ಮಂಗಳವಾರ, ಏಪ್ರಿಲ್ 13, 2021
25 °C

ಮೊಬೈಲ್ ಗೋಪುರ ನೌಕರಿ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗಂತೂ ಯಾರ ಕೈಯಲ್ಲಿ ನೋಡಿದರೂ ಮೊಬೈಲ್ ಫೋನ್. ಹೀಗಾಗಿ ನಗರಗಳಷ್ಟೇ ಅಲ್ಲದೆ ಹಳ್ಳಿಗಾಡಿನಲ್ಲೂ ಮೊಬೈಲ್ ಗೋಪುರಗಳು ಕಣ್ಣಿಗೆ ಬೀಳುತ್ತವೆ. ಇವು ಇಡೀ ಮೊಬೈಲ್ ಸಂಪರ್ಕ ವ್ಯವಸ್ಥೆಯ ಜೀವನಾಡಿಗಳಂತೆ ಕಾರ್ಯ ನಿರ್ವಹಿಸುತ್ತವೆ.ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಈ ಗೋಪುರಗಳ ನಿರ್ವಹಣೆ ಕೂಡ ಸೇವಾ ಸಂಸ್ಥೆಗಳ ಪಾಲಿಗೆ ತುಂಬ ಮುಖ್ಯ. ಅದಕ್ಕಾಗಿ ತರಬೇತಾದ ಸಿಬ್ಬಂದಿ ಬೇಕು. ಈ ಹಿನ್ನೆಲೆಯಲ್ಲಿ ಮೊಬೈಲ್ ಗೋಪುರ ನಿರ್ವಹಣೆ ತಂತ್ರಜ್ಞಾನ ಶಿಕ್ಷಣ ಶುರುವಾಗಿದೆ.ಮೊಬೈಲ್ ಗೋಪುರಗಳ ನಿರ್ಮಾಣ, ನಿರ್ವಹಣೆಯಲ್ಲಿ ವಿಶ್ವದ ಅತಿ ದೊಡ್ಡ ಕಂಪೆನಿ ಎಂಬ ಖ್ಯಾತಿ ಹೊತ್ತ ಇಂಡಸ್ ಟವರ್ಸ್ (ಏರ್‌ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳ ಜಂಟಿ ಉದ್ಯಮ) ಮತ್ತು ತಾಂತ್ರಿಕ ತರಬೇತಿಗೆ ಹೆಸರಾದ ಎನ್‌ಟಿಟಿಎಫ್ (ನೆಟ್ಟೂರು ಟೆಕ್ನಿಕಲ್ ಟ್ರೇನಿಂಗ್ ಫೌಂಡೇಷನ್) ಸೇರಿಕೊಂಡು ಮೊಬೈಲ್ ಗೋಪುರ ನಿರ್ವಹಣಾ ಪರಿಣಿತರನ್ನು ತಯಾರುಮಾಡಲು `ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಸೆಲ್-ಸೈಟ್ ಮ್ಯೋನೇಜ್‌ಮೆಂಟ್~ (ಸಿಪಿಸಿಎಂ) ಕೋರ್ಸ್ ನಡೆಸುತ್ತಿವೆ.ಪ್ರತಿ ವರ್ಷ 1200 `ಹುಡುಗರನ್ನು~ ಆಯ್ಕೆ ಮಾಡಿ ತರಬೇತಿ ಕೊಟ್ಟು ಟೆಲಿಕಾಂ ಮೂಲಸೌಕರ್ಯ ಕ್ಷೇತ್ರದಲ್ಲಿ ಉದ್ಯೋಗವನ್ನೂ ಒದಗಿಸಿಕೊಡುವುದು ಈ ಕೋರ್ಸ್‌ನ ಉದ್ದೇಶ. ಈಗಾಗಲೆ ಮೊದಲ ತಂಡ ಹೊರ ಬಿದ್ದಿದ್ದು ಎರಡನೇ ತಂಡದ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.ಕೋರ್ಸ್‌ನ ಅವಧಿ 6 ತಿಂಗಳು. ಈ ಪೈಕಿ ಮೊದಲ ನಾಲ್ಕು ತಿಂಗಳು ಎನ್‌ಟಿಟಿಎಫ್ ಕೇಂದ್ರಗಳಲ್ಲಿ ಮೊಬೈಲ್ ಗೋಪುರಗಳ ವಿದ್ಯುತ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಉಪಕರಣಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇಂಗ್ಲಿಷ್‌ನಲ್ಲಿ ಮಾತನಾಡುವುದು ಮತ್ತು ದ್ವಿಚಕ್ರ ವಾಹನ ಚಾಲನೆಯನ್ನೂ ಕಲಿಸಲಾಗುತ್ತದೆ.

ನಂತರದ ಎರಡು ತಿಂಗಳು ಪ್ರಾಯೋಗಿಕ ತರಬೇತಿ. ಥಿಯರಿ ಕಲಿಕಾ ಅವಧಿಯಲ್ಲಿ ಹಾಸ್ಟೆಲ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ. ಆಸಕ್ತರು ಪಿಯುಸಿ ಅಥವಾ ಡಿಪ್ಲೊಮಾ ತೇರ್ಗಡೆಯಾಗಿರಬೇಕು. ಇದೇ ಆಗಸ್ಟ್ 1 ರಂದು 18 ರಿಂದ 23 ವರ್ಷದ ಒಳಗಿರಬೇಕು. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇಂಡಸ್ ಟವರ್ಸ್ ಖಾತರಿಯಾಗಿ ಉದ್ಯೋಗ ಕಲ್ಪಿಸಲಿದೆ. ಇಷ್ಟಪಟ್ಟರೆ ಬೇರೆ ಕಂಪೆನಿ ಸೇರುವ ಮುಕ್ತ ಅವಕಾಶವೂ ಇದೆ.

`ತರಬೇತಿ ಶುಲ್ಕ 30 ಸಾವಿರ ರೂ. ಇದರಲ್ಲಿ ಕೊನೆಯ ಎರಡು ತಿಂಗಳು ಪ್ರಾಯೋಗಿಕ ಕಲಿಕೆ ಅವಧಿಯಲ್ಲಿ 8 ಸಾವಿರ ರೂಪಾಯಿ ಸ್ಟೈಫಂಡ್ ನೀಡುತ್ತೇವೆ. ಕೋರ್ಸ್ ಮುಗಿಸಿದ ನಂತರ ಕನಿಷ್ಠ 8 ಸಾವಿರ ರೂಪಾಯಿ ವೇತನ ಸಿಗಲಿದೆ. ಅಲ್ಲದೆ ಅಭ್ಯರ್ಥಿಗಳಿಗೆ ಅವರ ಊರಿನ 100 ಕಿಮಿ ಆಸುಪಾಸಿನಲ್ಲೇ ನೌಕರಿ ಕೊಡಲಾಗುತ್ತದೆ.ಹೀಗಾಗಿ ಬಡ ಕುಟುಂಬಗಳ ಹುಡುಗರೂ ಹೆಚ್ಚಿನ ಆರ್ಥಿಕ ಹೊರೆಯಿಲ್ಲದೆ ಕಲಿತು ಉದ್ಯೋಗ ಮಾಡಬಹುದು. ಅಲ್ಲದೆ ಈ ತರಬೇತಿ ಪಡೆದವರಿಗೆ ಬೇರೆ ಟೆಲಿಕಾಂ ಕಂಪೆನಿಗಳಲ್ಲೂ ಬೇಡಿಕೆಯಿದೆ~ ಎನ್ನುತ್ತಾರೆ ಇಂಡಸ್ ಟವರ್ಸ್‌ನ ಸಿಇಒ          ಬಿ.ಎಸ್.ಶಾಂತರಾಜು.ಅವರ ಪ್ರಕಾರ, ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ಮೊಬೈಲ್ ಗೋಪುರಗಳಿದ್ದು ಅವುಗಳಲ್ಲಿ ಇಂಡಸ್ ಟವರ್ಸ್‌ನ ಪಾಲು ಸುಮಾರು 1.20 ಲಕ್ಷ. ಇವುಗಳ ನಿರ್ವಹಣೆಗೆ ಪರಿಣಿತ ಸಿಬ್ಬಂದಿ ಅಗತ್ಯವಿದೆ. ಈ ಉದ್ಯಮಕ್ಕೆ ತಕ್ಷಣವೇ 4 ಸಾವಿರ ಜನರ ಅಗತ್ಯವಿದೆ.`ಶುಲ್ಕ ದುಬಾರಿಯಾಗಲಿಲ್ಲವೇ~ ಎಂಬ ಪ್ರಶ್ನೆಗೆ ಅವರ ಉತ್ತರ `ಉಚಿತವಾಗಿ ಸಿಗುವ ಯಾವುದಕ್ಕೂ ಬೆಲೆ ಇಲ್ಲ. ಹಾಗಾಗಿ ಸಾಂಕೇತಿಕ ಶುಲ್ಕ ವಿಧಿಸಲಾಗಿದೆ. ಅಗತ್ಯ ಇರುವವರಿಗೆ ಸುಲಭವಾಗಿ ಬ್ಯಾಂಕ್‌ನಿಂದ ಶಿಕ್ಷಣ ಸಾಲ ಕೊಡಿಸುವ ವ್ಯವಸ್ಥೆಯೂ ನಮ್ಮಲ್ಲಿದೆ~.ಇದು ಹೊಸ ಕೋರ್ಸ್. ಉದ್ಯಮದ ಬೇಡಿಕೆಗೆ ಅನುಗುಣವಾಗಿ ರೂಪಿಸಲಾಗಿದ್ದು, ಉದ್ಯೋಗ ಅವಕಾಶ ಹೆಚ್ಚು ಎನ್ನುವುದು ಎನ್‌ಟಿಟಿಎಫ್ ವ್ಯವಸ್ಥಾಪಕ ನಿರ್ದೇಶಕ ಎನ್. ರೇಗುರಾಜ್ ಅವರ ವಿವರಣೆ.

ಕೋರ್ಸ್ ಕುರಿತ ಮಾಹಿತಿಗೆ http://www.nttftrg.com ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.