ಮಂಗಳವಾರ, ಮೇ 11, 2021
22 °C

ಮೊಬೈಲ್ ಕಳವು ತಡೆಗೆ ಸೆಲ್‌ಕಾಪ್!

ಪ್ರಜಾವಾಣಿ ವಾರ್ತೆ ಸುಭಾಸ.ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಮೈಸೂರು: ಮೊಬೈಲ್ ಕಳ್ಳತನ ಹಾಗೂ ಅಪಘಾತವಾದಾಗ ವ್ಯಕ್ತಿಯ ವಿವರಗಳನ್ನು ಸಂಬಂಧಿಕರಿಗೆ ಸ್ವಯಂಚಾಲಿತವಾಗಿ ತಿಳಿಸುವ ವಿನೂತನ ಸಾಫ್ಟ್‌ವೇರ್ ಅಪ್ಲಿಕೇಷನ್ `ಸೆಲ್‌ಕಾಪ್~ ಅನ್ನು ನಗರದ ಜಿಐಎಸ್‌ಎಸ್‌ಎಸ್ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ.ಎಂಟನೇ ಸೆಮಿಸ್ಟರ್ ಗಣಕವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಸಿ.ನವ್ಯ, ಸಯೀದ್ ರುಕ್ಸಾರ್ ಅಹಮ್ಮದಿ ಹಾಗೂ ಸುಪ್ರಿಯಾ ರಾಜಗೋಪಾಲ್ ಅವರು ಉಪನ್ಯಾಸಕ ಹಾಗೂ ಯೋಜನಾ ಮಾರ್ಗದರ್ಶಿ ರವಿ ಕುರಪಾಟಿ ನೇತೃತ್ವದಲ್ಲಿ `ಸೆಲ್‌ಕಾಪ್~ ಅಪ್ಲಿಕೇಷನ್ ಅನ್ನು ಮೊಬೈಲ್‌ಗಳಿಗೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹೆಸರೇ ಸೂಚಿಸುವಂತೆ ಮೊಬೈಲ್ (ಸೆಲ್) ಅನ್ನು ಕಾಪಾಡುವ ಕಾಪ್ (ಪೊಲೀಸ್) ಇದಾಗಿದ್ದು, ಮೊಬೈಲ್ ಕಳ್ಳತನವಾದಾಗ ಅಥವಾ ಕಳೆದುಕೊಂಡಾಗ ಯಾರಾದರೂ ಮೊಬೈಲ್‌ನ ಗುಂಡಿ ಒತ್ತಿದರೆ ತಕ್ಷಣವೇ ಅಲಾರಂ ಕಿರುಚಿಕೊಳ್ಳುತ್ತದೆ. ಯಾವುದೇ ಗುಂಡಿ ಅದುಮಿದರೂ ಅದು ಸುಮ್ಮನಾಗದು. ಪ್ರಯಾಣದ ಸಂದರ್ಭದಲ್ಲಿ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಮೊಬೈಲ್ ಚಾರ್ಜ್‌ಗೆ ಇಟ್ಟಾಗ ಯಾರಾದರೂ ಕದ್ದು ಗುಂಡಿ ಅದುಮಿದರೂ ತಕ್ಷಣವೇ ಕಿರುಚಿಕೊಳ್ಳಲು ಆರಂಭಿಸುತ್ತದೆ.ಈ ಸಾಫ್ಟ್‌ವೇರ್ ಬಳಸುವ ಮೊಬೈಲ್ ಬಳಕೆದಾರ ಪ್ರತಿ ಬಾರಿ ನಾಲ್ಕು ಅಂಕೆಯ ರಹಸ್ಯ ಸಂಖ್ಯೆ (ಪಾಸ್‌ವರ್ಡ್) ಅದುಮಿ ಮೊಬೈಲ್ ಬಳಸಬೇಕಾಗಿರುತ್ತದೆ. ಕಳ್ಳತನ ಆದ ಸಂದರ್ಭದಲ್ಲಿ ಇದು ಕಾರ್ಯಗತಗೊಳ್ಳದಿರುವುದರಿಂದ ಅಲಾರಾಂ ಸದ್ದು ಮಾಡುತ್ತದೆ. ಈ ಮೊದಲೇ ನಿಗದಿ ಪಡಿಸಿದ `ಪಾಸ್‌ವರ್ಡ್~ ಒತ್ತಿದರೆ ಮಾತ್ರ ರಿಂಗಣಿಸುವುದನ್ನು ನಿಲ್ಲಿಸುತ್ತದೆ.ಇನ್ನು ದಾರಿಯಲ್ಲಿ ಆಕಸ್ಮಿಕವಾಗಿ ಅಪಘಾತ ಉಂಟಾದರೆ ತಕ್ಷಣವೇ ವ್ಯಕ್ತಿಯ ಸಂಬಂಧಿಕರ ಮೊಬೈಲ್‌ಗೆ ಅಪಘಾತ ನಡೆದ ಸ್ಥಳದ ಬಗ್ಗೆ `ಎಸ್‌ಎಂಎಸ್~ ರವಾನೆ ಆಗುತ್ತದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಮೊಬೈಲ್ ಪರದೆಯ ಮೇಲೆ ಆತನ ವಿಳಾಸ, ರಕ್ತದ ಗುಂಪು, ತುರ್ತು ಸಂಪರ್ಕ ಸಂಖ್ಯೆ ಕಾಣಿಸುತ್ತದೆ. ದಾರಿಹೋಕರು ಅಥವಾ ಪೊಲೀಸರು ಮೊಬೈಲ್‌ನ ಪರದೆಯ ಮೇಲಿನ ವಿವರಗಳನ್ನು ನೋಡಿ ಆತನ ಸಂಬಂಧಿಕರಿಗೆ ವಿಷಯ ತಿಳಿಸಬಹುದಾಗಿದೆ.`ಕೆಲವು ಮೊಬೈಲ್‌ಗಳಿಗೆ `ಸೆಲ್‌ಕಾಪ್~ ಅಪ್ಲಿಕೇಷನ್ ಅನ್ನು ಅಳವಡಿಸಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೋಕಿಯಾ ಲುಮಿಯಾ 800, ಸ್ಯಾಮಸಂಗ್ ಫೋಕಸ್, ಎಲ್‌ಜಿ ಕ್ವಾಂಟ್‌ಮ್ ಹಾಗೂ ವಿಂಡೋಸ್-7 ಅಪ್ಲಿಕೇಷನ್ ಇರುವ ಎಲ್ಲ ಮೊಬೈಲ್‌ಗಳಲ್ಲೂ `ಸೆಲ್‌ಕಾಪ್~ ಅಪ್ಲಿಕೇಷನ್ ಅಳವಡಿಸಬಹುದು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಸುಲಭವಾಗಿ ಎಲ್ಲರೂ ಇದನ್ನು ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ~ ನವ್ಯ ಹಾಗೂ ಸುಪ್ರಿಯಾ.ಈ ಕುರಿತು ಮಾತನಾಡಿದ ರವಿ ಕುರಪಾಟಿ, `ವಿಂಡೋಸ್-7 ಆಪರೇಟಿಂಗ್ ವ್ಯವಸ್ಥೆ ಇರುವ ಮೊಬೈಲ್‌ಗಳಲ್ಲಿ ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿಂಡೋಸ್ ಸಾಫ್ಟ್‌ವೇರ್ ಇರುವ ಮೊಬೈಲ್‌ಗಳಲ್ಲಿ ಮಾತ್ರ ಇದು ಕೆಲಸ ಮಾಡುವುದರಿಂದ ಮೈಕ್ರೊಸಾಫ್ಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಈ ಅಪ್ಲಿಕೇಷನ್ ಅನ್ನು ಅವರ ವೆಬ್‌ಸೈಟ್‌ನಲ್ಲಿ ಅಳವಡಿಸಬೇಕಾಗುತ್ತದೆ. ಆಗ ಗ್ರಾಹಕರು ಕಂಪನಿ ನಿಗದಿಪಡಿಸುವ ಹಣ ಪಾವತಿಸಿ ನೇರವಾಗಿ ತಮ್ಮ ಮೊಬೈಲ್‌ಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ 50 ರಿಂದ 200 ರೂಪಾಯಿ ವೆಚ್ಚ ಬರಬಹುದು~ ಎಂದು `ಪ್ರಜಾವಾಣಿ~ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.