇಲ್ಲವೆನ್ನಲಾಗದೇ ಪಕ್ಕದಲ್ಲಿಯೇ ಇದ್ದ ಕಬ್ಬನ್ ಪಾರ್ಕ್ ಒಳಗಿರುವ ಬೃಹತ್ ಮರದ ಬುಡಕ್ಕೆ ಬಂದು ನಿಂತುಕೊಂಡೆವು. ನೋಡ ನೋಡುತ್ತಿದ್ದಂತೆಯೇ ಮಳೆಯ ಬಿರುಸು ಹೆಚ್ಚಾಗುತ್ತಿತ್ತು.ಭೋರ್ಗರೆಯುತ್ತಿದ್ದ ಮಳೆಯ ನಡುವೆ ಆಕೆ ಮಿಂಚಂತೆ ಬಂದಳು! ಮುದುಡಿದ ಮನಕ್ಕೆ ತಂಪೆರೆವ ಇನಿಯನ ಬರುವಿಕೆಗಾಗಿ ಸಂಯಮದಿಂದ ಕಾದು ಕುಳಿತ ಪ್ರೇಯಸಿಯಂತೆ ಆಕೆ, ಮಳೆಯನ್ನು ಕಂಡೊಡನೆ ತನ್ನ ನೀಳವಾದ ಕೇಶರಾಶಿಗೆ ಕಟ್ಟಿದ್ದ ಹೇರಳನ್ನು ಬಿಚ್ಚಿ ಅದಮ್ಯ ಉತ್ಸಾಹದಿಂದ ಗರಿಬಿಚ್ಚಿದ ನವಿಲಂತೆ ಹೆಜ್ಜೆ ಹಾಕತೊಡಗಿದಳು! ಆಕೆಯದು ಬಂಗಾರದ ಮೈಬಣ್ಣ. ಶಿಲಾ ಬಾಲಿಕೆಯನ್ನೇ ನಾಚಿಸುವಂತಹ ಚೆಲುವು.ನೋಡಿದವರ ಭಾವನೆಗಳನ್ನು ಕೆಣಕುವ ಚಂಚಲ ಕಂಗಳು, ಕತ್ತಿಯ ಅಂಚಿನಂತಿರುವ ಹುಬ್ಬುಗಳು, ಮಧ್ಯಮ ನಿಲುವಿನ ದೇಹ ಸೌಂದರ್ಯಕ್ಕೆ ಮೆರಗು ತರುವ ಹಾಗಿರುವ ವಿಶಾಲ ವಕ್ಷಸ್ಥಳ, ಅದಕ್ಕೆ ಮೂಲಾಧಾರವಾಗಿ ಸಿಂಹಕಟಿ!ಅಚ್ಚ ಬಿಳಿಯುಡುಗೆ ಒಳಗಿನಿಂದ ರಾಚುತ್ತಿರುವ ಬಂಗಾರದಂತಹ ಬೆನ್ನು. ಸ್ನಿಗ್ಧ ನಗುವಿನೊಂದಿಗೆ ತನ್ನ ಗುಲಾಬಿ ಬಣ್ಣದ ಹಸ್ತಗಳಿಂದ ಮಳೆಹನಿಗಳನ್ನು ಪಟಪಟನೆ ಬಡಿಯುತ್ತಾ, ಬಾಹ್ಯ ಪ್ರಪಂಚದ ಅರಿವೇ ಇಲ್ಲದೇ ಮಳೆಯೊಂದಿಗೆ ಚೆಲ್ಲಾಟವಾಡುತ್ತಿದ್ದ ಆಕೆಯಲ್ಲಿ ಮೂರು ಲೋಕವನ್ನು ಗೆಲ್ಲುವಂತಹ ಆತ್ಮವಿಶ್ವಾಸ!ಹೌದು. ಪ್ರಕೃತಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧ. ಆಕೆಯ ಮೈ ಮೇಲೆ ಒಂದು ಹನಿ ಮಳೆ ಬಿದ್ದರೂ ಸಾಕು ಆಕೆ ಘಮ್ಮೆಂದು ಅರಳಿ ಬಿಡುತ್ತಾಳೆ. ಯೌವ್ವನದ ಹೊಸ್ತಿಲ್ಲಿಂದ ತುಸು ಹಿಂದೆ ಕರೆದು ಬಾಲ್ಯದ ತುಂಟಾಟಗಳತ್ತ ಸೆಳೆದೊಯ್ಯುವ ಮಾಂತ್ರಿಕತೆ ಈ ಮಳೆ ಹನಿಗಳಿಗಿದೆ. ಹೆಣ್ಣಿನ ಸ್ನಿಗ್ಧತೆ ಹಾಗೂ ಆಕೆಯ ಹೆಣ್ತನವನ್ನು ಕಣಕಣದಲ್ಲೂ ಸ್ಫುರಿಸುವ ವರುಣ ಹೆಂಗೆಳೆಯರ ಪಾಲಿನ ಚಿತ್ತಚೋರ.

 

ಭಾವನೆಗಳನ್ನು ಗರಿಗೆದರಿಸುವ ಶಕ್ತಿ ಸಾಮಾನ್ಯವಾಗಿ ಹೆಣ್ಣಿಗೆ ದೈವದತ್ತವಾಗಿ ಬಂದಿರುವ ಕೊಡುಗೆ. ಹೆಣ್ಣಿಗೆ ಗಂಡಸೆಂಬ ಜೀವ ಆಸರೆಯಾದರೆ, ಗಂಡಸಿಗೆ ಆಕೆ ಅನಿವಾರ್ಯ.ತಾಯಿಯಾಗಿ, ಅಕ್ಕನಾಗಿ, ಗೆಳತಿಯಾಗಿ, ಸಂಗಾತಿಯಾಗಿ ಆಕೆ ಗಂಡಸಿನ ಬರಿದಾದ ಮನದ ಬನದಲ್ಲಿ ತಂಗಾಳಿಯ ತಂಪನ್ನು ಸೂಸುತ್ತಾಳೆ.ಹಾಗೇ ಆಕೆಯನ್ನು ದಿಟ್ಟಿಸಿ ನೋಡುತ್ತಿದ್ದ ನನಗೆ ತೆಲುಗಿನ `ವರ್ಷಂ~ ಸಿನಿಮಾದ ನಾಯಕಿ ತ್ರಿಶಾ ನೆನಪಾದಳು. ಕೇವಲ ಮಳೆಯೊಂದಿಗೆ ಮಾತಿನ ಲಲ್ಲೆಗರೆಯುತ್ತಲೇ ಅದ್ಭುತ ಆರಂಗೇಟ್ರಂ ಆರಂಭಿಸಿದ ತ್ರಿಶಾ, ಆ ತಣ್ಣನೆಯ ಮಳೆಯಲ್ಲಿಯೇ ಇಡೀ ರಾಯಲ ಸೀಮೆಯ ಯುವ ಜನತೆಯ ಹೃದಯಕ್ಕೆ ಕಿಚ್ಚು ಹಚ್ಚಿದವಳು.

 

ದಂತದ ಬೊಂಬೆಯಂತಿರುವ ಆಕೆಯ ಸ್ನಿಗ್ಧ ಸೌಂದರ್ಯ, ತುಟಿಯಂಚಿನಲ್ಲಿ ಲಾಸ್ಯವಾಡುವ ಮುಗುಳು ನಗು, ಚಂಚಲ ಕಂಗಳು ಇವೆಲ್ಲಕ್ಕೂ ಕಳಶವಿಟ್ಟಂಥಹ ಆಕೆಯ ಸಹಜ ಅಭಿನಯದಿಂದಾಗಿ ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಚಿಂದಿ ಉಡಾಯಿಸಿತು.

 

ಜೊತೆಗೆ ಆಕೆಯೊಬ್ಬಳು ಅಭಿಜಾತ ಕಲಾವಿದೆ ಎಂಬುದನ್ನು ನಿರೂಪಿಸಿತು. ಇದು ಆಕೆಗೆ ದಕ್ಷಿಣ ಭಾತರದ ಸುಂದರಿಯರಲ್ಲಿ ನಂ.1 ಪಟ್ಟವನ್ನು ಸಹ ದಕ್ಕಿಸಿಕೊಟ್ಟಿತು. ಜನಪ್ರಿಯತೆ ಜೊತೆಗೆ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ತ್ರಿಶಾಗೆ ಅಭಿಮಾನಿಗಳನ್ನು ದೊರಕಿಸಿಕೊಟ್ಟದ್ದೇ ಈ ಮಳೆಹನಿಗಳು ಎಂದರೇ ತಪ್ಪಾಗಲಾರದು.ಮಳೆ ಕೇವಲ ಹೆಣ್ತನವನ್ನು ಬಿಂಬಿಸುವುದಷ್ಟೆ ಅಲ್ಲ, ಕವಿ ಹೃದಯದ ಮನಸ್ಸುಗಳ ಸಾಹಿತ್ಯ ರಚನೆಗೆ  ಸ್ಫೂರ್ತಿ ನೀಡುವ ಅಕ್ಷಯಪಾತ್ರೆ. ಮಳೆಯೊಡನೆ ಆಟವಾಡದ ಕವಿ ಹೃದಯಗಳಿಲ್ಲ. ಸಿನಿಮಾ ಸಾಹಿತಿಗಳಿಗಂತೂ ಮಳೆ ಎಂಬುದು ಯಾವತ್ತಿಗೂ ಬತ್ತದ ಜೀವನದಿ.ಮಳೆಯೊಡನೆ ಸಲ್ಲಾಪವಾಡಿ ತಣಿಯದೇ, ಹೊಸ ಉತ್ಸಾಹದೊಂದಿಗೆ ಕವಿಗಳು, ಸಾಹಿತಿಗಳು ಮತ್ತೆ ಮತ್ತೆ ಹೊಸತಿಗೆ ಜನ್ಮ ನೀಡಿದ್ದಾರೆ. ಈ ವೇಳೆ ನನಗೆ ಕನ್ನಡ ಸಾರಸ್ವತ ಲೋಕದ ಅದ್ಭುತ ಕವಿ ಬಿ.ಆರ್.ಲಕ್ಷ್ಮಣರಾವ್ ಅವರ,

ಬಾ ಮಳೆಯೇ ಬಾ

ಅಷ್ಟು ಬಿರುಸಾಗಿ ಬಾರದಿರು

ನನ್ನ ನಲ್ಲೆ ಬರಲಾಗದಂತೆ....

ಅವಳಿಲ್ಲಿ ಬಂದೊಡನೆ

ಬಿಡದೇ ಬಿರುಸಾಗಿ ಸುರಿ

ಹಿಂತಿರುಗಿ ಹೋಗದಂತೆ....ಹಿಂತಿರುಗಿ ಹೋಗದಂತೆ ಎಂಬ ಸಾಲುಗಳು ನನ್ನ ಮನದಾಳದಲ್ಲಿ ಸರಿಯತೊಡಗಿದವು. ಪ್ರೇಮದ ವಿರಹದಿಂದ ತತ್ತರಿಸಿರುವ ಪ್ರೇಮಿಯ ಮನದಾಳದ ಭಾವನೆಗಳನ್ನು ಮಳೆಯೊಟ್ಟಿಗೆ ಸೇರಿಸಿ ಹೇಗೆ ಅದ್ಭುತವಾಗಿ ಬಿಂಬಿಸಿದ್ದಾರೆ ಎಂಬುದನ್ನು ನೆನೆಸಿಕೊಂಡಾಗ ರೋಮಾಂಚನವಾಯ್ತು.ಎಷ್ಟು ಮುಕ್ಕಿದರು ಹಿಂಗದ ಹಸಿವಿನಂತೆ ಆಕೆ ಇನ್ನೂ ಮಳೆಯಲ್ಲಿ ತೊಯ್ಯುತ್ತಲೇ ಇದ್ದಳು. ಬೇಸಿಗೆಯ ಬಿಸಿಲಿಗೆ ಕಾದು ಕುಳಿತ ಇಳೆಯನ್ನು ತಣಿಸುವುದರ ಜೊತೆಗೆ, ಆಕೆಯ ಮನದ ಇಂಗಿತವನ್ನು ಅರಿತುಕೊಂಡಂತೆ ವರುಣ ಏಕಕಾಲದಲ್ಲಿ ಇಬ್ಬರನ್ನು ತಣಿಸಲೆಂಬಂತೆ ಮತ್ತಷ್ಟು ಆರ್ಭಟಿಸತೊಡಗಿದ. ಹೀಗೆ ಯೋಚಿಸುತ್ತಾ ನಾನು ಮಳೆಯಲ್ಲಿಯೇ ಮನೆಗೆ ಯಾವಾಗ ಬಂದು ಮುಟ್ಟಿದೆ ಎಂಬ ಪ್ರಶ್ನೆ ಈಗಲೂ ಕಾಡುತ್ತದೆ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.